ಚಪ್ಪಲಿಯಿಂದ ಹೊಡೆದುಕೊಂಡು ಕಣ್ಣೀರಿಟ್ಟ ವಸಿಷ್ಠ ಸಿಂಹ ಸಿನಿಮಾ ನಿರ್ದೇಶಕ, ಕಾರಣವೇನು?
ಕನ್ನಡ ನಟ ವಸಿಷ್ಠ ಸಿಂಹ ಅವರು ಸದ್ಯ ಪರಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ವಸಿಷ್ಠ ಅವರ ನಟನೆಯ ಸಿನಿಮಾ ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕರೊಬ್ಬರು ಲೈವ್‌ನಲ್ಲೇ ಬಂದು ತನ್ನ ಚಪ್ಪಲಿಯಿಂದ ಹೊಡೆದುಕೊಂಡು ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ಸಿನಿಮಾದಲ್ಲಿ ವಸಿಷ್ಠ ಸಿಂಹ, ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಸೇರಿದಂತೆ ಪ್ರಮುಖ ಕಲಾವಿದರು ನಟಿಸಿದ್ದರು. ಈ ಸಿನಿಮಾ ನಿರ್ದೇಶಿಸಿದ್ದ ಮೋಹನ್ ಶ್ರೀವತ್ಸ ಅವರು ಅಳುತ್ತಾ ಚಪ್ಪಲಿಯಿಂದ ಹೊಡೆದುಕೊಂಡಿದ್ದಾರೆ. ಇದಕ್ಕೆ ಕಾರಣ ಕೂಡ ವಿಡಿಯೋದಲ್ಲಿ ಹೇಳಿದ್ದಾರೆ.
ನಿರ್ದೇಶಕ ಮೋಹನ್ ಶ್ರೀವತ್ಸ ಅವರು ತೆಲುಗು ಭಾಷೆಯಲ್ಲಿ "ತ್ರಿಬನಧಾರಿ ಬಾರ್ಬರಿಕ್" ಎಂಬ ಸಿನಿಮಾ ನಿರ್ದೇಶಿಸಿದ್ದರು. ಈ ಸಿನಿಮಾ ಆಗಸ್ಟ್ 29ರಂದು ರಿಲೀಸ್ ಆಗಿತ್ತು. ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ಚಿತ್ರಕ್ಕೆ ಪ್ರೇಕ್ಷಕರು ಬರುತ್ತಿಲ್ಲ ಎಂದು ನಿರ್ದೇಶಕ ಮೋಹನ್ ಶ್ರೀವತ್ಸ ಕಣ್ಣೀರು ಹಾಕಿದ್ದಾರೆ. ಸಿನಿಮಾ ನೋಡಿದವರು ಎಲ್ಲರೂ ಒಳ್ಳೆಯ ಪ್ರತಿಕ್ರಿಯೆ ಕೊಡುತ್ತಿದ್ದಾರೆ. ಆದರೆ ಚಿತ್ರಮಂದಿರಗಳಲ್ಲಿ ಜನ ಇರಲಿಲ್ಲ ಎಂದು ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ. ಎರಡೂವರೆ ವರ್ಷಗಳ ಕಾಲ ಕಷ್ಟಪಟ್ಟು ನಿರ್ಮಿಸಿದ ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಲಿಲ್ಲ ಎಂದು ನಿರಾಸೆಯಿಂದ ಈ ವಿಡಿಯೋ ಮಾಡಿದ್ದಾರೆ.

'ಥಿಯೇಟರ್‌ನಲ್ಲಿ 10 ಜನ ಇದ್ರು'
'ಪ್ರೇಕ್ಷಕರು ಸಿನಿಮಾ ನೋಡಲು ಬಂದಿದ್ದರೆ ಚಿತ್ರ ಹೇಗಿದೆ ಎಂದು ಅವರಿಗೆ ತಿಳಿಯುತ್ತದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ತೆಲುಗು ಪ್ರೇಕ್ಷಕರು ಇತ್ತೀಚೆಗೆ ಮಲಯಾಳಂ ಚಿತ್ರಗಳನ್ನು ಹೆಚ್ಚಾಗಿ ಬೆಂಬಲಿಸುತ್ತಿದ್ದಾರೆ ಎಂದೂ ಬೇಸರ ಹೊರಹಾಕಿದ್ದಾರೆ. ಬಾರ್ಬರಿಕ್ ಸಿನಿಮಾ ನೋಡಿದವರು ಚೆನ್ನಾಗಿದೆ ಎಂದು ಹೇಳುತ್ತಿದ್ದರೂ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿಲ್ಲ. ನಾನೇ ಖುದ್ದಾಗಿ ಥಿಯೇಟರ್‌ಗೆ ಹೋದಾಗ ಅಲ್ಲಿ ಕೇವಲ 10 ಜನ ಇದ್ದರು. ನಾನು ನಿರ್ದೇಶಕ ಎಂದು ಹೇಳದೆ ಪ್ರತಿಯೊಬ್ಬರ ಬಳಿ ಹೋಗಿ ಸಿನಿಮಾ ಹೇಗಿದೆ ಎಂದು ಕೇಳಿದೆ. ಅವರೆಲ್ಲರೂ ತುಂಬಾ ಚೆನ್ನಾಗಿದೆ ಅಂದ್ರು. ನಂತರ ನಾನೇ ಇದರ ನಿರ್ದೇಶಕ ಎಂದು ಹೇಳಿದ್ದಕ್ಕೆ ಖುಷಿ ಪಟ್ಟರು' ಎಂದಿದ್ದಾರೆ.
'ನಾನು ನಿರ್ದೇಶಕ ಎಂದು ಗೊತ್ತಾಗಿ ಅವರು ನನ್ನ ಅಪ್ಪಿಕೊಂಡರು. ಸಿನಿಮಾ ತುಂಬಾ ಚೆನ್ನಾಗಿದೆ ಸರ್ ಅಂದ್ರು. ಆಗ ನಿಜಕ್ಕೂ ನಾನು ಕಣ್ಣೀರಿಟ್ಟೆ. ಹೀಗಿದ್ದರೂ ಥಿಯೇಟರ್‌ನಲ್ಲಿ ಕೇವಲ 10-15 ಜನರು ಏಕೆ ಇದ್ದಾರೆ? ಅನ್ನೋದು ನನಗೆ ಅರ್ಥವಾಗುತ್ತಿಲ್ಲ. ನಾನು ಎರಡೂವರೆ ವರ್ಷಗಳಿಂದ ಈ ಸಿನಿಮಾಗಾಗಿ ಹುಚ್ಚು ನಾಯಿಯಂತೆ ಕೆಲಸ ಮಾಡಿದ್ದೇನೆ. ಆದರೂ ಜನ ಇಂತಹ ಸಿನಿಮಾ ನೋಡಲು ಏಕೆ ಬರುತ್ತಿಲ್ಲ' ಎಂದು ಮೋಹನ್ ಶ್ರೀವತ್ಸ ಕಣ್ಣೀರಿಟ್ಟಿದ್ದಾರೆ.
'ಚಪ್ಪಲಿಯಿಂದ ಹೊಡೆದುಕೊಳ್ತೀನಿ ಅಂದಿದ್ದೆ'
'ನಾನು ಈ ನೋವಿನಿಂದ ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಭಾವಿಸಿ, ನನ್ನ ಪತ್ನಿ ಕೂಡ ಜೊತೆಯಲ್ಲೇ ಇದ್ದಳು. ಈ ಚಿತ್ರ ನನ್ನ ಎರಡೂವರೆ ವರ್ಷಗಳ ಕಠಿಣ ಪರಿಶ್ರಮ ಎಂದು ಅವಳಿಗೆ ತಿಳಿದಿದೆ. ಜನ ಈಗ ಮಲಯಾಳಂ ಕಂಟೆಂಟ್ ಅನ್ನು ಥಿಯೇಟರ್‌ನಲ್ಲಿ ನೋಡುತ್ತಾರೆ ಎಂಬ ನಂಬಿಕೆಯಿಂದ ನಾನು ಬಾರ್ಬೇರಿಕ್ ಸಿನಿಮಾ ಮಾಡಿದ್ದೇನೆ. ಜನರಿಗೆ ಸಿನಿಮಾ ಇಷ್ಟವಾಗದಿದ್ದರೆ, ನನ್ನ ಚಪ್ಪಲಿಯಿಂದ ಹೊಡೆದುಕೊಳ್ಳುತ್ತೇನೆ ಎಂದು ನಾನು ಮೊದಲೇ ಹೇಳಿದ್ದೆ. ಆದರೂ ಜನ ಸಿನಿಮಾ ನೋಡಲು ಬರಲಿಲ್ಲ' ಎಂದು ಬೇಸರ ಹೊರಹಾಕಿದ್ದಾರೆ.
'ನಾನು ಮಲಯಾಳಂ ಇಂಡಸ್ಟ್ರಿಗೆ ಹೋಗಿ ಸಿನಿಮಾವನ್ನು ಅಲ್ಲಿಗೆ ತೆಗೆದುಕೊಂಡು ಹೋಗ್ತೀನಿ. ತೆಲುಗು ಜನರಿಗೆ ಸಿನಿಮಾ ಮಾಡಿದರೆ ಹೇಗಿರುತ್ತದೆ ಎಂದು ತೋರಿಸುತ್ತೇನೆ. ತೆಲುಗು ಪ್ರೇಕ್ಷಕರು ಮಲಯಾಳಂ ಸಿನಿಮಾಗಳನ್ನ ಮಾತ್ರ ನೋಡ್ತಾರೆ ಎಂದು ಅರ್ಥವಾಗಿದೆ. ಹಾಗಾಗಿ ನಾನು ಮೊದಲೇ ಹೇಳಿದಂತೆ ನಾನು ನನ್ನ ಚಪ್ಪಲಿಯಿಂದ ನಾನೇ ಹೊಡೆದುಕೊಳ್ಳುತ್ತೇನೆ' ಎಂದು ವಿಡಿಯೋ ಮಾಡಿದ್ದಾರೆ. ಇದು ವೈರಲ್ ಆಗಿದೆ.












Click it and Unblock the Notifications