Bigg Boss 10: ಬಿಗ್ ಬಾಸ್ ಆರಂಭಕ್ಕೆ ಮುಹೂರ್ತ ಫಿಕ್ಟ್: ಯಾರು ಆ 16 ಅಭ್ಯರ್ಥಿಗಳು?
ಕನ್ನಡ ಕಿರುತೆರೆ ಲೋಕದಲ್ಲಿ ಸಂಚಲನ ಮೂಡಿಸಿದ್ದ ಬಿಗ್ ಬಾಸ್‌ನ ಮತ್ತೊಂದು ಆವೃತ್ತಿ ಪ್ರಸಾರವಾಗಲು ಸಜ್ಜಾಗಿದೆ. ಅಕ್ಟೋಬರ್ 8 ರಿಂದ ಬಿಗ್ ಬಾಸ್ 10ನೇ ಆವೃತ್ತಿ ಆರಂಭವಾಗಲಿದ್ದು, ಬಿಗ್ ಬಾಸ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಸಿಗಲಿದೆ.
ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ ಕಾರ್ಯಕ್ರಮದ ಆರಂಭದ ದಿನಾಂಕವನ್ನು ಬಹಿರಂಗಪಡಿಸಿದೆ. ಶುಕ್ರವಾರ ವಾಹಿನಿಯಲ್ಲಿ ಪ್ರಸಾರವಾದ 'ಅನುಬಂಧ ಅವಾರ್ಡ್ಸ್' ಸಮಾರಂಭದಲ್ಲಿ ಬಿಗ್ ಬಾಸ್ 10ನೇ ಆವೃತ್ತಿ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಅಧಿಕೃತ ಘೋಷಣೆ ಮಾಡಿದೆ. ಅಕ್ಟೋಬರ್ 8ರಂದು ಬಿಗ್ ಬಾಸ್ 10ನೇ ಆವೃತ್ತಿಯ ಮೊದಲ ಸಂಚಿಕೆ ಪ್ರಸಾರವಾಗಲಿದೆ.

ಅಕ್ಟೋಬರ್ 7ರಂದು ಅಭ್ಯರ್ಥಿಗಳ ಪರಿಚಯ, ಬಿಗ್ ಬಾಸ್ ಮನೆಗೆ ಹೋಗುವ ಶೂಟಿಂಗ್ ನಡೆಯಲಿದ್ದು, ಯಾರೆಲ್ಲಾ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯುತ್ತಾರೆ ಎನ್ನುವ ಕುತೂಹಲಕ್ಕೆ ಅಕ್ಟೋಬರ್ 8ರಂದು ತೆರೆ ಬೀಳಲಿದೆ.
ಬೃಹತ್ ಮನೆ ನಿರ್ಮಾಣ
ಈ ಬಾರಿಯ ಬಿಗ್ ಬಾಸ್ ಮನೆಯನ್ನು ತಾವರೆಕೆರೆ ಹಾಗೂ ದೊಡ್ಡ ಆಲದ ಮರದ ಮಧ್ಯೆ ಒಂದು ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಕಳೆದ ಆವೃತ್ತಿಯ ಬಿಗ್ ಬಾಸ್ ಕಾರ್ಯಕ್ರಮ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆದಿತ್ತು.
ಈ ಬಾರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ತಂತ್ರಜ್ಞರು, ನಿರ್ದೇಶಕರು ಕೂಡ ಬದಲಾಗಿದ್ದಾರೆ. ಹೊಸ ತಾಂತ್ರಿಕ ತಂಡ ಬಿಗ್ ಬಾಸ್ ಕನ್ನಡ 10ರ ಆವೃತ್ತಿಗೆ ಕೆಲಸ ಮಾಡಲಿದೆ. ಹೊಸ ನಿರ್ದೇಶಕರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸಾರಥ್ಯ ವಹಿಸಿಕೊಳ್ಳಲಿದ್ದಾರೆ.
ಸ್ಪರ್ಧಿಗಳು ಯಾರು?
ಪ್ರತಿ ಬಾರಿ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗುವ ಮೊದಲು ಕಾಡುವ ಮುಖ್ಯಪ್ರಶ್ನೆ ಸ್ಪರ್ಧಿಗಳು ಯಾರು ಎನ್ನುವುದು. ಈ ಬಾರಿ ಕೂಡ ಅದೇ ಕುತೂಹಲ ಇದ್ದು, ಹಲವು ಹೆಸರುಗಳು ಈಗಾಗಲೇ ಕೇಳಿಬರುತ್ತಿವೆ. ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, 'ಗೀತಾ' ಸೀರಿಯಲ್ ಖ್ಯಾತಿಯ ಭವ್ಯಾ ಗೌಡ, 'ಲಕ್ಷಣ' ಧಾರಾವಾಹಿ ನಟಿ ಸುಕೃತಾ ನಾಗ್, ಜೊತೆಜೊತೆಯಲಿ ಧಾರವಾಹಿಯಲ್ಲಿ ಅಭಿನಯಿಸಿದ್ದ ಮೇಘಾ ಶೆಟ್ಟಿ, ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧವಾಗಿರುವ ಡಾ. ಬ್ರೋ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬಂದಿವೆ.
ಆದರೂ ಯಾರಿಗೆಲ್ಲಾ ಬಿಗ್ ಬಾಸ್ ಮನೆಗೆ ಎಂಟ್ರಿ ಸಿಗುತ್ತೆ ಎನ್ನುವುದು ಕೊನೆಯವರೆಗೂ ರಹಸ್ಯವಾಗಿ ಉಳಿಯಲಿದೆ. ಅಕ್ಟೋಬರ್ 8ರವರೆಗೆ ಕಾದರೆ ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಬರುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ.












Click it and Unblock the Notifications