ಬಂಗಾರಪೇಟೆ ಕ್ಷೇತ್ರ: ಪಾನಿಪೂರಿಗೆ ಹೆಸರಾದ ಕ್ಷೇತ್ರದಲ್ಲಿ ಘಾಟು ಸನ್ನಿವೇಶ
ಬೆಂಗಳೂರಿಗೆ ಎಂಬತ್ತು ಕಿಲೋಮೀಟರ್ ದೂರದಲ್ಲಿರುವ ಬಂಗಾರಪೇಟೆಗೆ ಒಳ್ಳೆ ರೈಲು ಸಂಚಾರ ವ್ಯವಸ್ಥೆ ಇದೆ. ಇನ್ನು ಬಂಗಾರಪೇಟೆ ಪಾನಿಪೂರಿ ಬಹಳ ಹೆಸರು ವಾಸಿ. ಇಲ್ಲಿನ ರೈಲು ವ್ಯವಸ್ಥೆ ಬಂಗಾರಪೇಟೆ ತಾಲೂಕಿನ ಚಹರೆಯನ್ನೇ ಬದಲಿಸಿದೆ. ಎಸ್.ಎನ್.ನಾರಾಯಣಸ್ವಾಮಿ ಅವರು ಕಾಂಗ್ರೆಸ್ ನಿಂದ ಗೆದ್ದ ಶಾಸಕ.
ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಸಂದರ್ಭದಲ್ಲಿ ಇವರ ಹೆಸರು ಬಹಳ ಕೇಳಿಬಂತು: ಅದೂ ನಕಾರಾತ್ಮಕವಾಗಿ. ಇವರ ರಿಯಲ್ ಎಸ್ಟೇಟ್ ವ್ಯವಹಾರಗಳ ಕಾರಣಕ್ಕೆ ಭಿನ್ನಾಭಿಪ್ರಾಯ ಇತ್ತು ಅಂತಲೂ ಸುದ್ದಿಯಾಯಿತು. ಈ ವಿಚಾರದಲ್ಲಿ ಸ್ಪಷ್ಟೀಕರಣ ನೀಡಿ ಶಾಸಕರೂ ಸುಸ್ತಾದರು.
ಆದರೆ, ಬಂಗಾರಪೇಟೆ ತಾಲೂಕಿನಲ್ಲಿ ಬಗೆಹರಿಸಬೇಕಾದ ಹಲವು ಸಮಸ್ಯೆಗಳಿವೆ. ಕೆರೆ ಒತ್ತುವರಿ ಎಂಬುದು ಇಡೀ ಕೋಲಾರ ಜಿಲ್ಲೆಯಲ್ಲಿನ ಸಮಸ್ಯೆ. ಅದು ಬಂಗಾರಪೇಟೆಯಲ್ಲಿ ತುಸು ಹೆಚ್ಚೇ ಇದೆ ಎಂಬುದು ಸ್ಥಳೀಯರ ಆರೋಪ. ಸ್ವತಃ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರ ವಿರುದ್ಧವೇ ಒತ್ತುವರಿ ಆರೋಪ ಇದೆ. ಇನ್ನು ಸ್ಥಳೀಯವಾಗಿ ಉದ್ಯೋಗಕ್ಕೆ ತುಂಬ ಅವಕಾಶಗಳಿಲ್ಲ.

ಇತ್ತೀಚಿನ ವರ್ಷದವರೆಗೆ ಮೂಲ ಸೌಕರ್ಯದ ಬಗ್ಗೆ ಮಾತನಾಡದೆ ಇರುವುದು ಉತ್ತಮ ಎನ್ನುತ್ತಿದ್ದರು ಸ್ಥಳೀಯರು. ಆದರೆ ಇತ್ತೀಚೆಗೆ ಕೆಲ ಮಟ್ಟಿಗೆ ಕೆಲಸ ಆಗಿದೆ ಎನ್ನುತ್ತಿದ್ದಾರೆ. ಬಂಗಾರಪೇಟೆ ತಾಲೂಕಿನಲ್ಲಿ ಮಾನವ-ಪ್ರಾಣಿ ಸಂಘರ್ಷ ಕೂಡ ಹೆಚ್ಚಾಗಿದೆ. ಪಕ್ಕದ ತಮಿಳುನಾಡು ರಾಜ್ಯದಿಂದ ಇಲ್ಲಿಗೆ ಬರುವ ಆನೆಗಳು ದಾಂಧಲೆ ಎಬ್ಬಿಸುತ್ತವೆ ಎಂಬುದು ರೈತರ ಅಹವಾಲು.
ಆದರೆ, ಅದಕ್ಕೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಿ.ಪಿ.ವೆಂಕಟಮುನಿಯಪ್ಪ, ಜೆಡಿಎಸ್ ನಿಂದ ಮಲ್ಲೇಶ್ ಬಾಬು ಹಾಗೂ ಕಾಂಗ್ರೆಸ್ ನಿಂದ ಎಸ್.ಎನ್.ನಾರಾಯಣಸ್ವಾಮಿ ಅಖಾಡದಲ್ಲಿ ಪೈಪೋಟಿ ನಡೆಸುವಂತೆ ಕಂಡುಬರುತ್ತಿದೆ.
ಪರಿಶಿಷ್ಟ ಜಾತಿ, ಕುರುಬ ಸಮುದಾಯದ ಮತಗಳು ಈ ಕ್ಷೇತ್ರದಲ್ಲಿ ನಿರ್ಣಾಯಕವಾದವು. ಶಾಸಕ ನಾರಾಯಣಸ್ವಾಮಿ ಅವರ ವಿರುದ್ಧ ಪರಿಶಿಷ್ಟ ಜಾತಿಯವರು ಹಾಗೂ ಕುರುಬರು ಸಿಟ್ಟು ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ಡಿ.ಕೆ.ರವಿ ಸಾವಿನ ವಿಚಾರದಲ್ಲಿ ಒಕ್ಕಲಿಗರಿಗೆ ಸಿಟ್ಟಿದೆ ಎಂಬ ಮಾತು ಸಹ ಇದೆ. ಆದರೆ ಚುನಾವಣೆ ಮೇಲೆ ಈ ಎಲ್ಲ ಅಂಶಗಳು ಹೇಗೆ ಕೆಲಸ ಮಾಡುತ್ತವೆ ಕಾದು ನೋಡಬೇಕಾಗಿದೆ.











Click it and Unblock the Notifications