• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಲ್ಲಿ ಬಿಟ್‌ ಇಲ್ಲಿ ಬಿಟ್‌ ಇನ್ನೆಲ್ಲಿಗೆ ಸೋಮಣ್ಣ?

|

ಬೆಂಗಳೂರು, ಏಪ್ರಿಲ್ 05: ಚಾಮರಾಜನಗರದಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಬಯಸಿದ್ದ ವಿಧಾನ ಪರಿಷತ್ ಸದಸ್ಯ, ಬಿಜೆಪಿಯ ವಿ. ಸೋಮಣ್ಣ ಅವರ ಚಿತ್ತ ಈಗ ಎತ್ತ ಹರಿದಿದೆ ಎಂಬುದು ಕುತೂಹಲ ಮೂಡಿಸಿದೆ.

ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಿಂದ ಹೊರಬಂದ ಬಳಿಕ ಅವರು ಹನೂರು ಕ್ಷೇತ್ರದತ್ತ ಕಣ್ಣಿಟ್ಟಿದ್ದರು. ಬಿಜೆಪಿಯ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ಬಳಿಕ ಮುಖ್ಯವಾಗಿ ಹನೂರು ಭಾಗದಲ್ಲಿ ತೀವ್ರ ಚಟುವಟಿಕೆ ನಡೆಸಿದ್ದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಈ ಭಾಗದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್ ಪಾರುಪತ್ಯದ ನಡುವೆ ಬಿಜೆಪಿಗೆ ನೆಲೆಯೇ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿಯ ಕೆಲವು ಅಭ್ಯರ್ಥಿಗಳ ಗೆಲ್ಲಲು ಸೋಮಣ್ಣ ಕಾರಣರಾಗಿದ್ದಾರೆ. ಸೋಮಣ್ಣ ಅವರ ಸಂಘಟನೆಯ ಪ್ರಯತ್ನಗಳಿಂದಲೇ ಬಿಜೆಪಿ ಅಭ್ಯರ್ಥಿಗಳು ಅಧಿಕ ಮತಗಳನ್ನು ಪಡೆದಿದ್ದಾರೆ. ಹೀಗಾಗಿ ಅವರಿಗೆ ಟಿಕೆಟ್ ನೀಡಬೇಕು ಎಂದು ಅವರ ಬೆಂಬಲಿಗರು ಒತ್ತಾಯಿಸಿದ್ದಾರೆ.

ಆದರೆ, ಟಿಕೆಟ್ ಹಂಚಿಕೆ ವಿಚಾರದಲ್ಲಿ ರಾಜಿಯಾಗದ ನಾಯಕಿ ಪರಿಮಳಾ ನಾಗಪ್ಪ ಅವರು ತಮ್ಮ ಕುಟುಂಬಕ್ಕೇ ಟಿಕೆಟ್ ಸಿಗಬೇಕು ಎಂದು ಪಟ್ಟುಹಿಡಿದಿದ್ದಾರೆ. ಪರಿಮಳಾ ಅವರ ಮಗ ಡಾ. ಪ್ರೀತನ್ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹನೂರು ಕೈತಪ್ಪಿದ ಬಳಿಕ ಸೋಮಣ್ಣನ ಕಥೆಯೇನು?

ನಾಗಪ್ಪ ಅವರ ಕುಟುಂಬ ತಮ್ಮದೇ ವರ್ಚಸ್ಸು ಹೊಂದಿರುವುದರಿಂದ ಮತ್ತು ಆ ಕಾರಣದಿಂದ ಈ ಭಾಗದ ಮತಗಳನ್ನು ಕಳೆದುಕೊಳ್ಳಲು ಇಚ್ಛಿಸದ ಬಿಜೆಪಿ ವರಿಷ್ಠರು ಅವರಿಗೇ ಮಣೆ ಹಾಕಲು ನಿರ್ಧರಿಸಿದ್ದಾರೆ. ಇದರಿಂದ ಸೋಮಣ್ಣ ಹನೂರು ಕ್ಷೇತ್ರದ ಆಸೆಯನ್ನು ಬಹುತೇಕ ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಗುಂಡ್ಲುಪೇಟೆಯೂ ಇಲ್ಲ?:

ಹನೂರು ಕ್ಷೇತ್ರದಲ್ಲಿ ಟಿಕೆಟ್ ಸಿಗುವುದಿಲ್ಲ ಎನ್ನುವುದು ಖಚಿತವಾಗುತ್ತಿದ್ದಂತೆಯೇ ಸೋಮಣ್ಣ ಅವರ ಚಿತ್ತ ಗುಂಡ್ಲುಪೇಟೆ ಕ್ಷೇತ್ರದತ್ತ ಹರಿದಿತ್ತು. 2013ರ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿಯಿಂದ ಮತ್ತು 2017ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ನಿರಂಜನಕುಮಾರ್, ಈ ಬಾರಿಯೂ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಚಾಮರಾಜನಗರ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ

ಸೋಮಣ್ಣ ಅವರ ಸ್ಪರ್ಧೆಗಾಗಿ ತ್ಯಾಗ ಮಾಡುವಂತೆ ನಿರಂಜನಕುಮಾರ್ ಅವರ ಮನವೊಲಿಸಲಾಗಿದೆ ಎಂಬ ಸುದ್ದಿ ಕೇಳಿಬರುತ್ತಿತ್ತು. ಆದರೆ, ಇತ್ತೀಚೆಗೆ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ನಿರಂಜನಕುಮಾರ್ ಅವರಿಗೆ ಮತ ನೀಡಿ ಗೆಲ್ಲಿಸುವಂತೆ ಸಂಸದ ಪ್ರತಾಪ್ ಸಿಂಹ ಭಾಷಣದ ವೇಳೆ ಹೇಳಿದ್ದರು. ಇದರಿಂದ ನಿರಂಜನಕುಮಾರ್ ಅವರಿಗೆ ಟಿಕೆಟ್ ಬಹುತೇಕ ಖಾತರಿಯಾದಂತಾಗಿದೆ.

ಚಾಮರಾಜನಗರದಲ್ಲಿ ಬಿಗಿ ಪೈಪೋಟಿ:

ಸತತ ಎರಡು ಬಾರಿ ಗೆದ್ದಿರುವ ಕಾಂಗ್ರೆಸ್‌ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರನ್ನು ಸೋಲಿಸಿ ಚಾಮರಾಜನಗರದಲ್ಲಿ ಗೆಲುವು ಕಾಣಲು ಬಯಸಿರುವ ಬಿಜೆಪಿಗೆ ಅಭ್ಯರ್ಥಿ ಆಯ್ಕೆ ದೊಡ್ಡ ತಲೆನೋವಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಇಲ್ಲಿನ ಪ್ರಬಲ ಆಕಾಂಕ್ಷಿಯಾಗಿದ್ದರು. ಎರಡು ತಿಂಗಳಿನಿಂದ ನಡೆದಿರುವ ಬೆಳವಣಿಗೆ ಸಾಕಷ್ಟು ರಾಜಕೀಯ ಬದಲಾವಣೆಗಳಿಗೆ ಕಾರಣವಾಗಿದೆ.

ಕಾಂಗ್ರೆಸ್‌ನಲ್ಲಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗಿದ್ದು, ಅವರನ್ನೇ ಕಣಕ್ಕಿಳಿಸಲು ಚಿಂತನೆ ನಡೆಸಲಾಗಿದೆ. ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಪ್ರಬಲ ಲಿಂಗಾಯತ ಸಮುದಾಯದ ಮತಗಳ ಜತೆಗೆ ನಾಯಕ ಸಮುದಾಯ ಹಾಗೂ ಇತರೆ ಸಮುದಾಯಗಳ ಮತಗಳನ್ನು ಸೆಳೆಯಬಹುದು ಎನ್ನುವ ಲೆಕ್ಕಾಚಾರವಿದೆ.

ಸೋಮಣ್ಣ ಚಾಮರಾಜನಗರದಿಂದಲೂ ಸ್ಪರ್ಧಿಸಬಹುದು ಎಂಬ ಊಹಾಪೋಹ ಹರಡಿತ್ತು. ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಅವರೊಂದಿಗಿನ ಮನಸ್ತಾಪದಿಂದ ಸೋಮಣ್ಣ ಉಸ್ತುವಾರಿ ಹೊಣೆಗಾರಿಕೆಗೆ ರಾಜೀನಾಮೆ ನೀಡಲು ಮುಂದಾಗಿದ್ದರು.

ತಮ್ಮ ಸಮುದಾಯದ ಅಭ್ಯರ್ಥಿಗೇ ಟಿಕೆಟ್ ನೀಡಬೇಕು ಎಂದು ಇಲ್ಲಿನ ಲಿಂಗಾಯತ ಮುಖಂಡರು ಇತ್ತೀಚೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದರು. ಆಂತರಿಕ ಸಮಸ್ಯೆಗಳು ಉಲ್ಬಣಗೊಂಡಿರುವುದರಿಂದ ಇಲ್ಲಿ ಸೋಮಣ್ಣ ಅವರ ಸ್ಪರ್ಧೆಗೆ ಅವಕಾಶಗಳು ತೀರಾ ಕಡಿಮೆ ಎನ್ನಲಾಗಿದೆ.

ಕೊಳ್ಳೇಗಾಲ ಕ್ಷೇತ್ರ ಮೀಸಲು ಕ್ಷೇತ್ರವಾಗಿರುವುದರಿಂದ ಸೋಮಣ್ಣ ಸ್ಪರ್ಧೆಗೆ ಅವಕಾಶವಿಲ್ಲ. ಇದರಿಂದ ಚಾಮರಾಜನಗರ ಜಿಲ್ಲೆಯ ಯಾವ ಕ್ಷೇತ್ರದಲ್ಲಿಯೂ ಸೋಮಣ್ಣ ಸ್ಪರ್ಧೆ ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ರಾಜಕೀಯ ತಂತ್ರಗಾರಿಕೆಗೆ ಹೆಸರಾದ ಸೋಮಣ್ಣ ಅವರ ಲೆಕ್ಕಾಚಾರಗಳೇ ತಲೆಕೆಳಗಾಗುತ್ತಿದ್ದು, ಬೇರೆ ಕ್ಷೇತ್ರದತ್ತ ಹೊರಳುವುದು ಅನಿವಾರ್ಯವಾಗಿದೆ.

ಬೆಂಬಲಿಗರ ಸಭೆ:

ಹೊರಗಿನಿಂದ ಬಂದವರಾದರೂ ಸೋಮಣ್ಣ, ಹನೂರು ಕ್ಷೇತ್ರದಲ್ಲಿ ತಮ್ಮದೇ ಬೆಂಬಲಿಗರ ಪಡೆಯನ್ನು ಸೃಷ್ಟಿಸಿಕೊಂಡಿದ್ದಾರೆ. ಸೋಮಣ್ಣ ಅವರಿಗೇ ಟಿಕೆಟ್ ಸಿಗಬೇಕೆಂದು ಬುಧವಾರ ರಾತ್ರಿ ಬೆಂಬಲಿಗರು ಸಭೆ ನಡೆಸಿ ಚರ್ಚಿಸಿದ್ದಾರೆ.

ಸ್ಥಳೀಯ ಮುಖಂಡರಾದ ಪೊನ್ನಾಚಿ ಮಹದೇವಸ್ವಾಮಿ, ದತ್ತೇಶ್ ಕುಮಾರ್, ಮಂಜುನಾಥ್, ರಾಜೇಂದ್ರ ಕುಮಾರ್, ಜಯಂತಿ ಮುಂತಾದವರು ಸೋಮಣ್ಣ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bjp leader V. somanna who aspirant to contest in hanur constituency, has to find a new place. His followers are demanding highcomand to give ticket to somanna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more