Divya Vasantha: ನನ್ನ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡಿರುವವರೆಲ್ಲಾ ದರ್ಶನ್ ಫ್ಯಾನ್ಸ್: ದಿವ್ಯಾ ವಸಂತ ತಾಯಿ ಕಣ್ಣೀರು
ಬೆಂಗಳೂರು, ಜುಲೈ 21: ಬೆದರಿಕೆ ಹಾಗೂ ಸುಲಿಗೆ ಯತ್ನ ಪ್ರಕರಣದ ಆರೋಪಿ ನಿರೂಪಕಿ ಹಾಗೂ 'ಗಿಚ್ಚಿ ಗಿಲಿಗಿಲಿ' ರಿಯಾಲಿಟಿ ಶೋ ಸ್ಪರ್ಧಿ ದಿವ್ಯಾ ವಸಂತಳನ್ನು ಜುಲೈ 11ರಂದು ಬೆಂಗಳೂರು ಪೊಲೀಸರು ಬಂಧಿಸಿದ್ದರು. ನೆರೆ ರಾಜ್ಯ ಕೇರಳದಲ್ಲಿ ತಲೆಮರೆಸಿಕೊಂಡಿದ್ದ ನಿರೂಪಕಿಯನ್ನು ಜೀವನ್ ಭೀಮಾನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಈ ಘಟನೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ದಿವ್ಯಾ ವಸಂತ ವಿಡಿಯೋಗಳನ್ನು ಹರಿಬಿಟ್ಟು ಬಹಳಷ್ಟು ಟ್ರೋಲ್ ಮಾಡಲಾಗುತ್ತಿದೆ. ಜೊತೆಗೆ ಆಕೆಯ ವಿರುದ್ಧ ಅನೇಕ ಆರೋಪಗಳನ್ನು ಮಾಡಲಾಗುತ್ತಿದೆ. ಇವುಗಳನೆಲ್ಲಾ ನೋಡಿ ಮನನೊಂದಿರುವ ದಿವ್ಯಾ ವಸಂತ ತಾಯಿ ವಿಡಿಯೋ ಮೂಲಕ ದರ್ಶನ್ ಅಭಿಮಾನಿಗಳು ಹಾಗೂ ಟ್ರೋಲ್, ಕಮೆಂಟ್ ಮಾಡುವವರಿಗೆ ಮನವಿ ಮಾಡಿಕೊಂಡಿದ್ದಾರೆ.

ಕಣ್ಣೀರು ಹಾಕುತ್ತಲೇ ವಿಡಿಯೋ ಮಾಡಿರುವ ದಿವ್ಯಾ ವಸಂತ ತಾಯಿ 'ನನ್ನ ಮಗಳ ಬಗ್ಗೆ ಎಷ್ಟು ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಮಾತನಾಡಿರುವವರೆಲ್ಲಾ ದರ್ಶನ್ ಫ್ಯಾನ್ಸ್‌ಗಳೇ ಅಂತಾ ನನಗೆ ಗೊತ್ತು. ಅವಳು ತಪ್ಪು ಮಾಡಿದ್ದಾಳೋ ಇಲ್ಲವೋ ಎಂದು ದಿವ್ಯಾ ಬಂದ ಮೇಲೆ ಗೊತ್ತಾಗುತ್ತದೆ. ಅವಳ ಕೆಲಸ ಅವಳು ಮಾಡಿದ್ದಾಳೆ.
ದರ್ಶನ್ ಅವರು ಎಲ್ಲರಿಗೂ ಬೇಕಾಗಿರುವವರೇ. ನಮಗೂ ದರ್ಶನ್ ಅಂದ್ರೆ ಇಷ್ಟ, ನಮ್ಮ ಮಕ್ಕಳಿಗೂ ಇಷ್ಟ. ನನ್ನ ಮಗನಿಗೂ ಇಷ್ಟ. ಆಕೆಗೆ ಏನು ಕೆಲಸ ಕೊಟ್ಟಿದ್ದಾರೆ. ಅದನ್ನು ಮಾತ್ರ ದಿವ್ಯಾ ಮಾಡಿದ್ದಾಳೆ. ಅವರ ಬಗ್ಗೆ ಮಾತನಾಡಿರುವ ಕುರಿತು ಅವಳೇ ಬಂದು ಅದಕ್ಕೆ ಉತ್ತರ ಕೊಡುತ್ತಾಳೆ. ಅದುವರೆಗೂ ಕೆಟ್ಟದಾಗಿ ಏನೂ ವೈರಲ್ ಮಾಡಬೇಡಿ ಎಂದು ಕಣ್ಣೀರು ಹಾಕಿದ್ದಾರೆ.
ನಿಮ್ಮ ಬೆಂಬಲ ನಮಗೆ ಯಾವಗಲೂ ಇರಬೇಕು. ನಮ್ಮ ಮಗಳು ಬೇಗ ಬರಲಿ ಎಂದು ಕೇಳಿಕೊಳ್ಳುತ್ತಿದ್ದೇನೆ. ಅವರು ತಪ್ಪು ಮಾಡಿದ್ದಾರೋ ಇಲ್ಲವೋ ದೇವರು ನೋಡಿಕೊಳ್ತಾನೆ. ಎರಡು ವಾಹಿನಿಗಳಲ್ಲಿ ಕೆಲಸ ಮಾಡುತ್ತಿದ್ದಳು. ವಾಹಿನಿಗಳಲ್ಲಿ ಅವಳಿಗೆ ಕೊಟ್ಟ ಕೆಲಸ ಮಾಡಿದ್ದಾಳೆ. ನಿಮಗೆ ಕೋಪ ಇದ್ದರೆ ಆ ವಾಹಿನಿ ಮೇಲೆ ಕೋಪ ತೀರಿಸಿಕೊಳ್ಳಿ. ನನ್ನ ಮಗಳ ಮೇಲೆ ಕೋಪ ತೀರಿಸಿಕೊಳ್ಳಬೇಡಿ.

ಅವಳು ಅವರ ಕೊಟ್ಟ ಕೆಲಸ ಮಾಡಿದ್ದಾಳೆ. ಅವಳನ್ನು ನಿಮ್ಮ ಮನೆ ಹೆಣ್ಣು ಮಗಳು ಎಂದು ತಿಳಿದುಕೊಳ್ಳಿ. ನೀವು ಅಂದುಕೊಂಡಂತೆ ನನ್ನ ಮಗಳು ಕೆಟ್ಟವಳಲ್ಲ. ನನ್ನ ಮಗಳು ದರ್ಶನ್ ಅಭಿಮಾನಿ. ನಾನು ದರ್ಶನ್ ಫ್ಯಾನ್. ಅವಳು ಕೆಟ್ಟವಳಲ್ಲ, ಇಷ್ಟು ದಿನ ದಿವ್ಯಾಳನ್ನು ಹೇಗೆ ಬೆಳೆಸಿದ್ದೀರೋ, ಅದೇ ಬೆಳೆಸಿ, ಅದೇ ರೀತಿ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇನೆ' ಎಂದು ದಿವ್ಯಾ ವಸಂತ ತಾಯಿ ವಸಂತಮ್ಮ ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications