• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

HOW DARE YOU? ಎಂದಳಾ ಗ್ರೇತಾ, ಭೂಮ್ತಾಯಿಗೂ ಮಾತು ಬರುವಂತಿದ್ದರೆ!

|

ಅಂದು ಭಾನುವಾರ. ದಿನಾಂಕ 1 ಡಿಸೆಂಬರ್ 2019. ಕೊಂಚ ತಡವಾಗಿಯೇ ಎದ್ದೆ. ಮೋಡ ಮುಸುಕಿದ ವಾತಾವರಣ, ಸಣ್ಣಗೆ ಮಳೆ ಜಿನುಗುತ್ತಿತ್ತು. ಮೊದಲೇ ನಿಗದಿ ಮಾಡಿಕೊಂಡಂತೆ ಜಯರಾಮ್ ರ ಗ್ರೀನ್ ಪಾಥ್ ಹೋಟೆಲಿನಲ್ಲಿ ಖ್ಯಾತ ವಿಜ್ಞಾನ ಲೇಖಕ ನಾಗೇಶ ಹೆಗಡೆ ಅವರ 'ಮೂಕ ಪೃಥ್ವಿಗೆ ಮಾತು ಕೊಟ್ಟ ಕಿಶೋರಿ ಗ್ರೇತಾ ಥನ್ ‌ಬರ್ಗ್' ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋದೆ. ನಾಗೇಶ ಹೆಗಡೆ ಎದುರಾದ ಕೂಡಲೇ 'ಹೂ ಬಂದ್ರಿ., ಮಳೇಲಿ' ಅಂದವರು ತಣ್ಣಗೆ ನಕ್ಕು ವೇದಿಕೆಗೆ ಹೋದರು. ಗ್ರೇತಾಳ ಬಗ್ಗೆ ಮಾತನಾಡುತ್ತಾ ಆಕೆಯ ಆಶೆಗೆ ಪೂರಕವಾಗಿ ಕೆಲಸ ಮಾಡುತ್ತಿರುವ ಕೆಲವು ಮಂದಿಯನ್ನು ಕರೆಸಿರುವುದಾಗಿ ಹೇಳಿ ಕುಳಿತರು.

ಕವಯತ್ರಿ ಸಾಮಾಜಿಕ ಕಾರ್ಯಕರ್ತೆ ರೂಪಾ ಹಾಸನ ಮಾತನಾಡಿ ಹಾಸನದಲ್ಲಿ ಹಸಿರು ಭೂಮಿ ಪ್ರತಿಷ್ಠಾನದಿಂದ ಸುಮಾರು 13 ಕೆರೆಗಳ ಹೂಳೆತ್ತಿರುವುದಾಗಿ, 40 ಕಲ್ಯಾಣಿ ಪುನಶ್ಚೇತನ ಮಾಡಿರುವುದಾಗಿ ಹಾಗೂ 25,000 ಸಸಿಗಳನ್ನು ನೆಟ್ಟಿರುವುದಾಗಿ ಹೇಳಿದರು. ಅದರ ಜೊತೆಗೇ ನಾವು ಮಾಡಿರುವ ಕೆಲಸ 'ದೊಡ್ಡ ಕಾಡಿಗೆ ಬೆಂಕಿ ಬಿದ್ದಾಗ ಪುಟ್ಟ ಗುಬ್ಬಿಯೊಂದು ತನ್ನ ಕೊಕ್ಕಿನಲ್ಲಿ ನೀರು ತಂದು ಬೆಂಕಿ ನಂದಿಸುವ ಪ್ರಯತ್ನದಂತೆ' ಅಂದರು.

ಬಾಣಲೆಯಿಂದ ಬೆಂಕಿಗೊ, ಸುಗಮ ಬಾಳುವೆಗೊ?

ನಾಗೇಶ ಹೆಗಡೆ ಮಾತಿನ ಆರಂಭದಲ್ಲಿ ನಾವೆಲ್ಲಾ ಯಾಕೆ ಇಲ್ಲಿ ಸೇರಿದ್ದೇವೆ ಅಂದರೆ ಒಂದು ಎಮರ್ಜೆನ್ಸಿ ಬಂದಿದೆ, ಭೂಮಿಗೆ ಜ್ವರ ಬಂದಿದೆ ಎಂದದ್ದು ತಟ್ಟನೆ ನೆನಪಾಯಿತು. ಸಾಮಾನ್ಯವಾಗಿ ಪೃಥ್ವಿಗೆ ಎದುರಾಗಿರುವ ಕಂಟಕದ ಪ್ರಮಾಣ ಸುಲಭವಾಗಿ ಅರ್ಥವಾಗುವುದಿಲ್ಲ. ಅಪಾಯ ನಮ್ಮ ಬುಡಕ್ಕೆ ಬಂದಾಗ ಮಾತ್ರ ಅರ್ಥವಾಗುವುದು. ಇಲ್ಲವಾದರೆ ಸಮಸ್ಯೆ ಮತ್ಯಾರದ್ದೋ ಎಂದೇ ಎಲ್ಲರೂ ಭಾವಿಸುವುದು. ಆದರೆ ಗ್ರೀನ್ ಪಾಥ್ ನಲ್ಲಿ ನೆರೆದಿದ್ದ ಮಂದಿ ಪೃಥ್ವಿಗೆ ಎದುರಾಗಿರುವ ಕಂಟಕ ತಮ್ಮದೇ ಎಂದು ಭಾವಿಸುವ ಪೈಕಿಯವರಂತೆ ನನಗೆ ಕಂಡರು.

ನಂಜನಗೂಡಿನ ಹೆಗ್ಗಡಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಸಂತೋಷ್ ಗುಡ್ಡಿಯಂಗಡಿ ತಮ್ಮ ಶಾಲೆಯ ವಿದ್ಯಾರ್ಥಿಗಳೊಂದಿಗೆ ಕೂಡಿ ಪ್ಲಾಸ್ಟಿಕ್ ವಿರುದ್ಧ ಒಂದು ಕ್ರಿಯೇಟಿವ್ ಚಳವಳಿ ಆರಂಭಿಸಿರುವುದಾಗಿ ನಮಗೆ ತಿಳಿಸಿದರು. ಪ್ಲಾಸ್ಟಿಕ್ ಕಸವೆಲ್ಲಾ ಆಯ್ದು, ಆಯಾ ಪ್ಲಾಸ್ಟಿಕ್ ಯಾವ್ಯಾವ ಕಂಪನಿಗಳಿಗೆ ಸೇರಿದ್ದು ಎಂದು ಗುರುತು ಮಾಡಿ ಅದೇ ಪ್ರಕಾರ ಬೇರ್ಪಡಿಸಿ, "ಇದು ನೀವೇ ಉತ್ಪಾದಿಸಿರುವ ಪ್ಲಾಸ್ಟಿಕ್ ತ್ಯಾಜ್ಯ-ನೀವೇ ಮರುಬಳಕೆ ಮಾಡಿ" ಎಂಬ ಎರಡು ಸಾಲಿನ ಪತ್ರದೊಂದಿಗೆ ಆಯಾ ಕಂಪನಿಗಳ ಪ್ಲಾಸ್ಟಿಕ್ ಕವರ್‌ಗಳನ್ನು ಕಂಪನಿ ಅಡ್ರೆಸ್ ಗೆ ಕೊರಿಯರ್ ಮಾಡುವ ಚಳವಳಿ ಅದು. ಎಲ್ಲರೂ ರಿಪ್ಲೈ ಮಾಡಿಲ್ಲವಾದರೂ, ಕೋಲ್ಗೇಟ್ ಕಂಪನಿಯವರು 2025ಕ್ಕೆ ನಾವು ಆ ಕೆಲಸ ಮಾಡುವ ತಯಾರಿಯಲ್ಲಿದ್ದೇವೆ ಎಂದು ಪತ್ರ ಬರೆದು ಪೇಸ್ಟು, ಬ್ರೆಷ್ ಗಳನ್ನು ಗಿಫ್ಟ್ ಕಳುಹಿಸಿರುವುದಾಗಿ (ಮತ್ತದೇ ಪ್ಲಾಸ್ಟಿಕ್) ಹೇಳಿ ಕುಹಕದ ನಗೆ ಬೀರಿದ ಸಂತೋಷ್ ರ ಮೊಗದಲ್ಲಿ ಚಳವಳಿ ಕಟ್ಟಿರುವ ಮತ್ತು ಗ್ರೇತಾಳ ಕೆಲಸದಲ್ಲಿ ತಾನೂ ಭಾಗಿಯಾಗಿರುವ ಸಂತಸವನ್ನು ಕಂಡೆ.

ಅಧ್ಯಕ್ಷೀಯ ಮಾತನಾಡಿದ ಡಾ ಸಂಜೀವ್ ಕುಲಕರ್ಣಿ, ಗ್ರೇತಾ ಳ ಪುಸ್ತಕ ಕನ್ನಡಕ್ಕೊಂದು ಕಾಣಿಕೆ ಎಂದು ಸಂತೋಷ ಪಡಬೇಕೋ ಅಥವಾ ಇಂಥದೊಂದು ಪುಸ್ತಕ ಬರೆಯುವ ದಾರುಣ ಪ್ರಸಂಗವನ್ನು ತಂದುಕೊಂಡಿದ್ದೇವೆ ಎಂದು ಆತಂಕ ಪಡಬೇಕೋ ಗೊತ್ತಾಗುತ್ತಿಲ್ಲ ಎಂದು ಹೇಳಿ ಭೂಮಿಗೆ ಎದುರಾಗಿರುವ ಮಹಾ ಕಂಟಕದ ಬಗ್ಗೆ ಹೇಳಿದರು. Climate Change ಎಂಬುದು ಇನ್ನು ಮೇಲೆ Climate Crisis ಎಂದೂ, ಗ್ಲೋಬಲ್ ವಾರ್ಮಿಂಗ್ ಇನ್ನು ಮುಂದೆ ಗ್ಲೋಬಲ್ ಹೀಟಿಂಗ್ ಎಂತಲೂ ಬರೆಯುವುದಾಗಿ ಪತ್ರಿಕೆಯೊಂದು ಹೇಳಿಕೊಂಡಿರುವುದರ ಹಿಂದಿನ ಉದ್ದೇಶವನ್ನೊಮ್ಮೆ ಗಂಭೀರವಾಗಿ ಅರಿಯಬೇಕೆಂದರು.

ಇಡೀ ಭೂಮಂಡಲಕ್ಕೆ ಎದುರಾಗಿರುವ ಕಂಟಕವನ್ನು ಅಂಕಿ ಅಂಶಗಳ ಸಮೇತ ಸ್ಪಷ್ಟ ನುಡಿಗಳಲ್ಲಿ ಹೇಳುವ 16ರ ಹರೆಯದ ಹುಡುಗಿ ಗ್ರೇತಾ ಬಗ್ಗೆ ಅಲ್ಲಿ ನೆರೆದಿದ್ದ ಎಲ್ಲರಿಗೂ ಹೆಮ್ಮೆಯಿತ್ತು. ಕಾರ್ಯಕ್ರಮ ಮುಗಿಸಿ ಹೊರಬಂದವನು ಆಕೆ ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣವನ್ನು ಯೂಟ್ಯೂಬ್ ನಲ್ಲಿ ಹುಡುಕಿ ನೋಡಿದೆ. ಭೂಮ್ತಾಯಿಗೆ ಮಾತು ಬರುವಂತಿದ್ದರೆ ಅವಳೂ ಕೂಡಾ ಗ್ರೇತಾಳಂತೆಯೇ How dare you? ಎಂದು ನಮ್ಮನ್ನೆಲ್ಲಾ ಗದರಿಸಿ ಕೇಳುತ್ತಿದ್ದಳು.

ಅಂದಹಾಗೆ ಗ್ರೇತಾಳ ಗ್ರೇಟ್‌ನೆಸ್ ಅಡಗಿರುವುದು ಅವಳ ಮಾತು ಮತ್ತು ಕೃತಿ ಎರಡರಲ್ಲೂ. ಗ್ರೇತಾ ಗಾಂಧಿ ಗೇಳಿದಂತೆ "Be the change you want to see in this world" ಆಕೆ ಮೊದಲು ಬದಲಾಗಿ ಜಗತ್ತಿಗೆ ಪಾಠ ಹೇಳುತ್ತಿದ್ದಾಳೆ. ತನ್ನ ಅಪ್ಪ ಅಮ್ಮನನ್ನೂ ಬದಲಾಯಿಸಿದ್ದಾಳೆ. ಮನೆ ಗೆದ್ದು ಮಾರು ಗೆಲ್ಲು ಎಂಬ ಜನಪದ ಮಾತಿಗೂ ಆಕೆ ಅನ್ವರ್ಥವಾಗಿದ್ದಾಳೆ. ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೂ ತಲುಪಬೇಕಾದ ಪುಸ್ತಕವಿದು.

Greta the great-Green Salute to you

English summary
Environmentalist Nagesh Hegde Book "Greta Thunberg" is must read for school children to know the importance of our environment
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X