ಜೆಡಿಎಸ್ ಭದ್ರಕೋಟೆ ಗುಬ್ಬಿಯಲ್ಲಿ ಯಾರು ಬಿಡಲಿದ್ದಾರೆ ಬ್ರಹ್ಮಾಸ್ತ್ರ!
ತುಮಕೂರು ಜಿಲ್ಲೆಯ ಗುಬ್ಬಿ ಅಂದಾಕ್ಷಣ ನೆನಪಾಗುವುದು ನಾಟಕರತ್ನ ಗುಬ್ಬಿ ವೀರಣ್ಣ. ಅವರ ಹೆಸರಿನಲ್ಲಿ ಇಲ್ಲೊಂದು ಸೊಗಸಾದ ರಂಗಮಂದಿರವಿದೆ. ಇಲ್ಲಿನ ಶಾಸಕ ಜೆಡಿಎಸ್ ನ ಎಸ್.ಆರ್.ಶ್ರೀನಿವಾಸ್. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಗೆ ಇಲ್ಲಿ ಹಿನ್ನಡೆ ಆಗಿತ್ತು. ಸ್ವತಃ ಶಾಸಕರ ಪತ್ನಿ ಸೋಲನುಭವಿಸಿದ್ದರು.
ಆದರೆ ಈ ಕ್ಷೇತ್ರವನ್ನು ಜೆಡಿಎಸ್ ಪಾಲಿನ ಭದ್ರಕೋಟೆ ಅಂತಲೇ ಪರಿಗಣಿಸಲಾಗುತ್ತದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಮಧ್ಯೆ ಹಣಾಹಣಿ ಅಂತಲೇ ಪ್ರಚಾರದಲ್ಲಿದೆ. ಕೃಷಿಯೇ ಪ್ರಧಾನ ಆಗಿರುವ ತಾಲೂಕಿನಲ್ಲಿ ಹೈನುಗಾರಿಕೆಗೂ ಪ್ರಾಶಸ್ತ್ಯ ಇದೆ. ತುಮಕೂರು ಜಿಲ್ಲಾ ಕೇಂದ್ರಕ್ಕೂ ಬಹಳ ಹತ್ತಿರದಲ್ಲಿರುವ ತಾಲೂಕು.
ಎಚ್ ಎ ಎಲ್ ನ ಲಘು ಹೆಲಿಕಾಪ್ಟರ್ ಘಟಕ ಆರಂಬ ಆಗುತ್ತಿರುವುದು ಇದೇ ಗುಬ್ಬಿಯಲ್ಲಿ. ಇನ್ನು ರಸ್ತೆ ಅಭಿವೃದ್ಧಿ ಬಗ್ಗೆ ಕೆಲವು ಕಡೆ ಅಸಮಾಧಾನ ಇದೆ. ಸಂಪರ್ಕ ರಸ್ತೆಗಳು ಚೆನ್ನಾಗಿ ಆಗಬೇಕು ಎಂಬುದು ಬಹುತೇಕ ಕಡೆ ಕೇಳಿಬರುವ ಒತ್ತಾಯ. ಅದೇ ರೀತಿ ನೀರಿನ ಸಮಸ್ಯೆ ಬಗ್ಗೆಯೂ ದೂರುತ್ತಾರೆ.

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಶ್ರೀನಿವಾಸ್ (ವಾಸು) ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ನಿಂದ ಕೆ.ಕುಮಾರ್ ಎನ್ನುವವರು ಸ್ಪರ್ಧಿಯಲ್ಲಿದ್ದರೆ, ಬಿಜೆಪಿಯಿಂದ ಬೆಟ್ಟಸ್ವಾಮಿ ಅಖಾಡದಲ್ಲಿದ್ದಾರೆ. ಇಲ್ಲಿ ಬಿಜೆಪಿಯಿಂದ ದಿಲೀಪ್ ಗೆ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆ ಇತ್ತು.
ಆದರೆ, ಅದು ತಪ್ಪಿಹೋಗಿದ್ದರಿಂದ ಪಕ್ಷೇತರರಾಗಿ ಕಣದಲ್ಲಿದ್ದಾರೆ ದಿಲೀಪ್. ಅವರ ಮನವೊಲಿಸಲು ಯಡಿಯೂರಪ್ಪ ಅವರು ಮಾಡಿದ ಯತ್ನ ಸಫಲವಾಗಲಿಲ್ಲ. ಇನ್ನು ಈ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಮಾರಿಕೊಂಡಿದ್ದಾರೆ ಎಂದು ಟಿಕೆಟ್ ತಪ್ಪಿದ ಹೊನ್ನಗಿರಿ ಗೌಡ ಆಪಾದನೆ ಮಾಡಿದರು.
ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನ ಶ್ರೀನಿವಾಸ್ ಅವರನ್ನು ಸೋಲಿಸುವುದು ಸಲೀಸಿಲ್ಲ. ಆದರೆ ಅವರ ಮಾತೇ ಸ್ವಲ್ಪ ಎಡವಟ್ಟು. ಈ ಬಾರಿ ಗುಬ್ಬಿ ಕ್ಷೇತ್ರದ ಮತದಾರರ ತೀರ್ಪು ಏನಾಗಬಹುದು ಎಂಬ ಕುತೂಹಲ ಇದ್ದೇ ಇದೆ. ದಿಲೀಪ್ ಸ್ಪರ್ಧೆಯಿಂದ ಯಾರಿಗೆ ಲಾಭ ಆಗಬಹುದು ಎಂಬ ಕುತೂಹಲವೂ ಇದೆ.












Click it and Unblock the Notifications