3 ತಿಂಗಳು ಶೂಟಿಂಗ್+ಕಾಂಪ್ರಮೈಸ್ ಎಂದು ಮೆಸೇಜ್ ಮಾಡಿದ್ರು: ನಟಿ ಚಂದನಾ ಅನಂತಕೃಷ್ಣ
"ಲಕ್ಷ್ಮೀ ನಿವಾಸ" ಸೀರಿಯಲ್ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ಕಿರುತೆರೆ ನಟಿ ಚಂದನಾ ಅನಂತಕೃಷ್ಣ ಅವರು ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಮನರಂಜನಾ ಕ್ಷೇತ್ರದಲ್ಲಿ ಕಾಸ್ಟಿಂಗ್ ಕೌಚ್ ಅನುಭವಗಳ ಬಗ್ಗೆ ಇತ್ತೀಚೆಗೆ ನಟಿಯರು ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿದ್ದಾರೆ. ಇದೀಗ ಚಂದನಾ ಅವರು ಕೂಡ ತಮ್ಮ ಕಹಿ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಅವಕಾಶ ಕೊಡುವ ನೆಪದಲ್ಲಿ ನಟಿಯರೊಂದಿಗೆ ಹೇಗೆಲ್ಲ ವರ್ತಿಸುತ್ತಾರೆ ಎಂದು ಇಂಡಸ್ಟ್ರಿಯ ಕರಾಳತೆಯನ್ನು ಅವರು ರಿವೀಲ್ ಮಾಡಿದ್ದಾರೆ.
"ವೈ5 ಟಿವಿ ಕನ್ನಡ" ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಚಂದನಾ ಅವರು ಈ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ನಾನು ಸಿಕ್ಕಾಪಟ್ಟೆ ಆಡಿಷನ್ ಕೊಟ್ಟಿದ್ದೆ. ಬಹುತೇಕ ಎಲ್ಲ ಪ್ರೊಡಕ್ಷನ್ ಹೌಸ್‌ನಲ್ಲೂ ಆಡಿಷನ್ ಕೊಟ್ಟಿದ್ದೆ. ಆಗ ನಾನು ಚೂರು ದಪ್ಪ ಕೂಡ ಇದ್ದೆ. ಆದರೆ ನಾನು ಸೆಲೆಕ್ಟ್ ಆಗುತ್ತಿರಲಿಲ್ಲ. ಆಮೇಲೆ ಪುಟ್ಮಲ್ಲಿ ಸೀರಿಯಲ್‌ನಲ್ಲಿ ಅವಕಾಶ ಸಿಕ್ತು ಎಂದು ಚಂದನಾ ಹೇಳಿದ್ದಾರೆ.

́'ಒಂದು ದಿನ ಯಾವುದೋ ಸಿನಿಮಾದಲ್ಲಿ ಅವಕಾಶ ಎಂದು ಒಬ್ಬರು ಫೋನ್ ಮಾಡಿದ್ರು. ಬಳಿಕ ವಿಡಿಯೋ ಕಾಲ್ ಮಾಡಿ, ನಿಮ್ಮನ್ನ ನೋಡಬೇಕು ಅಂದ್ರು. ನಾನು ಫೋಟೋಸ್ ಕಳಿಸಿದ್ದೆ. ಈ ತರದ್ದು ಬೇಡ, ಇನ್ನೂ ಸ್ವಲ್ಪ ಮಾಡ್ರನ್ ಬೇಕು ಅಂದ್ರು. ಆದ್ರೆ ನಾನು ಮಾಡ್ರನ್ ಫೋಟೋಸ್ ತೆಗೆಸಿರಲಿಲ್ಲ. ಆಮೇಲೆ ಮೇಕಪ್ ಇಲ್ಲದ ಫೋಟೋಸ್ ಕೇಳಿದ್ರು, ನಿಮ್ಮನ್ನ ರಿಯಲ್ ಆಗಿ ಹೇಗಿದ್ದೀರಾ ಅಂತ ನೋಡ್ಬೇಕು ವಿಡಿಯೋ ಕಾಲ್ ಮಾಡೋಕೇ ಹೇಳಿದ್ರು' ಎಂದಿದ್ದಾರೆ.
'ಆಗ ನಾನು ಯಾವ ನನ್ಮಗ ಈ ತರ ವಿಡಿಯೋ ಕಾಲ್ ಕೇಳ್ತಾನೆ ಅನಿಸಿತ್ತು. ಅದಕ್ಕೆ ನಾನು ರಿಪ್ಲೈ ಕೂಡ ಮಾಡಲಿಲ್ಲ. ಬ್ಲಾಕ್ ಮಾಡಿದೆ. ಆ ಮೇಲೆ ಯಾವುದೋ ಏಜೆನ್ಸಿಯಿಂದ ಫೋನ್ ಬಂದಿತ್ತು. ಒಂದು ಸಿನಿಮಾ ಇದೆಲ್ಲ ರಿಕ್ವೈರ್‌ಮೆಂಟ್ಸ್ ಬೇಕು ಎಂದ್ರು. ನೀವು ಓಕೆ ಅಂದ್ರೆ ಇಷ್ಟು ಪೇಮೆಂಟ್ ಕೊಡ್ತೀವಿ, ಮೂರು ತಿಂಗಳು ಶೂಟಿಂಗ್ + ಕಾಂಪ್ರಮೈಸ್ ಎಂದು ಆ ಮೆಸೇಜ್‌ನಲ್ಲೇ ಕ್ಲಿಯರ್ ಆಗಿ ಬರೆದಿದ್ರು. ಅದನ್ನ ನೋಡಿ ನಾನು ರಿಪ್ಲೈ ಮಾಡಲಿಲ್ಲ, ನಂಬರ್ ಬ್ಲಾಕ್ ಮಾಡಿದೆ' ಎಂದು ಚಂದನಾ ಆ ಕೆಟ್ಟ ಅನುಭವವನ್ನು ಬಹಿರಂಗಪಡಿಸಿದ್ದಾರೆ.

'ಇನ್ನೊಮ್ಮೆ ಪ್ರಜ್ವಲ್ ದೇವರಾಜ್ ಅವರೊಂದಿಗೆ ಸಿನಿಮಾ ಎಂದು ಆಡಿಷನ್‌ಗೆ ಫೋನ್ ಮಾಡಿದ್ರು. ಮೇಘನಾ ರಾಜ್ ಅವರು ಪ್ರಜ್ವಲ್ ಅವರಿಗೆ ತುಂಬಾ ಕ್ಲೋಸ್ ಇದ್ದ ಕಾರಣ ಅವರಿಗೇ ಮೆಸೇಜ್ ಮಾಡಿ ಕೇಳಿದೆ. ಈ ತರ ಪ್ರಜ್ವಲ್ ಅವರ ಸಿನಿಮಾಗೆ ಆಡಿಷನ್ ಕರೀತಿದಾರೆ ಹೋಗ್ಲಾ? ಎಂದು ಕೇಳಿದೆ. ಅವರು ತಕ್ಷಣವೇ ಹೋಗಬೇಡ. ಇದೆಲ್ಲ ಸ್ಕ್ಯಾಮ್ ಎಂದು ಹೇಳಿದ್ರು. ಆಗ ಇನ್ನೇನು ಹೊರಟಿದ್ದವಳು ಸುಮ್ಮನಾದೆ' ಎಂದು ವಿವರಿಸಿದ್ದಾರೆ.
'ಇದು ಇತ್ತೀಚೆಗೆ ನಡೆದ ಘಟನೆ. ಅವರು ಫೋನ್ ಮಾಡಿ ಯಾವುದೋ ರೆಸ್ಟೋರೆಂಟ್‌ಗೋ, ಹೋಟೆಲ್‌ಗೋ ಕರೆದ್ರು. ಇದರಿಂದಲೇ ನನಗೆ ಅನುಮಾನ ಬಂದಿತ್ತು. ಆಗ ಮೇಘನಾ ರಾಜ್ ಅವರನ್ನು ಕೇಳಿದ್ದಕ್ಕೆ ಆ ರೀತಿ ಯಾವ ಸಿನಿಮಾನೂ ಮಾಡ್ತಿಲ್ಲ, ಇದೇ ತರ ಹಲವು ಹುಡುಗಿಯರಿಗೆ ಮೋಸ ಮಾಡ್ತಿದ್ದಾರೆ. ಹೋಗಬೇಡ ಎಂದು ಅಲರ್ಟ್ ಮಾಡಿದ್ರು' ಎಂದು ಚಂದನಾ ಸಂದರ್ಶನದಲ್ಲಿ ಹೇಳಿದ್ದಾರೆ.












Click it and Unblock the Notifications