ಬಿಗ್ಬಾಸ್ ಬಳಿಕ ಬದಲಾಯ್ತು ಲಕ್: ನನ್ನನ್ನ ಆಕ್ಷನ್ ಕ್ವೀನ್ ಮಾಲಾಶ್ರೀಗೆ ಹೋಲಿಸ್ತಾರೆ ಎಂದ ನಟಿ ತನಿಷಾ ಕುಪ್ಪಂಡ
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಮೂಲಕ ಮನೆಮಾತಾದ ನಟಿ ತನಿಷಾ ಕುಪ್ಪಂಡ ಸದ್ಯ ಸ್ಯಾಂಡಲ್ವುಡ್ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಬಿಗ್ಬಾಸ್ ನಂತರ ತಮ್ಮ ಜೀವನದಲ್ಲಿ ಆದ ಬದಲಾವಣೆಗಳು, ಸಿನಿಮಾಗಳ ಆಯ್ಕೆ ಹಾಗೂ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ತನ್ನನ್ನು ಸ್ಟಾರ್ ನಟಿಯೊಬ್ಬರಿಗೆ ಜನ ಹೋಲಿಸುತ್ತಿದ್ದಾರೆ ಎಂದೂ ತನಿಷಾ ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ತನಿಷಾ ಅವರಿಗೆ ಚಿತ್ರರಂಗದಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಸಿನಿಮಾಗಳ ಆಯ್ಕೆಯಲ್ಲಿ ತಮಗೀಗ ಸ್ಪಷ್ಟತೆ ಸಿಕ್ಕಿದೆ ಎಂದು ಹೇಳುವ ಅವರು, "ಜನರು ನಮ್ಮ ಮೇಲೆ ತೋರಿಸುವ ಪ್ರೀತಿ ಮತ್ತು ಅಭಿಮಾನವನ್ನು ನಾವು ಸೂಕ್ತವಾಗಿ ಬಳಸಿಕೊಂಡರೆ ಖಂಡಿತವಾಗಿಯೂ ಜೀವನದಲ್ಲಿ ಒಳ್ಳೆಯ ಬದಲಾವಣೆ ಸಾಧ್ಯ" ಎನ್ನುತ್ತಾರೆ. ಇದುವರೆಗೆ ಸುಮಾರು ಎಂಟಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ತನಿಷಾ, ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಶೇಷ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗಷ್ಟೇ ಅವರು ನಟಿಸಿರುವ ಮೂರು ಚಿತ್ರಗಳು ಕೂಡ ತೆರೆಕಂಡಿವೆ.

ಆಕ್ಷನ್ ಕ್ವೀನ್ ಮಾಲಾಶ್ರೀಗೆ ಹೋಲಿಕೆ
ಸಂದರ್ಶನದಲ್ಲಿ ತನಿಷಾ ಅವರಿಗೆ ಕೇಳಲಾದ ಪ್ರಮುಖ ಪ್ರಶ್ನೆಯೆಂದರೆ, ಜನರು ನಿಮ್ಮನ್ನು ಯಾವ ರೀತಿ ಮೆಚ್ಚಿಕೊಳ್ಳುತ್ತಿದ್ದಾರೆ? ಅದಕ್ಕೆ ಉತ್ತರಿಸಿದ ಅವರು, "ನನ್ನನ್ನು ಸಿನಿಮಾಗಳಲ್ಲಿ ಪೊಲೀಸ್ ಮತ್ತು ಆಕ್ಷನ್ ಪಾತ್ರಗಳಲ್ಲಿ ನೋಡಿರುವ ಪ್ರೇಕ್ಷಕರು, ಕನ್ನಡ ಚಿತ್ರರಂಗದ ಆಕ್ಷನ್ ಕ್ವೀನ್ ಮಾಲಾಶ್ರೀ ಅವರಿಗೆ ಹೋಲಿಸುತ್ತಿದ್ದಾರೆ. ನಾನು ನಟಿಸಿರುವ 'ಪೆನ್ ಡ್ರೈವ್' ಹಾಗೂ 'ಶೇರ್' ಚಿತ್ರಗಳ ಪಾತ್ರಗಳೇ ಇದಕ್ಕೆ ಮುಖ್ಯ ಕಾರಣ. ಮಾಲಾಶ್ರೀ ಅವರು ಕನ್ನಡ ಚಿತ್ರರಂಗದ ಎಷ್ಟು ದೊಡ್ಡ ನಟಿ ಎಂಬುದು ಎಲ್ಲರಿಗೂ ಗೊತ್ತು. ತಮಾಷೆಗಾದರೂ ಸರಿ, ಅವರ ಜೊತೆ ನನ್ನನ್ನು ಹೋಲಿಸುವುದು ನನಗೆ ತುಂಬಾನೇ ಖುಷಿ ತಂದಿದೆ" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಪೊಲೀಸ್ ಮತ್ತು ಗ್ಲಾಮರಸ್ ಪಾತ್ರಗಳೇ ಹೆಚ್ಚು
ತಮಗೆ ಬರುತ್ತಿರುವ ಪಾತ್ರಗಳ ಬಗ್ಗೆ ಮಾತನಾಡಿದ ಅವರು, ಸದ್ಯ ಚಿತ್ರರಂಗದಿಂದ ತಮಗೆ ಪೊಲೀಸ್ ಅಧಿಕಾರಿ ಪಾತ್ರಗಳೇ ಹೆಚ್ಚಾಗಿ ಹುಡುಕಿಕೊಂಡು ಬರುತ್ತಿವೆ ಎಂದಿದ್ದಾರೆ. ಇದರ ಜೊತೆಗೆ ವಿಶೇಷ ಹಾಡುಗಳು ಹಾಗೂ ಗ್ಲಾಮರಸ್ ಪಾತ್ರಗಳ ಆಫರ್ಗಳೂ ಬರುತ್ತಿವೆ ಎಂದು ತಿಳಿಸಿದ್ದಾರೆ.
ನಟಿ ಮಾತ್ರವಲ್ಲದೆ ಸಿನಿಮಾ ನಿರ್ಮಾಣ ಹಾಗೂ ಹೋಟೆಲ್ ಉದ್ಯಮದಲ್ಲೂ ಕೈಹಾಕಿರುವ ತನಿಷಾ, ಮೂರೂ ಕ್ಷೇತ್ರಗಳ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ಕೇವಲ ಕಲಾವಿದೆಯಾಗಿದ್ದಾಗ ಯಾವುದೇ ಹೆಚ್ಚಿನ ಒತ್ತಡ ಇರುತ್ತಿರಲಿಲ್ಲ, ಸಾಕಷ್ಟು ಬಿಡುವಿನ ಸಮಯ ಸಿಗುತ್ತಿತ್ತು. ಆದರೆ ಸಿನಿಮಾ ನಿರ್ಮಾಣಕ್ಕೆ ಇಳಿದ ಮೇಲೆ ಫ್ರೀ ಟೈಮ್ ಅನ್ನೋದೇ ಇಲ್ಲದಂತಾಗಿದೆ. ಇನ್ನು ನನ್ನದೇ ಸ್ವಂತ ಪ್ರೊಡಕ್ಷನ್ ಹೌಸ್ ಆರಂಭಿಸಿದ ಮೇಲೆ, ನಾನು ನಡೆಸುತ್ತಿದ್ದ ಹೋಟೆಲ್ ಉದ್ಯಮ ಮುಚ್ಚಬೇಕಾಯಿತು. ಏಕೆಂದರೆ ಸಿನಿಮಾ ಕೆಲಸಗಳ ನಡುವೆ ಹೋಟೆಲ್ ಉದ್ಯಮಕ್ಕೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿರಲಿಲ್ಲ" ಎಂದು ತಮ್ಮ ಬ್ಯುಸಿ ಲೈಫ್ ಬಗ್ಗೆಯೂ ವಿವರಿಸಿದ್ದಾರೆ.













Click it and Unblock the Notifications