ವಿಷ್ಣು ಸ್ಮಾರಕಕ್ಕೆ 10 ಗುಂಟೆ ಜಾಗ ಕೊಡಿ: ಸಿಎಂ ಸಿದ್ದರಾಮಯ್ಯಗೆ ಭಾರತಿ ವಿಷ್ಣುವರ್ಧನ್ ಮನವಿ
ನಟ ವಿಷ್ಣುವರ್ಧನ್ ಸ್ಮಾರಕ ಜಾಗದ ವಿವಾದ ಸದ್ಯ ಸಿಎಂ ಸಿದ್ದರಾಮಯ್ಯ ಅವರ ಅಂಗಳಕ್ಕೆ ಕಾಲಿಟ್ಟಿದೆ. ಇತ್ತೀಚೆಗೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣು ಸ್ಮಾರಕವನ್ನ ನೆಲಸಮ ಮಾಡಲಾಗಿತ್ತು. ಇದನ್ನು ಖಂಡಿಸಿ ಅವರ ಅಭಿಮಾನಿಗಳು ಬೀದಿಗಿಳಿದು ಹೋರಾಟ ನಡೆಸಿದ್ದರು. ಅದೇ ಜಾಗದಲ್ಲಿ ಸ್ಮಾರಕ ಮತ್ತೆ ನಿರ್ಮಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಸ್ಟುಡಿಯೋ ಜಾಗವನ್ನು ಅರಣ್ಯ ಇಲಾಖೆ ಮತ್ತೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಈಗ ವಿಷ್ಣು ಪತ್ನಿ ಭಾರತಿ ವಿಷ್ಣುವರ್ಧನ್ ಕೂಡ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.
ಅಭಿಮಾನ್ ಸ್ಟುಡಿಯೋ ಜಾಗವನ್ನು ಸರ್ಕಾರವೇ ಮೊದಲು ನಟ ಬಾಲಣ್ಣ ಅವರಿಗೆ ಮಂಜೂರು ಮಾಡಿತ್ತು. ಈ ವೇಳೆ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಿದ್ದು, ಈಗಾಗಲೇ ಭೂಮಿಯನ್ನು ಮಾರಾಟ ಕೂಡ ಮಾಡಲಾಗಿದೆ. ಉಳಿದ ಬಾಕಿ ಜಾಗವನ್ನು ಅರಣ್ಯ ಇಲಾಖೆ ಮತ್ತೆ ವಶಕ್ಕೆ ಪಡೆಯಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಇನ್ನು ಸ್ಮಾರಕ ತೆರವು ಮಾಡಿದ ವಿಚಾರವಾಗಿ ವಿಷ್ಣು ಕುಟುಂಬಸ್ಥರ ಜೊತೆ ಅಭಿಮಾನಿಗಳು ಸಭೆ ಸೇರಿದ್ದರು. ಅದೇ ಜಾಗದಲ್ಲಿ ಸ್ಮಾರಕ ಮತ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿದ್ದರು.

ವಿಷ್ಣು ಅಳಿಯ, ನಟ ಅನಿರುದ್ಧ ಅವರು ಅಸಲಿ ವಿಚಾರಗಳನ್ನು ಪ್ರಸ್ತಾಪಿಸಿದ್ದರು. ಆ ಜಾಗದಲ್ಲಿ ಸ್ಮಾರಕ ನಿರ್ಮಿಸಬೇಕು ಎಂದು ಹಲವು ವರ್ಷಗಳ ಕಾಲ ಹೋರಾಟ ನಡೆಸಿದರೂ ಸಾಧ್ಯವಾಗಲಿಲ್ಲ. ಬಳಿಕ ಅಪ್ಪಾಜಿ ಅವರ ಆಸೆಯಂತೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲಾಯಿತು ಎಂದಿದ್ದರು. ಆದರೂ ಅಭಿಮಾನ್ ಸ್ಡುಡಿಯೋ ಜಾಗದಲ್ಲೇ ನಮಗೆ ಸ್ಮಾರಕ ಬೇಕು ಎಂದು ಪಟ್ಟು ಹಿಡಿದಿದ್ದರು. ಈ ಹಿನ್ನೆಲೆ ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.
ಸ್ಮಾರಕಕ್ಕೆ10 ಗುಂಟೆ ಜಾಗ, ಕರ್ನಾಟಕ ರತ್ನ ನೀಡಿ
ಭಾರತಿ ವಿಷ್ಣುವರ್ಧನ್ ಮತ್ತು ಅನಿರುದ್ಧ್ ಅವರು ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ 10 ಗುಂಟೆ ಜಾಗ ಒದಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ "ಕರ್ನಾಟಕ ರತ್ನ" ಪ್ರಶಸ್ತಿ ನೀಡಬೇಕೆಂದು ಮನವಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದ್ದು, ಸದ್ಯದಲ್ಲೇ ವಿಷ್ಣು ಅಭಿಮಾನಿಗಳು ಕನಸು ನನಸಾಗುವ ಸಾಧ್ಯತೆ ಇದೆ.

ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಜಯಮಾಲ, ಶ್ರುತಿ ಹಾಗೂ ಮಾಳವಿಕ ಅವಿನಾಶ್ ಅವರು ಕೂಡ ಇದೇ ವಿಚಾರವಾಗಿ ನಿನ್ನೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ದಿವಂಗತ ನಟ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ ಸಲ್ಲಿಸಿದ್ದರು. ಇದು ಕಾರ್ಯರೂಪಕ್ಕೆ ಬಂದರೆ ವಿಷ್ಣು ಅಭಿಮಾನಿಗಳ ಆ ಎರಡು ಬೇಡಿಕೆಗಳು ಈಡೇರಲಿದೆ. ಅಭಿಮಾನ್ ಸ್ಟುಡಿಯೋ ಜಾಗದಲ್ಲೇ ವಿಷ್ಣು ಸ್ಮಾರಕ ನಿರ್ಮಾಣವಾಗುವ ದಿನಗಳು ಹತ್ತಿರದಲ್ಲೇ ಇವೆ.












Click it and Unblock the Notifications