Actress Siri: ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ, ನಟಿ ಸಿರಿ
ಬೆಂಗಳೂರು, ಜೂನ್. 14: ಖ್ಯಾತ ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ಸಿರಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್ 13ರಂದು ಉದ್ಯಮಿ ಮತ್ತು ನಟ ಪ್ರಭಾಕರ್ ಬೋರೇಗೌಡ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ವರದಿಯಾಗಿದೆ.
ಇಷ್ಟು ದಿನಗಳ ಕಾಲ ಎಲ್ಲರಿಗೂ ಕಿರುತೆರೆ ನಟಿ ಸಿರಿ ಅವರ ಮದುವೆ ಬಗ್ಗೆ ಸಾಕಷ್ಟು ಪ್ರಶ್ನೆಗಳಿದ್ದವು. ಯಾಕೆ ಇನ್ನು ಮದುವೆ ಆಗಿಲ್ಲ.. ಅವರ ಮದುವೆ ಯಾವಾಗ ಎಂದು ಹಲವು ಮಂದಿ ಕೇಳುತ್ತಿದ್ದವು. ಅವರ ಅಭಿಮಾನಿಗಳು ಕೂಡ ಅವರ ಮದುವೆ ಬಗ್ಗೆ ಹೆಚ್ಚು ನಿರೀಕ್ಷೆಯಿಟ್ಟುಕೊಂಡಿದ್ದರು. ಅವರ ಮದುವೆಗಾಗಿ ಕಾಯುತ್ತಿದ್ದರು.

ಕನ್ನಡದ ಕಿರುತೆರೆಯಲ್ಲಿ ತಮ್ಮದೆ ಆದ ಛಾಪು ಮೂಡಿಸಿರುವ ನಟಿ ಸಿರಿ ಅವರಿಗೆ ಮದುವೆಯಾಗಿದೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿರಿ ಅವರ ಅರಿಶಿಣ ಶಾಸ್ತ್ರ ಮತ್ತು ಮದುವೆ ವಿಡಿಯೋ ವೈರಲ್ ಆಗುತ್ತಿದೆ. ಅಭಿಮಾನಿಗಳು ಇದು ಫೇಕ್, ರಿಯಲ್ ಎನ್ನುವ ಅನುಮಾನದಲ್ಲಿಯೇ ಅವರಿಗೆ ವಿಶ್ ಮಾಡುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿನ ಭೋಗ ನಂದೀಶ್ವರ ದೇವಾಲಯದಲ್ಲಿ ಸಿರಿ ಮತ್ತು ಉದ್ಯಮಿ ಪ್ರಭಾಕರ್ ಮದುವೆ ನಡೆದಿದೆ. ಆಪ್ತರು ಮತ್ತು ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ವಿವಾಹ ಜರುಗಿದೆ. ಸಿರಿ ಅವರನ್ನು ಮದುವೆಯಾಗಿರುವ ವರ ಪ್ರಭಾಕರ್ ಬೋರೇಗೌಡ ಅವರು ಮೂಲತಃ ಮಂಡ್ಯದವರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಎರಡು ದಿನಗಳ ಹಿಂದೆ ಸಿರಿ ಅವರ ಅರಿಶಿಣ ಶಾಸ್ತ್ರದ ವಿಡಿಯೋಗಳು ವೈರಲ್ ಆಗಿದ್ದವು. ಆಗ ಅದು ಸಿರಿಯಲ್ ಅಥವಾ ಸಿನಿಮಾಗಾಗಿ ಇರಬಹುದು ಎಂದು ಫ್ಯಾನ್ಸ್ ಹೇಳಿದ್ದರು. ಆದರೆ, ಇದು ನಿಜವಾದ ಮದುವೆಯಾಗಿದ್ದು, ಮದುವೆಯ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ವೈರಲ್ ಆಗಿವೆ. ಅದರಲ್ಲಿ ಸರಳವಾಗಿ ನಡೆದ ವಿವಾಹದ ವಿಡಿಯೋಗಳಿವೆ.
ಸುಮಾರು 40 ವರ್ಷ ವಯಸ್ಸಿನ ಜನಪ್ರಿಯ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಿರಿ ಅವರು ಕಿರುತೆರೆಯಲ್ಲಿ ಸುಮಾರು 30 ವರ್ಷಕ್ಕೂ ಹೆಚ್ಚು ಕಾಲದಿಂದ ನಟಿಸುತ್ತಿದ್ದು, ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಮನೆಯೊಂದು ಮೂರು ಬಾಗಿಲು, ರಂಗೋಲಿ, ಬದುಕು, ರಾಮಾಚಾರಿ ಸೇರಿದಂತೆ ಹಲವು ಕನ್ನಡದ ಧಾರಾವಾಹಿಗಳ ಜೊತೆಗೆ ಬೇರೆ ಭಾಷೆಯ ಧಾರಾವಾಹಿಗಳಲ್ಲಿಯೂ ಕೆಲಸ ಮಾಡಿದ್ದಾರೆ. ಸೀಸನ್ 10ರ ಬಿಗ್ ಬಾಸ್ ಕನ್ನಡ ಶೋನಿಂದ ನಟಿ ಸಿರಿ ಮತ್ತಷ್ಟು ಜನಪ್ರಿಯತೆ ಗಳಿಸಿದ್ದಾರೆ.












Click it and Unblock the Notifications