Vishal: ವಿಶಾಲ್ ಜೊತೆಗಿನ ರಿಲೇಷನ್‌ಶಿಪ್ ಬಗ್ಗೆ ಕೊನೆಗೂ ಮೌನ ಮುರಿದ ಖ್ಯಾತ ನಟಿ
ಇತ್ತೀಚೆಗೆ ಅನಾರೋಗ್ಯ ಕಾರಣದಿಂದಾಗಿ ತಮಿಳು ನಟ ವಿಶಾಲ್ ಅವರು ಸುದ್ದಿಯಾಗಿದ್ದರು. ವಿಶಾಲ್ ಇಷ್ಟು ವಯಸ್ಸಾದರೂ ಯಾಕೆ ಮದುವೆ ಮಾಡಿಕೊಂಡಿಲ್ಲ? ಎನ್ನುವ ಪ್ರಶ್ನೆ ಕೂಡ ಹಲವು ವರ್ಷಗಳಿಂದ ಇದೆ. ಅಲ್ಲದೆ ವಿಶಾಲ್ ನಟಿಯ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನುವ ವದಂತಿ ಕೂಡ ಇತ್ತು. ಇದೀಗ ನಟಿಯೇ ಖುದ್ದಾಗಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ತಮಿಳು, ತೆಲುಗು ಹಾಗೂ ಕನ್ನಡ ಚಿತ್ರರಂಗಗಳಲ್ಲಿ ನಟಿಸಿರುವ ಖ್ಯಾತ ನಟಿ ಅಭಿನಯ ಅವರು ವಿಶಾಲ್ ಅವರ ಜೊತೆಗಿನ ಸಂಬಂಧದ ಬಗ್ಗೆ ನೇರಾನೇರವಾಗಿ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಬಾಲ್ಯದ ಗೆಳೆಯನ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಿದ್ದು ನಿಜ ಎಂದು ಸಂದರ್ಶನವೊಂದರಲ್ಲಿ ಖಚಿತಪಡಿಸಿದ್ದಾರೆ.

'ನಾಡೋಡಿಗಳು', ʼಪನಿʼ ಸಿನಿಮಾಗಳ ಮೂಲಕ ನಟಿ ಅಭಿನಯ ಅವರು ಫೇಮಸ್ ಆಗಿದ್ದಾರೆ. ತಮ್ಮ ಅಮೋಘ ನಟನೆಯ ಮೂಲಕ ಖ್ಯಾತಿ ಗಳಿಸಿದ ನಟಿ ಅಭಿನಯ ಅವರು ಅನೇಕರಿಗೆ ಮಾದರಿಯೂ ಆಗಿದ್ದಾರೆ. ಅಭಿನಯ ಅವರಿಗೆ ಶ್ರವಣದೋಷ ಮತ್ತು ವಾಕ್ ದೋಷವಿದೆ. ಈ ಸವಾಲುಗಳನ್ನು ಮೆಟ್ಟಿ ನಿಂತು ಅವರು ತಮ್ಮ ಪ್ರತಿಭೆ ಮೂಲಕ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ತಮ್ಮ ಸಹಜ ಅಭಿನಯ ಕೌಶಲ್ಯದಿಂದ ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ.
ಇದರ ನಡುವೆಯೇ ಅಭಿನಯ ಅವರು ನಟ ವಿಶಾಲ್ ಅವರೊಂದಿಗೆ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಡಿತ್ತು. ಆದರೆ, ಈ ಬಗ್ಗೆ ಎಲ್ಲಿಯೂ ನಟಿ ಮಾತನಾಡಿರಲಿಲ್ಲ. ಇದೀಗ ಅಭಿನಯ ಅವರೇ ನಟ ವಿಶಾಲ್ ಜೊತೆಗಿನ ವದಂತಿಗಳನ್ನು ತಳ್ಳಿ ಹಾಕಿದ್ದು, ತನ್ನ ಬಾಲ್ಯದ ಗೆಳೆಯನೊಂದಿಗಿನ ದೀರ್ಘಕಾಲದ ಸಂಬಂಧವನ್ನು ಖಚಿತಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಅಭಿನಯ ಅವರು ತಮ್ಮ ವೈಯಕ್ತಿಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಹೌದು, ನಾನು ಪ್ರಸ್ತುತ ನನ್ನ ಬಾಲ್ಯದ ಗೆಳೆಯನೊಂದಿಗೆ ಸಂಬಂಧದಲ್ಲಿದ್ದೇನೆ. ನಾವು 15 ವರ್ಷಗಳಿಂದ ಸುಂದರವಾದ ಬಾಂಡಿಂಗ್‌ನಲ್ಲಿದ್ದೇವೆ. ನಾನು ಯಾವುದೇ ವಿಷಯವನ್ನು ಮುಕ್ತವಾಗಿ ಚರ್ಚಿಸಬಲ್ಲ ವ್ಯಕ್ತಿ ಅವರು.
ನಾವು ಸದ್ಯಕ್ಕೆ ಇನ್ನೂ ನಮ್ಮ ಮದುವೆ ಬಗ್ಗೆ ಪ್ಲ್ಯಾನ್ ಮಾಡಿಲ್ಲ ಎಂದು ಅಭಿನಯ ಹೇಳಿದ್ದಾರೆ. ಮದುವೆಗೆ ಇನ್ನೂ ಸಾಕಷ್ಟು ಸಮಯ ಇರುವುದರಿಂದ ಆ ಹೆಜ್ಜೆ ಇಡುವ ಮೊದಲು ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಸಾಧಿಸಲು ನಾನು ಇನ್ನೂ ಅನೇಕ ಗುರಿಗಳನ್ನು ಹೊಂದಿದ್ದೇನೆ ಎಂದೂ ನಟಿ ಅಭಿನಯ ಬೋಲ್ಡ್ ಆಗಿ ಮಾತನಾಡಿದ್ದಾರೆ.

ನಟ ವಿಶಾಲ್ ಅವರೊಂದಿಗೆ ಅಭಿನಯ ಅವರ ಕುರಿತಾದ ವದಂತಿಗಳು ಆಧಾರರಹಿತ ಎಂದು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಅಲ್ಲದೆ ವಿಶಾಲ್ ನನಗೆ ಪ್ರಪೋಸ್ ಮಾಡಿದ್ದಾರೆ ಮತ್ತು ನಾವು ಶೀಘ್ರದಲ್ಲೇ ಮದುವೆಯಾಗಲಿದ್ದೇವೆ ಎನ್ನುವುದೆಲ್ಲ ಸಿಲ್ಲಿ ರೂಮರ್‌ಗಳು. ದಯವಿಟ್ಟು ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ.
ಈ ಸುಳ್ಳು ಸುದ್ದಿಗಳಿಂದಾಗಿ ನನಗೆ ಬೇಸರವಾಗಿದೆ. ಆದರೆ ನನ್ನ ಗಮನವೆಲ್ಲ ನನ್ನ ವೃತ್ತಿಜೀವನ ಮತ್ತು ವೈಯಕ್ತಿಕ ಗುರಿಗಳ ಮೇಲೆ ಉಳಿದಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ನಟ ವಿಶಾಲ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿ ಸಂದೇಶ ಕಳುಹಿಸಿದಾಗ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ವಿಶಾಲ್ ಅವರು ಮಹಾನ್ ವ್ಯಕ್ತಿ ಎಂದು ಅಭಿನಯ ಹೊಗಳಿದ್ದು, ಈ ಗಾಸಿಪ್‌ಗಳೆಲ್ಲ ನಿರಾಧಾರ ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications