ಅಲ್ಲಿ ಮಲಗಿದ ಮೇಲೆ ಇಲ್ಲಿ ಮಲಗೋಕೆ ಏನ್ ಪ್ರಾಬ್ಲಂ: ನಟಿಗೆ ಹೀಗಂದಿದ್ಯಾರು?
ಕನ್ನಡದ ನಟಿ, ನಿರೂಪಕಿ ಸೌಮ್ಯಾ ರಾವ್ (Sowmya Rao) ಅವರು ಇತ್ತೀಚೆಗೆ ಕನ್ನಡ ಸಿನಿಮಾರಂಗದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಭರದಲ್ಲಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಹಿಂದೆ ಅವರು ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆಯೂ ಆರೋಪ ಮಾಡಿದ್ದರು. ಇತ್ತೀಚೆಗೆ ಅವರು ತೆಲುಗು ಸಂದರ್ಶನದಲ್ಲಿ ಮಾತನಾಡುತ್ತಾ ಕನ್ನಡ ಇಂಡಸ್ಟ್ರಿ ಬಹಳ ಚಿಕ್ಕದು ಎಂದು ಹೇಳಿದ್ದರು. ಇದಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು.
ನಟಿ ಹೇಳಿಕೆ ಬೆನ್ನಲ್ಲೇ ಸಂದರ್ಶನದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕೆಲವರು ನಟಿ ಸೌಮ್ಯಾ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಕೆಲವರು ಆ ವೈರಲ್ ವಿಡಿಯೋಗಳಿಗೆ ಕೆಟ್ಟ ಹಾಗೂ ಅವಾಚ್ಯ ಪದಗಳನ್ನು ಬಳಸಿ ಕಾಮೆಂಟ್ ಮಾಡಿರುವ ಬಗ್ಗೆ ಸೌಮ್ಯಾ ರಾವ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಯುಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿರುವ ಸೌಮ್ಯಾರಾವ್ ತಮಗೆ ಹಾಕಿರುವ ಕೆಟ್ಟ ಕಾಮೆಂಟ್‌ಗಳ ಬಗ್ಗೆ ಮುಚ್ಚುಮರೆಯಿಲ್ಲದೆ ನೇರವಾಗಿ ಆ ಪದಗಳನ್ನು ಉಲ್ಲೇಖಿಸಿ ಸರಿಯಾಗಿ ಜಾಡಿಸಿದ್ದಾರೆ. ನಾನು ಕನ್ನಡ ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ, ಇಲ್ಲಿನ ಕಲಾವಿದರ ಬಗ್ಗೆಯೂ ಮಾತನಾಡಿಲ್ಲ, ನಾನು ಮಾತನಾಡಿದ್ದು ಕನ್ನಡ ಇಂಡಸ್ಟ್ರಿಯ ಕೆಟ್ಟ ಹುಳುಗಳ ಬಗ್ಗೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೆಲವರು ಅವಕಾಶಕ್ಕಾಗಿ ಎಲ್ಲದಕ್ಕೂ ರೆಡಿ ಎನ್ನುತ್ತಾರೆ. ನಾನು ಮಾತನಾಡಿದ್ದು ಕೂಡ ಅಂತಹ ಹೆಣ್ಣುಮಕ್ಕಳ ಬಗ್ಗೆ ಎಂದಿದ್ದಾರೆ. ಇಂಡಸ್ಟ್ರಿ ಎನ್ನುವುದು ಬಹಳ ಪವಿತ್ರವಾದದ್ದು. ಕಲೆ ಎನ್ನುವುದು ಒಂದು ದೇವತೆ. ಅದನ್ನು ಆರಾಧಿಸಬೇಕೆ ಹೊರತು ಅನುಭವಿಸಲು ನೋಡಬಾರದು ಎಂದು ಸೌಮ್ಯಾರಾವ್ ಬೋಲ್ಡ್ ಆಗಿ ಮಾತನಾಡಿದ್ದಾರೆ.

ಕೆಟ್ಟ ಕಾಮೆಂಟ್ ಮಾಡಿದವರ ಬಗ್ಗೆ ನಟಿ ಸಿಡಿದಿದ್ದಾರೆ. ನಮ್ಮ ಬಗ್ಗೆ ಎಲ್ಲ ತಿಳಿದಿರುವಂತೆ ಈ ರೀತಿ ಕೆಟ್ಟದಾಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಇವರೆಲ್ಲ ಗಲೀಜು, ಥೂ ಎಂದು ಉಗಿದಿದ್ದಾರೆ. ಕಳೆದ ಬಾರಿ ನಾನು ಸಂದರ್ಶನಕ್ಕೆ ಹಾಕಿಕೊಂಡಿದ್ದ ಡ್ರೆಸ್ ಬಗ್ಗೆಯೂ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಇಂತವರಿಗೆ ಬಟ್ಟೆ ಬಿಚ್ಚಿ ನಿಂತೋರೆಲ್ಲ ದೇವತೆಗಳಂತೆ ಕಾಣ್ತಾರೆ. ಆದರೆ, ನೀಟಾಗಿ ಡ್ರೆಸ್ ಮಾಡಿಕೊಂಡು ಬಂದರೆ ಗಲೀಜಾಗಿ ಕಾಣಿಸ್ತೀವಾ? ಎಂದು ಬೆವರಿಳಿಸಿದ್ದಾರೆ.
ನಾನು ಸಾಮಾನ್ಯವಾಗಿ ಶೋಗಳಲ್ಲಿ ಡ್ರೆಸ್ ಹಾಕುವಾಗಲೂ ಹೆಚ್ಚಾಗಿ ಪಿನ್‌ಗಳನ್ನು ಹಾಕಿಕೊಂಡಿರುತ್ತೇನೆ. ನನ್ನ ದೇಹದ ಭಾಗ ತೋರಿಸಿ ಫಾಲೋವರ್ಸ್‌ಗಳನ್ನು ಹೆಚ್ಚಿಸಿಕೊಳ್ಳುವ ಆಸೆ ನನಗಿಲ್ಲ. ಎಕ್ಸ್‌ಪೋಸ್ ಮಾಡುವ ಅವಶ್ಯಕತೆಯೂ ನನಗಿಲ್ಲ. ಹೀಗಿರುವಾಗ ನಾನೇನೋ ಗಲೀಜು ಕೆಲಸ ಮಾಡಿರುವಂತೆ ಇವರೆಲ್ಲ ಈ ರೀತಿ ಕಾಮೆಂಟ್ ಹೇಗೆ ಮಾಡ್ತಾರೆ? ಎಂದು ಗುಡುಗಿದ್ದಾರೆ.

ಇನ್ನೂ ಕೆಲವರು, "ಇವಳು ಯಾರೋ ತೆಲುಗು ಅವನ ಜೊತೆ ಮಲಗಿರಬೇಕು, ಅದಕ್ಕೇ ಚಾನ್ಸ್ ಕೊಟ್ಟಿದ್ದಾರೆ" ಎಂದೆಲ್ಲ ಕಾಮೆಂಟ್ ಹಾಕಿದ್ದಾರೆ. "ತೆಲುಗುದವನ ಜೊತೆ ಮಲಗಿದ ಮೇಲೆ ಕನ್ನಡದವನ ಜೊತೆ ಮಲಗೋಕೆ ಆಗಲ್ವೇನ್ರೀ?, ಅಲ್ಲಿರೋನು ಗಂಡ್ಸೇ, ಇಲ್ಲಿರೋನು ಗಂಡ್ಸೇ, ಇಲ್ಲಿ ಕರೆದಿರೋನೂ ಗಂಡ್ಸೇ" ಅಂತೆಲ್ಲ ಕಾಮೆಂಟ್ ಹಾಕಿದ್ದಾರೆ ಎಂದು ಸೌಮ್ಯಾ ರಾವ್ ಯೂಟ್ಯೂಬ್ ಸಂದರ್ಶನದಲ್ಲಿ ಸಂಕಟ ಹೊರಹಾಕಿದ್ದಾರೆ.
ನಾನು ಅನಾರೋಗ್ಯದಿಂದ ಬಳಲುತ್ತಿದ್ದ ನನ್ನ ತಾಯಿಯನ್ನು ಇಲ್ಲಿಯೇ ಬಿಟ್ಟು ಹೊಟ್ಟೆಪಾಡಿಗಾಗಿ ಗಂಟುಮೂಟೆ ಕಟ್ಟಿಕೊಂಡು ಬೇರೆ ರಾಜ್ಯಕ್ಕೆ ಹೋಗಿ ಶ್ರಮದಿಂದ ಮೇಲೆ ಬಂದಿದ್ದೇನೆ. ಇಲ್ಲಿ ನನಗೆ ಅವಕಾಶಗಳು ಸಿಗದ ಕಾರಣಕ್ಕೆ ತಾನೇ ನಾನು ಅಲ್ಲಿಗೆ ಹೋಗಬೇಕಾಯ್ತು? ಪ್ರತಿ ಬಾರಿ ಅಮ್ಮನನ್ನು ಬಿಟ್ಟು ಹೋಗಬೇಕಾದಾಗ ನೋವಿನಿಂದ ಹೋಗುತ್ತಿದ್ದೆ. ತಾಯಿಯ ಕೊನೆ ಕ್ಷಣದಲ್ಲೂ ಅವಳೊಂದಿಗೆ ಇರಲು ಆಗಲಿಲ್ಲ ಎಂದು ಸೌಮ್ಯಾರಾವ್ ಕಣ್ಣೀರು ಹಾಕಿದ್ದಾರೆ.
ನಿಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ. ಕಾಮೆಂಟ್ ಮಾಡುವಾಗ ಬಳಸುವ ಪದಗಳ ಬಗ್ಗೆ ಎಚ್ಚರ ಇರಬೇಕು. ನಿಜವಾಗಿಯೂ ಯಾರಾದರೂ ತಪ್ಪಿದ್ದರೆ ಅಚ್ಚುಕಟ್ಟಾದ ಕನ್ನಡ ಪದಗಳ ಮೂಲಕ ಕಾಮೆಂಟ್ ಮಾಡಬಹುದು. ಹೆಣ್ಣುಮಕ್ಕಳಿಗೆ ನೋವಾಗುವ ರೀತಿ ಕಾಮೆಂಟ್ ಮಾಡಬೇಡಿ. ಹೊಲಸಾಗಿ ಮಾತನಾಡಬೇಡಿ ಎಂದು ಸೌಮ್ಯಾ ರಾವ್ ಮನವಿ ಮಾಡಿದ್ದಾರೆ.












Click it and Unblock the Notifications