Divya Suresh: ಬಿಗ್‌ಬಾಸ್ ಖ್ಯಾತಿಯ ನಟಿ ದಿವ್ಯಾ ಸುರೇಶ್ ವಿರುದ್ಧ ಕೇಸ್ ದಾಖಲು
ಕನ್ನಡ ಬಿಗ್‌ಬಾಸ್ ಖ್ಯಾತಿಯ ನಟಿ ದಿವ್ಯಾ ಸುರೇಶ್ ಮೇಲೆ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕೇಸ್ ಕೂಡ ದಾಖಲಾಗಿದೆ. ದಿವ್ಯಾ ಸುರೇಶ್ ಹಿಟ್ ಅಂಡ್ ರನ್ ಮಾಡಿ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬ್ಯಾಟರಾಯನಪುರದಲ್ಲಿ ದಿವ್ಯಾ ಸುರೇಶ್ ಕಾರನ್ನು ವೇಗವಾಗಿ ಚಾಲನೆ ಮಾಡಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿ ವೇಗವಾಗಿ ಬಂದಿದ್ದ ದಿವ್ಯಾ ಸುರೇಶ್ ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಇದರಿಂದ ಬೈಕ್‌ನಲ್ಲಿದ್ದವರು ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಗಾಯಾಳುಗಳ ಕುಟುಂಬದವರು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ತಿಳಿದುಬಂದಿದೆ.

ಬೈಕ್‌ನಲ್ಲಿದ್ದವರು ತುರ್ತು ಕಾರಣಕ್ಕಾಗಿ ಆಸ್ಪತ್ರೆಗೆ ತೆರಳಿದ್ದರು ಎನ್ನಲಾಗಿದೆ. ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆ ಕಡೆಗೆ ಬೈಕ್‌ನಲ್ಲಿ ತೆರಳಿದ್ದರು. ಮಾರ್ಗಮಧ್ಯೆ ಬ್ಯಾಟರಾನಪುರದ ಎಂ.ಎಂ ರಸ್ತೆ ಬಳಿ ಕಿರಣ್ ಎಂಬುವವರು ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ವೇಳೆ ದಿವ್ಯಾ ಸುರೇಶ್ ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದಿತ್ತು. ನಂತರ ದಿವ್ಯಾ ಏನಾಯಿತು ಎಂದು ಸಹಾಯಕ್ಕೂ ಬಾರದೆ ಅಲ್ಲಿಂದ ಕಾರಿನಲ್ಲಿ ಎಸ್ಕೇಪ್ ಆಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮಂಡಿಚಿಪ್ಪು ಮುರಿತ
ಬೈಕ್‌ನಲ್ಲಿದ್ದ ಮೂವರೂ ಕೆಳಗೆ ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದಾರೆ. ಅನುಷಾ ಹಾಗೂ ಕಿರಣ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಅನಿತಾ ಅವರ ಕಾಲಿನ ಮಂಡಿಚಿಪ್ಪು ಮುರಿದಿದೆ. ಬಳಿಕ ಹತ್ತಿರದಲ್ಲಿದ್ದ ಅಶ್ವಿನಿ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಅನಿತಾ ಅವರ ಕಾಲಿನ ಮಂಡಿ ಚಿಪ್ಪು ಮುರಿದಿರುವ ವಿಚಾರ ತಿಳಿದಿದೆ.
ಬಳಿಕ ಬ್ಯಾಟರಾಯನಪುರ ಠಾಣೆಯಲ್ಲಿ ಕಿರಣ್ ದೂರು ನೀಡಿದ್ದರು. ಟ್ರಾಫಿಕ್ ಪೊಲೀಸರು ಸಿಸಿಟಿವಿ ಮೂಲಕ ಕಾರಿನ ನಂಬರ್ ಮೂಲಕ ಪತ್ತೆ ಹಚ್ಚಿದ್ದರು. ಆಗ ದಿವ್ಯಾ ಸುರೇಶ್ ಮಾಡಿದ್ದ ಅಪಘಾತ ಬೆಳಕಿಗೆ ಬಂದಿತ್ತು. ಬಳಿಕದಿವ್ಯಾ ಸುರೇಶ್ ಕಾರನ್ನು ಪತ್ತೆ ಹಚ್ಚಿ, ಪೊಲೀಸರು ಸೀಜ್ ಮಾಡಿದ್ದರು. ಆದರೆ ದಿವ್ಯಾ ಕಾರನ್ನು ಬಿಡಿಸಿಕೊಂಡು ಹೋಗಿದ್ದು, ಈ ಕೇಸ್ ತನಿಖೆ ಮುಂದುವರಿದಿದೆ ಎಂದು ವರದಿಯಾಗಿದೆ.
ಬಿಗ್‌ಬಾಸ್ ಸೀಸನ್-8ರ ಸ್ಪರ್ಧಿಯಾಗಿದ್ದ ದಿವ್ಯಾ ಸುರೇಶ್ ಕನ್ನಡ, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಶಾರದೆ ಸೀರಿಯಲ್‌ನಲ್ಲಿ ದಿವ್ಯಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.












Click it and Unblock the Notifications