ಮದುವೆಯಾಗುವುದಾಗಿ ನಂಬಿಸಿ 9.35 ಕೋಟಿ ರೂ. ವಂಚನೆ ಆರೋಪ: ಬಿಗ್‌ಬಾಸ್ ಖ್ಯಾತಿಯ ನಟಿ ಅಶು ರೆಡ್ಡಿಗೆ ಸಂಕಷ್ಟ
ಬಿಗ್‌ಬಾಸ್ ತೆಲುಗು ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ನಟಿ ಅಶು ರೆಡ್ಡಿ (Ashu Reddy) ಅವರು ಇದೀಗ ಗಂಭೀರ ಕಾನೂನು ವಿವಾದವೊಂದರಲ್ಲಿ ಸಿಲುಕಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಬರೋಬ್ಬರಿ 9.35 ಕೋಟಿ ರೂಪಾಯಿ ಪಡೆದು ವಂಚಿಸಿದ್ದಾರೆ ಎಂಬ ಆರೋಪ ಅಶು ರೆಡ್ಡಿ ಮೇಲೆ ಕೇಳಿಬಂದಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಏನಿದು ಪ್ರಕರಣ?
ವರದಿಗಳ ಪ್ರಕಾರ, ಅಶು ರೆಡ್ಡಿ ಮದುವೆಯಾಗುವುದಾಗಿ ಭರವಸೆ ನೀಡಿ ತಮ್ಮಿಂದ ಹಣ ಪಡೆದಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ ಎನ್ನಲಾಗಿದೆ. 9.35 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತದ ವ್ಯವಹಾರ ಈ ಪ್ರಕರಣದಲ್ಲಿ ನಡೆದಿದೆ ಎಂಬ ಸುದ್ದಿ ತೆಲುಗು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಆದರೆ, ಈ ಆರೋಪಗಳನ್ನು ನಟಿ ಅಶು ರೆಡ್ಡಿ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ಹೆಸರು ಹಾಳು ಮಾಡಲು ಈ ಕೃತ್ಯ
ತಮ್ಮ ಮೇಲಿನ ಈ ಆರೋಪಗಳಿಂದ ಕೆರಳಿರುವ ಅಶು ರೆಡ್ಡಿ, ಇದನ್ನು ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಎಂದು ಕರೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, "ನನ್ನ ಹೆಸರಿಗೆ ಕಳಂಕ ತರಲು ಇಂತಹ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಇಂತಹ ಆಧಾರರಹಿತ ವದಂತಿಗಳನ್ನು ಹರಡುವವರ ವಿರುದ್ಧ ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ" ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಸತ್ಯಾಂಶ ತಿಳಿಯದೆ ಇಂತಹ ಸುದ್ದಿಗಳನ್ನು ಪ್ರಕಟಿಸದಂತೆ ಮಾಧ್ಯಮಗಳಿಗೂ ಮನವಿ ಮಾಡಿದ್ದಾರೆ.
ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಅಶು ರೆಡ್ಡಿ, ಈ ಹಿಂದೆಯೂ ಹಲವು ವಿವಾದಗಳಲ್ಲಿ ಕೇಳಿಬಂದಿದ್ದರು. ಆದರೆ, ಈ ಬಾರಿ ಕೇಳಿಬಂದಿರುವ ಕೋಟಿ ಕೋಟಿ ಹಣದ ವಂಚನೆ ಆರೋಪ ಮಾತ್ರ ಸಿನಿವಲಯದಲ್ಲಿ ಸಂಚಲನ ಮೂಡಿಸಿದೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಸತ್ಯಾಸತ್ಯತೆ ಹೊರಬರಬೇಕಿದೆ. ವಂಚನೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಹೈದರಾಬಾದ್ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಇತ್ತ ನಟಿ ಅಶು ರೆಡ್ಡಿ ತಮ್ಮ ಮೇಲಿನ ಆರೋಪಗಳ ವಿರುದ್ಧ ಕಿಡಿಕಾರಿದ್ದಾರೆ.
ತಮ್ಮ ಮೇಲಿನ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಅಶು ರೆಡ್ಡಿ ಇನ್‌ಸ್ಟಾಗ್ರಾಂ ಮೂಲಕ ಪ್ರತಿಕ್ರಿಯಿಸಿದ್ದಾರೆ. "ನನ್ನ ಅನುಮತಿಯಿಲ್ಲದೆ ಯಾರಾದರೂ ನನ್ನ ಬಗ್ಗೆ ಸುಳ್ಳು ಸುದ್ದಿ ಅಥವಾ ತಪ್ಪು ಮಾಹಿತಿಯನ್ನು ಹರಡಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಬರೆಯುವ ಮೂಲಕ ವದಂತಿಗಳಿಗೆ ಬ್ರೇಕ್ ಹಾಕಲು ಪ್ರಯತ್ನಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹೈದರಾಬಾದ್ ಅಪರಾಧ ವಿಭಾಗದ ಪೊಲೀಸರು, "ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಮೇಲ್ನೋಟಕ್ಕೆ ಇದು 'ಲಿವ್-ಇನ್ ರಿಲೇಷನ್‌ಶಿಪ್'ಗೆ ಸಂಬಂಧಿಸಿದ ವಿವಾದದಂತೆ ಕಂಡರೂ, ಕೋಟ್ಯಂತರ ರೂಪಾಯಿಗಳ ಹಣಕಾಸಿನ ವಹಿವಾಟು ನಡೆದಿರುವುದು ಪ್ರಕರಣವನ್ನು ಗಂಭೀರವಾಗಿಸಿದೆ. ಹಣಕಾಸಿನ ವರ್ಗಾವಣೆಗಳ ಬಗ್ಗೆ ನಾವು ಆಳವಾದ ತನಿಖೆ ನಡೆಸಬೇಕಿದೆ" ಎಂದು ತಿಳಿಸಿದ್ದಾರೆ. ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಅಧಿಕಾರಿಗಳು ನಿರಾಕರಿಸಿದ್ದಾರೆ.
ಅಶು ರೆಡ್ಡಿ ಯಾರು?
ತೆಲುಗು ಕಿರುತೆರೆಯ ಜನಪ್ರಿಯ ಮುಖವಾಗಿರುವ ಅಶು ರೆಡ್ಡಿ, ಬಿಗ್ ಬಾಸ್ ತೆಲುಗು ರಿಯಾಲಿಟಿ ಶೋ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಇವರು, ಸದಾ ಸುದ್ದಿಯಲ್ಲಿರುವ ನಟಿಯರಲ್ಲಿ ಒಬ್ಬರು. ಆದರೆ, ಈಗ ಎದುರಾಗಿರುವ 9.35 ಕೋಟಿ ರೂಪಾಯಿಗಳ ವಂಚನೆ ಮತ್ತು ಮದುವೆ ವಂಚನೆಯ ಆರೋಪಗಳಿಂದ ಮತ್ತೆ ಸುದ್ದಿಯಲ್ಲಿದ್ದಾರೆ.













Click it and Unblock the Notifications