ಕನ್ನಡಿಗರ ಹೋರಾಟಕ್ಕೆ ಜಯ! ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ರಿಲೀಸ್ ಇಲ್ಲ
ಕಮಲ್ ಹಾಸನ್ ಅವರ ಪಾಡು ಮಾಡಿದ್ದುಣ್ಣೋ ಮಹಾರಾಯ ಎನ್ನುವಂತಾಗಿದೆ. ಕನ್ನಡದ ಬಗ್ಗೆ ಕೇವಲವಾಗಿ ಮಾತನಾಡಿದ್ದಲ್ಲದೆ, ಕ್ಷಮೆ ಕೇಳಲು ಒಪ್ಪದೆ. ನನ್ನ ಸಿನಿಮಾ ಮಾತ್ರ ಕರ್ನಾಟಕದಲ್ಲಿ ಯಾವುದೇ ಅಡ್ಡಿಯಿಲ್ಲದೆ ರಿಲೀಸ್ ಮಾಡಿಸಿಕೊಡಿ ಎಂದು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದ ಕಮಲ್ ಹಾಸನ್‌ಗೆ ಬಿಗ್ ಶಾಕ್ ಎದುರಾಗಿದೆ. ಇಂದು ಕೋರ್ಟ್‌ನಲ್ಲಿ ಕಮಲ್ ಅರ್ಜಿ ವಿಚಾರಣೆ ನಡೆಯಿತು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಥಗ್ ಲೈಫ್ ಸಿನಿಮಾ ರಿಲೀಸ್ ಆಗಬೇಕೇ? ಬೇಡವೇ ಎಂಬ ವಿಚಾರಣೆಯನ್ನು ಸದ್ಯಕ್ಕೆ ಮುಂದೂಡಿದೆ. ಹೀಗಾಗಿ ಕರ್ನಾಟಕದಲ್ಲಿ ನಿಗದಿತ ದಿನಾಂಕದಂದು ಥಗ್‌ಲೈಫ್ ಬಿಡುಗಡೆಗೆ ಬ್ರೇಕ್ ಹಾಕಿದೆ.
ಇಂದು ಭಾಷಾ ವಿಚಾರವಾಗಿ ಕಮಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ಕೋರ್ಟ್, ಭಾಷೆಯ ಬಗ್ಗೆ ಕಾಮೆಂಟ್ ಮಾಡಲು ನೀವೇನು ಭಾಷಾ ತಜ್ಞರೇ? ಎಂದು ಕೇಳಿತ್ತು. ಸದ್ಯ ಈ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಲಾಗಿದ್ದು, ಅಲ್ಲಿವರೆಗೆ ಥಗ್‌ಲೈಫ್ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗುವುದಿಲ್ಲ. ಜೂನ್ ಐದರಂತೆ ಬಹುಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಆ ದಿನ ಸಿನಿಮಾ ರಿಲೀಸ್ ಆಗುವುದಿಲ್ಲ. ಕೋರ್ಟ್ ವಿಚಾರಣೆ ಮುಂದೂಡಿದ್ದರಿಂದ ಕಮಲ್ ಹಾಸನ್ ಹಾಗೂ ಚಿತ್ರತಂಡಕ್ಕೆ ಭಾರಿ ಮುಖಭಂಗವಾಗಿದೆ.

ಇಂದು ವಿಚಾರಣೆ ವೇಳೆ ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರವೇ ಅವರ ಅರ್ಜಿ ಪರಿಗಣಿಸುತ್ತೇವೆ ಎಂದು ಹೇಳಲಾಗಿತ್ತು. ಯಾವುದೋ ಭಾಷೆಯಿಂದ ಇನ್ನೊಂದು ಭಾಷೆ ಹುಟ್ಟಿದೆ ಅಂದ್ರೆ ಹೇಗೆ? ಕನ್ನಡ ಭಾಷೆ ತಮಿಳಿಂದ ಹುಟ್ಟಿದೆ ಎನ್ನಲು ಕಮಲ್ ಹಾಸನ್ ಇತಿಹಾಸಕಾರರೇ? ಇಂದಿನ ಪರಿಸ್ಥಿತಿಗೆ ನೀವೇ ಕಾರಣ, ಇಂತಹ ಹೇಳಿಕೆ ನೀಡುವ ಮುನ್ನ ಯೋಚನೆ ಮಾಡಬೇಕು ಎಂದು ಕ್ಲಾಸ್ ತೆಗೆದುಕೊಂಡಿತ್ತು.
ಇನ್ನು ಕಮಲ್ ಹಾಸನ್ ಕೂಡ ಸಾಮಾನ್ಯ ವ್ಯಕ್ತಿಯೇನಲ್ಲ, ಸೆಲೆಬ್ರಿಟಿ ಆಗಿರುವ ಕಾರಣ ಈ ರೀತಿ ಹೇಳಿಕೆ ಕೊಟ್ಟ ಅವರು ಕ್ಷಮೆ ಕೇಳಬೇಕು. ಆಮೇಲೆ ಅರ್ಜಿ ಪರಿಗಣಿಸುತ್ತೇವೆ ಎಂದು ಹೇಳಲಾಗಿತ್ತು. ಬಳಿಕ ಮಧ್ಯಾಹ್ನ ವಿಚಾರಣೆ ಮುಂದುವರಿಸಿತು. ಬಳಿಕ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಕಮಲ್ ಪರ ವಕೀಲರು, ಥಗ್ ಲೈಫ್ ಸಿನಿಮಾದ ನಿರ್ಮಾಪಕರು ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಮಾಡದಿರಲು ನಿರ್ಧರಿಸಿದ್ದಾರೆ. ಕರ್ನಾಟಕ ಫಿಲ್ಮ್ ಚೇಂಬರ್ ಜೊತೆಗೆ ನಿರ್ಮಾಪಕರು ಚರ್ಚೆ ನಡೆಸಲು ಸಿದ್ಧರಿದ್ದಾರೆ ಎಂದು ಹೇಳಿದ್ದು, ಈ ಹಿನ್ನೆಲೆ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿ ನ್ಯಾಯಾಲಯ ಆದೇಶಿಸಿದೆ.
ಅಲ್ಲದೆ ನ್ಯಾಯಪೀಠವು ಜೂನ್ 10ರ ಒಳಗಾಗಿ ಕಮಲ್ ಹಾಸನ್ ಹಾಗೂ ಕರ್ನಾಟಕ ಫಿಲ್ಮ್ ಚೇಂಬರ್ ಜೊತೆಯಲ್ಲಿ ಮಾತುಕತೆ ನಡೆಸಿ ಈ ವಿವಾದ ಇತ್ಯರ್ಥ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಅಲ್ಲಿವರೆಗೂ ಕರ್ನಾಟಕದಲ್ಲಿ ಥಗ್‌ಲೈಫ್ ಸಿನಿಮಾ ರಿಲೀಸ್ ಮಾಡದಂತೆಯೂ ಹೇಳಿದೆ. ಕನ್ನಡಿಗರು ಕೂಡ ಕಮಲ್ ಕ್ಷಮೆ ಕೇಳುವವರೆಗೆ ಥಗ್‌ಲೈಫ್ ಸಿನಿಮಾ ರಿಲೀಸ್ ಆಗಲು ಬಿಡಲ್ಲ ಎಂದು ಎಚ್ಚರಿಕೆ ನೀಡಿದ್ದರು. ಈಗ ಚಿತ್ರತಂಡ ಕೂಡ ಫಿಲ್ಮ್ ಚೇಂಬರ್ ಜೊತೆ ಮಾತುಕತೆಗೆ ಮುಂದಾಗಿದೆ. ಆದರೆ ವಿವಾದದ ಬಿಸಿ ಜೋರಾಗಿರುವುದರಿಂದ ಜೂನ್ 5ರಂದು ಕರ್ನಾಟಕದಲ್ಲಿ ಈ ಸಿನಿಮಾ ರಿಲೀಸ್ ಆಗಲ್ಲ.












Click it and Unblock the Notifications