ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ನೀರಿನ ಸಲುವಾಗಿಯೇ ಕದನ
ತುಮಕೂರು ಜಿಲ್ಲೆಯ ಕುಣಿಗಲ್ ನ ಕುದುರೆ ಫಾರ್ಮ್ ಬಹಳ ಪ್ರಸಿದ್ಧಿ. ಇನ್ನು ಕುಣಿಗಲ್ ಕೆರೆ ಬಗ್ಗೆ ಜನಪದ ಗೀತೆಯೇ ಇದೆ. ಕೃಷಿಯೇ ನೆಚ್ಚಿಕೊಂಡ ಜನರು ಇಲ್ಲಿ ಹೆಚ್ಚು. ಕೆರೆಗಳಿಗೆ ನೀರು ಹರಿಸುವ ವಿಚಾರದಲ್ಲಿ ಆಗಾಗ ಗ್ರಾಮ-ಗ್ರಾಮಗಳ ಮಧ್ಯೆ ಜಗಳವೇ ನಡೆದು ಹೋದ ಉದಾಹರಣೆಗಳಿವೆ.
ಜತೆಗೆ ಇಲ್ಲಿನ ರೈತರಲ್ಲಿ ಸರಕಾರಿ ಅಧಿಕಾರಿಗಳು ಇಂಥದ್ದೇ ಬೆಳೆ ಬೆಳೆಯಿರಿ ಎಂದು ಮನವಿ ಮಾಡಿ, ಅರಿವು ಮೂಡಿಸುತ್ತಲೇ ಇರುತ್ತಾರೆ. ಸದ್ಯಕ್ಕೆ ಇಲ್ಲಿನ ಶಾಸಕರು ಜೆಡಿಎಸ್ ನ ನಾಗರಾಜಯ್ಯ. ಸರಕಾರದ ಮಟ್ಟದಲ್ಲಿ ತುಂಬ ಚೆನ್ನಾಗಿ ಕೆಲಸ ಮಾಡಿಸುತ್ತಾರೆ ಅನ್ನೋದು ಮಾತು. ಆದರೆ ನಗರದಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳಿವೆ.
ಇಲ್ಲಿನ ಬಸ್ ನಿಲ್ದಾಣದ ಬಳಿಯೇ ರಸ್ತೆ ಹಾಳಾಗಿ ವರ್ಷಗಳು ಕಳೆದರೂ ಯಾವ ಕ್ರಮವೂ ಆಗಿಲ್ಲ. ಬಿಜೆಪಿಯಿಂದ ಕೃಷ್ಣ ಕುಮಾರ್ ಸ್ಪರ್ಧಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್ ನಲ್ಲಿ ಬಿ.ಬಿ.ರಾಮಸ್ವಾಮಿಗೌಡ, ರಂಗನಾಥ್ ಹೀಗೆ ನಾನಾ ಬಣಗಳಾಗಿ, ಕಾಂಗ್ರೆಸ್ ನಲ್ಲಿ ಸಂಸದ ಡಿ.ಕೆ.ಸುರೇಶ್ ಅಂದರೆ ಕೆಂಡದಂಥ ಕೋಪವಿದೆ.

ಭಿನಾಭಿಪ್ರಾಯ ಬಗೆಹರಿಯಲಿಲ್ಲ ಅಂದರೆ ಕಾಂಗ್ರೆಸ್ ಸ್ಥಿತಿ ಕಷ್ಟ ಕಷ್ಟ. ಈ ಕ್ಷೇತ್ರ ಜೆಡಿಎಸ್ ಪಾಲಿಗೆ ಪೂರಕ ಆಗಿರುವಂಥದ್ದು. ಆದರೆ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಬಹುಭಾಗ ರಾಮನಗರ ಜಿಲ್ಲೆಗೆ ಸೇರುವುದರಿಂದ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವರಾದ ಡಿ.ಕೆ.ಶಿವಕುಮಾರ್ ಅವರ ಪ್ರಭಾವ ದಟ್ಟವಾಗಿದೆ.
ಈ ಬಾರಿ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯನ್ನು ನಿರೀಕ್ಷಿಸಬಹುದು. ಇನ್ನು ಗೆದ್ದು ಬಂದವರಿಗೆ ಮಾಡುವುದಕ್ಕೆ ಸಾಕಷ್ಟು ಕೆಲಸಗಳಿವೆ. ಈ ಹಿಂದೊಮ್ಮೆ ನಡೆದಿದ್ದ ಹಿಂದೂ-ಮುಸ್ಲಿಂ ಗಲಭೆಯನ್ನೇ ಇಂದಿಗೂ ಜನರು ನೆನಪಿಸಿಕೊಳ್ಳುತ್ತಾರೆ. ಆ ನಂತರ ಕುಣಿಗಲ್ ನ ನೆಮ್ಮದಿಯೇನೂ ಕದಡಿಲ್ಲ. ಹೀಗೇ ಇರಲಿ ಎಂಬುದು ಜನರ ನಿರೀಕ್ಷೆ.












Click it and Unblock the Notifications