ಕ್ಷೇತ್ರ ಪರಿಚಯ : ಕಿತ್ತೂರಿನಲ್ಲಿ ಯಾರಿಗೆ ಒಲಿಯಲಿದೆ ಜಯ?
ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ ಕಿತ್ತೂರು. ಕನ್ನಡ ನಾಡಿನ ವೀರ ಮಹಿಳೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಿತ್ತೂರು ರಾಣಿ ಚನ್ನಮ್ಮ ಅವರಿಂದ ಕಿತ್ತೂರು ದೇಶಾದ್ಯಂತ ಪ್ರಸಿದ್ಧಿ ಪಡೆದಿದೆ.
ವಿಧಾನಸಭಾ ಕ್ಷೇತ್ರವಾಗಿದ್ದ ಕಿತ್ತೂರನ್ನು ತಾಲೂಕು ಕೇಂದ್ರವಾಗಿ ಮಾಡಬೇಕು ಎಂದು ಒತ್ತಾಯಿಸಿ ಸುಮಾರು 5 ದಶಕಗಳ ಕಾಲ ಹೋರಾಟ ನಡೆದಿತ್ತು. ಅಂತಿಮವಾಗಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಕಿತ್ತೂರನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿದರು.
30ಕ್ಕೂ ಹೆಚ್ಚು ಹಳ್ಳಿಗಳಿಗೆ ಕಿತ್ತೂರು ವಹಿವಾಟು ಕೇಂದ್ರ. ನೂರಕ್ಕೂ ಅಧಿಕ ಹಳ್ಳಿಗಳನ್ನು ಒಳಗೊಂಡಿರುವ ಕಿತ್ತೂರಿನಲ್ಲಿ 1.50 ಲಕ್ಷಕ್ಕೂ ಅಧಿಕ ಮತದಾರರು ಇದ್ದಾರೆ.

ಕಿತ್ತೂರು ಕ್ಷೇತ್ರದ ಹಾಲಿ ಶಾಸಕರು ಡಿ.ಬಿ.ಇನಾಮದಾರ. ಸಚಿವ ಸ್ಥಾನ ಕೈ ತಪ್ಪಿದ್ದರಿಂದ ಹಾಲಿ ಶಾಸಕರಾದ ಇವರು ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಅವರು ಕ್ಷೇತ್ರದಲ್ಲಿ ಯಾವದೇ ಕೆಲಸ ಕಾರ್ಯಗಳನ್ನು ಮಾಡುತ್ತಿಲ್ಲ.
ಇನಾಮದಾರ ಅವರ ಬಲಗೈ ಬಂಟರಾಗಿದ್ದ ಬಾಬಾಸಾಹೇಬ ಪಾಟೀಲ ಕ್ಷೇತ್ರದಲ್ಲಿಯ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಆದರೆ, ಬಿಜೆಪಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ. ಇದರಿಂದಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ತಡೆ ಬಿದ್ದಿದೆ.
2013ರ ಚುನಾವಣೆಯಲ್ಲಿ ಡಿ.ಬಿ.ಇನಾಮದಾರ ಅವರು 53,924 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ಸುರೇಶ್ ಶಿವರುದ್ರಪ್ಪ 35,634 ಮತ, ಜೆಡಿಎಸ್‌ನ ಆನಂದ್ ಅಪ್ಪುಗೋಳ್ ಅವರು 20,657 ಮತಗಳನ್ನು ಪಡೆದಿದ್ದರು.












Click it and Unblock the Notifications