BBK-12: ಬಿಗ್‌ಬಾಸ್ ವೀಕ್ಷಕರಿಗೆ ಶಾಕ್, ಶೋ ಬಂದ್ ಮಾಡುವಂತೆ ಸರ್ಕಾರದಿಂದ ನೋಟಿಸ್
ಬಿಗ್‌ಬಾಸ್ ಕನ್ನಡ ಸೀಸನ್-12 ರಿಯಾಲಿಟಿ ಶೋಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಕಾರ್ಯಕ್ರಮ ಶುರುವಾಗಿ ವಾರವಷ್ಟೇ ಕಳೆದಿದೆ. ನಿನ್ನೆಯಷ್ಟೇ ಮೊದಲ ಎಲಿಮಿನೇಷನ್ ಆಗಿ ಇಬ್ಬರು ಮನೆಯಿಂದ ಹೊರಬಂದಿದ್ದಾರೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದುಕೊಳ್ಳುವಷ್ಟರಲ್ಲೇ ರಾಜ್ಯ ಸರ್ಕಾರ ಬಿಗ್‌ಬಾಸ್‌ಗೆ ಬಿಗ್ ಶಾಕ್ ನೀಡಿದೆ. ತಕ್ಷಣ ಬಿಗ್‌ಬಾಸ್ ಕಾರ್ಯಕ್ರಮ ಬಂದ್ ಮಾಡುವಂತೆ ಖಡಕ್ ಸೂಚನೆ ನೀಡಿದೆ. ಇದಕ್ಕೆ ಕಾರಣವೇನು? ಎಂಬ ವಿವರ ಇಲ್ಲಿದೆ.
ಬಿಗ್‌ಬಾಸ್ ಪ್ರತಿ ಸೀಸನ್‌ನಲ್ಲೂ ಒಂದಿಲ್ಲೊಂದು ವಿವಾದಗಳು ಹುಟ್ಟಿಕೊಳ್ಳುತ್ತಲೇ ಇದೆ. ಹಿಂದಿನ ಸೀಸನ್‌ಗಳಲ್ಲಿ ಸ್ಪರ್ಧಿಗಳು ಬಿಗ್‌ಬಾಸ್ ಮನೆಯಿಂದಲೇ ಅರೆಸ್ಟ್ ಆಗಿದ್ದ ಘಟನೆಗಳೂ ನಡೆದಿದ್ದವು. ಆದರೆ ಈ ಬಾರಿ ಕಾರ್ಯಕ್ರಮವನ್ನೇ ಬಂದ್ ಮಾಡುವಂತೆ ಬಿಗ್‌ಬಾಸ್ ಆಯೋಜಕರಿಗೆ ನೋಟಿಸ್ ನೀಡಲಾಗಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಬಿಗ್‌ಬಾಸ್ ಆಯೋಜಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಬಿಗ್ ಬಾಸ್ ಕನ್ನಡ ಸೀಸನ್-12 ಕಾರ್ಯಕ್ರಮದ ಆಯೋಜಕರು ನಿಯಮಾನುಸಾರ ತ್ಯಾಜ್ಯ ನೀರು ಸಂಸ್ಕರಣ ಘಟಕವನ್ನು ನಿರ್ಮಿಸಿಲ್ಲ ಎಂಬ ಕಾರಣಕ್ಕೆ ನೋಟಿಸ್ ನೀಡಿದೆ. ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಬಿಗ್‌ಬಾಸ್ ಮನೆಯನ್ನ ತಕ್ಷಣ ಬಂದ್ ಮಾಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಬಿಗ್‌ಬಾಸ್‌ನಿಂದ ನಿಯಮ ಉಲ್ಲಂಘನೆ?
ಬಿಡದಿ ಸಮೀಪದ ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್‌ಬಾಸ್ ಮನೆ ನಿರ್ಮಿಸಲಾಗಿದ್ದು, ಇಲ್ಲಿನ ತಾಜ್ಯವನ್ನು ಸರಿಯಾದ ರೀತಿಯಲ್ಲಿ ಸಂಸ್ಕರಣೆ ಮತ್ತು ವಿಲೇವಾರಿ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಇಲ್ಲಿ ಸ್ಟುಡಿಯೋ ನಡೆಸಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಕ್ತ ಅನುಮತಿ ಕೂಡ ಪಡೆದಿಲ್ಲ ಎಂದು ಹೇಳಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಬಿಗ್‌ಬಾಸ್ ಆಯೋಜಕರಿಗೆ ನೋಟಿಸ್ ನೀಡಿ ಬಂದ್ ಮಾಡುವಂತೆ ತಿಳಿಸಿದೆ.
ಬಿಡದಿ ಬಳಿಯ ಅಮ್ಯೂಸ್ಮೆಂಟ್ ಪಾರ್ಕ್‌ನಲ್ಲಿ ಸದ್ಯ ಬಿಗ್‌ಬಾಸ್ ಮನೆ ನಿರ್ಮಿಸಲಾಗಿದೆ. ಹೀಗಾಗಿ ಈ ಮನೆಯಿಂದ ಭಾರೀ ಪ್ರಮಾಣದಲ್ಲಿ ತ್ಯಾಜ್ಯ ನೀರು ಹೊರಬರುತ್ತಿದ್ದು, ಅದನ್ನು ಸೂಕ್ತ ರೀತಿಯಲ್ಲಿ ಸಂಸ್ಕರಣೆ ಮಾಡದೆ ಹೊರಗೆ ಬಿಡಲಾಗುತ್ತಿದೆ. ಕ್ರಮೇಣ ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಪ್ಲಾಸ್ಟಿಕ್ ತ್ಯಾಜ್ಯವನ್ನು ಕೂಡ ಅವೈಜ್ಞಾನಿಕವಾಗಿ ವಿಲೇವಾರಿ ಮಾಡಿರುವ ಆರೋಪ ಕೇಳಿಬಂದಿದೆ. ಒಂದು ವೇಳೆ ಕಾನೂನು ಪ್ರಕಾರ ಕೈಗೊಂಡರೆ ಬಿಗ್‌ಬಾಸ್ ರಿಯಾಲಿಟಿ ಶೋ ಬಂದ್ ಆಗುವ ಸಾಧ್ಯತೆ ಇದೆ.
ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ನೋಟಿಸ್ಗೆ ಬಿಗ್ ಬಾಸ್ ಆಯೋಜಕರು ಸರಿಯಾದ ಉತ್ತರ ನೀಡಿದರೆ ಮಾತ್ರವೇ ಬಿಗ್‌ಬಾಸ್ ಕಾರ್ಯಕ್ರಮ ನಿರ್ವಿಘ್ನವಾಗಿ ಮುಂದುವರಿಯಲಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿರುವುದು ಸಾಬೀತಾದರೆ ರಿಯಾಲಿಟಿ ಶೋ ಮುಂದುವರಿಯುವುದು ಅನುಮಾನ ಎಂದು ಹೇಳಲಾಗುತ್ತಿದೆ. ಹೀಗಾಗಿ ಬಿಗ್‌ಬಾಸ್ ಒಂದು ವಾರಕ್ಕೇ ಬಂದ್ ಆಗಲೂಬಹುದು ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆಯಿಂದಾಗಿ ಬಿಗ್‌ಬಾಸ್ ಪ್ರೇಕ್ಷಕರು ಶಾಕ್‌ಗೆ ಒಳಗಾಗಿದ್ದಾರೆ.












Click it and Unblock the Notifications