ದರ್ಶನ್ ಕಾಣಲು ಸ್ಪೆಷಲ್ ಗೆಟಪ್‌ನಲ್ಲಿ ಬಂದ ಫ್ಯಾನ್, ಆಮೇಲೇನಾಯ್ತು?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ ಸದ್ಯ ಬಳ್ಳಾರಿ ಜೈಲಿನಲ್ಲಿದ್ದಾರೆ. ಹೀಗಾಗಿ ಜೈಲಿನ ಮುಂದೆ ಪ್ರತಿದಿನವೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇದು ಜೈಲು ಸಿಬ್ಬಂದಿಗೆ ದೊಡ್ಡ ತಲೆನೋವಾಗಿ ಬಿಟ್ಟಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಹೋಲಿಸಿದರೆ, ಬಳ್ಳಾರಿ ಜೈಲಿನಲ್ಲಿ ದರ್ಶನ್ ಜನರ ಕಣ್ಣಿಗೆ ಆಗಾಗ ಕಾಣಿಸಿಕೊಳ್ಳುತ್ತಾರೆ.
ಹಾಗಾಗಿ, ದರ್ಶನ್‌ರನ್ನ ನೋಡಬಹುದು ಎಂದು ಅಭಿಮಾನಿಗಳು ಬಳ್ಳಾರಿ ಜೈಲಿನ ಬಳಿ ಜಮಾಯಿಸುವುದು ಕಾಮನ್ ಆಗಿಬಿಟ್ಟಿದೆ. ಆದರೆ, ಅಭಿಮಾನಿಯೊಬ್ಬ ದರ್ಶನ್ ಅವರನ್ನು ನೋಡಲು ಒಳಗೆ ಹೋಗಬಹುದು ಎಂದು ಮಾಸ್ಟರ್‌ಪ್ಲ್ಯಾನ್ ಮಾಡಿಕೊಂಡು ಬಂದಿದ್ದ ಎನ್ನಲಾಗಿದೆ.

ದರ್ಶನ್ ಅಭಿಮಾನಿ ಶಿವಮೊಗ್ಗದ ಕಾರ್ತಿಕ್ ಎಂಬಾತ ಸ್ಪೆಷಲ್ ಗೆಟಪ್‌ನಲ್ಲಿ ಬಳ್ಳಾರಿ ಜೈಲಿನ ಬಳಿ ಕಾಣಿಸಿಕೊಂಡಿದ್ದಾನೆ. ಹೇಗಾದರೂ ಮಾಡಿ ದರ್ಶನ್ ಅವರನ್ನು ಮಾತನಾಡಿಸಿಯೇ ಹೋಗಬೇಕು ಎಂದು ಪ್ಲ್ಯಾನ್ ಮಾಡಿದ್ದ ಅಭಿಮಾನಿ, ಏನಾದ್ರೂ ಸ್ಪೆಷಲ್ ಆಗಿ ಟ್ರೈ ಮಾಡೋಣ ಎಂದು ಟೆಡ್ಡಿ ಬೇರ್ ವೇಷಧಾರಿಯಾಗಿ ಜೈಲಿನ ಬಳಿಗೆ ಬಂದಿದ್ದಾನೆ.
ಕೈಯಲ್ಲಿ ಒಂದು ಪೋಸ್ಟರ್ ಕೂಡ ಹಿಡಿದಿದ್ದು, ಡಿಬಾಸ್....ನಾವು ನಿಮಗಾಗಿ ಕಾಯುತ್ತಿದ್ದೇವೆ ಎಂದು ಬರೆದುಕೊಂಡು ಬಂದಿದ್ದ. ಸ್ಪೆಷಲ್ ಗೆಟಪ್ ನೋಡಿಯಾದ್ರೂ ಜೈಲು ಸಿಬ್ಬಂದಿ ದರ್ಶನ್ ಅವರ ದರ್ಶನ ಮಾಡಿಸಬಹುದು ಎಂಬ ಅಭಿಮಾನಿಯ ನಿರೀಕ್ಷೆ ಕೊನೆಗೆ ಹುಸಿಯಾಗಿದೆ.
ದರ್ಶನ್ ಅವರನ್ನು ಭೇಟಿ ಮಾಡಲು ಅವಕಾಶ ಕೂಡ ಕೇಳಿದ್ದನಂತೆ. ಆದರೆ ಅಭಿಮಾನಿಯ ಈ ಕೋರಿಕೆಗೆ ಪೊಲೀಸರು ಜಗ್ಗಲಿಲ್ಲ. ಕೇವಲ ದರ್ಶನ್ ಅವರ ಕುಟುಂಬಸ್ಥರಿಗೆ ಮಾತ್ರವೇ ಭೇಟಿಗೆ ಅವಕಾಶವಿದ್ದು, ಬೇರೆ ಯಾರನ್ನೂ ಒಳಗಡೆ ಬಿಡುವಂತಿಲ್ಲ ಎಂದು ಹೇಳಿಕಳಿಸಿದ್ದಾರೆ. ಕೊನೆಗೆ ನಗುತ್ತಾ ಬಂದಿದ್ದ ಟೆಡ್ಡಿ ಸಪ್ಪಗಾಗಿ ವಾಪಸ್ ಆಗಿದೆ ಎಂದು ವರದಿಯಾಗಿದೆ.

ನಾಳೆ ಜಾಮೀನು ಅರ್ಜಿ ವಿಚಾರಣೆ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ ಜಾಮೀನು ಅರ್ಜಿ ವಿಚಾರಣೆ ಮುಗಿದಿದ್ದು, ನಾಳೆ ಇದರ ಆದೇಶ ಪ್ರಕಟವಾಗಲಿದೆ. ದರ್ಶನ್‌ಗೆ ಜಾಮೀನು ಸಿಗಲಿ ಎಂದು ಕುಟುಂಬದವರು, ಅಭಿಮಾನಿಗಳು ದೇವರಲ್ಲಿ ಕೇಳಿಕೊಳ್ಳುತ್ತಿದ್ದಾರೆ.
ಸೋಮವಾರ ದರ್ಶನ್ ಅವರಿಗೆ ಜಾಮೀನು ಸಿಗೋದು ಪಕ್ಕಾ ಎಂತಲೂ ಹೇಳಲಾಗುತ್ತಿದೆ. ಇತ್ತ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ದೊಡ್ಡ ಸಂದೇಶವೊಂದನ್ನು ರವಾನಿಸಿದ್ದಾರೆ. ನಟ ದರ್ಶನ್ ನಟಿಸಿರುವ ನವಗ್ರಹ ಸಿನಿಮಾ ರಿರಿಲೀಸ್ ಆಗಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಖುದ್ದು ಪೋಸ್ಟರ್ ಹಂಚಿಕೊಂಡಿರುವ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ, ಅಭಿಮಾನಿಗಳಿಗೆ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ.
ಪ್ರಿಯ ಡಿಬಾಸ್ ಸೆಲೆಬ್ರಿಟಿಗಳೇ... ನಿಮ್ಮೆಲ್ಲರ ಹೃದಯದಲ್ಲಿ ಜಾಗ ಪಡೆದುಕೊಂಡಿರುವ ನವಗ್ರಹ ಸಿನಿಮಾ ಶೀಘ್ರದಲ್ಲೇ ರೀರಿಲೀಸ್ ಆಗಲಿದೆ. ಈ ಬಾರಿಯ ಸಿನಿಮಾ ವೀಕ್ಷಿಸುವ ಅನುಭವವು ಮತ್ತಷ್ಟು ಸ್ಪೆಷಲ್ ಆಗಿರುತ್ತೆ. ನಿಮ್ಮ ಹತ್ತಿರದ ಥಿಯೇಟರ್‌ಗಳಲ್ಲಿ ನವಗ್ರಹ ನೋಡಲು ಅಭಿಮಾನಿಗಳು ರೆಡಿಯಾಗಿ..ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದು ಸಂದೇಶ ರವಾನಿಸಿದ್ದಾರೆ.

ಕೆಟ್ಟದ್ದು ಕೊನೆಯಲ್ಲಿ ಅಳಿದು ಹೋಗುತ್ತೆ, ಒಳ್ಳೆತನಕ್ಕೆ ಗೆಲುವು ಸಿಕ್ಕೇ ಸಿಗುತ್ತೆ ಎಂದು ನಿಜವಾದ ದಿನವಿದು ಎಂದು ದಸರಾ ಹಬ್ಬವನ್ನು ಉಲ್ಲೇಖಿಸಿ ವಿಜಯಲಕ್ಷ್ಮಿ ಅವರು ಪೋಸ್ಟ್ ಮಾಡಿದ್ದರು. ಇದನ್ನು ಎಲ್ಲರೂ ಸದಾ ನೆನಪಿನಲ್ಲಿ ಇಟ್ಟುಕೊಳ್ಳೋಣ. ಆ ತಾಯಿ ಚಾಮುಂಡೇಶ್ವರಿ ನಿಮಗೂ, ನಿಮ್ಮ ಕುಟುಂಬಸ್ಥರಿಗೂ ಆಶೀರ್ವದಿಸಲಿ ಎಂದು ವಿಜಯಲಕ್ಷ್ಮಿ ವಿಶ್ ಮಾಡಿದ್ದರು. ಹಾಗಾಗಿ ಬಹುತೇಕ ನಾಳೆ ದರ್ಶನ್ ಅವರಿಗೆ ಜಾಮೀನು ಸಿಗಲಿದೆ ಎಂದೇ ಹೇಳಲಾಗುತ್ತಿದೆ.












Click it and Unblock the Notifications