ಸಿದ್ದು ಧೈರ್ಯದ ಮುಂದೆ ದಂಗಾಗಿದ್ದಾರೆ ಕಾಂಗ್ರೆಸ್ ಮುಖಂಡರು!
ಬೆಂಗಳೂರು, ಜನವರಿ 19: ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ತರಲೇ ಬೇಕೆಂಬ ಹಠಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿದ್ದಿದ್ದಾರೆ. ಇದಕ್ಕಾಗಿಯೇ ರಾಜ್ಯಾದ್ಯಂತ ಸಾವಿರಾರು ಕಿ.ಮೀ. ಪ್ರವಾಸ ಮಾಡುತ್ತಾ, ಹುರುಪಿನಿಂದಲೇ ಓಡಾಡುತ್ತಿದ್ದಾರೆ. ಸಾಧನಾ ಸಮಾವೇಶದ ಮೂಲಕ ತಮ್ಮ ಸರ್ಕಾರದ ಸಾಧನೆಗಳ ಜತೆಯಲ್ಲಿ ತಮ್ಮ ವರ್ಚಸ್ಸನ್ನೂ ಇಮ್ಮಡಿಗೊಳಿಸಿಕೊಳ್ಳುತ್ತ ಪಕ್ಷದ ಐಕಾನ್ ಆಗುತ್ತಿದ್ದಾರೆ.
ಕಾಂಗ್ರೆಸ್ ನಲ್ಲಿ ಇದುವರೆಗೆ ಇದ್ದ ಹತ್ತು ಹಲವು ಧೋರಣೆಯನ್ನು ಬದಿಗೊತ್ತಿ, ಇನ್ನು ಮುಂದೆಯೂ ಹಾಗೆಯೇ ಅದನ್ನು ಮುಂದುವರೆಸಿಕೊಂಡು ಹೋದರೆ ಪಕ್ಷಕ್ಕೆ ಉಳಿಗಾಲವಿಲ್ಲ. ಜತೆಗೆ ಅಧಿಕಾರಕ್ಕೆ ಬರುವುದು ಕೂಡ ಕಷ್ಟಸಾಧ್ಯ ಎಂಬುದನ್ನು ಅರಿತ ಅವರು ತಮ್ಮ ಕೆಲವು ತಂತ್ರಗಳನ್ನು ಪ್ರಯೋಗ ಮಾಡಲು ಇದೇ ಸೂಕ್ತ ಸಮಯ ಎಂಬ ನಿರ್ಧಾರಕ್ಕೆ ಬಂದಿದ್ದಾರಲ್ಲದೆ, ಸಾಧನಾ ಸಮಾವೇಶದ ಮೂಲಕ ಸರ್ಕಾರ ರಾಜ್ಯದಲ್ಲಿ ತಂದಿರುವ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಮತಬೇಟೆಗೆ ಮುಂದಾಗಿದ್ದಾರೆ.
ಈಗಾಗಲೇ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಾಧನಾ ಸಮಾವೇಶ ನಡೆಸಿರುವ ಸಿದ್ದರಾಮಯ್ಯನವರು ತಮ್ಮ ಸಾಧನೆಗಳನ್ನು ಪ್ರಚುರ ಪಡಿಸುವ ಜತೆಜತೆಯಲ್ಲೇ ಬಿಜೆಪಿ ಮತ್ತು ಜೆಡಿಎಸ್ ನ ನಾಯಕರ ಜನ್ಮ ಜಾಲಾಡಿದ್ದಾರೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ಅಂದ್ರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಅಂದ್ರೆ ಕಾಂಗ್ರೆಸ್ ಎಂಬ ಭ್ರಮೆಯನ್ನು ಜನರಲ್ಲಿ ಬಿತ್ತಿದ್ದಾರೆ. ಇಷ್ಟು ದಿನಗಳ ಕಾಲ ನಡೆದ ಸಮಾವೇಶಗಳಲ್ಲಿ ಸಿದ್ದರಾಮಯ್ಯ ಹೊರತು ಪಡಿಸಿ ಬೇರೆ ಯಾವ ನಾಯಕರೂ ಅಲ್ಲಿ ಫೋಕಸ್ ಆಗದಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಸಿದ್ದರಾಮಯ್ಯ ಅವರ ವೇಗಕ್ಕೆ ತಮ್ಮದೇ ಪಕ್ಷದ ಪ್ರಭಾವಿ ಮುಖಂಡರು ಮಂಕಾಗಿ ಹೋಗಿರುವುದಂತು ನಿಜ. ನಮ್ಮದು ಸಾಮೂಹಿಕ ನಾಯಕತ್ವದ ಪಕ್ಷ, ಸಾಮೂಹಿಕ ನಾಯಕತ್ವದಡಿಯೇ ಚುನಾವಣೆಯನ್ನು ಎದುರಿಸುತ್ತೇವೆ ಎಂಬ ಘೋಷಣೆಯನ್ನು ಇದುವರೆಗೆ ಕಾಂಗ್ರೆಸ್ ಮುಖಂಡರು ಮಾಡಿಕೊಂಡು ಬಂದಿರುವುದನ್ನು ನಾವು ನೋಡಿದ್ದೇವೆ. ಅಷ್ಟೇ ಅಲ್ಲ ಇವತ್ತಿಗೂ ಕೆಪಿಸಿಸಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ಕೂಡ ಅದೇ ಜಪವನ್ನು ಮಾಡುತ್ತಿದ್ದಾರೆ. ಆದರೆ ಇದೆಲ್ಲದಕ್ಕೆ ಸೆಡ್ಡು ಹೊಡೆದ ಸಿದ್ದರಾಮಯ್ಯ ಅವರು ಧೈರ್ಯದಿಂದ ಬಹಿರಂಗವಾಗಿ ತಾವೇ ಮುಂದಿನ ಮುಖ್ಯಮಂತ್ರಿ ಎಂಬ ಘೋಷಣೆ ಮಾಡಿ ಅಖಾಡಕ್ಕಿಳಿದಿದ್ದಾರೆ.

ಈ ಧೈರ್ಯ ಸಿದ್ದರಾಮಯ್ಯ ಅವರಿಗೆ ಮಾತ್ರ
ಬಹುಶಃ ಅಂತಹ ಧೈರ್ಯವನ್ನು ಸಿದ್ದರಾಮಯ್ಯ ಹೊರತುಪಡಿಸಿ ಇನ್ಯಾವುದೇ ನಾಯಕರಿಂದ ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಯಾವಾಗ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದರೋ ಪಕ್ಷದ ಇತರೆ ಮುಖಂಡರಲ್ಲಿ ಅಸಮಾಧಾನದ ಹೊಗೆ ಸದ್ದಿಲ್ಲದೆ ಹೊರಬರತೊಡಗಿತು. ತಮ್ಮ ಅತೃಪ್ತಿಯನ್ನು ಹೈಕಮಾಂಡ್ ಮುಂದೆಯೂ ಉಗುಳಿದರು. ಆದರೆ ಅದರಿಂದ ಯಾವುದೇ ಪ್ರಯೋಜನವಾದಂತೆ ಕಂಡು ಬರುತ್ತಿಲ್ಲ.

ಹೈಕಮಾಂಡ್ ಗೂ ಗೊತ್ತು!
ಈಗಾಗಲೇ ಹೈಕಮಾಂಡ್ ಗೂ ರಾಜ್ಯದಲ್ಲಿ ಸಿದ್ದರಾಮಯ್ಯ ಅವರಿಗಿರುವ ಪಕ್ಷ ಸಂಘಟನಾ ಶಕ್ತಿ, ವರ್ಚಸ್ಸು, ಜನಬೆಂಬಲ ಎಲ್ಲವೂ ಗೊತ್ತಿದೆ. ಹೀಗಾಗಿ ಸಿದ್ದರಾಮಯ್ಯ ಅವರ ವೇಗಕ್ಕೆ ಕಡಿವಾಣ ಹಾಕಲು ಮುಂದಾದರೆ ಅದರಿಂದ ಪಕ್ಷಕ್ಕೆ ತೊಂದರೆ ಎಂಬುದನ್ನು ಮನಗಂಡು ಮೌನಕ್ಕೆ ಶರಣಾಗಿದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ.

ಮತ ಕೇಳೋದಾದರೂ ಹೇಗೆ?
ಇನ್ನು ಕೆಲವೇ ದಿನಗಳಲ್ಲಿ ಸಾಧನಾ ಸಮಾವೇಶ ಮುಕ್ತಾಯಗೊಳ್ಳಲಿದೆ. ಆ ಹೊತ್ತಿಗೆ ರಾಜ್ಯದಲ್ಲಿನ ಪರಿಸ್ಥಿತಿ ಹೇಗಿದೆ ಎಂಬ ಸಂಪೂರ್ಣ ಚಿತ್ರಣ ಅವರಿಗೆ ಸಿಗಲಿದೆ. ಅದು ಅವರ ಮುಂದಿನ ಚುನಾವಣಾ ಪ್ರಚಾರಕ್ಕೂ ಸಹಕಾರಿಯಾಗುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಬಿಜೆಪಿಯವರು ಯಡಿಯೂರಪ್ಪ ನಮ್ಮ ಮುಂದಿನ ಮುಖ್ಯಮಂತ್ರಿ ಎನ್ನುತ್ತಾ ಅವರ ನೇತೃತ್ವದಲ್ಲಿ, ಜೆಡಿಎಸ್ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿ ಅವರ ನೇತೃತ್ವದಲ್ಲಿ ಚುನಾವಣೆಗೆ ಇಳಿದಿರುವಾಗ ಕಾಂಗ್ರೆಸ್ ಯಾವೊಬ್ಬ ನಾಯಕನನ್ನೂ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡದೆ ಸಾಮೂಹಿಕ ನಾಯಕತ್ವದ ಪಾಠ ಹೇಳುತ್ತಾ ಕೂತರೆ ಮತದಾರರ ಮುಂದೆ ಮತ ಕೇಳೋದಾದರೂ ಹೇಗೆ?

ಪರಿಣಾಮ ಏನಾದೀತೋ ದೇವರೇ ಬಲ್ಲ!
ಇದನ್ನರಿತೇ ಸಿದ್ದರಾಮಯ್ಯ ಅವರು ಮುಂದಿನ ಅವಧಿಗೂ ನಾನೇ ಮುಖ್ಯಮಂತ್ರಿ ಎಂದು ಸ್ವಘೋಷಣೆ ಮಾಡಿಕೊಂಡಿದ್ದಾರೆ. ಅದು ಈಗ ಫಲಕೊಡುತ್ತಿದೆ ಎಂದರೂ ತಪ್ಪಾಗಲಾರದು. ಆದರೆ ಇದೆಲ್ಲವೂ ಚುನಾವಣೆ ಘೋಷಣೆಯಾದ ಬಳಿಕ ಯಾವ ರೀತಿಯಲ್ಲಿ ಪರಿಣಾಮಕಾರಿಯಾಗಲಿದೆ ಎಂಬುದನ್ನು ಕಾದು ನೋಡಲೇ ಬೇಕಾಗಿದೆ.












Click it and Unblock the Notifications