Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣ: ಜಾಮೀನು ಕೋರಿ ಸುಪ್ರೀಂಕೋರ್ಟ್‌ಗೆ ನಟ ದರ್ಶನ್ ಅರ್ಜಿ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಈಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅವರು, ತಮಗೆ ಜಾಮೀನು ಮಂಜೂರು ಮಾಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಚಾರಣೆ ವಿಳಂಬವಾಗುತ್ತಿದೆ ಎಂದು ಆರೋಪ
ದರ್ಶನ್ ಅವರು ಕಳೆದ ವಾರ ಅಂದರೆ, ಏಪ್ರಿಲ್ 14ರಂದೇ ಸುಪ್ರೀಂಕೋರ್ಟ್‌ಗೆ ಈ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಮುಖವಾಗಿ, ಪ್ರಕರಣದ ಸಾಕ್ಷ್ಯ ವಿಚಾರಣೆ ಪ್ರಕ್ರಿಯೆಯು ವಿಳಂಬವಾಗುತ್ತಿದೆ ಎಂಬ ಕಾರಣವನ್ನು ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ವಿಚಾರಣೆ ತಡವಾಗುತ್ತಿರುವುದರಿಂದ ತಮ್ಮನ್ನು ಜೈಲಿನಲ್ಲಿ ಇಟ್ಟಿರುವುದು ಸರಿಯಲ್ಲ ಎಂಬ ವಾದವನ್ನು ದರ್ಶನ್ ಪರ ವಕೀಲರು ಮಂಡಿಸಲಿದ್ದು, ಈ ಅರ್ಜಿಯ ವಿಚಾರಣೆಯು ಮುಂದಿನ ವಾರ ಸುಪ್ರೀಂಕೋರ್ಟ್‌ನಲ್ಲಿ ನಡೆಯುವ ಸಾಧ್ಯತೆ ಇದೆ.

ಮೊದಲಿಗೆ ಈ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ದರ್ಶನ್ ಆರಂಭದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಮತ್ತು ನಂತರ ಬಳ್ಳಾರಿ ಜೈಲಿನಲ್ಲಿ ಹಲವು ತಿಂಗಳುಗಳ ಕಾಲ ಕಾಲ ಕಳೆದಿದ್ದರು. ಈ ಹಿಂದೆ ಕರ್ನಾಟಕ ಹೈಕೋರ್ಟ್ ಅವರಿಗೆ ವೈದ್ಯಕೀಯ ಕಾರಣಕ್ಕಾಗಿ ಜಾಮೀನು ನೀಡಿತ್ತು. ಇದರಿಂದಾಗಿ ಅವರು ಕೆಲ ತಿಂಗಳುಗಳ ಕಾಲ ಜೈಲಿನಿಂದ ಹೊರಗಿದ್ದರು.
ಆದರೆ, ನಂತರದ ಬೆಳವಣಿಗೆಯಲ್ಲಿ ಸುಪ್ರೀಂಕೋರ್ಟ್ ಈ ಪ್ರಕರಣದ ಎಲ್ಲ ಆರೋಪಿಗಳ ಜಾಮೀನನ್ನು ರದ್ದುಗೊಳಿಸಿದ ಪರಿಣಾಮ ದರ್ಶನ್ ಅವರು ಮತ್ತೆ ಕಾನೂನು ಪ್ರಕ್ರಿಯೆಗೆ ಒಳಗಾಗಿ ಜೈಲಿಗೆ ವಾಪಸ್ ಆಗಬೇಕಾಯಿತು. ಸದ್ಯ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ.
ಪ್ರಕರಣದ ಹಿನ್ನೆಲೆ
ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವವರನ್ನು ಅಪಹರಿಸಿ ಬೆಂಗಳೂರಿನಲ್ಲಿ ಹತ್ಯೆ ಮಾಡಲಾದ ಪ್ರಕರಣದಲ್ಲಿ ದರ್ಶನ್ ಎರಡನೇ ಆರೋಪಿಯಾಗಿದ್ದಾರೆ. ಈ ಹತ್ಯೆಗೆ ನಟಿ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಕಳುಹಿಸಿದ್ದ ಅಶ್ಲೀಲ ಸಂದೇಶಗಳೇ ಕಾರಣ ಎಂದು ಆರೋಪಿಸಲಾಗಿದೆ. ಪ್ರಕರಣದ ತನಿಖೆ ಪೂರ್ಣಗೊಂಡು ಈಗಾಗಲೇ ದೋಷಾರೋಪ ಪಟ್ಟಿಯೂ ಸಲ್ಲಿಕೆಯಾಗಿದೆ. ಸುಪ್ರೀಂಕೋರ್ಟ್ ಈಗ ದರ್ಶನ್ ಅವರ ಈ ಅರ್ಜಿಯನ್ನು ಪುರಸ್ಕರಿಸಿ ಅವರಿಗೆ ರಿಲೀಫ್ ನೀಡುತ್ತದೆಯೇ ಎಂಬುದು ಇಡೀ ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿರುವ ಪ್ರಶ್ನೆ.
ಮುಂದಿನ ಹಂತವೇನು?
ನಿಗದಿತ ದಿನಾಂಕದಂದು ನ್ಯಾಯಪೀಠವು ದರ್ಶನ್ ಸಲ್ಲಿಸಿರುವ ಜಾಮೀನು ಅರ್ಜಿಯ ಪ್ರಾಥಮಿಕ ವಿಚಾರಣೆ ನಡೆಸುತ್ತದೆ. ಈ ಸಂದರ್ಭದಲ್ಲಿ ನಟ ದರ್ಶನ್ ಪರ ವಕೀಲರು, ವಿಚಾರಣೆ ವಿಳಂಬವಾಗುತ್ತಿರುವ ಬಗ್ಗೆ ಮತ್ತು ಜಾಮೀನು ನೀಡಲು ಇರುವ ಕಾರಣಗಳ ಬಗ್ಗೆ ವಾದ ಮಂಡಿಸಬಹುದು. ಅರ್ಜಿಯಲ್ಲಿ ಸಕಾರಣಗಳಿವೆ ಎಂದು ನ್ಯಾಯಾಲಯಕ್ಕೆ ಮನವರಿಕೆಯಾದರೆ, ಅದು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡುತ್ತದೆ. ಅರ್ಜಿಗೆ ಸಂಬಂಧಿಸಿದಂತೆ ಅವರ ಆಕ್ಷೇಪಣೆ ಅಥವಾ ಅಭಿಪ್ರಾಯವನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗುತ್ತದೆ. ತನಿಖಾ ಸಂಸ್ಥೆಯು ತನ್ನ ಅಫಿಡವಿಟ್ ಸಲ್ಲಿಸಿದ ನಂತರ, ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠವು ಜಾಮೀನು ನೀಡಬೇಕೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ಪ್ರಕಟಿಸುತ್ತದೆ.













Click it and Unblock the Notifications