Ranjith Kumar: 'ನನ್ನ ಪತ್ನಿ ಕಣ್ಣಲ್ಲಿ ಅವಳು ಕಾಣುತ್ತಾಳೆ' - ಬಿಗ್‌ಬಾಸ್ ರಂಜಿತ್ ಹೀಗಂದಿದ್ದು ಯಾಕೆ?
ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ರಂಜಿತ್ ಕುಮಾರ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ದಾಂಪತ್ಯ ಜೀವನಕ್ಕೆ ಕಾಲಿಡಲು ರಂಜಿತ್ ಸಜ್ಜಾಗಿದ್ದು ಗುರುವಾರ ತಾವು ಪ್ರೀತಿಸಿದ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಸಮಯವನ್ನು ಮತ್ತಷ್ಟು ಸುಂದರವಾಗಿಸಲು ಬಿಗ್‌ಬಾಸ್ ಸ್ಪರ್ಧಿಗಳು ಭಾಗವಹಿಸಿ ರಂಜಿತ್ ಅವರಿಗೆ ಸರ್ಪೈಸ್ ಕೊಟ್ಟಿದ್ದಾರೆ. ಇದೇ ವೇಳೆ ಮಾತನಾಡಿದ ರಂಜಿತ್ ತಾವು ಮದುವೆಯಾಗುವ ಹುಡುಗಿಯ ಬಗ್ಗೆ ಹೇಳಿದ ಆ ಒಂದು ಮಾತು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಹೌದು... ಬಿಗ್ ಬಾಸ್ ಸ್ಪರ್ಧಿ ರಂಜಿತ್ ಅವರು ಮಾನಸಾ ಗೌಡ ಅವರನ್ನು ಮದುವೆಯಾಗಲಿದ್ದಾರೆ. ಮಾನಸ ಗೌಡ ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿದ್ದಾರೆ. ರಂಜಿತ್ ಹಾಗೂ ಮಾನಸಾ ಅವರದ್ದು ಲವ್ ಮ್ಯಾರೇಜ್. ಸಹಜವಾಗಿ ಲವ್ ಮ್ಯಾರೇಜ್ ಅಂದರೆ ಎಲ್ಲಿ? ಯಾವಾಗ ಹೇಗೆ ಭೇಟಿ ಮಾಡಿದರು ಅನ್ನೋ ಕೂತೂಹಲ ಇದ್ದೇ ಇರುತ್ತದೆ. ಈ ಬಗ್ಗೆ ಮಾತನಾಡಿದ ರಂಜಿತ್ ಅವರು ಹಲವಾರು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಬಿಗ್‌ಬಾಸ್ ರಂಜಿತ್ ನಿಶ್ಚಿತಾರ್ಥ
ರಂಜಿತ್ ಅವರು ತಮಗೆ ಮಾನಸ ಇಷ್ಟ ಆಗಲು ಕಾರಣವನ್ನು ಹೇಳಿದ್ದಾರೆ. 'ನಾವಿಬ್ಬರು ತುಂಬಾ ವರ್ಷದಿಂದ ಪ್ರೀತಿ ಮಾಡುತ್ತಿದ್ದೇವೆ ಎಂದು ಎಲ್ಲರು ಅಂದುಕೊಂಡಿದ್ದಾರೆ. ಆದರೆ ನಾನು ಅವಳನ್ನು ನೋಡಿ ಕೆಲವೇ ತಿಂಗಳು ಆಯ್ತು ಅಷ್ಟೆ. ನಾನು ಅವಳ ಅಂದ ಚಂದ ನೋಡಿಲ್ಲ. ಮೊದಲ ಬಾರಿಗೆ ನೋಡಿದಾಗ ಅವಳು ಯಾವ ಬಣ್ಣದ ಉಡುಪು ಧರಿಸಿದ್ದಾರೆ ಅನ್ನೋದನ್ನೂ ನೋಡಿಲ್ಲ. ಆದರೆ ನಾನು ನೋಡಿದ್ದು ಒಂದೇ ಮಾನಸಾಳ ಕಣ್ಣುಗಳನ್ನು' ಎಂದು ರಂಜಿತ್ ಹೇಳಿದ್ದಾರೆ.
'ನನ್ನ ಪತ್ನಿ ಕಣ್ಣಲ್ಲಿ ಅವಳು ಕಾಣುತ್ತಾಳೆ'
ಮನಸಾ ಅವರ ಕಣ್ಣುಗಳು ರಂಜಿತ್ ಅವರಿಗೆ ಇಷ್ಟ ಆಗಿದೆಯಂತೆ. ಮಾನಸಾ ಅವರ ಕಣ್ಣಿನಲ್ಲಿ ರಂಜಿತ್ ಅವರಿಗೆ ಕಂಡಿದ್ದು ಬೇರೆ ಮಹಿಳೆ. ಆ ಮಹಿಳೆ ಯಾರು ಅನ್ನೋದನ್ನು ರಂಜಿತ್ ವಿವರಿಸಿದ್ದಾರೆ. 'ನಾನು ಮೊದಲ ಬಾರಿ ಅವಳನ್ನು ನೋಡಿದಾಗ ಅವಳು ಯಾವ ಬಟ್ಟೆ ಹಾಕಿದ್ದಳು ಅನ್ನೋದು ನನಗೆ ನೆನಪಿಲ್ಲ. ಆದರೆ ಅವಳ ಕಣ್ಣು ಮಾತ್ರ ನಾನು ತುಂಬಾ ಚೆನ್ನಾಗಿ ನೋಡಿದೆ. ನಾನು ಅವಳ ಕಣ್ಣನ್ನು ನೋಡಿ ಇಷ್ಟಪಟ್ಟೆ. 15-20 ದಿನ ನಾನು ಮಾನಸ ಯಾವ ಬಟ್ಟೆ ಹಾಕಿದ್ದಳು ಅನ್ನೋದನ್ನು ಗಮನಿಸಿಲ್ಲ. ಆದರೆ ಅವಳ ಕಣ್ಣುಗಳನ್ನು ಮಾತ್ರ ತುಂಬಾ ಚೆನ್ನಾಗಿ ಗಮನಿಸಿದ್ದ' ಎಂದಿದ್ದಾರೆ ರಂಜಿತ್.

'ಮಾನಸಾ ಕಣ್ಣು ತುಂಬಾ ಚೆನ್ನಾಗಿ ಇದೆ. ನಾನು ಅವಳ ಕಣ್ಣಿನಲ್ಲಿ ನನ್ನ ತಾಯಿಯನ್ನು ನೋಡಿದೆ. ತನ್ನ ತಾಯಿ ಈಗ ಇಲ್ಲ. ಆದರೆ ಅಮ್ಮ ಮಾನಸಾ ಕಣ್ಣಿನಲ್ಲಿ ಕಂಡರು. ಅಮ್ಮನ ಆಶೀರ್ವಾದ ಇದೆ ಎಂದು ನನಗೆ ಅನಿಸಿತು' ಎಂದು ರಂಜಿತ್ ಹೇಳಿದ್ದಾರೆ.
ತಾಯಿ ಆಶೀರ್ವಾದ ಇದೆ ಎಂದ ರಂಜಿತ್
'ಬಿಗ್‌ಬಾಸ್ ಮನೆಯಲ್ಲಿ ಇದ್ದಾಗಲೂ ಅಷ್ಟೇ ಹೊರಗಡೆ ಬಂದ ಮೇಲೂ ಅಷ್ಟೇ ನನಗೆ ನನ್ನ ತಾಯಿಯ ಆಶೀರ್ವಾದ ಇತ್ತು. ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಹಲವಾರು ತಾಯಂದಿರ ಪ್ರೀತಿ ಸಿಕ್ಕಿದೆ. ಈ ಎಲ್ಲಾ ತಾಯಂದಿರ ಆಶೀರ್ವಾದಿಂದ ಮಾನಸಾ ನನಗೆ ಸಿಕ್ಕಿದ್ದಾಳೆ. ಯಾಕೆಂದರೆ ತಾಯಿ ನಮ್ಮನ್ನ ಹೆತ್ತು ಜೀವನದುದ್ದಕ್ಕೂ ಊಟ ಮಾಡಿಸಿರುತ್ತಾರೆ. ಅವರು ಈಗ ನಮ್ಮೊಂದಿಗೆ ಇಲ್ಲ ಅನ್ನೋ ರೀತಿ ನನಗೆ ಅನಿಸಿಲ್ಲ. ಯಾಕೆಂದರೆ ಅವರನ್ನು ನಾನು ಮಾನಸ ಕಣ್ಣಲ್ಲಿ ನೋಡಿದೆ. ಹೀಗಾಗಿ ನಾನು ಮಾನಸಾಳನ್ನು ಜೀವನದುದ್ದಕ್ಕೂ ತುತ್ತು ಮಾಡಿ ತಿನ್ನಿಸಿ ಮುದ್ದು ಮಾಡಿ ನೋಡಿಕೊಳ್ಳುತ್ತೇನೆ' ಎಂದಿದ್ದಾರೆ.
ಇನ್ನೂ ಬಿಗ್‌ಬಾಸ್ ಸಹ ಸ್ಪರ್ಧಿಗಳಾದ ಐಶ್ವರ್ಯ, ಮೋಕ್ಷಿತಾ, ಶಶಿರ್, ಭವ್ಯಾ, ಅನುಷಾ ರೈ ಇವರೆಲ್ಲರೂ ರಂಜಿತ್ ನಿಶ್ಚಿತಾರ್ಥಕ್ಕೆ ಭೇಟಿ ನೀಡಿ ಶುಭ ಹಾರೈಸಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ರಂಜಿತ್ ಹೆಚ್ಚು ದಿನಗಳು ಇರಲಿಲ್ಲ. ಲಾಯರ್ ಜಗದೀಶ್ ಅವರ ಮೇಲೆ ಕೈ ಮಾಡಿ ಹೊರಬಂದರು. ಇದೀಗ ಅವರು ತಾವು ಪ್ರೀತಿಸಿದ ಹುಡುಗಿಯೊಂದಿಗೆ ಮದುವೆಯಾಗುತ್ತಿದ್ದಾರೆ. ಮದುವೆಯ ಸಂಭ್ರಮದಲ್ಲಿದ್ದಾರೆ. ನಿಶ್ಚಿತಾರ್ಥದಲ್ಲಿ ಸಂಭ್ರಮಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.












Click it and Unblock the Notifications