Darshan Thoogudeepa: ಡೆಡ್‌ಲೈನ್ ಮುಗಿದರೂ ಮೈಸೂರಿನಲ್ಲೇ ಇರಲು ನಟ ದರ್ಶನ್ ಹೊಸ ಪ್ಲ್ಯಾನ್
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ತೂಗುದೀಪ ಅವರು ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದಾರೆ. ಜಾಮೀನು ನೀಡುವಾಗ ದರ್ಶನ್ ಅವರಿಗೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಆದರೂ ಕೋರ್ಟ್‌ನಿಂದ ಅನುಮತಿ ಪಡೆದೇ ದರ್ಶನ್ ಅವರು ಮೈಸೂರಿಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮೈಸೂರಿನಲ್ಲಿ ಕೆಲಕಾಲ ವಿಶ್ರಾಂತಿ ಪಡೆಯಲು ಅನುಮತಿ ನೀಡುವಂತೆ ದರ್ಶನ್ ಕೋರಿದ್ದರು. ಇದಕ್ಕೆ ಕೋರ್ಟ್ ಕೂಡ ಒಪ್ಪಿಗೆ ನೀಡಿತ್ತು.
ಅದರಂತೆ ದರ್ಶನ್ ಅವರಿಗೆ ಡಿಸೆಂಬರ್ 5ರವರೆಗೆ ಮೈಸೂರಿನಲ್ಲಿರಲು ಕೋರ್ಟ್ ಸಮ್ಮತಿಸಿತ್ತು. ಹಾಗಾಗಿ ನಿನ್ನೆಯೇ ದರ್ಶನ್ ಅವರಿಗೆ ನೀಡಲಾಗಿದ್ದ ಗಡುವು ಮುಕ್ತಾಯವಾಗಿದೆ. ನಿಯಮದ ಪ್ರಕಾರ ದರ್ಶನ್ ಅವರು ಇಂದು ಮೈಸೂರನ್ನು ತೊರೆಯಬೇಕು. ಆದರೆ, ದರ್ಶನ್ ಅವರು ಇನ್ನೂ ಕೆಲದಿನಗಳ ಕಾಲ ಮೈಸೂರಿನಲ್ಲೇ ಇರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಕೋರ್ಟ್‌ನಿಂದ ಗಡುವು ವಿಸ್ತರಿಸಲು ಮತ್ತೆ ಅನುಮತಿ ಕೋರಲು ಮುಂದಾಗಿದ್ದಾರೆ ಎನ್ನಲಾಗಿದೆ.

ಸದ್ಯ ದರ್ಶನ್ ಅವರಿಗೆ ಬೆಂಗಳೂರಿಗಿಂತ ಮೈಸೂರಿನಲ್ಲೇ ಇರಲು ಇಷ್ಟ ಎನ್ನಲಾಗಿದ್ದು, ಅಲ್ಲಿನ ತಮ್ಮ ಒಡೆತನದ ಫಾರ್ಮ್‌ಹೌಸ್‌ನಲ್ಲೇ ಇನ್ನೂ ಕೆಲದಿನಗಳ ಕಾಲ ವಿಶ್ರಾಂತಿ ಪಡೆಯಲು ಬಯಸಿದ್ದಾರೆ. ಮೈಸೂರಿನಲ್ಲಿ ಯಾವುದೇ ಜಂಜಾಟವಿಲ್ಲದೆ ಇರಬಹುದು ಎಂಬ ಕಾರಣಕ್ಕೆ ದರ್ಶನ್ ಅವರು ಗಡುವು ವಿಸ್ತರಿಸುವಂತೆ ಕೋರ್ಟ್‌ಗೆ ಮನವಿ ಸಲ್ಲಿಸಲು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇಂದೇ ಅವರು ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದ್ದು, ಒಂದು ವೇಳೆ ಕೋರ್ಟ್ ಒಪ್ಪಿದರೆ ದರ್ಶನ್ ಮತ್ತೆ ಮೈಸೂರಿನಲ್ಲೇ ಉಳಿದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದರ್ಶನ್ ಅವರು ಕೆಲ ವಾರಗಳ ಕಾಲ ಅಲ್ಲಿಯೇ ಇದ್ದರು. ಜಾಮೀನು ಸಿಕ್ಕ ಬಳಿಕ ದರ್ಶನ್ ಅವರು ಮೈಸೂರಿಗೆ ತೆರಳಲು ಅನುಮತಿ ಪಡೆದಿದ್ದರು. ಬಳಿಕ ಅವರು ಬೆಂಗಳೂರಿನಿಂದ ಮೈಸೂರಿನ ತಮ್ಮ ಫಾರ್ಮ್‌ಹೌಸ್‌ಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಫಾರ್ಮ್‌ಹೌಸ್‌ನಲ್ಲಿ ದರ್ಶನ್ ಅವರು ತಮ್ಮಿಷ್ಟದ ವಾತಾವರಣದಲ್ಲಿ ರೆಸ್ಟ್ ಮಾಡುತ್ತಿದ್ದು, ಕೊಲೆ ಕೇಸ್‌ನ ತಲೆನೋವಿನಿಂದ ನೆಮ್ಮದಿಯಾಗಿದ್ದಾರೆ. ಫಾರ್ಮ್‌ಹೌಸ್‌ನಲ್ಲಿ ತಾವು ಸಾಕಿರುವ ಪ್ರಾಣಿಗಳೊಂದಿಗೆ ಅವರು ಕಾಲಕಳೆಯುತ್ತಾ ಕೂಲ್ ಆಗಿದ್ದಾರೆ. ಸದ್ಯ ಕೋರ್ಟ್ ನಿನ್ನೆವರೆಗೆ ಮಾತ್ರವೇ ದರ್ಶನ್ ಅವರು ಮೈಸೂರಿನಲ್ಲಿರಲು ಅನುಮತಿಸಿತ್ತು.
ಗಡುವು ಮುಗಿದ ಕಾರಣ ದರ್ಶನ್ ಅವರಿಗೆ ಮೈಸೂರು ತೊರೆಯಲು ಮನಸ್ಸೇ ಇಲ್ಲ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದ ಅವರ ಇನ್ನೂ ಕೆಲಕಾಲ ಮೈಸೂರಿನ ಫಾರ್ಮ್‌ಹೌಸ್‌ನಲ್ಲೇ ಇರಲು ನಿರ್ಧರಿಸಿದ್ದು, ಇದಕ್ಕಾಗಿ ಕೋರ್ಟ್‌ಗೆ ಗಡುವು ವಿಸ್ತರಿಸುವಂತೆ ಕೇಳಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಅವರು ಮೈಸೂರಿನಲ್ಲೇ ಚಿಕಿತ್ಸೆ ಪಡೆಯುತ್ತಿರುವ ಕಾರಣ, ಇದೇ ಕಾರಣ ನೀಡಿ ಮೈಸೂರಿನಲ್ಲೇ ಚಿಕಿತ್ಸೆ ಮುಂದುವರಿಸುವುದಾಗಿಯೂ ಕೋರ್ಟ್‌ಗೆ ತಿಳಿಸಲಿದ್ದಾರೆ ಎನ್ನಲಾಗಿದೆ. ಕೋರ್ಟ್ ಇದಕ್ಕೆ ಅನುಮತಿ ನೀಡಲಿಲ್ಲವಾದರೆ ದರ್ಶನ್ ಅನಿವಾರ್ಯವಾಗಿ ಬೆಂಗಳೂರಿಗೆ ವಾಪಸ್ ಆಗಬೇಕಾಗಿದೆ.












Click it and Unblock the Notifications