ಕ್ಷೇತ್ರ ಪರಿಚಯ : ಎಚ್.ವೈ.ಮೇಟಿಗೆ ಸವಾಲು ಹಾಕುವವರು ಯಾರು?
ಉತ್ತರ ಕರ್ನಾಟಕ ಭಾಗದ ಪ್ರಮುಖ ಜಿಲ್ಲಾ ಕೇಂದ್ರ ಬಾಗಲಕೋಟೆ. ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಬಾಗಲಕೋಟೆಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಲಾಯಿತು. 7 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆ ಬಾಗಲಕೋಟೆ.
ಬಾಗಲಕೋಟೆ ಕ್ಷೇತ್ರದ ಶಾಸಕರು ಕಾಂಗ್ರೆಸ್‌ನ ಎಚ್.ವೈ.ಮೇಟಿ. 2013ರ ಚುನಾವಣೆಯಲ್ಲಿ ಗೆದ್ದು ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದರು. ವಿಡಿಯೋ ಸಿಡಿ ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.
ವಿಡಿಯೋ ಸಿಡಿ ಬಿಟ್ಟರೆ ಬೇರೆ ಯಾವುದೇ ಆರೋಪ ಎಚ್.ವೈ.ಮೇಟಿ ಅವರ ಮೇಲಿಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ತಮ್ಮ ಮೇಲೆ ಆರೋಪದ ಬಗ್ಗೆ ತಲೆಕೆಡಿಸಿಕೊಳ್ಳದೇ ಕ್ಷೇತ್ರದಲ್ಲಿನ ಕೆಲಸಗಳತ್ತ ಗಮನ ಹರಿಸಿದ್ದಾರೆ.

ಸೌಮ್ಯ ಸ್ವಭಾವದ, ಅಹಂಕಾರ ಇಲ್ಲದ ರಾಜಕಾರಣಿ ಎಂದು ಹೆಸರು ಪಡೆದಿದ್ದಾರೆ ಎಚ್.ವೈ.ಮೇಟಿ. ಕಾರ್ಯಕರ್ತರನ್ನು ಸೆಳೆಯಲು ಅವರಿಗೆ ಈ ಗುಣ ಸಹಾಯಕವಾಗಿದೆ. ಮೇಟಿ ಅವರು ಕುರುಬ ಸಮುದಾಯದ ಪ್ರಬಲ ಮುಖಂಡರು. ಬಾಗಲಕೋಟೆ ಕ್ಷೇತ್ರದಲ್ಲಿ ಅಂದಾಜು 30ಸಾವಿರ ಕುರುಬ ಸಮುದಾಯದ ಮತಗಳಿವೆ. ಆದ್ದರಿಂದ, ಈ ಬಾರಿಯೂ ಅವರಿಗೆ ಟಿಕೆಟ್ ನಿರಾಕರಿಸಲು ಸಾಧ್ಯವಿಲ್ಲ.
ಈ ಹಿಂದೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ಮಾಜಿ ಶಾಸಕ ಪಿ.ಎಚ್.ಪೂಜಾರ್ ಹಾಗೂ ಬಸವೇಶ್ವರ ಸಹಕಾರಿ ಬ್ಯಾಂಕನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹಾಗೂ ಕಾಂಗ್ರೆಸ್ ಮುಖಂಡರಾದ ಗೋವಿಂದ ಬಳ್ಳಾರಿ ಹಾಗೂ ಶ್ರೀನಿವಾಸ ಬಳ್ಳಾರಿ ಅವರು ಈ ಬಾರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮೇಟಿ ಅವರಿಗೆ ಟಿಕೆಟ್ ಕೈ ತಪ್ಪಲಿದೆಯೇ? ಕಾದು ನೋಡಬೇಕು.
ಈ ಬಾರಿ ಮತ್ತೆ ಬಿಜೆಪಿಯಿಂದ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಕಣಕ್ಕಿಳಿಯಲಿದ್ದಾರೆ. ಈ ಹಿಂದೆ ಮೇಟಿ ಅವರ ವಿರುದ್ಧ ಸೋಲು ಅನುಭವಿಸಿದ್ದ ವೀರಣ್ಣ ಚರಂತಿಂಠ ಅವರು ಮತ್ತೆ ಅದೃಷ್ಠ ಮರೀಕ್ಷೆಗೆ ಮುಂದಾಗಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಶಾಸಕರಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಕೂಡ, ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕೆಜೆಪಿ ಗೊಂದಲದಿಂದಾಗಿ ಚರಂತಿಂಠ ಅವರಿಗೆ ಸೋಲಾಗಿತ್ತು. ರಾಜೀ ಇಲ್ಲದ ನಿಲುವು, ಹರಿತವಾದ ಬಾಯಿ, ಮುಂಗೋಪ ಹಾಗೂ ಕಾರ್ಯಕರ್ತರಿಂದ ಕಾಯ್ದುಕೊಂಡ ಅಂತರ ಅವರ ಸೋಲಿಗೆ ಕಾರಣವಾಗಿದ್ದವು.
2013ರ ಫಲಿತಾಂಶ
* ಎಚ್.ವೈ.ಮೇಟಿ : 67,749 ಮತಗಳು
* ವೀರಣ್ಣ ಚರಂತಿಮಠ : 64,819
* ಗೆಲುವಿನ ಅಂತರ : 2930 ಮತ












Click it and Unblock the Notifications