ರಸ್ತೆ ಅಪಘಾತದಲ್ಲಿ ಖ್ಯಾತ ನಟ ಆಶಿಶ್ ವಿದ್ಯಾರ್ಥಿ ದಂಪತಿಗೆ ಗಂಭೀರ ಗಾಯ
ಬಹುಭಾಷಾ ಹಿರಿಯ ನಟ ಆಶಿಶ್ ವಿದ್ಯಾರ್ಥಿ (Ashish Vidyarthi) ಮತ್ತು ಅವರ ಪತ್ನಿ ರೂಪಾಲಿ ಬರುವಾ ಅವರು ಗುವಾಹಟಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಲ್ಲಿನ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಮೃಗಾಲಯ ರಸ್ತೆಯಲ್ಲಿ ಶುಕ್ರವಾರ ಈ ಘಟನೆ ಸಂಭವಿಸಿದೆ. ಆಶಿಶ್ ವಿದ್ಯಾರ್ಥಿ ಮತ್ತು ಪತ್ನಿ ಊಟದ ನಂತರ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಬೈಕ್ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಬಿದ್ದು ಗಾಯಗೊಂಡಿದ್ದಾರೆ.
ಗೀತಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ದಿ ಗುವಾಹಟಿ ಅಡ್ರೆಸ್ ಹೋಟೆಲ್ ಮುಂದೆ ಈ ಅಪಘಾತ ಸಂಭವಿಸಿದೆ. ಆ ಮೋಟಾರ್ ಸೈಕಲ್ ಚಾಂದ್ಮರಿ ಕಡೆಯಿಂದ ಅತಿ ವೇಗದಲ್ಲಿ ಬರುತ್ತಿತ್ತು ಎಂದು ವರದಿಯಾಗಿದೆ. ಡಿಕ್ಕಿ ಹೊಡೆದ ಪರಿಣಾಮ ನಟ ಮತ್ತು ಅವರ ಪತ್ನಿ ಗಾಯಗೊಂಡಿದ್ದು ಮಾತ್ರವಲ್ಲದೆ, ಬೈಕ್ ಸವಾರ ಕೂಡ ಗಂಭೀರವಾಗಿ ಗಾಯಗೊಂಡಿದ್ದ. ಅಪಘಾತದ ನಂತರ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ವಿಚಾರ ತಿಳಿದು ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಘಟನೆಯ ಒಂದು ದಿನದ ನಂತರ ಆಶಿಶ್ ವಿದ್ಯಾರ್ಥಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಮೂಲಕ ವಿವರ ಹಂಚಿಕೊಂಡಿದ್ದಾರೆ. ನಾವು ಸುರಕ್ಷಿತವಾಗಿದ್ದು, ಚೇತರಿಸಿಕೊಳ್ಳುತ್ತಿದ್ದೇವೆ. ಬೈಕ್ ಸವಾರನ ಬಗ್ಗೆ ಪೊಲೀಸರನ್ನು ಮಾಹಿತಿ ಕೇಳಿದ್ದೇನೆ ಮತ್ತು ಪ್ರಜ್ಞೆ ಕಳೆದುಕೊಂಡಿದ್ದ ಸವಾರ ಕೂಡ ಈಗ ಸಹಜ ಸ್ಥಿತಿಗೆ ಮರಳಿದ್ದಾನೆ ಎಂದಿದ್ದಾರೆ.
ವಿಡಿಯೋ ಮೂಲಕ ಸ್ಪಷ್ಟನೆ
ನಿಮಗೆಲ್ಲರಿಗೂ ವಿಚಾರ ತಿಳಿಸಲು ಬಯಸುತ್ತೇನೆ. ಏಕೆಂದರೆ ಅನೇಕ ಸುದ್ದಿ ವಾಹಿನಿಗಳಲ್ಲಿ ಎಲ್ಲ ರೀತಿಯ ವಿಷಯಗಳು ವರದಿಯಾಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ರೂಪಾಲಿ ಮತ್ತು ನಾನು ನಿನ್ನೆ ರಸ್ತೆ ದಾಟುತ್ತಿದ್ದಾಗ ನಮಗೆ ಬೈಕ್ ಡಿಕ್ಕಿ ಹೊಡೆಯಿತು. ನಾವಿಬ್ಬರೂ ಕ್ಷೇಮವಾಗಿದ್ದೇವೆ. ರೂಪಾಲಿ ಈಗ ನಿಗಾದಲ್ಲಿದ್ದಾರೆ, ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ನಾನೂ ಚೆನ್ನಾಗಿದ್ದೇನೆ, ನನಗೂ ಸಣ್ಣ ಗಾಯವಾಗಿದೆ ಅಷ್ಟೇ. ನಾನು ಸಂಪೂರ್ಣವಾಗಿ ಕ್ಷೇಮವಾಗಿದ್ದೇನೆ. ನಾನು ನಡೆಯುತ್ತಿದ್ದೇನೆ, ಮಾತನಾಡುತ್ತಿದ್ದೇನೆ, ನಿಂತಿದ್ದೇನೆ, ಎಲ್ಲವೂ ಸಾಮಾನ್ಯವಾಗಿದೆ ಎಂದು ಆಶಿಶ್ ವಿದ್ಯಾರ್ಥಿ ಘಟನೆ ವಿವರಿಸಿದ್ದಾರೆ.
ನಟ ತಮ್ಮ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಘಟನೆ ಬಗ್ಗೆ ತಪ್ಪು ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು. ನಮ್ಮ ಸುತ್ತಲೂ ಪ್ರೀತಿಪಾತ್ರರು ಇದ್ದಾರೆ. ಅಪೊಲೊ ವೈದೆಯಕೀಯ ತಂಡದಿಂದ ಅತ್ಯುತ್ತಮ ಆರೈಕೆ ಪಡೆಯುತ್ತಿದ್ದೇವೆ. ದಯವಿಟ್ಟು ಈ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ನಾವು ಕ್ಷೇಮವಾಗಿದ್ದೇವೆ ಎಂದು ಜನರಿಗೆ ತಿಳಿಸಿ. ನಿಮ್ಮ ಪ್ರಾರ್ಥನೆ, ಕಾಳಜಿಗೆ ಧನ್ಯವಾದಗಳು ಎಂದಿದ್ದಾರೆ.
ಆಶಿಶ್ ವಿದ್ಯಾರ್ಥಿ ಹಿಂದಿ, ತೆಲುಗು, ತಮಿಳು ಸೇರಿದಂತೆ 11 ಭಾಷೆಗಳಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ನಟನೆಯಿಂದಾಗಿ ಪ್ರಾದೇಶಿಕ ಚಿತ್ರರಂಗದಲ್ಲೂ ಪ್ರಭಾವ ಬೀರಿದ್ದಾರೆ. ಆಶಿಶ್ ವಿದ್ಯಾರ್ಥಿ ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ, ಮುಖ್ಯವಾಗಿ ಖಳನಾಯಕನಾಗಿ ಗುರುತಿಸಿಕೊಂಡಿದ್ದು, ಕೋಟಿಗೊಬ್ಬ ಸಿನಿಮಾ ಮೂಲಕ ಖ್ಯಾತಿ ಗಳಿಸಿದರು. ಪೋರ್ಕಿ (2010), ಶಿವಾಜಿನಗರ (2014), ಸಿದ್ಧಾರ್ಥ (2015), ಗರ್ಜನೆ (2014) ಸೇರಿದಂತೆ ವಿಭಿನ್ನ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.












Click it and Unblock the Notifications