ದೈವ ಪವರ್‌ಫುಲ್ ಆಗಿದ್ರೆ ರಕ್ತಕಾರಿ ಯಾಕೆ ಸಾಯಿಸಬೇಕು? ಕಾಂತಾರ ಘಟನೆಯ ಬಗ್ಗೆ ನಟ ಕಿಶೋರ್ ಹೇಳಿದ್ದೇನು?
ರಿಷಬ್ ಶೆಟ್ಟಿ ಅವರು ನಿರ್ದೇಶಿಸಿ ನಟಿಸಿದ್ದ "ಕಾಂತಾರ" ಬಹುಭಾಷೆಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. ಇನ್ನು ಇದೇ ಸಿನಿಮಾದಲ್ಲಿ ನಟಿಸಿದ್ದ ಬಹುಮುಖ ಪ್ರತಿಭೆ ನಟ ಕಿಶೋರ್ ಕುಮಾರ್ ಅವರು ಸಿನಿಮಾ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಕಿಶೋರ್ ಅರಣ್ಯಾಧಿಕಾರಿ ಪಾತ್ರ ನಿರ್ವಹಿಸಿದ್ದರು. ನಂತರ ಸಿನಿಮಾದ ಹೈಲೈಟ್ ಆದಂತಹ ದೈವದ ಬಗ್ಗೆ ಕಿಶೋರ್ ಆಡಿದ್ದ ಮಾತುಗಳು ವಿವಾದ ಸೃಷ್ಟಿಸಿತ್ತು. ಈ ಬಗ್ಗೆ ಅವರು ಇತ್ತೀಚಿನ ಸಂದರ್ಶನದಲ್ಲಿ ಮತ್ತೆ ಮಾತನಾಡಿದ್ದಾರೆ. "ದೈವ ಪವರ್‌ಫುಲ್ ಆಗಿದ್ರೆ, ರಕ್ತಕಾರಿ ಯಾಕೆ ಸಾಯಿಸಬೇಕು?" ಎಂದು ಕಿಶೋರ್ ಕೇಳಿದ್ದಾರೆ. ಕಾಂತಾರ ಸಿನಿಮಾ ಬಳಿಕ ಆದ ಘಟನೆ ಬಗ್ಗೆ ನಟ ಕಿಶೋರ್ ಮಾತನಾಡಿದ್ದಾರೆ.
ಕಾಂತಾರ ಸಿನಿಮಾ ಬಗ್ಗೆ ಅಸಮಾಧಾನ ಹೊರಹಾಕಿದ್ದ ಕಿಶೋರ್, 'ತಪ್ಪು ತಿಳುವಳಿಕೆಗಳಿಗೆ ಸಿನಿಮಾಗಳು ಕಾರಣವಾಗಬಾರದು, ಕಾಂತಾರ ಸಿನಿಮಾದ ಉದ್ದೇಶ ಕೂಡ ಅದಲ್ಲ, ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ದೈವ ಬಂದು ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಳ್ಳುತ್ತೆ. ಅದನ್ನ ನಾವು ತೆಗೆದುಕೊಳ್ಳಬೇಕಿತ್ತೇ ಹೊರತು, ಜನರನ್ನ ಡಿವೈಡ್ ಮಾಡಿ ಹೊಡೆದಾಡಿಕೊಳ್ಳುವಂತೆ ಮಾಡುವುದಲ್ಲ. ಅಂತಹ ಕೆಟ್ಟ ರಾಜಕೀಯಕ್ಕೆ ಆಹಾರ ಆಗಬಾರದು. ಅದರ ವಿರುದ್ಧ ನಾವು ಮಾತನಾಡಲೇಬೇಕು. ಅದು ನನ್ನ ಹೊಣೆ, ತಪ್ಪು ಕಲ್ಪನೆ ಬಂದಾಗ ನಾನು ಮಾತನಾಡಿದೆ' ಎಂದಿದ್ದರು.

'ಕೊರಗಜ್ಜನ ಹುಂಡಿಗೆ ಕಾಂಡೋಮ್..!'
ಈಗ ಮತ್ತೊಮ್ಮೆ ಅದೇ ವಿಚಾರದ ಬಗ್ಗೆ ಕಿಶೋರ್ ಮಾತನಾಡಿದ್ದಾರೆ. 'ರಿಷಬ್ ಒಬ್ಬ ಒಳ್ಳೆಯ ಫಿಲ್ಮ್ ಮೇಕರ್. ಕಾಂತಾರ ಚಾಪ್ಟರ್ ಒನ್ ಹೇಗಿರಬಹುದು ಎನ್ನುವ ಕುತೂಹಲವೂ ಇದೆ. ಫಿಲ್ಮ್ ಮೇಕರ್‌ಗಳು ನಮ್ಮ ಉದ್ದೇಶ ಅದಲ್ಲ ಎಂದು ಕ್ಲಾರಿಟಿ ಕೊಡಬೇಕು. ನಾನು ಆ ಉದ್ದೇಶದಿಂದಲೇ ಮಾತನಾಡಿದೆ. ಅದನ್ನ ಇಟ್ಟುಕೊಂಡು ಯಾರೋ ಮುಸ್ಲಿಂ ಹುಡುಗ ಅಂತೆ, ಕೊರಗಜ್ಜನ ಹುಂಡಿಗೆ ಕಾಂಡೋಮ್ ಹಾಕಿದನಂತೆ. ಅವನು ಇದೇ ತರ ರಕ್ತಕಾರಿ ಸತ್ತು ಹೋದನಂತೆ ಅಂತೆಲ್ಲ ಕಥೆಗಳು ಹುಟ್ಟಿಕೊಂಡವು. ಅದಕ್ಕೆ ಮಿಲಿಯನ್‌ಗಟ್ಟಲೆ ವೀಕ್ಷಣೆಗಳು ಬಂದವು. ಅಂತಹ ಎರಡು ವಿಡಿಯೋಗಳಿಗೂ ಮಿಲಿಯನ್‌ಗಟ್ಟಲೆ ವೀಕ್ಷಣೆ ಬಂದಿದ್ದವು. ಅದನ್ನ ಕೋಟ್ಯಂತರ ಜನ ನೋಡ್ತಾರೆ, ಅದನ್ನೇ ನಿಜ ಅಂತ ನಂಬುತ್ತಾರೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
'ಕಾಂತಾರ ಸಿನಿಮಾ ಬಂದ ನಂತರ, ಒಬ್ಬ ರಕ್ತಕಾರಿ ಸತ್ತು ಹೋದನಂತೆ, ಕಾಂತಾರದ ದೈವ ನುಡಿದ ಭವಿಷ್ಯ ಸತ್ಯ ಆಯ್ತು ಅಂತೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಬಂತು. ಅದು ಸುಳ್ಳು ಸುದ್ದಿ, ಅದು ಧಾರ್ಮಿಕವಾಗಿ ಸೆಳೆಯಲು ಸೃಷ್ಟಿಸಿದಂತಹ ಸುದ್ದಿ. ಮುಸ್ಲಿಮರನ್ನ ಟಾರ್ಗೆಟ್ ಮಾಡೋಕೆ ಸೃಷ್ಟಿಸಿದ್ದು, ಅದಕ್ಕೆ ಸಿನಿಮಾವನ್ನ ಕೂಡ ಬಳಸಿಕೊಳ್ಳುತ್ತಿದ್ದಾರೆ. ಕಾಂತಾರ ಸಿನಿಮಾ ಚೆನ್ನಾಗಿ ಪ್ರದರ್ಶನ ಕಂಡಿದ್ದರಿಂದ ಜನ ಅದನ್ನು ಇನ್ನೂ ಹೆಚ್ಚಾಗಿ ನೋಡಲು ಶುರು ಮಾಡಿದ್ದಾರೆ. ಅದು ನಿಜವಾಗಿಯೂ ತಪ್ಪು. ಸಿನಿಮಾಗೆ ಒಂದು ಟೂಲ್ ಅಷ್ಟೇ' ಎಂದಿದ್ದಾರೆ ಕಿಶೋರ್.

'ದೆವ್ವ, ದೈವ ಕಥೆಯ ಟೂಲ್ ಅಷ್ಟೇ'
'ದೈವ ಪವರ್‌ಫುಲ್ ಆಗಿದ್ರೆ ರಕ್ತಕಾರಿ ಯಾಕೆ ಸಾಯಿಸಬೇಕಿತ್ತು? ಅವನ ಮನಸ್ಸು ಬದಲಿಸಬಹುದಿತ್ತು. ಆಗ ಅವನೂ ಭಕ್ತ ಆಗಿಬಿಡುತ್ತಿದ್ದ. ಅದರಿಂದ ದೈವಕ್ಕೇ ಅನುಕೂಲ ಆಗುತ್ತಿತ್ತು ಅಲ್ವಾ? ಹಾಗಾಗಿ ದೈವವನ್ನ ನಾವು ಕಥೆ ಹೇಳೋಕೆ ಟೂಲ್ ಆಗಿ ಬಳಸುತ್ತೇವೆ ಎಂದಿದ್ದಾರೆ. ನನಗೆ ದೇವರು, ದೆವ್ವದ ಮೇಲೆ ನಂಬಿಕೆ ಇಲ್ಲ. ಆದರೂ ನಾನು ದೇವರ ಸಿನಿಮಾನೂ ಮಾಡ್ತೀನಿ, ದೆವ್ವದ ಸಿನಿಮಾನೂ ಮಾಡ್ತೀನಿ. ಯಾಕಂದ್ರೆ ಅದೆಲ್ಲ ಕಥೆಯನ್ನ ಹೇಳೋಕೆ ಇರುವ ಒಂದು ಸಲಕರಣೆ' ಎಂದಿದ್ದಾರೆ ಕಿಶೋರ್.












Click it and Unblock the Notifications