'ಇಷ್ಟಪಟ್ಟು ಮದುವೆಯಾಗಿದ್ದೆ ಆದ್ರೆ ಹೆಂಡತಿ ಮನೆಯಲ್ಲಿ ಏನೂ ಬಿಡದೇ ದೋಚಿಕೊಂಡು ಹೋದಳು'
ಕನ್ನಡ ಕಿರುತೆರೆಯಲ್ಲಿ ಜನಪ್ರಿಯವಾದ ಪಾರು, ವಧು ಧಾರಾವಾಹಿಯಲ್ಲಿ ಹಾಗೂ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾದಲ್ಲಿ ನಟಿಸಿದ್ದ ನಟ ಶ್ರೀಧರ್ ಪರಿಸ್ಥಿತಿ ಚಿಂತಾಜನಕವಾಗಿದೆ. ಸದಾ ಲವಲವಿಕೆಯಿಂದ ಇರುತ್ತಿದ್ದ ನಟ ಈಗ ಆಸ್ಪತ್ರೆಯ ಹಾಸಿಗೆ ಹಿಡಿದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಶ್ರೀಧರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿಚಾರ ಹೊರಬಿದ್ದಿದ್ದು, ಅವರ ಫೋಟೋಗಳು ಕೂಡ ವೈರಲ್ ಆಗಿತ್ತು.
ನಟ ಶ್ರೀಧರ್ ಗುರುತೇ ಸಿಕದಷ್ಟು ಬದಲಾಗಿದ್ದು, ಅವರಿಗೆ ಏನಾಗಿತ್ತು? ಎಷ್ಟು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನುವ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಬಳಿಕ ಕಿರುತೆರೆಯ ಕೆಲ ನಟ ನಟಿಯರು ಅವರನ್ನು ಭೇಟಿಯಾಗಿ, ಅವರ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಅವರಿಗಾಗಿ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿಕೊಂಡರು. ಅನೇಕರು ಅವರ ಪರ ವಿಡಿಯೋಗಳನ್ನು ಮಾಡಿ ಮನವಿ ಮಾಡಿಕೊಂಡರು. ಅದಕ್ಕೂ ಮೊದಲು ವಾಟ್ಸಾಪ್ ಮೆಸೇಜ್ ಮೂಲಕ ಶ್ರೀಧರ್ ತಮಗೆ ಆದ ಪರಿಸ್ಥಿತಿಯನ್ನು ವಿವರಿಸಿ ಹಣಕ್ಕಾಗಿ ಮನವಿ ಮಾಡಿದ್ದರು.

ನಟ ಶ್ರೀಧರ್ ಮೊದಲು ಬೇಡಿಕೊಂಡಿದ್ದೇನು?
'ನಾನು ಶ್ರೀಧರ. ಇದ್ದಕ್ಕಿದ ಹಾಗೆ ಅನಾರೋಗ್ಯಕ್ಕೆ ತುತ್ತಾಗಿ ಬಹಳಷ್ಟು ಸಂಕಷ್ಟದಲ್ಲಿದ್ದೇನೆ. ಆಸ್ಪತ್ರೆಯ ಖರ್ಚನ್ನು ಭರಿಸಲಾಗದಷ್ಟು ತೊಂದರೆಯಾಗಿದೆ. ಹೆಬ್ಬಾಳದಲ್ಲಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಒಂದು ದಿನಕ್ಕೆ ಆಸ್ಪತ್ರೆಯ ಖರ್ಚು, ಮಾತ್ರೆಯ ಖರ್ಚು 10ರಿಂದ 15 ಸಾವಿರ ರೂಪಾಯಿ ಆಗುತ್ತಿದೆ. ಇದ್ದ ಉಳಿತಾಯದ ಹಣ, ಸಹಾಯದ ಹಣ ಎಲ್ಲವೂ ಮುಗಿದುಹೋಗಿದೆ. ದಯಮಾಡಿ ತಾವೆಲ್ಲರೂ ಕೈಲಾದ ಹಣದ ಸಹಾಯ ಮಾಡಬೇಕೆಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದೇನೆ. ನನ್ನನ್ನು ಬದುಕಿಸಲು ಪ್ರಯತ್ನಿಸಿ, ಕೈಲಾದಷ್ಟು ಹಣದ ಸಹಾಯ ಮಾಡಿ' ಎಂದಿರುವ ನಟ ಶ್ರೀಧರ್ ಗೂಗಲ್ ಪೇ ನಂಬರ್ ಹಾಗೂ ಬ್ಯಾಂಕಿನ ವಿವರಗಳನ್ನು ನೀಡಿದ್ದರು.
ಈ ಮೆಸೇಜ್ ವೈರಲ್ ಆಗುತ್ತಿದ್ದಂತೆ ಕಿರುತೆರೆಯ ಅನೇಕರು ಅವರ ಸಹಾಯಕ್ಕೆ ನಿಂತರು. ಈ ಮಧ್ಯೆ ನಟ ಶ್ರೀಧರ್ ನಾನು ಒಬ್ಬನೇ ಎಂದು ಅನೇಕ ಬಾರಿ ಹೇಳುತ್ತಿದ್ದರು. ಹೀಗಾಗಿ ಅವರು ಒಂಟಿ ಹೇಗೆ? ಮದುವೆ, ಹೆಂಡತಿ, ಮಕ್ಕಳು ಇಲ್ವಾ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡವು. ಇದೀಗ ಈ ಪ್ರಶ್ನೆಗೆ ಸ್ವತಃ ನಟ ಶ್ರೀಧರ್ ಅವರೇ ಉತ್ತರ ಕೊಟ್ಟಿದ್ದಾರೆ.
'ನನಗೆ ಮದುವೆ ಆಗಿತ್ತು. 11 ವರ್ಷ ಜೊತೆಯಲ್ಲಿ ಇದ್ದರು. ಆದರೆ ಅವರು ಸ್ವಾತಂತ್ರ್ಯ ಜೀವನ ಬೇಕು ಅಂತ ಹೇಳಿ ಹೋದರು. ಮಗ ಐದು ವರ್ಷ ಆಗುವವರೆಗೂ ಕಾದು ನನ್ನ ಜೊತೆನೇ ಇದ್ದು, ಎಲ್ಲಾ ಓದಿಕೊಂಡು, ಅವರ ಕೆಲಸ ಆದ ತಕ್ಷಣ ಹೊರಟು ಹೋದರು. ಒಂದು ದಿನ ನಾನು ಶೂಟಿಂಗ್ ಹೋಗುವ ಸಮಯದಲ್ಲಿ ಅದು ಕೊರೊನಾ ಸಮಯ ಆಗಿತ್ತು. ಮಗ ಮೊಬೈಲ್ ಅಲ್ಲಿ ಆನ್ಲೈನ್ ಅಲ್ಲಿ ಮಗ ಪಾಠ ಕೇಳುತ್ತಿದ್ದ. ನಾನು ಹೋಗಬೇಕು ಅಂತ ನಿನ್ನ ಮೊಬೈಲ್ ಕೊಡು ಅಂತ ಹೇಳಿದೆ. ಅದಕ್ಕೆ ಅವರು ಮಗನಿಗೋಸ್ಕರ ನಾನು ಕೆಲಸ ಬಿಡಲು ಆಗಲ್ಲ. ಅವನ ವಿದ್ಯಾಭ್ಯಾಸ ಹಾಳಾಗಿ ಹೋಗಲಿ ಅಂದರು'

'ಅದರಿಂದ ನನಗೆ ಸಿಟ್ಟು ಬಂತು ಮಗನ ವಿದ್ಯಾಭ್ಯಾಸದ ಬಗ್ಗೆ ಹಾಗೆಲ್ಲಾ ಮಾತನಾಡಿಬೇಡಿ ಅಂತಾ ಜೋರಾಗಿ ಬೈದೆ. ಪ್ರಪಂಚದಲ್ಲಿ, ನನ್ನ ಜೀವನದಲ್ಲಿ ಆತರದ ಹೆಂಗಸನ್ನು ನಾನು ನೋಡಿಲ್ಲ. ಮದುವೆಯಾಗುವ ಸಮಯದಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೆ. ನನ್ನ ಸಂಪಾದನೆ ಚೆನ್ನಾಗಿತ್ತು. ಐದು ನಿಮಿಷ ವ್ಯರ್ಥ ಮಾಡುತ್ತಿರಲಿಲ್ಲ ನಾನು. ಅಷ್ಟು ದುಡಿಯುತ್ತಿದ್ದೆ. ಆ ಸಮಯದಲ್ಲಿ ಅವರು ನನ್ನ ದುಡ್ಡಲ್ಲಿ ಜಾಗ ಎಲ್ಲಾ ತಗೊಂಡು ನನ್ನ ಹೆಸರಿಗೆ ಮಾಡಿಸ್ತೀನಿ ಅಂತ ಹೇಳಿ ಅವರ ಅಪ್ಪನ ಹೆಸರಿಗೆ ಮಾಡಿಸಿ, ಪಕ್ಕ ಪ್ಲಾನ್ ಮಾಡಿಕೊಂಡು ನಾನು ಶೂಟಿಂಗ್ ಹೋದ ಸಮಯದಲ್ಲಿ ಮನೆಬಿಟ್ಟು ಹೋದರು' ಎಂದರು.
'ಅವರ ಜೊತೆ ಮಗನನ್ನು ಕೂಡ ಕರೆದುಕೊಂಡು ಹೋದರು. ಮನೆಯಲ್ಲಿರುವುದನೆಲ್ಲಾ ತೆಗೆದುಕೊಂಡು, ಗ್ಯಾಸ್ ಸ್ಟವ್ ಕೂಡ ಬಿಡದೇ ಎತ್ತಿಕೊಂಡು ಹೋದಳು. ಮೊದಲೇ ಗೊತ್ತಿತ್ತು ನನಗೆ ಹೋಗ್ತಾರೆ ಅಂತ. ಹೇಳಿದ್ದರೂ ಕೂಡ. ಆದರೆ ನಾನು ಅಷ್ಟು ತಲೆಗೆ ಹಾಕಿಕೊಳ್ಳಲಿಲ್ಲ. ಅವರನ್ನು ತುಂಬಾ ಇಷ್ಟಪಟ್ಟು ಮದುವೆಯಾಗಿದ್ದೆ. ಆದರೆ ಅವರು ನನ್ನ ಹಣವನೆಲ್ಲಾ ಬಳಸಿಕೊಂಡು ಕೊನೆಗೆ ಬಿಟ್ಟು ಹೋದರು' ಎಂದು ಹೇಳಿದರು.
'ಇನ್ನು ಯಾರಿಗೋ ಸ್ವಲ್ಪ ದುಡ್ಡು ಕೊಟ್ಟಿದ್ದೆ ಅವರು ಕೂಡ ಕೊರೊನಾ ಸಮಯದಲ್ಲಿ ಹಣ ವಾಪಸ್ ಕೊಡದೇ ಓಡಿ ಹೋದರು. ಆ ಸಮಯದಲ್ಲಿ ತುಂಬಾ ಕಷ್ಟ ಆಯ್ತು. ಧಾರಾವಾಹಿಗಳೆಲ್ಲಾ ನಿಂತು ಹೋಗಿದ್ದವು. 20, 22 ವರ್ಷ ಇದ್ದಾಗ ಕಲಾವಿದ ಆಗಬೇಕು ಅಂತಾ ಮನೆಯಿಂದ ಹೊರಗೆ ಬಂದೆ. ಈ ಮತ್ತೆ ಅಮ್ಮ, ತಮ್ಮಂದಿರು ನನ್ನ ನೋಡಿಕೊಳ್ಳಲು ಬಂದಿದ್ದಾರೆ. ಮೂವತ್ತು ವರ್ಷ ಆದ ಮೇಲೆ ಈಗ ನನ್ನ ನೋಡಿಕೊಳ್ಳಲು ಅವರೇ ಬಂದರು. ಇದನೆಲ್ಲಾ ನಾವು ಯಾರೂ ಹತ್ತಿರನೂ ಹೇಳಿಕೊಳ್ಳಲು ಆಗುವುದಿಲ್ಲ' ಎಂದರು.
ನಾನು ಬದುಕಬೇಕು ಅಂಗಲಾಚಿದ ಶ್ರೀಧರ್
ಇನ್ನು ನಟ ಶ್ರೀಧರ್ ನಾನು ಬದುಕಬೇಕು ಮೊದಲಿನಂತಾಗಬೇಕು ಎನ್ನುವ ಆಡಿಯೋ ಎಂತವರ ಮನಸ್ಸನ್ನು ಕರಗಿಸುವಂತಿದೆ. ನನಗೆ ಚಿಕಿತ್ಸೆ ನಡೆಯುತ್ತಿದೆ, ಸಂಪೂರ್ಣ ದೇಹಕ್ಕೆ ಇನ್ಪೆಕ್ಷನ್ ಆಗಿದೆ, ಅಲ್ಸರ್ ಆಗಿದೆ, ನಡೆಯೋದಕ್ಕೂ ಕೂಡ ಆಗುತ್ತಿಲ್ಲ. ಬದುಕು ತುಂಬಾ ಕಷ್ಟ ಅನ್ನಿಸುತ್ತಿದೆ. ಆದರೆ ನಾನು ಬದುಕಬೇಕು. ಮೊದಲಿನಿಂತೆ ಆಗಬೇಕು. ದುಡಿಯಬೇಕು. ಬದುಕಿ ಮೊದಲಿನಂತೆ ಆಗಬೇಕು. ನನಗೆ ಯಾವ ದುರಭ್ಯಾಸ ಇಲ್ಲ. ಆದರೂ ನನಗೆ ಯಾಕೆ ಈ ರೀತಿ ಆಗಿದೆ.
ನಟನೆಯ ಜೊತೆ ನಾನು ಇಡ್ಲಿ, ದೋಸೆ, ವಡೆ ಮಾರುತ್ತಿದ್ದೆ. ಆದರೆ ಈಗ ಹೀಗಾಗಿದೆ. ಹಲವು ತಿಂಗಳಿಂದ ಮನೆಯ ಬಾಡಿಗೆಯನ್ನು ಕೂಡ ಕಟ್ಟಿಲ್ಲ. ದಿನಕ್ಕೆ ಹತ್ತು ಹನ್ನೆರಡು ಸಾವಿರ ಖರ್ಚಾಗುತ್ತಿದೆ, ಈಗಾಗಲೇ ನನ್ನ ಸ್ನೇಹಿತರು ಬಂದು ಮಾತನಾಡಿಸಿಕೊಂಡು ಹೋಗಿದ್ದಾರೆ. ಆರ್ಥಿಕ ಸಹಾಯ ಕೂಡ ಮಾಡಿದ್ದಾರೆ. ನ್ನ ಮುಂದಿನ ಜೀವನ ಹೇಗೆ' ಎಂದು ನಟ ಶ್ರೀಧರ್ ನೋವು ತೋಡಿಕೊಂಡಿದ್ದರು.












Click it and Unblock the Notifications