ಎಲಿಮಿನೇಟ್ ಆಗಿದ್ದಕ್ಕೆ ಉತ್ತರ ಕರ್ನಾಟಕವೇ ಕಣ್ಣೀರಿಡುತ್ತಿದೆ, ಬಿಗ್‌ಬಾಸ್ ಯಾರೇ ಗೆದ್ರೂ ನಾನು ಒಪ್ಪಲ್ಲ: ಮಾಳು
ಬಿಗ್‌ಬಾಸ್ ಮನೆಯಿಂದ ಈ ವಾರ ಅಚ್ಚರಿ ಎಲಿಮಿನೇಷನ್ ನಡೆದಿದ್ದು, ಉತ್ತರ ಕರ್ನಾಟಕದ ಪ್ರತಿಭೆ ಮಾಳು ನಿಪನಾಳ ಎಲಿಮಿನೇಟ್ ಆಗಿ ಬಿಗ್‌ಬಾಸ್‌ನಿಂದ ಹೊರಬಂದಿದ್ದಾರೆ. ಈ ಸೀಸನ್‌ನಲ್ಲಿರುವ ಸ್ಪರ್ಧಿ ಅತಿ ಕಡಿಮೆ ಮಾತನಾಡುವ ವ್ಯಕ್ತಿಗಳಲ್ಲಿ ಮಾಳು ಕೂಡ ಒಬ್ಬರಾಗಿದ್ರು. ಸ್ಪೆಷಲ್ ಹೇರ್‌ಸ್ಟೈಲ್ ಮಾಡಿಕೊಂಡು ಇತ್ತೀಚೆಗೆ ಫ್ಯಾಮಿಲಿ ರೌಂಡ್‌ನಲ್ಲಿ ತಮ್ಮ ಕುಟುಂಬದೊಂದಿಗೆ ನಕ್ಕು ನಲಿದಿದ್ದರು. ಇದಾದ ಕೆಲವೇ ದಿನಗಳಲ್ಲಿ ಮಾಳು ಔಟ್ ಆಗಿದ್ದಾರೆ. ಆದರೆ ತಮ್ಮ ಎಲಿಮಿನೇಷನ್ ಬಗ್ಗೆ ಮಾಳು ಆಕ್ಷೇಪ ವ್ಯಕ್ತಪಡಿಸಿದ್ದು, 'ನಾನು ಹೊರಬಂದಿರುವುದಕ್ಕೆ ಇಡೀ ಉತ್ತರ ಕರ್ನಾಟಕವೇ ಕಣ್ಣೀರಿಡುತ್ತಿದೆ. ಗಿಲ್ಲಿ ಅಲ್ಲ, ಬೇರೆ ಯಾರೇ ಬಿಗ್‌ಬಾಸ್ ಗೆದ್ದರೂ ನನಗೆ ಒಪ್ಪಿಗೆ ಇಲ್ಲ' ಎಂದಿದ್ದಾರೆ.
ಬಿಗ್‌ಬಾಸ್‌ನಿಂದ ಹೊರಬಂದು ವಿವಿಧ ವಾಹಿನಿಗಳಿಗೆ ಸಂದರ್ಶನ ನೀಡಿರುವ ಮಾಳು ನಿಪನಾಳ, ತಮ್ಮ ಎಲಿಮಿನೇಷನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ನಾನು ಬಿಗ್‌ಬಾಸ್ ಫಿನಾಲೆ ಮಾತ್ರವಲ್ಲ, 'ನಾನೇ ಗೆಲ್ತೀನಿ ಎನ್ನುವ ಭರವಸೆ ನನಗಿತ್ತು' ಎಂದಿದ್ದಾರೆ. 'ನನಗೆ ತಾಳ್ಮೆ, ಆಡುವ ಛಲ ಎರಡೂ ಇತ್ತು, ದೇವರ ಆಶೀರ್ವಾದ, ಜನರ ಬೆಂಬಲ ಎಲ್ಲವೂ ಇತ್ತು. ನಾನು ಮೊದಲಿಗೆ ಎರಡು ವಾರವಷ್ಟೇ ಇರಬಹುದು ಎಂದು ಭಾವಿಸಿದ್ದೆ. ಆದರೆ ಬರೋಬ್ಬರಿ 13 ವಾರ ನನ್ನ ಉಳಿಸಿದ್ದಾರೆ. ಜನ ನನ್ನ ಇಲ್ಲಿವರೆಗೆ ಉಳಿಸಿದ್ದಾರೆ ಅಂದ್ರೆ, ಫೈನಲ್‌ವರೆಗೆ ನನ್ನ ಉಳಿಸಲ್ಲ ಅಂತ ಹೇಗೆ ನಂಬೋದು?' ಎಂದು ಆಕ್ರೋಶ ಹೊರಹಾಕಿದ್ದಾರೆ.

'ಯಾಕೆ ಹೊರ ಬಂದೆ ಅನಿಸುತ್ತಿದೆ'
'ನಾನು ಬಿಗ್‌ಬಾಸ್‌ನಿಂದ ಹೊರ ಬಂದ ಮೇಲೆ ನಮ್ಮ ಮನೆಯವರು ಮಾತ್ರವಲ್ಲ, ಇಡೀ ಉತ್ತರ ಕರ್ನಾಟಕವೇ ಅಳುತ್ತಿದೆ. ನನ್ನನ್ನು ಪ್ರೀತಿಸುವ ಹೃದಯಗಳೆಲ್ಲವೂ ಅಳುತ್ತಿದೆ. ತುಂಬಾ ಜನ ನನಗಾಗಿ ಹರಕೆ ಹೊತ್ತಿದ್ದಾರೆ. ನನ್ನ ಪರ ಕಣ್ಣೀರಿಟ್ಟಿದ್ದಾರೆ. ಇದನ್ನೆಲ್ಲ ನೋಡಿದಾಗ ನನಗೆ ಏನು ಕಡಿಮೆ ಆಯ್ತು? ಯಾಕೆ ಹೊರಗೆ ಬಂದೆ ಅನಿಸುತ್ತಿದೆ' ಎಂದಿದ್ದಾರೆ ಮಾಳು.
'ಗಿಲ್ಲಿ ಕಾಮಿಡಿ ಅಷ್ಟೇ, ಟಾಸ್ಕ್ ಆಡಿದ್ದು ನೋಡಲೇ ಇಲ್ಲ'
ಗಿಲ್ಲಿ ವಿಚಾರವಾಗಿಯೂ ಮಾತನಾಡಿರುವ ಮಾಳು, 'ಗಿಲ್ಲಿ ವಿಚಾರಕ್ಕೆ ಬಂದರೆ, ನನ್ನಂತೆ ಅವರನ್ನು ಪ್ರೀತಿಸುವವರೂ ಇದ್ದಾರೆ. ಮನೆಯಲ್ಲಿ ಎಲ್ಲವೂ ಒಂದೇ ತರ ಇಲ್ಲ. ಬಿಗ್‌ಬಾಸ್ ಮನೆಯಲ್ಲಿ ಮಾಳು ಮಾತನಾಡಲ್ಲ ಅಂದ್ರೂ ಒಂದು ಬರುತ್ತೆ. ಕಾಮಿಡಿ ಮಾಡಲ್ಲ ಅಂದ್ರೂ ಒಂದು ಮಾತು ಬರುತ್ತೆ. ಪ್ರತಿ ವಿಷಯಕ್ಕೂ ಏನಾದ್ರೂ ಒಂದೊಂದು ಹುಟ್ಟಿಕೊಳ್ಳುತ್ತೆ. ಗಿಲ್ಲಿ ಕಾಮಿಡಿ ಮಾಡ್ತಾನೆ, ಎಂಟರ್‌ಟೇನ್ ಮಾಡ್ತಾನೆ, ಅದೆಲ್ಲ ಓಕೆ. ಆದ್ರೆ ಒಂದು ಟಾಸ್ಕ್‌ಗಳಲ್ಲಿ ಆಡಿದ್ದೇ ನೋಡಿಲ್ಲ. ನನಗೆ ಈಗ ಬಿಗ್‌ಬಾಸ್‌ನಲ್ಲಿ ಬೇರೆ ಯಾರೇ ಗೆದ್ದರೂ ಒಪ್ಪುವುದಿಲ್ಲ' ಎಂದಿದ್ದಾರೆ.
'ಹೊರಗೆ ಜನ ನನಗೆ ಸ್ಪಂದಿಸುವ ರೀತಿ ನೋಡಿದ್ರೆ ನಾನು ಇನ್ನೂ ಬಿಗ್‌ಬಾಸ್‌ನಲ್ಲಿ ಇರಬೇಕಿತ್ತು ಅಷ್ಟೇ. ನಾನು ಮಾಡಿದ್ದು ಸರಿನೋ, ತಪ್ಪೋ ಏನೇ ಇರಬಹುದು. ಜನ ನನಗಾಗಿ ಗೋಳಾಡುವುದು ನೋಡಿದಾಗ ಒಳಗಿರುವವರು ಗೆಲ್ಲುವುದನ್ನು ನಾನು ಅಷ್ಟು ಸುಲಭವಾಗಿ ಒಪ್ಪುವವನಲ್ಲ. ಅಲ್ಲಿರುವ ಎಲ್ಲರೊಂದಿಗೂ ಫೈಟ್ ಮಾಡ್ತೀನಿ, ಆಟ ಆಡ್ತೀನಿ, ಗೆಲ್ತೀನಿ ಅನ್ನೋ ಹಠ, ಛಲ ಎಲ್ಲವೂ ನನ್ನಲ್ಲಿತ್ತು. ಹೀಗಾಗಿ ಅವರು ಯಾರೇ ಬಿಗ್‌ಬಾಸ್ ಗೆದ್ದರೂ ನನಗೆ ಒಪ್ಪಿಗೆ ಇಲ್ಲ' ಎಂದು ಮಾಳು ಅಸಮಾಧಾನ ಹೊರಹಾಕಿದ್ದಾರೆ.












Click it and Unblock the Notifications