ದರ್ಶನ್ ಅಣ್ಣನ್ನ ಜೈಲಲ್ಲಿ ನೋಡೋಕೆ ಇಷ್ಟ ಇಲ್ಲ, ಮನೆಗೆ ಬಂದಾಗಲೇ ಆಶೀರ್ವಾದ ತಗೋತೀನಿ: ಗಿಲ್ಲಿ ನಟ
Bigg Boss winner Gilli: ಬಿಗ್‌ಬಾಸ್ ಕನ್ನಡ ಸೀಸನ್-12ರ ವಿನ್ನರ್ ಗಿಲ್ಲಿ ಅವರು ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾಗಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ವದಂತಿಗಳ ಕುರಿತು ಇದೀಗ ಸ್ವತಃ ಗಿಲ್ಲಿ ಸ್ಪಷ್ಟನೆ ನೀಡಿದ್ದಾರೆ. "ನಾನು ಕೂಡ ದರ್ಶನ್ ಅಣ್ಣ ಅವರನ್ನು ಭೇಟಿಯಾಗಲು ಅವಕಾಶ ಕೇಳಿದ್ದೆ. ಆದರೆ ಸದ್ಯಕ್ಕೆ ಭೇಟಿ ನೀಡಲು ಅವಕಾಶ ಇಲ್ಲ ಎಂದು ತಿಳಿಸಿದರು. ಒಂದೇ ಬಾರಿ ಅಲ್ಲ, ಹಲವು ಬಾರಿ ಪ್ರಯತ್ನಿಸಿದ್ದೇನೆ. ಆದರೆ ಅವಕಾಶ ಸಿಕ್ಕಿಲ್ಲ" ಎಂದು ಹೇಳಿದ್ದಾರೆ.
ಇದೇ ವೇಳೆ ದರ್ಶನ್ ಮೇಲಿನ ತಮ್ಮ ಗೌರವ ಮತ್ತು ಭಾವನಾತ್ಮಕ ನಂಟಿನ ಬಗ್ಗೆ ಮಾತನಾಡಿದ ಅವರು, "ನಮ್ಮ ದರ್ಶನ್ ಅಣ್ಣ ಅವರನ್ನು ಜೈಲಿನಲ್ಲಿ ಹೋಗಿ ನೋಡುವುದಕ್ಕಿಂತ, ಅವರು ಮನೆಗೆ ಬಂದಾಗ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವುದು ನನಗೆ ಹೆಚ್ಚು ಇಷ್ಟ. ಅದೇ ನನಗೆ ಸಂತೋಷ ಕೊಡುತ್ತದೆ" ಎಂದು ಮನದಾಳದ ಮಾತು ಹಂಚಿಕೊಂಡಿದ್ದಾರೆ.

"ಡೆವಿಲ್" ಸಂಭ್ರಮ ಮಿಸ್ ಮಾಡಿಕೊಂಡೆ
ಗಿಲ್ಲಿ ಅವರು ದರ್ಶನ್ ಅಭಿನಯದ 'ಡೆವಿಲ್' ಸಿನಿಮಾದಲ್ಲೂ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಸಮಯದಲ್ಲಿ ತಾವು ಬಿಗ್‌ಬಾಸ್ ಮನೆಯೊಳಗಿದ್ದ ಕಾರಣ, ಆ ಕ್ಷಣದ ಸಂಭ್ರಮವನ್ನು ಮಿಸ್ ಮಾಡಿಕೊಂಡಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಿನಿಮಾ ರಿಲೀಸ್ ಆಗುವಾಗ ನಾನು ಬಿಗ್‌ಬಾಸ್‌ನಲ್ಲಿ ಇದ್ದೆ. ಥಿಯೇಟರ್‌ನಲ್ಲಿ ಎಲ್ಲರ ಜೊತೆ ಕೂತು ಸಿನಿಮಾ ನೋಡಿ ಎಂಜಾಯ್ ಮಾಡಬೇಕಿತ್ತು ಎಂಬ ಆಸೆ ಇತ್ತು. ಆ ಕ್ಷಣವನ್ನು ಮಿಸ್ ಮಾಡಿಕೊಂಡೆ ಅನ್ನೋದು ತುಂಬಾ ಬೇಜಾರಾಯ್ತು. ಆ ಸಮಯದಲ್ಲಿ ನಾನೂ ಇರಬೇಕಿತ್ತಲ್ಲಾ ಅನ್ನೋ ಫೀಲಿಂಗ್ ಆಯ್ತು" ಎಂದು ಗಿಲ್ಲಿ ಹೇಳಿದ್ದಾರೆ.
ಆದರೆ ಬಳಿಕ ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದ್ದಾಗ ಸಂಭ್ರಮದ ವೀಡಿಯೋಗಳನ್ನು ನೋಡಿ ತುಂಬಾ ಖುಷಿಪಟ್ಟೆ ಎಂದು ಅವರು ಹೇಳಿದ್ದಾರೆ. ಆ ವೀಡಿಯೋಗಳನ್ನು ನೋಡಿ ನಿಜಕ್ಕೂ ತುಂಬಾ ಸಂತೋಷ ಆಯ್ತು. ಜನರ ಪ್ರತಿಕ್ರಿಯೆ ನೋಡಿ ಹೆಮ್ಮೆ ಆಯ್ತು ಎಂದು ತಿಳಿಸಿದ್ದಾರೆ. ದರ್ಶನ್ ಅವರ ಮೇಲೆ ಅಪಾರ ಗೌರವ ಹೊಂದಿರುವ ಗಿಲ್ಲಿ, ಸರಿಯಾದ ಸಮಯ ಬಂದಾಗ ತಮ್ಮ ನೆಚ್ಚಿನ ನಟರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.












Click it and Unblock the Notifications