Darshan Thoogudeepa: ದರ್ಶನ್ ಜೈಲಿನಿಂದ ಹೊರಬರಲು ಕಾರಣವಾಗಿದ್ದು ಅಮ್ಮಾ..
ನಟ ದರ್ಶನ್ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ದರ್ಶನ್ ಅವರಿಗೆ ಜೈಲಿನಿಂದ ಪೂರ್ಣಾವಧಿ ಜಾಮೀನು ಸಿಕ್ಕಿದ್ದಕ್ಕೆ ಅವರ ಆಪ್ತರು, ಸ್ನೇಹಿತರು, ಕುಟುಂಬಸ್ಥರು, ಅಭಿಮಾನಿಗಳ ಮುಖದಲ್ಲಿ ಆನಂದದ ಹೊಳೆಯೇ ಹರಿದಿದೆ. ಬೆಟ್ಟದಂತೆ ಇದ್ದ ಸಮಸ್ಯೆ ನೀರಿನಂತೆ ಕರಗಿ ಹೋದಂತಾಗಿದೆ. ಆಸ್ಪತ್ರೆಯಲ್ಲಿ ಇದ್ದ ದರ್ಶನ್ ಕೂಡ ಮನೆಗೆ ವಾಪಾಸ್ ತೆರಳಿದ್ದಾರೆ. ಅಷ್ಟಕ್ಕೂ ದರ್ಶನ್ ಅವರಿಗೆ ಆರೇ ಆರು ತಿಂಗಳಿನಲ್ಲಿ ಪೂರ್ಣಾವಧಿ ಜಾಮೀನು ಸಿಕ್ಕಿದ್ದು ಹೇಗೆ? ಅವರಿಗೆ ಜಾಮೀನು ಸಿಗುವುದಕ್ಕೆ ಯಾರು ಸಹಾಯ ಮಾಡಿದರು? ಡಿ-ಬಾಸ್‌ಗೆ ಪೂರ್ಣಾವಧಿ ಜಾಮೀನು ಸಿಗಲು ಕೆಲಸ ಮಾಡಿದ ಕಾಣದ ಕೈಗಳು ಯಾವುವು?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಮಾರು ಐದು ತಿಂಗಳ ಕಾಲ ದರ್ಶನ್ ಜೈಲಿನಲ್ಲಿ ಇದ್ದರು. ಬಳಿಕ ಅನಾರೋಗ್ಯದ ಕಾರಣದಿಂದ ಮಧ್ಯಂತರ ಜಾಮೀನು ಪಡೆದು ದರ್ಶನ್ ಹೊರಬಂದರು. ಇದರ ನಂತರ ಅವರಿಗೆ ಪೂರ್ನಾವಧಿ ಜಾಮೀನು ಸಿಕ್ಕಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ರೇಣುಕಾಸ್ವಾಮಿ ಕೊಲೆ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪ್ರಕರಣವಾಗಿದೆ. ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಲಾಗಿದೆ ಎನ್ನುವುದಕ್ಕೆ ಬಲವಾದ ಸಾಕ್ಷಿಗಳು ಪೊಲೀಸರಿಗೆ ಸಿಕ್ಕಿವೆ. ಹೀಗಿದ್ದರೂ ಸಲೀಸಾಗಿ ದರ್ಶನ್ ಜಾಮೀನು ಪಡೆದಿದ್ದಾರೆ. ಹೇಳಿಕೇಳಿ ದರ್ಶನ್ ರಾಜಕಾರಣಿಗಳು, ರೌಡಿಶೀಟರ್‌ಗಳು ಹಾಗೂ ಹಣದ ಬಲ ಹೊಂದಿರುವ ನಟ. ಹೀಗಾಗಿ ಈ ಬಲದಿಂದಲೇ ದರ್ಶನ್ ಅವರಿಗೆ ಜಾಮೀನು ಸಿಕ್ಕಿದೆ ಎನ್ನಲಾಗುತ್ತಿದೆ. ಹಾಗಾದರೆ ದರ್ಶನ್‌ಗೆ ಪೂರ್ಣಾವಧಿ ಜಾಮೀನು ಸಿಗಲು ಕೆಲಸ ಮಾಡಿದ ಆ ಕಾಣದ ಕೈಗಳು ಯಾವುವು?

ದರ್ಶನ್ ಜೈಲಿನಿಂದ ಹೊರಬರಲು ಕಾರಣವಾಗಿದ್ದು ಅಮ್ಮಾ..
ದರ್ಶನ್ ತಮ್ಮ ತಾಯಿಯನ್ನು ಬಿಟ್ಟರೆ ಪ್ರೀತಿಯಿಂದ ಅಮ್ಮಾ ಎಂದು ಕರೆಯುವುದು ಸುಮಲತಾ ಅಂಬರೀಶ್ ಅವರನ್ನ. ಸುಮಲತಾ ಕೂಡ ದರ್ಶನ್ ಅವರನ್ನು ಮಗನಂತಲೇ ಕಾಣುತ್ತಾರೆ. ಅಭಿಷೇಕ್ ಸಣ್ಣ ಮಗನಾದರೆ ದರ್ಶನ್ ದೊಡ್ಡ ಮಗ ಎಂದು ಸುಮಲತಾ ಹಲವಾರು ಬಾರಿ ಹೇಳಿರುವುದು ಇದೆ. ದರ್ಶನ್ ಜೈಲಿಗೆ ಹೋಗಿದ್ದಾಗಲೂ ಸುಮಲತಾ ಅವರಿಗೆ ದರ್ಶನ್ ಮೇಲಿನ ಪ್ರೀತಿ ಮಾತ್ರ ಕಡಿಮೆ ಆಗಿರಲಿಲ್ಲ. ದರ್ಶನ್ ಅವರ ಬಗ್ಗೆ ಮಾತನಾಡುವಾಗಲೂ ಸುಮಲತಾ, 'ದರ್ಶನ್ ಅಂದು ಕೂಡ ನನ್ನ ಮಗ, ಇಂದು ಕೂಡ ನನ್ನ ಮಗ, ಮುಂದೆ ಕೂಡ ನನ್ನ ಮಗನೇ' ಎಂದು ಹೇಳಿದ್ದರು. ದರ್ಶನ್ ಜೈಲಿನಿಂದ ಹೊರಬರಲು ದೇವರಲ್ಲಿ ಪ್ರಾರ್ಥನೆ ಕೂಡ ಮಾಡಿಕೊಂಡಿದ್ದರು ಸುಮಲತಾ ಅಂಬರೀಶ್.
ಕನ್ನಡದ ಹಿರಿಯ ನಟ ಹಾಗೂ ರಾಜಕಾರಣಿ ಅಂಬರೀಶ್ ಅವರನ್ನು ದರ್ಶನ್ ಅಪ್ಪಾಜಿ ಅಂತಲೇ ಕರೆಯುತ್ತಾರೆ. ಅಂಬರೀಶ್ ಅವರ ಮೇಲೆ ದರ್ಶನ್‌ಗೆ ತುಂಬಾ ಅಭಿಮಾನ ಗೌರವ ಇದೆ. ಇದೇ ಕಾರಣಕ್ಕೆ ಅಂಬರೀಶ್ ಅಗಲಿದ ನಂತರ ಹಿರಿಯ ಮಗನಾಗಿ ಸುಮಲತಾ ಅಂಬರೀಶ್ ಅವರ ಬೆನ್ನಿಗೆ ನಿಂತು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಲು ದರ್ಶನ್ ಸಾಕಷ್ಟು ಪ್ರಚಾರ ಮಾಡಿದರು. ಯಶ್ ಹಾಗೂ ದರ್ಶನ್ ಜೋಡಿಯಾಗಿ ನಿಂತು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದರು.

ಪ್ರತೀ ಹೆಜ್ಜೆಯಲ್ಲೂ ಸುಮಲತಾ ಅವರ ಬೆನ್ನಿಗೆ ನಿಂತು ಮಗನಾಗಿ ಮಾಡಬೇಕಾದ ಎಲ್ಲಾ ಕಾರ್ಯಗಳನ್ನು ಮಾಡಿ ಅವರನ್ನು ಗೆಲ್ಲಿಸಲು ಸಾಕಷ್ಟು ಪ್ರಯತ್ನಪಟ್ಟರು ದರ್ಶನ್. ದರ್ಶನ್ ಅಂಬರೀಶ್ ಕುಟುಂಬದಲ್ಲಿ ಒಬ್ಬ ಸದಸ್ಯರಾಗಿದ್ದಾರೆ. ಅವರನ್ನು ಸುಮಲತಾ ಅವರು ಕಡೆಗಣಿಸಲು ಸಾಧ್ಯವೇ ಇಲ್ಲ. ಹೀಗಾಗಿ ಸುಮಲತಾ ಅವರ ಸಹಾಯದಿಂದ ದರ್ಶನ್ ಜೈಲಿನಿಂದ ಪೂರ್ಣಾವಧಿ ಜಾಮೀನು ಪಡೆದು ಹೊರಬಂದಿರಬಹುದು ಎನ್ನಲಾಗುತ್ತಿದೆ.
ಯಾಕೆಂದರೆ ದರ್ಶನ್ ಜೈಲಿಗೆ ಹೋದ ಬಳಿಕ ಸುಮಲತಾ ಜೈಲಿಗೆ ಹೋಗಿರಲಿಲ್ಲ. ದರ್ಶನ್ ಅವರನ್ನು ಭೇಟಿ ಮಾಡಿರಲಿಲ್ಲ. ಅಭಿಷೇಕ್ ಅಂಬರೀಶ್ ಅವರು ಮಾತ್ರ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ದರ್ಶನ್ ಅವರ ಯೋಗ ಕ್ಷೇಮ ವಿಚಾರಿಸಿಕೊಂಡು ಬಂದಿದ್ದರು. ಆದರೆ ಸುಮಲತಾ ಮಾತ್ರ ಯಾವುತ್ತೂ ಕೂಡ ಜೈಲಿಗೆ ಹೋಗೇ ಇರಲಿಲ್ಲ. ಆದರೆ ದರ್ಶನ್ ಮೇಲಿನ ಪ್ರೀತಿ ಸುಮಲತಾ ಅವರಿಗೆ ಬೆಟ್ಟದಷ್ಟಿದೆ ಎನ್ನುವುದು ಅವರ ಮಾತಿನಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ.
ರಾಕ್‌ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ಪ್ರಯತ್ನ
ರಾಕ್‌ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ಸಿನಿಮಾ ರಂಗದಲ್ಲಿ ಮಾತ್ರವಲ್ಲ ರಾಜಕೀಯದಲ್ಲೂ ಗುರುತಿಸಿಕೊಂಡವರು. ಇವರು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರ ಬೆನ್ನಿಗೆ ನಿಂತವರು. ರಾಕ್‌ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ರಾಜಕೀಯವಾಗಿ ತುಂಬಾ ಬಲವುಳ್ಳವರು.
ಇವರು ದರ್ಶನ್ ಜೈಲಿಗೆ ಹೋದ ಬಳಿಕ ಶಾಂತಿ ಹೋಮ ಮಾಡಿಸಿದ್ದರು. ಸಿನಿಮಾ ರಂಗದಲ್ಲಿ ಅಂಟಿದ ಕಳಂಕವನ್ನು ಹೋಗಲಾಡಿಸಲು ಹೋಮ ಹವನ ಮಾಡಿ ಪೂಜೆ ಮಾಡಿದ್ದರು. ದರ್ಶನ್ ಎಲ್ಲಾ ಸಮಸ್ಯೆಗಳಿಂದ ಹೊರಬರಲಿ ಎಂದು ಪ್ರಾರ್ಥನೆ ಮಾಡಿದ್ದರು. ಈ ಪ್ರಾರ್ಥನೆ ಫಲ ಈಗ ಸಿಕ್ಕಿದೆ.
ದರ್ಶನ್ ಹೊರಬರಲು ವಿಜಯಲಕ್ಷ್ಮೀ ಪಟ್ಟ ಕಷ್ಟ
ದರ್ಶನ್ ಜೈಲಿನಿಂದ ಹೊರಬರಲು ಅವರ ಪತ್ನಿ ವಿಜಯಲಕ್ಷ್ಮೀ ಪಾತ್ರ ತುಂಬಾ ದೊಡ್ಡದು. ವಿಜಯಲಕ್ಷ್ಮೀ ದರ್ಶನ್ ಅವರನ್ನು ಜೈಲಿನಿಂದ ಹೊರತರುವಲ್ಲಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬೇಡಿಕೊಳ್ಳದ ದೇವರಿಲ್ಲ. ದರ್ಶನ್ ಅವರನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ಸಾಕಷ್ಟು ಪ್ರಯತ್ನ ಪಟ್ಟವರು ವಿಜಯಲಕ್ಷ್ಮೀ. ಹಲವಾರು ಶಕ್ತಿ ದೇವರಿಗೆ ಭೇಟಿ ನೀಡಿ ದರ್ಶನ್ ಆಗಮನಕ್ಕಾಗಿ ವಿಜಯಲಕ್ಷ್ಮೀ ಹರಕೆ ಹೊತ್ತುಕೊಂಡಿದ್ದರು. ಅವರ ಪೂಜಾ ಫಲ ಕೊನೆಗೂ ಅವರ ಕೈ ಹಿಡಿದಿದೆ.
ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರೊಂದಿಗೆ ಉತ್ತಮ ಬಾಂಧವ್ಯ
ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಪರ ನಿಂತು ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಬ್ಬರದ ಪ್ರಚಾರ ಮಾಡಿದ್ದರು. ಇವರಿಬ್ಬರ ಪ್ರಚಾರ ಸುಮಲತಾ ಅಂಬರೀಶ್ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು. ನಂತರ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಉರುಫ್ ಸ್ಟಾರ್ ಚಂದ್ರು (Star Chandru) ಪರ ದರ್ಶನ್ ಅಬ್ಬರದ ಪ್ರಚಾರ ಮಾಡಿದ್ದರು. ಈ ವೇಳೆ ದರ್ಶನ್ ನಾನು ಪಕ್ಷ ನೋಡಿ ಪ್ರಚಾರ ಮಾಡಲ್ಲ, ವ್ಯಕ್ತಿಯ ಗುಣ ನೋಡಿ ಪ್ರಚಾರ ಮಾಡುತ್ತೇನೆ ಎಂದಿದ್ದರು. ಇದು ವೆಂಕಟರಮಣೇಗೌಡ ಹಾಗೂ ದರ್ಶನ್ ನಡುವಿನ ಸಂಬಂಧ ಎಷ್ಟು ಬಲವಾಗಿದೆ ಎನ್ನುವುದನ್ನು ತೋರಿಸುತ್ತದೆ. ಇವರ ಸಹಾಯದಿಂದಲೂ ದರ್ಶನ್ ಅವರಿಗೆ ಪೂರ್ಣಾವಧಿ ಜಾಮೀನು ಸಿಕ್ಕಿರಬಹುದು ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ದರ್ಶನ್ ಸದ್ಯ ಪೂರ್ಣಾವಧಿ ಜಾಮೀನು ಪಡೆದು ಹೊರಬಂದಿದ್ದಾರೆ. ದರ್ಶನ್ ಹೊರ ಬರಲೆಂದು ಬೇಡಿಕೊಂಡವರ ಆಸೆ ಈಡೇರಿದೆ. ದರ್ಶನ್ ತಾಯಿ, ಸುಮಲತಾ ಹಾಗೂ ಅವರು ಪತ್ನಿ ಪ್ರಯತ್ನ ಹಾಗೂ ಪೂಜಾ ಫಲದಿಂದ ದರ್ಶನ್ ಬಿಡುಗಡೆಯಾಗಿದ್ದಾರೆ. ಮುಂದಾದರೂ ಅವರು ಬದಲಾಗಬೇಕಿದೆ. ಹೊಸ ಜೀವನ ಆರಂಭಿಸಬೇಕಿದೆ.
ಪವಿತ್ರಾ ತಂಟೆಗೆ ಹೋಗಲ್ಲ ಎಂದು ಮಾತು ಕೊಟ್ಟ ದರ್ಶನ್?
ಇನ್ನೂ ಈ ನಡುವೆ ದರ್ಶನ್ ಅವರು ಪವಿತ್ರಾ ಗೌಡ ತಂಟೆಗೆ ಹೋಗಲ್ಲ ಎಂದು ವಿಜಯಲಕ್ಷ್ಮೀಗೆ ಮಾತು ಕೊಟ್ಟಿದ್ದಾರೆನ್ನಲಾಗುತ್ತಿದೆ. ಆಸ್ಪತ್ರೆಯಿಂದ ಮನೆಗೆ ಮರಳಿದ ಬಳಿಕ ದರ್ಶನ್ ತೂಗುದೀಪ ಅವರು ಪತ್ನಿ ವಿಜಯಲಕ್ಷ್ಮೀ ಅವರಿಗೆ ಇನ್ಮುಂದೆ ನಾನು ಪವಿತ್ರಾ ತಂಟೆಗೆ ಹೋಗಲ್ಲ ಎಂದು ಮಾತು ಕೊಟ್ಟಿದ್ದಾರೆಂದು ತಿಳಿದು ಬಂದಿದೆ. ಇದರಿಂದಾಗಿ ದರ್ಶನ್ ಸಂಪೂರ್ಣವಾಗಿ ಬದಲಾಗುವ ನಿರ್ಧಾರ ಮಾಡಿದಂತೆ ಕಾಣಿಸುತ್ತಿದೆ.
ಪವಿತ್ರಾ ಗೌಡ ಕೂಡ ಆರ್‌ಆರ್ ನಗರ ಮನೆಗೆ ತೆರಳದೆ ನೇರವಾಗಿ ತನ್ನ ತಾಯಿ ಮನೆಗೆ ತೆರಳಿದ್ದಾರೆ. ಯಾಕೆಂದರೆ ಆರ್‌ಆರ್ ನಗರದಲ್ಲಿ ಇರುವ ಮನೆಯನ್ನು ನಟ ದರ್ಶನ್ ಅವರು ಕೊಡಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿ ಆರ್‌ಆರ್ ನಗರ ಮನೆಗೆ ಪವಿತ್ರಾ ಹೋಗದೇ ದರ್ಶನ್ ಅವರಿಂದ ದೂರ ಇರಲು ನಿರ್ಧರಿಸಿರುವಂತೆ ಕಾಣಿಸುತ್ತಿದೆ. ಒಟ್ಟಿನಲ್ಲಿ ದರ್ಶನ್ ಹಾಗೂ ಪವಿತ್ರಾ ಈ ಪ್ರಕರಣಕ್ಕೆ ಅಂತ್ಯ ಹಾಡಲು ನಿರ್ಧರಿಸಿರುವುದು ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.
ಅಮ್ಮನನ್ನು ನೋಡಲು ದರ್ಶನ್‌ಗೆ ಸಿಕ್ಕಿದೆ ಪರ್ಮಿಷನ್
ಜೈಲಿನಿಂದ ಹೊರ ಬಂದ ದಾಸ ಸದ್ಯ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದಾರೆ. ಜೈಲಿನಿಂದ ಬಂದ ಬಳಿಕ ದರ್ಶನ್ ತಾಯಿಯನ್ನು ನೋಡಿರಲಿಲ್ಲ. ಹೀಗಾಗಿ ಮೈಸೂರಿಗೆ ತೆರಳಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಕೋರ್ಟ್ ಒಪ್ಪಿಗೆ ಸೂಚಿಸಿದೆ. ಅರ್ಜಿ ವಿಚಾರಣೆ ನಡೆಸಿದ ಸಿಎಚ್ 57ರ ನ್ಯಾಯಾಲಯ ನಟ ದರ್ಶನ್‌ಗೆ ಮೈಸೂರಿಗೆ ತೆರಳಲು ಅನುಮತಿ ನೀಡಿದೆ. ಜನವರಿ 5ರವರೆಗೂ ಮೈಸೂರಿಗೆ ಹೋಗಲು ನ್ಯಾಯಾಲಯ ಅನುಮತಿ ನೀಡಿದೆ. ಇಂದಿನಿಂದ ಜನವರಿ 5ರವರೆಗೂ ಯಾವಾಗ ಬೇಕಾದರೂ ದರ್ಶನ್ ಮೈಸೂರಿಗೆ ಹೋಗಬಹುದಾಗಿದೆ.
ದರ್ಶನ್ ತಾಯಿಗೆ ಹುಷಾರಿಲ್ಲ. ಹೀಗಾಗಿ ಅವರಿಗೆ ದರ್ಶನ್ ನೋಡಲು ಬರಲು ಸಾಧ್ಯವಾಗಿಲ್ಲ. ಹೀಗಾಗಿ ದರ್ಶನ್ ಅವರಿಗೆ ಮೈಸೂರಿಗೆ ಹೋಗಲು ಕೋರ್ಟ್ ಅನುಮತಿ ನೀಡಿದೆ. ಜೊತೆಗೆ ಮೈಸೂರಿನಲ್ಲಿ ದರ್ಶನ್ ಅವರ ಸಾಕು ಪ್ರಾಣಿಗಳಿದ್ದು ಅವುಗಳನ್ನೂ ದರ್ಶನ್ ನೋಡಿಕೊಂಡು ಬರಲಿದ್ದಾರೆ ಎನ್ನಲಾಗುತ್ತಿದೆ.
ಫುಲ್ ರಿಲ್ಯಾಕ್ಸ್ ಮೂಡ್‌ನಲ್ಲಿ ದಾಸ
ಪ್ರಸ್ತುತ ದರ್ಶನ್ ಅವರು ಮೈಸೂರಿನ ತಮ್ಮ ಫಾರಂ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಲ್ಲಿ ಅವರು ತಮ್ಮ ತಾಯಿಯನ್ನು ಭೇಟಿ ಮಾಡಿ, ತಾವು ಸಾಕಿದ ಪ್ರಾಣಿ ಪಕ್ಷಿಗಳೊಂದಿಗೆ ಕಾಲ ಕಳೆಯುತ್ತಾ ತಮ್ಮ ನೋವನ್ನೆಲ್ಲಾ ಮರೆಯುತ್ತಿದ್ದಾರೆ. ಮೈಸೂರಿನಲ್ಲಿರುವ ತನ್ನ ತಾಯಿಯನ್ನು ನೋಡಲು ಹಂಬಲಿಸಿದ ದಾಸ ಕೋರ್ಟ್fನಿಂದ ಅನುಮತಿ ಪಡೆದು, ಶುಕ್ರವಾರ ಮೈಸೂರು-ಟಿ ನರಸೀಪುರ ಮುಖ್ಯ ರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರಂ ಹೌಸ್‌ಗೆ ತೆರಳಿದ್ದಾರೆ. ಇಲ್ಲಿ ತುಂಬಾ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದಾರೆ ದಾಸ.
ದರ್ಶನ್ ಅವರೊಂದಿಗೆ ತಾಯಿ ಮೀನ ತೂಗುದೀಪ, ಪತ್ನಿ ವಿಜಯಲಕ್ಷ್ಮೀ, ನಟ ಧನ್ವಿರ್, ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಇದ್ದಾರೆ. ಮೈಸೂರಿಗೆ ಆಗಮಿಸಿದ ದರ್ಶನ್ ಅವರು ಪ್ರಸ್ತುತ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.












Click it and Unblock the Notifications