ಅನುದಾನ ಬಳಕೆ: ಹಾಸನದಲ್ಲಿ ಹೆಚ್ಚಿನ ಹಣ ಖರ್ಚೇ ಆಗಿಲ್ಲ
ಬೆಂಗಳೂರು, ಏಪ್ರಿಲ್ 19: ಏಳು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಹಾಸನ ಜಿಲ್ಲೆಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯು 2013ರಿಂದ 2017ರ ಡಿಸೆಂಬರ್ ಅಂತ್ಯದವರೆಗೂ ಸಮಯ ಪ್ರಮಾಣದಲ್ಲಿ ಹಂಚಿಕೆಯಾಗಿದೆ. ಆದರೆ, ಎಲ್ಲ ಶಾಸಕರೂ ಪೂರ್ಣಪ್ರಮಾಣದಲ್ಲಿ ಅನುದಾನವನ್ನು ವಿನಿಯೋಗಿಸಿಲ್ಲ.
ಜಿಲ್ಲೆಯಲ್ಲಿ ಐದು ವರ್ಷ ಅವಧಿಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಮೊದಲ ನಾಲ್ಕು ವರ್ಷದಲ್ಲಿ ಒಟ್ಟಾರೆ 2 ಕೋಟಿಗೂ ಅಧಿಕ ಅನುದಾನ ಬಳಕೆಯಾಗದೆ ಉಳಿದಿದೆ. ಇನ್ನು 2017-18 ನೇ ಸಾಲಿನಲ್ಲಿ 7 ಕೋಟಿ ರೂಪಾಯಿಗೂ ಹೆಚ್ಚಿನ ಹಣವನ್ನು ಬಳಸಿಕೊಳ್ಳಲು ಶಾಸಕರು ಮುಂದಾಗಿಲ್ಲ. ಯಾವ ಕ್ಷೇತ್ರದಲ್ಲಿ ಎಷ್ಟು ಪ್ರಮಾಣದ ಅನುದಾನ ಇನ್ನೂ ಖರ್ಚಾಗಿಲ್ಲ ಎಂಬ ಮಾಹಿತಿ ಇಲ್ಲಿದೆ.
ಅನುದಾನ ಬಳಕೆಯಲ್ಲಿ ಮುಂಚೂಣಿಯಲ್ಲಿದ್ದ ಶ್ರವಣಬೆಳಗೊಳದ ಶಾಸಕ ಸಿ.ಎನ್.ಬಾಲಕೃಷ್ಣ 2017ರ ಸಾಲಿನಲ್ಲಿ ಮಾತ್ರ ಒಂದು ಕೋಟಿಗೂ ಅಧಿಕ ಅನುದಾನ ಉಳಿಸಿಕೊಂಡಿದ್ದಾರೆ. ಉಳಿದಂತೆ ಬೇಲೂರು ಕ್ಷೇತ್ರದ ಶಾಸಕರಾಗಿದ್ದ ದಿವಂಗತ ರುದ್ರೇಶ್ ಗೌಡ ಅಧಿಕ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನಿಧಿ ವಿನಿಯೋಗಿಸಿದ್ದಾರೆ.

2013ರಲ್ಲಿ ಎಲ್ಲ ಕ್ಷೇತ್ರಗಳಿಗೂ ತಲಾ 196.40 ಲಕ್ಷ ರೂಪಾಯಿ ಹಂಚಿಕೆಯಾಗಿದ್ದರೆ, ಉಳಿದ ವರ್ಷಗಳಲ್ಲಿ 200 ಲಕ್ಷ ಬಿಡುಗಡೆಯಾಗಿದೆ.
ಹಾಸನ ಶಾಸಕ ಎಚ್.ಎಸ್. ಪ್ರಕಾಶ್, ಸುಮಾರು 1.20 ಕೋಟಿ ರೂಪಾಯಿ ಅನುದಾನವನ್ನು ಬಳಸಿಕೊಂಡಿಲ್ಲ. 2017-18ನೇ ಸಾಲಿನಲ್ಲಿ 92 ಲಕ್ಷ ರೂಪಾಯಿಯನ್ನು ಅವರು ಉಳಿಸಿಕೊಂಡಿದ್ದಾರೆ.
ಹೊಳೆನರಸೀಪುರದ ಶಾಸಕ ಎಚ್.ಡಿ. ರೇವಣ್ಣ ಸುಮಾರು 1.8 ಕೋಟಿ ಅನುದಾನವನ್ನು ಜಿಲ್ಲಾಧಿಕಾರಿ ಖಾತೆಯಲ್ಲಿಯೇ ಉಳಿಸಿದ್ದಾರೆ. ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ 2015-16ನೇ ಸಾಲಿನಲ್ಲಿ ಸಂಪೂರ್ಣ ಅನುದಾನ ಬಳಕೆ ಮಾಡಿದ್ದಾರೆ. ಆದರೆ, ಉಳಿದ ಸಾಲಿನಲ್ಲಿ ದೊರೆತ ಅನುದಾನದಲ್ಲಿ 54 ಲಕ್ಷ ಖರ್ಚು ಮಾಡದೆ ಉಳಿಸಿಕೊಂಡಿದ್ದಾರೆ, 2017-18ನೇ ಸಾಲಿನಲ್ಲಿ 1.68 ಕೋಟಿ ರೂಪಾಯಿ ಮೊತ್ತವನ್ನು ಖರ್ಚು ಮಾಡಿಲ್ಲ.
ಸಕಲೇಶಪುರ ಶಾಸಕ ಎಚ್.ಕೆ. ಕುಮಾರಸ್ವಾಮಿ 2 ಕೋಟಿಗಿಂತ ಹೆಚ್ಚು ಮೊತ್ತದ ಹಣವನ್ನು ವ್ಯಯಮಾಡದೆ ಉಳಿಸಿಕೊಂಡಿದ್ದಾರೆ. ಅರಕಲಗೂಡು ಶಾಸಕ, ಸಚಿವ ಎ. ಮಂಜು 3 ಕೋಟಿಗೂ ಅಧಿಕ ಅನುದಾನವನ್ನು ಬಾಕಿ ಉಳಿಸಿದ್ದಾರೆ. ಬೇಲೂರು ಶಾಸಕರಾಗಿದ್ದ ರುದ್ರೇಶ್ ಗೌಡ, 47 ಲಕ್ಷ ರೂಪಾಯಿ ಅನುದಾನ ಬಳಕೆ ಮಾಡಿರಲಿಲ್ಲ.












Click it and Unblock the Notifications