ಸಿನಿಮಾದಲ್ಲಿ ಚಾನ್ಸ್ ಸಿಗುತ್ತೆ, ಕಂಪನಿ ಕೊಡಬೇಕು ಅಂದ್ರು: ಇಂಡಸ್ಟ್ರಿಯ ಕರಾಳತೆ ಬಿಚ್ಚಿಟ್ಟ ಖ್ಯಾತ ನಟಿ
ಕನ್ಯಾಕುಮಾರಿ ಹಾಗೂ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್‌ಗಳ ಮೂಲಕ ಫೇಮಸ್ ಆಗಿರುವ ನಟಿ ಆಸಿಯಾ ಫಿರ್ದೋಸ್ (Asiya Firdose) ಸಿನಿಮಾಗಳಲ್ಲಿ ಕೂಡ ಮಿಂಚುತ್ತಿದ್ದಾರೆ. ತಮ್ಮ ಮುದ್ದಾದ ನಟನೆಯಿಂದ ಅಭಿಮಾನಿಗಳನ್ನು ಹೊಂದಿರುವ ನಟಿ ಇಂಡಸ್ಟ್ರಿಯಲ್ಲಿ ತಮಗೆ ಎದುರಾದ ಕಹಿ ಅನುಭವಗಳು, ಕಾಸ್ಟಿಂಗ್ ಕೌಚ್ ಕುರಿತಂತೆ ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಆಸಿಯಾ ಫಿರ್ದೋಸ್ ತಮಗೆ ಎದುರಾದ ಎರಡು ಘಟನೆಗಳನ್ನು ರಿವೀಲ್ ಮಾಡಿದ್ದಾರೆ.
ರಾಜೇಶ್ ರಿವೀಲ್ಸ್ ಯೂಟ್ಯೂಬ್ ಚಾಲನ್ ಸಂದರ್ಶನದಲ್ಲಿ ನಟಿ ಆಸಿಯಾ ಈ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಅನ್ನ ತುಂಬಾ ಡೀಪ್ ಆಗಿ ನಾನು ನೋಡಿಲ್ಲ. ನಾನು ಕೆಲಸ ಮಾಡಿಕೊಂಡು ಬಂದಿರುವ ಎಲ್ಲ ಕಡೆ ಚೆನ್ನಾಗಿಯೇ ಇತ್ತು. ಆದರೆ ನನಗೆ ಇಂಡಸ್ಟ್ರಿ ಬಗ್ಗೆ ಅರಿವೇ ಇಲ್ಲದ ಟೈಮಲ್ಲಿ ಇದರ ಬಗ್ಗೆ ಏನೂ ಗೊತ್ತಿರಲಿಲ್ಲ. ಆರಂಭದಲ್ಲಿ ಒಬ್ರು ಅಂಕಲ್ ಪರಿಚಯವಾಗಿದ್ರು. ಅವರು ಸೀರಿಯಲ್ ಇಂಡಸ್ಟ್ರಿಯಲ್ಲಿ ತಕ್ಕಮಟ್ಟಿಗೆ ಸಂಪರ್ಕ ಹೊಂದಿದ್ರು. ಅವರಿಂದ ನನಗೆ ಆಡಿಷನ್‌ಗಳ ಮಾಹಿತಿ ಸಿಗಬಹುದು ಎಂದುಕೊಂಡಿದ್ದೆ. ಅವರೂ ಕೂಡ ನಿನ್ನೊಂದಿಗೆ ನಾನಿದ್ದೀನಿ ಅನ್ನೋ ಹಿರಿಯರ ಧೈರ್ಯದ ಫೀಲ್ ಕೊಟ್ರು. ಅವರನ್ನು ನಾನು ನನ್ನ ಕುಟುಂಬಕ್ಕೂ ಪರಿಚಯ ಮಾಡಿಕೊಟ್ಟೆ ಎಂದು ಹೇಳಿದ್ದಾರೆ.

ಆದರೆ, ಒಂದು ದಿನ ಶೂಟಿಂಗ್ ನಡೆಯುತ್ತಿದ್ದ ಜಾಗಕ್ಕೆ ಹೋಗಿದ್ದೆ. ಅಲ್ಲಿ ಒಂದು ರೂಂ ಇತ್ತು. ಆ ಅಂಕಲ್ ಬಂದು ನನ್ನ ಕೈ ಹಿಡಿದು ಜೋರಾಗಿ ಎಳೆದರು. ಅವರು ಕೈಹಿಡಿದ ವಿಧಾನದಲ್ಲೇ ನನಗೆ ಅದು ಸರಿಯಲ್ಲ ಅನ್ನೋದು ಅರ್ಥವಾಯ್ತು, ಕೊನೆಗೆ ನಾನು ಅಲ್ಲಿಂದ ಬಿಡಿಸಿಕೊಂಡು ಆಚೆ ಬಂದೆ, ಆಗ ನಾನಿನ್ನೂ ಚಿಕ್ಕವಳಾಗಿದ್ದೆ. ಎಂದು ಆಸಿಯಾ ಕಹಿ ಘಟನೆ ಬಿಚ್ಚಿಟ್ಟಿದ್ದಾರೆ. ನಾನು ಅವರು ಹೇಳಿದ್ದನ್ನೆಲ್ಲ ಕೇಳುವಷ್ಟು ದಡ್ಡಿ ಆಗಿರಲಿಲ್ಲ. ಅವರು ತಂದೆ ಸಮಾನದಲ್ಲಿದ್ದು ಆ ರೀತಿ ಮಾಡಲು ಪ್ರಯತ್ನ ಪಟ್ಟರು. ಆ ಘಟನೆ ಬಳಿಕ ನಾನು ಅವರನ್ನು ಭೇಟಿಯಾಗಲಿಲ್ಲ, ಮಾತೂ ಆಡಲಿಲ್ಲ. ಈ ವಿಚಾರವನ್ನು ಮನೆಯವರಿಗೂ ಹೇಳಿಬಿಟ್ಟೆ ಎಂದು ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ.
ಎಲ್ರೂ ಇದೇ ದಾರೀಲಿ ಹೋಗಿದ್ದು ಅಂತಿದ್ರು
ಇಂಡಸ್ಟ್ರಿಯಲ್ಲಿ ಕಮಿಟ್‌ಮೆಂಟ್ ಕೊಡಬೇಕು ಎಂದೆಲ್ಲ ಹಲವರು ಹೇಳ್ತಿದ್ರು. ಎಲ್ಲ ನಟಿಯರು ಹಾಗೇ ಹೋಗಿರೋದು ಎಂದು ನನ್ನ ಸುತ್ತಮುತ್ತಲೂ ಮಾತನಾಡಿಕೊಳ್ತಿದ್ರು. ಈ ಗೊಂದಲದಲ್ಲೇ ನಾನು ಒಬ್ಬರ ಬಳಿ ನಾನು ಸಲಹೆ ಕೇಳಿದೆ. ಅವರು ಒಂದು ಮಾತು ಹೇಳಿದ್ರು. ಅವರು ಹೇಳಿರೋದನ್ನ ನೀನು ನೋಡಿಲ್ಲ. ಒಂದು ವೇಳೆ ಅವರು ಆ ಕೆಟ್ಟ ದಾರಿಯಿಂದಲೇ ಹೋಗಿದ್ದರೂ, ನೀನು ಒಳ್ಳೆಯ ದಾರಿಯಲ್ಲೇ ಹೋಗು. ಇದರಿಂದ ನೀನು ಅನೇಕ ನಟಿಯರಿಗೆ ಪ್ರೇರಣೆಯಾಗ್ತೀಯ ಎಂದು ಹೇಳಿದ ಮೇಲೆ ನನಗೆ ಧೈರ್ಯ ಬಂತು ಎಂದಿದ್ದಾರೆ.

ನಾನು ಸೀರಿಯಲ್‌ಗಳಲ್ಲಿ ನಟಿಸಿ, ಸಿನಿಮಾಗಳಲ್ಲೂ ನಟಿಸಿದೆ. ಈ ವೇಳೆ ಮತ್ತೊಬ್ಬ ವ್ಯಕ್ತಿ ಪರಿಚಯವಾಗಿ ನನ್ನ ಸಿನಿಮಾ ನೋಡಿದ್ದರು. ಅವರ ಸಿನಿಮಾ ಮಾಡುವ ಬಗ್ಗೆ ನನಗೆ ಹೇಳಿದ್ರು. ಇದರಲ್ಲಿ ನನಗೆ ಚಾನ್ಸ್ ಕೊಡೋ ಬಗ್ಗೆಯೂ ಮಾತನಾಡಿದ್ರು. ಅವರ ಆಫೀಸ್‌ಗೆ ಬರೋಕೆ ಹೇಳಿದ್ರು, ಮನೆ ಹತ್ರನೇ ಇದ್ದಿದ್ದರಿಂದ ನಾನು ಹೋದೆ. ಸಿನಿಮಾ ಕಥೆ ಹೇಳಿದ್ರು ನನಗೆ ಇಷ್ಟ ಆಗಿತ್ತು. ಆ ಟೈಮಲ್ಲಿ ನನಗೂ ಹಣಕಾಸಿನ ಅವಶ್ಯಕತೆ ಇದ್ದಿದ್ದರಿಂದ ಸಿನಿಮಾ ಮಾಡೋಣ ಎಂದು ಒಪ್ಪಿಕೊಂಡಿದ್ದೆ. ನನಗೆ ಪೇಮೆಂಟ್ ಕೇಳಿದರು. ಅವರು ತುಂಬಾ ಕಡಿಮೆ ಪೇಮೆಂಟ್ ಹೇಳಿದ್ರು, ನಾನು ಅದಕ್ಕೆ ಒಪ್ಪಲಿಲ್ಲ. ಆಗ ನಾನು ತೀರಾ ಜಾಸ್ತಿ ಕೂಡ ಕೇಳಲಿಲ್ಲ. ಕೊನೆಗೆ ಅವರೂ ಅದಕ್ಕೆ ಒಪ್ಪಿಕೊಂಡ್ರು. ನಿಮ್ಮ ವ್ಯಕ್ತಿತ್ವ ತುಂಬಾ ಒಳ್ಳೇದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ರು ಎಂದು ಆಸಿಯಾ ಹೇಳಿದ್ದಾರೆ.
ಕಂಪನಿ ಕೊಡಬೇಕು ಅಂದ್ರು
ಅವರು ನೀವು ನನ್ನ ಸಿನಿಮಾದಲ್ಲಿ ಕೆಲಸ ಮಾಡ್ತೀರಿ, ಇದರೊಂದಿಗೆ ನೀವು ನನಗೆ ಫ್ರೆಂಡ್ ಆಗಿರಬೇಕು ಎಂದು ಕೇಳಿದ್ರು. ನಾನು ಯಾವ ರೀತಿ ಫ್ರೆಂಡ್ ಎಂದು ಕೇಳಿದೆ. ಅದಕ್ಕೆ ಅವರು ನಾನು ಆಚೆ ಹೋದಾಗ, ಮೂವಿಗೆ ಜೊತೆಯಾಗಿ ಬರೋದು, ಕಂಪನಿ ಕೊಡೋದು ಅಂತ ಹೇಳಿದ್ರು. ಏನು ನಿಮ್ ಜೊತೆ ಮೂವಿಗೆ ಬರೋದಾ? ಅಂತ ಆವಾಗ ನನಗೆ ಎಲ್ಲ ಅರ್ಥ ಆಯ್ತು. ಎಷ್ಟು ಕೋಪ ಬಂತು ಅಂದ್ರೆ ನಿಮ್ ಜೊತೆ ಯಾಕೆ ನಾನು ಸಿನಿಮಾಗೆ ಬರಬೇಕು? ಎಂದು ಕೇಳಿದೆ. ನಾನು ಇಂಡಸ್ಟ್ರಿಗೆ ಬಂದಿರೋದು ಕೆಲಸ ಮಾಡೋಕೆ, ಫ್ರೆಂಡ್ಸ್ ಮಾಡಿಕೊಳ್ಳೋಕೆ ಅಲ್ಲ ಎಂದು ನೇರವಾಗಿ ಹೇಳಿದ್ದೆ ಎಂದು ತಮಗೆ ಎದುರಾದ ಕೆಟ್ಟ ಅನುಭವವನ್ನು ಬಹಿರಂಗಪಡಿಸಿದ್ದಾರೆ.
ನನಗೆ ನಟನೆ ಅಂದ್ರೆ ಮೊದಲಿನಿಂದಲೂ ತುಂಬಾ ಇಷ್ಟ. ಹಾಗಾಗಿ ಇಲ್ಲಿಗೆ ಬರುವ ಮುನ್ನವೇ ಎಲ್ಲವನ್ನೂ ಯೋಚಿಸಿದ್ದೆ. ನನ್ನ ಪ್ರಕಾರ ಯಾರೂ ಯಾರನ್ನೂ ನಟಿ ಮಾಡೋಕೆ ಆಗಲ್ಲ. ಅದು ನಿಮ್ಮ ಪರಿಶ್ರಮ, ಪ್ರತಿಭೆ ಮೇಲೆ ನಿಂತಿರುತ್ತೆ. ಕಷ್ಟ ಪಟ್ಟರೆ ಮಾತ್ರ ನೀವು ನಟಿಯಾಗಬಹುದು ಎಂದು ಆಸಿಯಾ ಕಿವಿಮಾತು ಹೇಳಿದ್ದಾರೆ.












Click it and Unblock the Notifications