Allu Arjun: ನಿಮ್ಮದು ಆಂಧ್ರ, ಇರೋದು ತೆಲಂಗಾಣದಲ್ಲಿ ಹುಷಾರ್: ಅಲ್ಲು ಅರ್ಜುನ್‌ಗೆ ಧಮ್ಕಿ ಹಾಕಿದ್ಯಾರು?
ಟಾಲಿವುಡ್ ನಟ ಅಲ್ಲು ಅರ್ಜುನ್ ಅವರ ಸಿನಿಮಾ ವೀಕ್ಷಣೆಗೆ ಕಾಲ್ತುಳಿದಲ್ಲಿ ಮಹಿಳೆ ಸಾವನ್ನಪ್ಪಿರುವ ಪ್ರಕರಣವು ಇಡೀ ಚಿತ್ರರಂಗವನ್ನು ಮಾತ್ರ ಬೆಚ್ಚಿಬೀಳಿಸಿಲ್ಲ. ಇದು ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿದ್ದು, ಇದೀಗ ಅಲ್ಲಿನ ಪಕ್ಷಗಳ ನಡುವೆ ವಾಗ್ಯುದ್ಧಕ್ಕೂ ಕಾರಣವಾಗಿದೆ. ಹಲವು ರಾಜಕೀಯ ನಾಯಕರು ಕೂಡ ನಟ ಅಲ್ಲು ಅರ್ಜುನ್ ಅವರ ವಿರುದ್ಧ ತೊಡೆ ತಟ್ಟಿದ್ದು, ಬಹಿರಂಗವಾಗಿ ವಾರ್ನಿಂಗ್ ಕೂಡ ಕೊಡುತ್ತಿದ್ದಾರೆ.
ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದರು. ಒಂದೇ ದಿನದಲ್ಲಿ ಅಲ್ಲು ಅರ್ಜುನ್ ಅವರು ಜೈಲಿನಿಂದ ಹೊರಬಂದಿದ್ದರು. ಬಳಿಕ ತಮ್ಮ ನಿವಾಸಕ್ಕೆ ಟಾಲಿವುಡ್ ನಟ ನಟಿಯರೆಲ್ಲರೂ ಬಂದು ಬನ್ನಿ ಅವರನ್ನು ಮಾತನಾಡಿಸಿದ್ದರು.

ಇದೇ ವಿಚಾರವಾಗಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಅಲ್ಲು ಅರ್ಜುನ್ ಮೇಲಿರುವ ಸಿಂಪತಿ ಎಲ್ಲರಿಗೂ ಹೆಚ್ಚಾಯಿತು. ಆದರೆ, ಸಾರ್ವಜನಿಕರ ಪ್ರಾಣಕ್ಕೆ ಕಿಂಚಿತ್ತೂ ಬೆಲೆ ಇಲ್ಲವೇ ಎಂದು ತೆಲಂಗಾಣ ವಿಧಾನಸಭೆಯಲ್ಲಿ ಚರ್ಚೆಯನ್ನು ಮುಂದಿಟ್ಟಿದ್ದರು. ಬಳಿಕ ಅಲ್ಲು ಅರ್ಜುನ್ ಕೂಡ ತಮ್ಮದೇ ಶೈಲಿಯಲ್ಲಿ ಈ ಆರೋಪಗಳಿಗೆ ಕೌಂಟರ್ ನೀಡುತ್ತಾ ಬಂದಿದ್ದರು. ಸದ್ಯ ಇದು ತೆಲಂಗಾಣ ಸರ್ಕಾರ v/s ನಟ ಅಲ್ಲು ಅರ್ಜುನ್ ಎಂಬ ಯುದ್ಧಕ್ಕೆ ಸಾಕ್ಷಿಯಾಗಿದೆ.
ಅಲ್ಲದೆ ಅಲ್ಲು ಅರ್ಜುನ್ ಕೂಡ ರೇವಂತ್ ರೆಡ್ಡಿ ಅವರ ಬಗ್ಗೆ ಕೆಲವು ವಿಚಾರಗಳನ್ನು ಬಹಿರಂಗವಾಗಿ ಮಾತನಾಡಿರುವುದು ಇದೀಗ ಮತ್ತೊಂದು ತಿರುವು ಪಡೆದುಕೊಳ್ಳುತ್ತಿದೆ. ಅಲ್ಲದೆ ಇದು ಆಂಧ್ರಪ್ರದೇಶ v/s ತೆಲಂಗಾಣ ಎಂಬ ಹಂತಕ್ಕೂ ತಲುಪಿದೆ. ಕಾಂಗ್ರೆಸ್ ನಾಯಕರು ಕೂಡ ಅಲ್ಲು ಅರ್ಜುನ್ ಅವರಿಗೆ ನೇರವಾಗಿ ಎಚ್ಚರಿಕೆ ಕೊಡುತ್ತಿದ್ದಾರೆ. ನೀವೇನಾದರೂ ಸಿಎಂ ರೇವಂತ್ ರೆಡ್ಡಿ ವಿರುದ್ಧ ಮಾತನಾಡಿದ್ರೆ ತೆಲಂಗಾಣದಲ್ಲಿ ನಿಮ್ಮ ಸಿನಿಮಾಗಳು ರಿಲೀಸ್ ಕೂಡ ಆಗಲ್ಲ ಎಂದು ವಾರ್ನಿಂಗ್ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.
ಕಾಂಗ್ರೆಸ್ ಶಾಸಕ ಆರ್ ಭೂಪತಿ ರೆಡ್ಡಿ ಅವರು ಅಲ್ಲು ಅರ್ಜುನ್ ಅವರಿಗೆ ಈ ರೀತಿ ಹೇಳಿದ್ದಾರೆ. ಅಲ್ಲು ಅರ್ಜುನ್ ಅವರೇ..ನೀವು ಆಂಧ್ರದವರು ಎಂಬುದು ನೆನಪಿರಲಿ, ನೀವು ತೆಲಂಗಾಣಕ್ಕೆ ವಾಸಿಸಲು ಬಂದಿದ್ದೀರಿ. ತೆಲಂಗಾಣಕ್ಕೆ ನಿಮ್ಮ ಕೊಡುಗೆ ಏನು? ಎಂದು ಪ್ರಶ್ನಿಸಿರುವ ಶಾಸಕ, ನೀವು ಸುಮ್ಮನೆ ಆಗದಿದ್ದರೆ ನಿಮ್ಮ ಯಾವ ಸಿನಿಮಾಗಳು ಇಲ್ಲಿ ರಿಲೀಸ್ ಆಗಲು ನಾವು ಬಿಡೋದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ನಮ್ಮ ಕಾಂಗ್ರೆಸ್ ಯಾವತ್ತಿಗೂ ಟಾಲಿವುಡ್‌ನ ವಿರೋಧಿಯಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರಗಳೇ ಸಿನಿಮಾರಂಗದವರಿಗೆ ಹೈದರಾಬಾದ್‌ನಲ್ಲಿ ಭೂಮಿ ನೀಡಿದ್ದಲ್ಲದೆ, ಚಿತ್ರರಂಗಕ್ಕೆ ತಳಹದಿ ಹಾಕಿಕೊಟ್ಟಿದೆ. ನಿಮ್ಮ ಪುಷ್ಪ ಸಿನಿಮಾದಿಂದ ಸಮಾಜಕ್ಕೆ ಯಾವ ಉಪಯೋಗವೂ ಇಲ್ಲ, ಅದೊಂದು ಸ್ಮಗ್ಲಿಂಗ್ ಸಿನಿಮಾ ಎಂದು ಆರೋಪಿಸಿದ್ದಾರೆ.
ಅಲ್ಲು ಅರ್ಜುನ್ ಅವರ ಹುಟ್ಟೂರು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೊಳ್ಳು. ಆದರೆ ಅಲ್ಲು ಅರ್ಜುನ್ ಅವರು ಜನಿಸಿದ್ದು ಚೆನ್ನೈನಲ್ಲಿ. ಹೀಗಾಗಿ ಸದ್ಯ ಅಖಂಡ ಆಂಧ್ರಪ್ರದೇಶ ಇಬ್ಭಾಗ ಆಗಿ, ತೆಲಂಗಾಣ ಪ್ರತ್ಯೇಕಗೊಂಡಿರುವುದರಿಂದ ಆಗಿನ ರಾಜಧಾನಿ ಹೈದರಾಬಾದ್‌ನಲ್ಲೇ ಎಲ್ಲ ನಟರು ವಾಸವಿದ್ದಾರೆ. ಈ ವಿಚಾರ ಪ್ರಸ್ತಾಪಿಸಿ, ಅಲ್ಲು ಅರ್ಜುನ್ ಅವರಿಗೆ ಕಾಂಗ್ರೆಸ್ ಶಾಸಕ ಬಹಿರಂಗ ಎಚ್ಚರಿಕೆ ಕೊಟ್ಟಿರುವುದು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.












Click it and Unblock the Notifications