Ashika Ranganath: ಮೆಗಾಸ್ಟಾರ್ ಚಿರಂಜೀವಿ ಸಿನಿಮಾದಲ್ಲಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್...ಯಾವ ಚಿತ್ರ?
ಬೆಂಗಳೂರು, ಮೇ. 26: ನಟಿ ಆಶಿಕಾ ರಂಗನಾಥ್ ಕನ್ನಡದ ಜೊತೆಗೆ ಬೇರೆ ಭಾಷೆಗಳತ್ತ ಮುಖ ಮಾಡಿರುವುದು ಗೊತ್ತೆ ಇದೆ. ಕಳೆದ ವರ್ಷ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ್ ಜೊತೆಗೆ ಆಶಿಕಾ ರಂಗನಾಥ್ 'ನಾ ಸಾಮಿ ರಂಗ' ಸಿನಿಮಾದಲ್ಲಿ ನಟಿಸಿದ್ದರು. ಅವರ ಅಭಿನಯ ಮತ್ತು ಲುಕ್‌ಗೆ ಸಕತ್ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಮತ್ತೊಬ್ಬ ಸೂಪರ್ ಸ್ಟಾರ್ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ.
ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಜೂನಿಯರ್ ಎನ್ ಟಿಆರ್ ಸಹೋದರ ಕಲ್ಯಾಣ್ ರಾಮ್ ಅಭಿನಯದ ಅಮಿಗೋಸ್ ಸಿನಿಮಾ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟಿದ್ದರು. ಬಳಿಕ 'ನಾ ಸಾಮಿ ರಂಗ' ಚಿತ್ರ ಅವರ ಕೈ ಸೇರಿತ್ತು. ಈಗ ಮೆಗಾ ಸ್ಟಾರ್ ಚಿರಂಜೀವಿ ಜೊತೆ ನಟಿಸುವ ಅವಕಾಶ ತಮ್ಮದಾಗಿಸಿಕೊಂಡಿದ್ದಾರೆ

ಮೆಗಾಸ್ಟಾರ್ ಜೊತೆಗೆ ಆಶಿಕಾ ರಂಗನಾಥ್ ಸಿನಿಮಾ
ತೆಲುಗು ಮೆಗಾಸ್ಟಾರ್ ಚಿರಂಜಿವಿ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ 'ವಿಶ್ವಂಭರ' ಚಿತ್ರದಲ್ಲಿ ಆಶಿಕಾ ರಂಗನಾಥ್ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಅವರ ಪಾತ್ರದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ.ಚಿತ್ರಕ್ಕೆ ಬಿಂಬಿಸಾರ ನಿರ್ದೇಶಕ ವಸಿಷ್ಟ ಆಕ್ಷನ್ ಕಟ್ ಹೇಳಲಿದ್ದಾರೆ.
ವರದಿಗಳ ಪ್ರಕಾರ, ಆಶಿಕಾ ರಂಗನಾಥ್, ನಟ ಚಿರಂಜೀವಿ ಎದುರು ಜೋಡಿಯಾಗಿಲ್ಲ ಆದರೆ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಚಿತ್ರಕ್ಕೆ ಆಶಿಕಾ ಎರಡನೇ ನಾಯಕಿ ಎಂದು ಘೋಷಿಸಲಾಗಿದೆ. ಈ ಹಿಂದೆ, ಸ್ಟಾಲಿನ್ ಚಿತ್ರದಲ್ಲಿ ಜೊತೆಯಾಗಿದ್ದ ನಟಿ ತ್ರಿಶಾ ಮತ್ತೆ 18 ವರ್ಷಗಳ ನಂತರ ಚಿರಂಜೀವಿಗೆ ಜೋಡಿಯಾಗಿ ನಟಿಸಲಿದ್ದಾರೆ.
ವಿಶ್ವಂಭರ ಸಿನಿಮಾಗೆ ಆಸ್ಕರ್ ಪ್ರಶಸ್ತಿ ವಿಜೇತರಾದ ಎಂಎಂ ಕೀರವಾಣಿ ಸಂಗೀತ ನೀಡಲಿದ್ದಾರೆ. ಚಂದ್ರಬೋಸ್ ಸಾಹಿತ್ಯ ಚಿತ್ರಕ್ಕಿದೆ. ಸಾಯಿ ಮಾಧವ್ ಬುರ್ರಾ ಬರವಣಿಗೆ ಇರುವ ಚಿತ್ರಕ್ಕೆ ಚೋಟಾ ಕೆ ನಾಯ್ಡು ಅವರ ಛಾಯಾಗ್ರಹಣ ಮತ್ತು ಕೋಟಗಿರಿ ವೆಂಕಟೇಶ್ವರ ರಾವ್ ಮತ್ತು ಸಂತೋಷ್ ಕಾಮಿರೆಡ್ಡಿ ಅವರ ಸಂಕಲನವಿದೆ. ಎ.ಎಸ್.ಪ್ರಕಾಶ್ ಪ್ರೊಡಕ್ಷನ್ ಡಿಸೈನರ್.

ಯು ವಿ ಕ್ರಿಯೇಷನ್ ಬ್ಯಾನರ್ ನಡಿ ವಿಕ್ರಮ್, ವಂಶಿ ಹಾಗೂ ಪ್ರಮೋದ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚೋಟಾ ಕೆ ನಾಯ್ಡು ಛಾಯಾಗ್ರಹಣ, ರಾಮ ಲಕ್ಷ್ಮಣ ಸಾಹಸ ನಿರ್ದೇಶನ ವಿಶ್ವಂಭರ ಚಿತ್ರಕ್ಕಿದೆ. 2025ರ ಸಂಕ್ರಾಂತಿ ಹಬ್ಬಕ್ಕೆ ವಿಶ್ವಂಭರ ಸಿನಿಮಾ ಬಿಡುಗಡೆಯಾಗಲಿದೆ.












Click it and Unblock the Notifications