'ಕಾಟೇರ'ನಿಗೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ; 'ಬಾಸ್ ಇದ್ದಿದ್ರೆ ಹಬ್ಬ..' ಎಂದ ಫ್ಯಾನ್ಸ್!
ನಟ ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದಾರೆ. ಇತ್ತ SIIMA ಅವಾರ್ಡ್ಸ್‌ನಲ್ಲಿ ನಟ ದರ್ಶನ್ ಅಭಿನಯಿಸಿದ್ದ ʼಕಾಟೇರʼ ಸಿನಿಮಾ ʼಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿʼ ಸೇರಿದಂತೆ ಹಲವು ವಿಭಾಗಗಳಲ್ಲಿ ವಿವಿಧ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಮತ್ತೊಂದೆಡೆ ʼಇದನ್ನು ಸಂಭ್ರಮಿಸಲು ನಮ್ಮ ಬಾಸ್ ನಮ್ಮ ಮುಂದೆ ಇಲ್ವಲ್ಲʼ ಎಂದು ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಬೇಸರ ಹಂಚಿಕೊಂಡಿದ್ದಾರೆ.
2024ನೇ ಸಾಲಿನ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (SIIMA) ಪ್ರಧಾನ ಕಾರ್ಯಕ್ರಮ ನಿನ್ನೆ ದುಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ನಿನ್ನೆ ಮೊದಲ ದಿನವೇ ಕನ್ನಡ ಸಿನಿಮಾರಂಗದ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಈ ಪೈಕಿ ನಟ ದರ್ಶನ್ ಅಭಿಯಿಸಿದ್ದ ʼಕಾಟೇರʼ ಸಿನಿಮಾ ಕೂಡ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ʼಕಾಟೇರʼ ಸಿನಿಮಾ ಬರೋಬ್ಬರಿ ನಾಲ್ಕು ವಿಭಾಗಗಳಲ್ಲಿ ಸೈಮಾ ಪ್ರಶಸ್ತಿಗೆ ಭಾಜನವಾಗಿದೆ. ಈ ಸಿನಿಮಾಗೆ ʼಅತ್ಯುತ್ತಮ ಕನ್ನಡ ಸಿನಿಮಾʼ ಪ್ರಶಸ್ತಿ ಸಿಕ್ಕಿದೆ. ಇನ್ನು ಈ ಚಿತ್ರದಲ್ಲಿ ಚೊಚ್ಚಲ ನಟನೆಗೆ ಆರಾಧನಾ ಅವರಿಗೆ ʼಅತ್ಯುತ್ತಮ ಹೊಸ ನಟಿ ಪ್ರಶಸ್ತಿʼ ಸಿಕ್ಕಿದೆ. ಮೊದಲ ಸಿನಿಮಾದಲ್ಲೇ ಆರಾಧಾನಾ ಪ್ರಶಸ್ತಿ ಕೈಗೆತ್ತಿಕೊಂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರಿಗೆ ʼಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿʼ ಹಾಗೂ ಮಂಗ್ಲಿ ಅವರಿಗೆ ʼಅತ್ಯುತ್ತಮ ಗಾಯಕಿʼ ಪ್ರಶಸ್ತಿಯು ಕಾಟೇರ ಸಿನಿಮಾದಿಂದ ಸಿಕ್ಕಿದೆ.
ಈ ಪೈಕಿ ಕಾಟೇರ ತಂಡದ ಎಲ್ಲರೂ ನಿನ್ನೆ ದುಬೈಗೆ ತೆರಳಿ ತಮ್ಮ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಆದರೆ, ದರ್ಶನ್ ಅವರು ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿ ಇರುವುದರಿಂದ ಈ ಬಾರಿಯ ಸೈಮಾ ಸಮಾರಂಭದಲ್ಲಿ ದರ್ಶನ್ ಅವರ ಅನುಪಸ್ಥಿತಿ ಇತ್ತು. ಅಲ್ಲದೆ ಕಾಟೇರ ಸಿನಿಮಾ ನಿರ್ಮಾಣ ಮಾಡಿದ್ದ ರಾಕ್‌ಲೈನ್ ವೆಂಕಟೇಶ್ ಅವರು ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಸ್ವೀಕರಿಸಿದರು.

ಪ್ರಶಸ್ತಿ ಸಿಕ್ಕ ಬೆನ್ನಲ್ಲೇ ಸೋಶಿಯಲ್ ಮೀಡಿಯಾಗಳಲ್ಲಿ ದರ್ಶನ್ ಅವರ ಅಭಿಮಾನಿಗಳು ಈ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ. ಕೆಲವರು ಇದೇ ಫೋಟೋಗಳಿಗೆ ಬಾಸ್ ನೀವು ಇರಬೇಕಿತ್ತು ಎಂದು ಸಂಕಟವನ್ನೂ ಹೊರಹಾಕಿದ್ದಾರೆ. ಇನ್ನು ಕಾಟೇರ ಸಿನಿಮಾಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇನ್ನೂ ಕೆಲವರು ಕಾಟೇರ ಸಿನಿಮಾಗೆ ಪ್ರಶಸ್ತಿ ಸಿಕ್ಕಿರುವುದಕ್ಕೆ ಅಭಿನಂದನೆಗಳ ಸುರಿಮಳೆ ಹರಿಸಿದ್ದಾರೆ.
ʼಈ ಟೈಮಲ್ಲಿ ಬಾಸ್ ಇದ್ದಿದ್ರೆ ಇದನ್ನು ದೊಡ್ಡ ಹಬ್ಬಾನೇ ಮಾಡ್ತಿದ್ವಿ ಎಂದೆಲ್ಲ ಸ್ಟೇಟಸ್ ಹಾಕಿಕೊಂಡು ಸಂಭ್ರಮ ಹಂಚಿಕೊಂಡಿದ್ದಾರೆ. ಎಲ್ಲ ಸರಿ ಇದ್ದಿದ್ರೆ ನಮ್ಮ ಬಾಸ್ ದುಬೈ ಸ್ಟೇಜಲ್ಲಿ ಈ ಅವಾರ್ಡ್ ತಗೋತಿದ್ರು. ಅದನ್ನು ನಾವು ನೋಡಿ ಇನ್ನೂ ಖುಷಿ ಪಡ್ತಿದ್ವಿ. ಆದ್ರೆ, ಅವರು ಜೈಲಿನಲ್ಲಿದ್ದಾರೆ. ಈ ವಿಚಾರ ಕೂಡ ಅವರ ಕಿವಿಗೆ ಬಿದ್ದಿದ್ಯೋ ಇಲ್ವೋ?ʼ ಎಂದೆಲ್ಲ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ಸೈಮಾ ಪ್ರಶಸ್ತಿಗಳ ಬಗ್ಗೆ ಮಾತನಾಡಿದ್ದ ನಟ ದರ್ಶನ್, ಆ ಕಾರ್ಯಕ್ರಮಗಳಲ್ಲಿ ಕನ್ನಡಿಗರಿಗೆ ಮೊದಲ ಸಾಲಿನಲ್ಲಿ ಆದ್ಯತೆ ಕೊಡಬೇಕು. ಅಂತಹ ದಿನ ಬಂದಾಗ ನಾನು ಕಂಡಿತವಾಗಿಯೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳಿಗೆ ಬರುತ್ತೇನೆ ಎಂದು ಬೇಡಿಕೆ ಇಟ್ಟಿದ್ದರು. ಬಳಿಕ ನಮ್ಮ ಬೆಂಗಳೂರಿನಲ್ಲೇ ಕಳೆದ ವರ್ಷ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ನಟ ದರ್ಶನ್ ಕೂಡ ಹಾಜರಾಗಿದ್ದರು.












Click it and Unblock the Notifications