Tri Vikram: ಬಯಸಿದಂತೆ ಬದಲಾದ ತ್ರಿವಿಕ್ರಮ್ ಬದುಕು: ಕಾರಣವೇನು?
ಬಿಗ್ ಬಾಸ್ ಕನ್ನಡ ಸೀಸನ್ 11ರ ರನ್ನರ್ ಅಪ್ ನಟ ತ್ರಿವಿಕ್ರಮ್ ಸದ್ಯ ಮುದ್ದು ಸೊಸೆ ಎನ್ನುವ ಹೊಸ ಧಾರಾವಾಹಿಯಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದು, ತಮ್ಮ ನಿರೀಕ್ಷೆ ನಿಜವಾದ ಖುಷಿಯಲ್ಲಿದ್ದಾರೆ. ಹಾಗಾದರೆ ತ್ರಿವಿಕ್ರಮ್ ನಿರೀಕ್ಷೆ ಏನಾಗಿತ್ತು? ಮುದ್ದು ಸೊಸೆ ಅವಕಾಶ ತ್ರಿವಿಕ್ರಮ್‌ಗೆ ಹೇಗೆ ಮುಖ್ಯವಾಯಿತು ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ ಓದಿ.
ನಟ ತ್ರಿವಿಕ್ರಮ್ ಪದ್ಮಾವತಿ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾದರು. ಅದಾದ ಬಳಿಕ ಒಂದಿಷ್ಟು ವರ್ಷಗಳು ತ್ರಿವಿಕ್ರಮ್ ಕಣ್ಮರೆಯಾದರು. ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರು ವಿನಃ ಯಾವುದೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದರಿಂದ ತ್ರಿವಿಕ್ರಮ್ ತೆರೆ ಮರೆಗೆ ಸರಿದಿದ್ದಾರೆ ಎಂದೇ ಅನೇಕರು ಊಹಿಸಿದ್ದರು. ನಟನೆಯ ಜೊತೆಗೆ ಕ್ರಿಕೆಟರ್ ಕೂಡ ಆಗಿದ್ದ ತ್ರಿವಿಕ್ರಮ್ ಅತ್ತ ಸಿಸಿಎಲ್ ಮ್ಯಾಚ್‌ಗಳಲ್ಲಿ ಮಿಂಚುತ್ತಿದ್ದರು. ಅದಾದ ಬಳಿಕ ತ್ರಿವಿಕ್ರಮ್‌ಗೆ ದೊಡ್ಡ ಬ್ರೇಕ್ ಕೊಟ್ಟಿದ್ದೇ ಬಿಗ್ ಬಾಸ್ ಕನ್ನಡ ಸೀಸನ್ ೧೧.

ಬಿಗ್ ಬಾಸ್ ಸೀಸನ್ ೧೧ರ ಸ್ಪರ್ಧಿಯಾಗಿ ತ್ರಿವಿಕ್ರಮ್ ಮನೆಯೊಳಗೆ ಕಾಲಿಟ್ಟಾಗ ಟಾಪ್ ಐದು ಫೈನಲಿಸ್ಟ್‌ಗಳಲ್ಲಿ ಪಕ್ಕಾ ಇದ್ದೇ ಇರುತ್ತಾರೆ ಎಂದು ಪ್ರೇಕ್ಷಕರು ಊಹಿಸಿದ್ದರು. ಅವರ ಊಹೆ ದಿಟವಾಗಿದ್ದು, ಸುಮಾರು ನೂರ ಇಪ್ಪತ್ತು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಹೋರಾಡಿದ ತ್ರಿವಿಕ್ರಮ್, ಕೊನೆಗೆ ರನ್ನರ್ ಅಪ್ ಆಗಿ ಹೊರಹೊಮ್ಮಿದರು.
ಬಿಗ್ ಬಾಸ್ ಬಳಿಕ ತ್ರಿವಿಕ್ರಮ್ ಅದೃಷ್ಟ ಬದಲಾಗಿ ಹೋಗಿತ್ತು. ಯಾಕೆಂದರೆ ಬಿಗ್ ಬಾಸ್‌ನಲ್ಲಿರುವಾಗ ತ್ರಿವಿಕ್ರಮ್ ಬಹಳ ಮಿಂಚಿದ್ದು, ಅವರದೇ ಆದ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿತ್ತು. ಕಿರುತೆರೆಯ ಧಾರಾವಾಹಿ ಹಾಗೂ ಸಿನಿಮಾಗಳಿಗಿಂತಲೂ ಬಿಗ್ ಬಾಸ್‌ನಲ್ಲಿ ತ್ರಿವಿಕ್ರಮ್ ತಮ್ಮನ್ನು ತಾವು ಸಾಬೀತುಪಡಿಸಿಕೊಂಡು ಅಪಾರ ಅಭಿಮಾನಿಗಳನ್ನು ಗಳಿಸಿದರು. ಬಿಗ್ ಬಾಸ್ ಮುಗಿಯುತ್ತಿದ್ದಂತೆ ತ್ರಿವಿಕ್ರಮ್‌ಗೆ ಚಿನ್ನದಂತಹ ಅವಕಾಶವೊಂದು ಅರಸಿ ಬಂದಿತ್ತು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲು ಸಜ್ಜಾಗುತ್ತಿದ್ದ ಮುದ್ದು ಸೊಸೆ ಧಾರಾವಾಹಿಗೆ ತ್ರಿವಿಕ್ರಮ್ ಅದಾಗಲೇ ನಾಯಕನಾಗಿ ಆಯ್ಕೆಯಾಗಿದ್ದರು. ಹೀಗಾಗಿ ಬಿಗ್ ಬಾಸ್‌ನಿಂದ ಹೊರಬಂದ ಬಳಿಕ ಟ್ರಿಪ್, ಟ್ರಾವೆಲ್ ಅಂತಾ ಸಮಯ ವ್ಯರ್ಥ ಮಾಡದೇ ತ್ರಿವಿಕ್ರಮ್ ಮುದ್ದು ಸೊಸೆ ಧಾರಾವಾಹಿ ಚಿತ್ರೀಕರಣಲ್ಲಿ ಬ್ಯೂಸಿಯಾಗಿ ಬಿಟ್ಟರು. ಸದ್ಯ ಮುದ್ದು ಸೊಸೆ ಧಾರಾವಾಹಿ ಪ್ರಸಾರ ಕಾಣುತ್ತಿದ್ದು, ತ್ರಿವಿಕ್ರಮ್ ಭದ್ರ ಲುಕ್‌ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.
ಸದ್ಯ ಕಿರುತೆರೆಯಲ್ಲಿ ಭದ್ರ ಹಾಗೂ ವಿದ್ಯಾ ಜೋಡಿ ಮೋಡಿ ಮಾಡುತ್ತಿದೆ. ಮುದ್ದು ಸೊಸೆ ಧಾರಾವಾಹಿಯಲ್ಲಿ ಭದ್ರ ಗೌಡ ಪಾತ್ರ ಮಾಡುತ್ತಿರುವ ತ್ರಿವಿಕ್ರಮ್ ಖಡಕ್ ಹಾಗೂ ಲವರ್ ಬಾಯ್ ಹಾಗೂ ಮುಗ್ಧ ಈ ಮೂರು ಲುಕ್‌ಗೆ ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದು, ತ್ರಿವಿಕ್ರಮ್ ನಟನೆಗೆ ಬಹುಪರಾಕ್ ಹೇಳಿದ್ದಾರೆ. ಬಹಳ ಸಮಯದ ಬ್ರೇಕ್ ನಂತರ ತ್ರಿವಿಕ್ರಮ್ ಧಾರಾವಾಹಿಯಲ್ಲಿ ನಾಯಕ ನಟನಾದರೂ ಕೂಡ ಜನ ಅವರನ್ನು ಒಪ್ಪಿಕೊಂಡಿದ್ದು, ಅವರ ವೃತ್ತಿ ಜೀವನ ಹೀಗೆ ಯಶಸ್ವಿಯಾಗಿರಲಿ ಎಂದು ಹಾರೈಸುತ್ತಿದ್ದಾರೆ. ನಟ ತ್ರಿವಿಕ್ರಮ್ ಕೂಡ ಬಿಗ್ ಬಾಸ್ ಮನೆಯಲ್ಲಿದ್ದಾಗ ಇದೇ ಯಶಸ್ಸನ್ನು ಬಯಸಿದ್ದರು.












Click it and Unblock the Notifications