ವಿಜಯನಗರದ ಪಾರುಪತ್ಯ ಉಳಿಸಿಕೊಳ್ಳುವರೇ ಸಚಿವ ಕೃಷ್ಣಪ್ಪ
ಬೆಂಗಳೂರು, ಏಪ್ರಿಲ್ 21: ಕಾಂಗ್ರೆಸ್ ನಲ್ಲೇ ಇರಲೊ? ಬಿಜೆಪಿಗೆ ಹೋಗಲೊ? ಹೀಗೆ ಕಳೆದ ಆರು ತಿಂಗಳಿಂದ ಗೊಂದಲದಲ್ಲೇ ಇದ್ದ ವಸತಿ ಸಚಿವ ಎಂ.ಕೃಷ್ಣಪ್ಪ ಕೊನೆಗೂ ಕಾಂಗ್ರೆಸ್ ನಲ್ಲೇ ಉಳಿದು ವಿಜಯನಗರ ಕ್ಷೇತ್ರದಿಂದ ತಮ್ಮ ಅದೃಷ್ಟವನ್ನು ಮತ್ತೊಮ್ಮೆ ಒರೆಗಲ್ಲಿಗೆ ಹಚ್ಚಿದ್ದಾರೆ. ಇವರಿಗೆ ಬಿಜೆಪಿಯ ರವೀಂದ್ರ ಪ್ರಬಲ ಪೈಪೋಟಿ ಒಡ್ಡುತ್ತಿದ್ದಾರೆ.
ವಿಜಯನಗರ ಕ್ಷೇತ್ರದಲ್ಲಿ ಕೃಷ್ಣಪ್ಪ ಹಾಗೂ ಗೋವಿಂದರಾಜನಗರ ಕ್ಷೇತ್ರವನ್ನು ಅವರ ಪುತ್ರ ಪ್ರಿಯಕೃಷ್ಣ ಪ್ರತಿನಿಧಿಸುತ್ತಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಕೃಷ್ಣಪ್ಪ ಪ್ರಾಬಲ್ಯ ಹೊಂದಿದ್ದಾರೆ. ಆದರೆ ಬಿಬಿಎಂಪಿ ಚುನಾವಣೆಗಳಲ್ಲಿ ಪ್ರತಿಬಾರಿಯೂ ಇಲ್ಲಿ ಬಿಜೆಪಿ ಪಾರುಪತ್ಯ ಹೊಂದುತ್ತಿದೆ.
ಹಿಂದುಪರ ಸಂಘಟನೆಗಳು ಇಲ್ಲಿ ಬಲಿಷ್ಠವಾಗಿದ್ದರೂ ಕ್ಷೇತ್ರದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಕುರುಬರು ಮತ್ತು ಒಕ್ಕಲಿಗರ ಮತಗಳನ್ನು ಕೃಷ್ಣಪ್ಪ ಗಟ್ಟಿಯಾಗಿಸಿಕೊಂಡಿದ್ದು, ಬಿಜೆಪಿ ಓಟಕ್ಕೆ ಬ್ರೇಕ್ ಹಾಕುತ್ತಿದೆ. ಕಾಂಗ್ರೆಸ್ ಬಿಜೆಪಿ ನೇರ ಮುಖಾಮುಖಿ: ವಿಜಯನಗರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ. ಸಮಸ್ಯೆಗಳಿಗೆ ಪರಿಹಾರ: ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಕೊರತೆಯಿಲ್ಲ.

ಚುನಾವಣೆ ಸಮೀಪಿಸುತ್ತಿದ್ದಂತೆ ಅನೇಕ ಸಮಸ್ಯೆಗಳು ಪರಿಹಾರ ಕಂಡಿವೆ. ಮಳೆ ಸಂದರ್ಭದಲ್ಲಿ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕೊಚ್ಚೆ ನೀರು ನುಗ್ಗವುದರೊಂದಿಗೆ ರಸ್ತೆಯಲ್ಲಿ ನೀರು ನಿಂತು ತೀವ್ರ ಸಂಚಾರ ದಟ್ಟಣೆಗೆ ಕಾರಣವಾಗಿತ್ತು.
ಇದರಿಂದ ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದರು. ಬಹುವರ್ಷಗಳ ಈ ಸಮಸ್ಯೆಗೆ ಮುಕ್ತಿ ಕಲ್ಪಿಸಲಾಗಿದೆ. ಇನ್ನೊಂದೆಡೆ ವಿಜಯನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯನ್ನು ವೈಟ್ ಟಾಪಿಂಗ್ ಮಾಡಲಾಗಿದೆ.
2013ರ ವಿಧಾನಸಭಾ ಚುನಾವಣೆಯ ಫಲಿತಾಂಶ: 2013ರಲ್ಲಿ ನಡೆದ ಚುನಾವಣೆಯಲ್ಲಿ ಕೃಷ್ಣಪ್ಪ ಅವರ ಸಾಂಪ್ರದಾಯಿಕ ಎದುರಾಳಿ ವಿ. ಸೋಮಣ್ಣ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಜೆಡಿಎಸ್ ಈ ಕ್ಷೇತ್ರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿಯಿತ್ತು.
ಕಳೆದ ಚುನಾವಣೆಯಲ್ಲಿ ಒಟ್ಟು 25 ಜನ ಸ್ಪರ್ಧಿಸಿದ್ದರು. ಎಂ ಕೃಷ್ಣಪ್ಪ 76,639 ಮತಗಳನ್ನು ಪಡೆದರೆ, ಬಿಜೆಪಿಯ ವಿ ಸೋಮಣ್ಣ 44,130 ಮತಗಳನ್ನು ಪಡೆದಿದ್ದರು. ಕೃಷ್ಣಪ್ಪ 32,509 ಮತಗಳ ಭರ್ಜರಿ ಜಯ ಸಾಧಿಸಿದ್ದರು.
ಮತದಾರರ ವಿವರ: ಪುರುಷರು-1,57,354, ಮಹಿಳೆಯರು -1,41,197 ತೃತೀಯ ಲಿಂಗಿಗಳು-136 ಒಟ್ಟು 2,99,467 ಮತಗಳಿವೆ.












Click it and Unblock the Notifications