ಬಿಗ್ ಬಾಸ್ ರಜತ್, ವಿನಯ್ ಗೌಡ ಅರೆಸ್ಟ್: ಕಾರಣವೇನು?
ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ವಿನಯ್ ಗೌಡ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ರಜತ್ ಕಿಶನ್ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕವಾಗಿ ಲಾಂಗ್ ಹಿಡಿದು ರೀಲ್ಸ್ ಮಾಡಿದ ಆರೋಪದ ಮೇಲೆ ಸದ್ಯ ಇಬ್ಬರು ರಿಯಾಲಿಟಿ ಶೋ ಸ್ಪರ್ಧಿಗಳನ್ನು ಬಸವೇಶ್ವರ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಿನಯ್ ಗೌಡ ಹಾಗೂ ರಜತ್ ಕಿಶನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮೆಜೆಸ್ಟಿಕ್ ಹಾಡಿಗೆ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

ಆದರೆ ಸಾರ್ವಜನಿಕ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಲಾಂಗ್ ಹಿಡಿದುಕೊಂಡು ವಿಡಿಯೋ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ ಬಸವೇಶ್ವರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸದ್ಯ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ಬಳಿಕ ವಿನಯ್ ಗೌಡ ಹಾಗೂ ರಜತ್ ಕಿಶನ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ ಎನ್ನುವ ಮಾಹಿತಿ ಸದ್ಯ ಲಭ್ಯವಾಗಿದೆ. ಇನ್ನು ಈ ಹಿಂದೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ವಿನಯ್ ಗೌಡ ಕ್ಷಮೆಯಾಚಿಸಿ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದರು.
ಬೆಂಗಳೂರಿನ ನಾಗರಭಾವಿ ಅಲ್ಲಿರುವ ಅಕ್ಷಯ್ ಸ್ಟುಡಿಯೋದಲ್ಲಿ ಖಾಸಗಿ ರಿಯಾಲಿಟಿ ಶೋಗೆ ಸಂಬಂಧಿಸಿದಂತೆ ಈ ವಿಡಿಯೋ ಶೂಟ್ ಮಾಡಲಾಗಿತ್ತು. ಈ ರೀಲ್ಸ್‌ನಲ್ಲಿ ನಾನು ಪುಷ್ಪಾ ಪಾತ್ರವನ್ನು ಹಾಗೂ ರಜತ್ ಕಿಶನ್ ಅವರು ದರ್ಶನ್ ಪಾತ್ರವನ್ನು ಮಾಡಿದ್ದಾರೆ. ಮನರಂಜನೆ ಉದ್ದೇಶಕ್ಕೋಸ್ಕರ ಮಾತ್ರ ಈ ವಿಡಿಯೋದ ಚಿತ್ರೀಕರಣವನ್ನು ನಾವು ಮಾಡಿದ್ದೇವೆ. ಇದರಲ್ಲಿ ಯಾವುದೇ ಅನ್ಯ ಉದ್ದೇಶವಿಲ್ಲ. ಇದಕ್ಕೆ ಕ್ಷಮೆಯಾಚನೆ ಮಾಡುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದರು.












Click it and Unblock the Notifications