ತುರುವೇಕೆರೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಗೆ ಅಖಾಡ ಸಿದ್ಧ
ತುಮಕೂರು ಜಿಲ್ಲೆ ತುರುವೇಕೆರೆಯ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ ಜೆಡಿಎಸ್ ನವರು. ಈ ಸಲ ಕೂಡ ಅವರೇ ಈ ಕ್ಷೇತ್ರದಿಂದ ತೆನೆ ಹೊತ್ತ ಮಹಿಳೆ ಪಕ್ಷದ ಸ್ಪರ್ಧಾಳು. ಇನ್ನು ಬಿಜೆಪಿಯಿಂದ ಮಸಾಲೆ ಜಯರಾಂ ಸ್ಪರ್ಧೆಯಲ್ಲಿದ್ದಾರೆ. ಆದರೆ ಅವರು ಕೆಜೆಪಿಯಿಂದ ಬಿಜೆಪಿಗೆ ಬಂದವರು ಎಂಬುದು ಅಸಮಾಧಾನಕ್ಕೆ ಕಾರಣವಾಗಿದೆ.
ಅಂದಹಾಗೆ, ನಟ ಜಗ್ಗೇಶ್ ಈ ಹಿಂದೆ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆದ್ದು, ಆಪರೇಷನ್ ಕಮಲ ಸೀಸನ್ ನಲ್ಲಿ ಬಿಜೆಪಿಗೆ ಜಿಗಿದಿದ್ದರು. ಹೇಮಾವತಿ ನೀರು ದೊರೆತು ಇಲ್ಲಿನ ರೈತರು ಒಂದಿಷ್ಟು ಖುಷಿಯಾಗಿದ್ದಾರೆ. ಆದರೆ ಮೂಲಸೌಕರ್ಯದ ಸಮಸ್ಯೆ ಇದೆ. ಜತೆಗೆ ಆಸ್ಪತ್ರೆ ಅಂದರೆ ಚಿಕ್ಕನಾಯಕನಹಳ್ಳಿ ಕಡೆ ನೋಡುವಂಥ ಸ್ಥಿತಿಯಿದೆ.
ಇಲ್ಲಿನ ಬೇಟೆರಾಯಸ್ವಾಮಿ ದೇವಸ್ಥಾನ ಬಹಳ ಪ್ರಸಿದ್ಧಿ. ಮತ್ತೆ ರಾಜಕೀಯದ ಬಗ್ಗೆಯೇ ಮಾತನಾಡಬೇಕು ಅಂದರೆ ಈ ಬಾರಿ ಇಲ್ಲಿ ತ್ರಿಕೋನ ಸ್ಪರ್ಧೆ ಸಾಧ್ಯತೆ ಇದೆ. ತುರುವೇಕೆರೆಯ ರಸ್ತೆ, ಒಳಚರಂಡಿ ಮತ್ತೊಂದರ ಬಗ್ಗೆ ಸ್ಥಳೀಯರಲ್ಲಿ ಅಸಮಾಧಾನ ಇದೆ. ಅದು ಹೇಗೆ ವ್ಯಕ್ತವಾಗುತ್ತದೋ ಕಾದುನೋಡಬೇಕು.

ಕಾಂಗ್ರೆಸ್ ನಿಂದ ಅಖಾಡದಲ್ಲಿ ಇರುವವರು ಚೌದ್ರಿ ರಂಗಪ್ಪ. ಜೆಡಿಎಸ್ ನ ಎಂ.ಟಿ.ಕೃಷ್ಣಪ್ಪ ಅವರಿಗೆ ಬಿಜೆಪಿಯೊಳಗಿನ ಅಸಮಾಧಾನವು ಸಕಾರಾತ್ಮಕವಾಗಿ ಪರಿಣಮಿಸಬಹುದು ಎಂಬ ನಿರೀಕ್ಷೆ ಇದೆ. ಆದರೆ ಜನರ ಮಧ್ಯೆಯೇ ಕೃಷ್ಣಪ್ಪ ಅವರ ವರ್ಚಸ್ಸಿಗೆ ಒಂದಿಷ್ಟು ಕುಂದಾಗಿರುವುದಂತೂ ನಿಜ.
ಈ ಕ್ಷೇತ್ರದಲ್ಲಿ ಈ ಬಾರಿಯ ಸ್ಪರ್ಧೆ ಬಹಳ ಕುತೂಹಲಕರವಾಗಿದೆ. ಇಷ್ಟು ಕಾಲ ಜೆಡಿಎಸ್ ವರ್ಸಸ್ ಕಾಂಗ್ರೆಸ್ ಎಂಬ ವಾತಾವರಣ ಇತ್ತು. ಆದರೆ ಈಗ ಬಿಜೆಪಿಯು ಕಣದೊಳಗೆ ಗಟ್ಟಿಯಾಗಿ ಕಾಣಿಸಿಕೊಂಡಿದೆ.












Click it and Unblock the Notifications