Bigg Boss: ಲಾಯರ್ ಜಗದೀಶ್ ಅವರನ್ನ ನಂಬಲೇಬಾರದು...- ಚೈತ್ರಾ ಕುಂದಾಪುರ ಹೀಗಂದಿದ್ದು ಯಾಕೆ?
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಆರಂಭದ ದಿನವೇ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಬಾರಿ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ವಿಭಿನ್ನವಾಗಿ ಆಡುವ ಸಾಧ್ಯತೆ ಇದೆ. ಯಾಕೆಂದರೆ ಬಿಗ್‌ಬಾಸ್ ಆರಂಭವಾಗಿ ನಾಲ್ಕೇ ನಾಲ್ಕು ದಿನಗಳಲ್ಲಿ ಮನಸ್ತಾಪ ಜಗಳ ಶುರುವಾಗಿದೆ. ಈ ನಡುವೆ ಚೈತ್ರಾ ಕುಂದಾಪುರ ಲಾಯರ್ ಜಗದೀಶ್ ನಂಬಿಕೆಗೆ ಅನರ್ಹ ಎಂಬ ಮಾತನ್ನು ಹೇಳಿದ್ದಾರೆ. ಅಷ್ಟಕ್ಕೂ ಚೈತ್ರಾ ಈ ರೀತಿ ಹೇಳಿದ್ದು ಯಾಕೆ?
ಬಿಗ್‌ಬಾಸ್ ಮನೆ ಪ್ರವೇಶಿಸಿದ 17 ಸ್ಪರ್ಧಿಗಳಲ್ಲಿ ವಕೀಲ ಜಗದೀಶ್ ಕೊಂಚ ಎಲ್ಲಾ ಸ್ಪರ್ಧಿಗಳಿಗಿಂತ ವಿಭಿನ್ನವಾಗಿ ಆಟವಾಡುತ್ತಿದ್ದಾರೆ. ಇವರ ಮಾತುಗಳು ಬಿಗ್‌ಬಾಸ್ ಮನೆಯಲ್ಲಿ ಯಾರಿಗೂ ಇಷ್ಟವಾಗುತ್ತಿಲ್ಲ. ಈಗಿನ್ನೂ ಕೆಲವೇ ದಿನಗಳು ಆಗಿದ್ದರಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತಿದೆ. ಇದರಿಂದಾಗಿ ಕೆಲ ಸ್ಪರ್ಧಿಗಳು ಕಣ್ಣೀರು ಹಾಕಲು ಶುರು ಮಾಡಿದ್ದಾರೆ.

ಹೆಚ್ಚಾಗಿ ಲಾಯರ್ ಜಗದೀಶ್ ಮಾತಿಗೆ ಮನೆ ಮಂದಿ ಬೇಸರಗೊಂಡಿದ್ದಾರೆ. ಒಬ್ಬರಲ್ಲ ಇಬ್ಬರಲ್ಲ ಮನೆ ಮಂದಿಗೆಲ್ಲಾ ಜಗದೀಶ್ ಏಕವಚನದಲ್ಲಿ ಮಾತನಾಡಿ ಜಗಳವಾಡುತ್ತಿರುವುದು ಮನೆಯ ವಾತಾವರಣವನ್ನು ಹಾಳು ಮಾಡಿದೆ. ಬಿಗ್‌ಬಾಸ್ ಮನೆಯಲ್ಲಿ ವಕೀಲ ಜಗದೀಶ್ ಅವರನ್ನು ಸಹಿಸಿಕೊಳ್ಳುವುದು ಕೆಲವರಿಗೆ ಕಷ್ಟವಾಗಿ ಹೋಗಿದೆ. ಅವರ ಮಾತು, ಕೋಪ ಇತರರನ್ನು ಕೆರಳಿಸುತ್ತಿದ್ದು ಮುಂದಿನ ದಿನಗಳ ಬಗ್ಗೆ ಆತಂಕ ಶುರುವಾಗಿದೆ.
ಬಿಗ್‌ಬಾಸ್ ನೀಡಿದ ಟಾಸ್ಕ್‌ನಲ್ಲಿ ಉಸ್ತುವಾರಿ ವಹಿಸಿಕೊಂಡ ಧನರಾಜ್ ಜೊತೆಗೆ ಜಗದೀಶ್ ಕಿರಿಕ್ ತೆಗೆದರು. ಇದಾದ ಬಳಿಕ ಧನರಾಜ್ ಅವರಿಗೆ 'ನೀನು ಒಬ್ಬ ಕಾಮಿಡಿಯನ್... ' ಎನ್ನುವ ಪದವನ್ನು ಪದೇ ಪದೇ ಬಳಕೆ ಮಾಡಿದ್ದಕ್ಕೆ ಮಾನಸ ಅವರಿಗೆ ಕೋಪ ಬಂದು, 'ಕಾಮಿಡಿಯನ್' ಪದ ಬಳಕೆ ಮಾಡದಂತೆ ಖಡಕ್ ಎಚ್ಚರಿಕೆ ಕೊಟ್ಟರು. ಇದಕ್ಕೆ ಮತ್ತಷ್ಟು ಕೋಪಗೊಂಡ ಜಗದೀಶ್, ಮಾನಸಾಗೆ 'ನೀನ್ ಒಬ್ಬ ಹೆಂಗಸಾ' ಎಂದು ಬೈದಾಡಿದರು. ಇದರಿಂದ ಮನೆ ಮಂದಿಯಲ್ಲಾ ಕೋಪಗೊಂಡು ಜಗದೀಶ್ ಅವರೊಂದಿಗೆ ಮಾತಿಗಿಳಿದರು.
ಇಲ್ಲಿಂದ ಶುರುವಾದ ಜಗಳ ಕಳೆದ ದಿನವೂ ಮುಂದುವರೆಯಿತು. ಟಾಸ್ಕ್‌ನ ಉಸ್ತುವಾರಿ ವಹಿಸಿದ್ದ ಧನರಾಜ್ ಅವರ ತೀರ್ಪು ಒಪ್ಪದ ಜಗದೀಶ್ ಆಟದಿಂದ ದೂರ ಉಳಿದರು. ಇದಾದ ಬಳಿಕ ಮನೆಯ ಕೆಲ ಸದಸ್ಯರೊಂದಿಗೂ ಜಗದೀಶ್ ಜಗಳ ಮಾಡಿಕೊಂಡರು. ಇದು ಮನೆಯ ಇತರರ ಸದಸ್ಯರಿಗೆ ಇಷ್ಟವಾಗಲೇ ಇಲ್ಲ. ಹೀಗಾಗಿ ಜಗದೀಶ್ ಅವರಿಂದ ಎಲ್ಲರು ಅಂತರ ಕಾಯ್ದುಕೊಂಡರು. ಹೀಗಾಗಿ ಬೇಸರಗೊಂಡ ಜಗದೀಶ್ ಮರುದಿನ ಬೆಳಗ್ಗೆ ಧನರಾಜ್ ಅವರೊಂದಿಗೆ ಸಾಮಾನ್ಯವಾಗಿ ಮಾತನಾಡಲು ಶುರು ಮಾಡಿದರು.

ಇದಕ್ಕೆ ನರಕದಲ್ಲಿದ್ದ ಚೈತ್ರಾ 'ಜಗದೀಶ್ ಅವರನ್ನ ನಂಬಲೇಬಾರದು. ಅವರು ಯಾವಾಗಾ ಹೇಗೆ ಟರ್ನ್ ಆಗ್ತಾರೋ ಗೊತ್ತಾಗಲ್ಲ. ಆತನಿಗೆ (ಜಗದೀಶ್) ಗೊತ್ತಾಯಿತು ತನ್ನನ್ನ ಯಾರೂ ಕೂಡ ಕೇರ್ ಮಾಡಲ್ಲ ಅಂತ. ಅದಕ್ಕೆ ಚೇಂಜ್ ಆಗಿಬಿಟ್ಟ' ಅಂತ ಇತರ ತಮ್ಮ ನರಕ ವಾಸಿಗಳ ಮುಂದೆ ಹೇಳಿದರು.
ಅಷ್ಟಕ್ಕೂ ದಿನವಿಡೀ 'ನಾನು ಬಿಗ್‌ಬಾಸ್ ಅನ್ನು ನಿಲ್ಲಿಸಿಬಿಡ್ತೇನೆ, ಹೆಲಿಕ್ಯಾಪ್ಟರ್ ಬೇಕಾದರೂ ತರಿಸಿಬಿಡುತ್ತೇನೆ, ಜುಜುಬಿ 50 ಲಕ್ಷಕ್ಕೆ ಗುಂಪುಗಾರಿಕೆ ನಾನು ಮಾಡಲ್ಲ... ಹಾಗ್ ಮಾಡ್ತೀನಿ ಹೀಗ್ ಮಾಡ್ತೀನಿ.. ನಾನು ಸಿಂಹ.. ಗುಂಪಲ್ಲಿ ಇರೋದು ತೋಳ' ಅಂತ ಹೇಳಿ ರಾತ್ರಿ ಊಟ ಬಿಟ್ಟು ಮಲಗಿದ ಜಗದೀಶ್ ಮರುದಿನ ಬೆಳಗ್ಗೆ ಕೂಲ್ ಆಗಿದ್ದರು. ಎಲ್ಲರಿಗೂ ಕ್ಷಮೆ ಕೇಳಿ ಮುಂದಿನ ಆಟ ಶುರು ಮಾಡಿದರು. ಒಟ್ಟಾರೆ ಜಗದೀಶ್ ಅವರ ಈ ಬದಲಾವಣೆ ಮನೆಯಲ್ಲಿ ಕೆಲ ಮಂದಿಗೆ ಖುಷಿ ತಂದರೆ ಇನ್ನೂ ಕೆಲವರಿಗೆ ಬೇಸರ ತಂದಿರುವುದಂತೂ ನಿಜ.












Click it and Unblock the Notifications