Niranjan Deshpande: ದಿಢೀರ್ ಲೈವ್ ಬಂದು ಕ್ಷಮೆ ಕೇಳಿದ ನಿರಂಜನ್ ದೇಶಪಾಂಡೆ, ಯಾಕೆ ಗೊತ್ತಾ?
ಕಿರುತೆರೆಯ ಖ್ಯಾತ ನಿರೂಪಕ ನಿರಂಜನ್ ದೇಶಪಾಂಡೆ ಕನ್ನಡ ಪರ ಹೋರಾಟಗಾರರಿಗೆ ಕ್ಷಮೆ ಕೇಳಿದ್ದಾರೆ. ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದ ಬಳಿಕ ಇನ್ಸ್ಟಾಗ್ರಾಮ್ ಲೈವ್‌ಗೆ ಬಂದ ನಿರಂಜನ್ ದೇಶಪಾಂಡೆ, ತಮ್ಮಿಂದಾದ ತಪ್ಪನ್ನು ವಿವರಿಸಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ಇತ್ತೀಚಿಗೆ ನಿರಂಜನ್ ದೇಶಪಾಂಡೆ ಸಂದರ್ಶನವೊಂದರಲ್ಲಿ ಕನ್ನಡ ಪರ ಹೋರಾಟಗಾರರ ಬಗ್ಗೆ ಮಾತನಾಡಿದ್ದರು. ಇದು ಅನೇಕರ ಆಕ್ರೋಶಕ್ಕೆ ಕಾರಣವಾಗಿತ್ತು. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುವ ಮೂಲಕ ನಿರಂಜನ್ ದೇಶಪಾಂಡೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು. ಹೀಗಾಗಿ ನಿರಂಜನ್ ದೇಶಪಾಂಡೆ ಕೊನೆಗೂ ಲೈವ್ ಮೂಲಕ ಕ್ಷಮೆ ಕೇಳಿದ್ದು, ತಾವು ಏನು ಹೇಳಬೇಕು ಎಂದುಕೊಂಡಿದ್ದೆ ಎನ್ನುವುದನ್ನು ವಿವರಿಸಿದ್ದಾರೆ.

'ನಾನು ಸಂದರ್ಶನವೊಂದರಲ್ಲಿ ಕನ್ನಡ ಪರ ಹೋರಾಟಗಾರರ ಬಗ್ಗೆ ಮಾತನಾಡಿದ್ದೆ. ನನ್ನ ಮಾತಿಗೆ ಅನೇಕ ಜನ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದಷ್ಟು ಜನ ತಿಳಿ ಹೇಳಿದ್ದಾರೆ. ನಿಮ್ಮಿಂದ ಈ ಮಾತು ಬರಬಾರದಿತ್ತು ಎಂದು ಕೆಲವರು ಪ್ರೀತಿಯಿಂದ ಹೇಳಿದ್ದಾರೆ. ಲೋಕೇಶ್ ಗೌಡರು ತಿಳಿ ಹೇಳಿದ್ದಾರೆ. ನೀವು ಆ ಮಾತು ಹೇಳಬಾರದಿತ್ತು ಅಂದರು. ಆದರೆ ಇನ್ನು ಕೆಲವರು ಬಹಳ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ. ಅಮ್ಮ, ಅಕ್ಕ ಅಂತೆಲ್ಲಾ ಹೇಳುತ್ತಿದ್ದಾರೆ. ನಾನು ಮಾತಿನ ಭರದಲ್ಲಿ ಈ ರೀತಿಯಾಗಿ ಹೇಳಿರುವುದು ತಪ್ಪು.'
'ಕನ್ನಡ ಪರ ಹೋರಾಟಗಾರರ ಬಗ್ಗೆ ನನಗೆ ಗೌರವವಿದೆ. ಅವರು ಮಾಡುವ ಕೆಲಸದ ಬಗ್ಗೆ ನನಗೆ ಗೌರವಿದೆ.ಅದಕ್ಕೆ ನನ್ನದೊಂದು ಸಲಾಮ್. ನಾನು ಮಾತಿನ ಭರದಲ್ಲಿ ಏನೋ ಅಂದುಬಿಟ್ಟಿದ್ದೆ. ಕೆಲವರು ಕನ್ನಡದ ಬಗ್ಗೆ ಚೆನ್ನಾಗಿ ತಿಳಿದು ಮಾತನಾಡುತ್ತಾರೆ. ಹೋರಾಟ ಮಾಡುತ್ತಾರೆ. ಇನ್ನು ಕೆಲವರು ಕನ್ನಡದ ಬಗ್ಗೆ ತಿಳಿದುಕೊಳ್ಳದೇ ಮಾತನಾಡುತ್ತಾರೆ ಎಂದಿದ್ದೆ.
ಕನ್ನಡ ಉಚ್ಛಾರಣೆ ಬಗ್ಗೆ ಗಮನ ಹರಿಸಬೇಕು ಎಂದು ಹೇಳುವಾಗ ಆ ರೀತಿ ಮಾತನಾಡಿದೆ. ನನಗೆ ಕನ್ನಡ ಅಂದ್ರೆ ಉಸಿರು, ತಾಯಿ. ಕನ್ನಡದ ಮೇಲಿನ ಪ್ರೀತಿ ಮುಖ್ಯ, ಉಚ್ಛಾರಣೆ ಅಲ್ಲ ಎನ್ನುವುದನ್ನು ಹಿರಿಯರು ವಿವರಿಸಿದ್ದಾರೆ. ಹೀಗಾಗಿ ನನ್ನ ಮಾತುಗಳಿಂದ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ಕ್ಷಮೆ ಕೇಳುವುದರಿಂದ ನಾನೇನು ಚಿಕ್ಕವನಾಗುವುದಿಲ್ಲ' ಎಂದಿದ್ದಾರೆ.












Click it and Unblock the Notifications