ಅವಳಿಗೆ ಇರಬೇಕಾದದ್ದೆಲ್ಲ ಇದೆ; ಅದೊಂದು ಬಿಟ್ಟು...?
ಬದುಕಿನಲ್ಲಿ ಕೆಲವು ಅವಶ್ಯಕತೆಗಳುಂಟು. ಅದು ನಮಗಾಗಿ... ಕೇವಲ ನಮಗಾಗಿ ಮಾತ್ರ! ಅಲ್ಲಿ ನಮ್ಮ ವಿನಹ ಮತ್ತಾರಿಗೂ ಪ್ರವೇಶ ಕೂಡದು. ಅದು ಸ್ವಾತಂತ್ರ್ಯವೇ? ಅದು ಅಸ್ತಿತ್ವವೇ? ಅವುಗಳ ಹುಡುಕಾಟದಲ್ಲೇ ಇವರುಗಳ ವರ್ತಮಾನ ಭೂತವಾಗುತ್ತಿದೆ. ಬಯಸಿದ ಭವಿಷ್ಯವಾದರೂ ದಕ್ಕೀತೇ?
ಹೌದು, ಇವಳು ಅದೇ ಸುಮ. ನಿಮಗೆ ಅವಳ ಬಗ್ಗೆ ಮುಂಚೇನೆ ಹೇಳಿದ್ದೆ ಅಲ್ಲ್ವಾ? ಕಾಲೇಜಿಗೆ ಸೇರಿದ್ದ ಹೊಸತರಲ್ಲಿ ಅವರ ತಂದೆನ ಸೈಕಲ್ ತೆಗೆದ್ಕೊಡೋಕ್ಕೆ ಕೇಳಿದ್ಲು. ಅವ್ರು ಅದ್ಯಾವ ಮೂಡ್ನಲ್ಲಿದ್ದರೋ ಏನೋ ‘ನೀನೇ ದುಡಿದು ತೊಗೊ’ ಅಂದ್ರು ನೋಡಿ, ಕಾಲೇಜ್ನಿಂದ ಬಂದು ಮನೆ ಪಾಠ ಹೇಳಿ ಅಂತೂ ಆರು ತಿಂಗಳಲ್ಲಿ ತನ್ನದೇ ದುಡಿಮೆಯಿಂದ ತನ್ನದೇ ಸೈಕಲ್ ತೊಗೊಂಡು ಎಲ್ಲರಹತ್ರ ಭೇಷ್ ಅನಿಸಿಕೊಂಡ್ಲು!
ಇನ್ನೂ ಗೊತ್ತಾಗ್ಲಿಲ್ಲವಾ? ಹೌದಪ್ಪಾ, ಮದುವೆ ದಿನಾನೇ ರಾತ್ರಿ ಬಹ್ರೇನ್ flight ಹತ್ತಿದಳಲ್ಲಾ ಅವಳೇ. . . .ಹೂಂ, ಈಗ ಅವಳ ಗಂಡನಿಗೆ ಡೆಟ್ರಾಯಿಟ್‌ನಲ್ಲಿ ಕೆಲಸ. ನಾಲ್ಕೈದು ವರ್ಷ ಆಯ್ತು. ಅವಳಲ್ಲೇ ಇರೋದು. ಅಬ್ಬ ಅಂತೂ ಗೊತ್ತಾಯ್ತಲ್ಲ ನಿಮಗೆ!
ಎಷ್ಟು ಮುದ್ದಾದ ಮಕ್ಕಳಲ್ಲ್ವಾ? ನೀವು ನೋಡಿದಾಗ ಇದ್ದ್ರಲ್ಲ ಅಷ್ಟು ಚಿಕ್ಕವರಾಗೇ ಇರ್ತಾರೇನ್ರೀ? ಈಗ ಇಬ್ಬರೂ ಹೈಸ್ಕೂಲ್‌ನಲ್ಲಿ ಓದ್ತಿದ್ದಾರೆ. ನಾನು ನೋಡಿದ್ಹಂಗೆ ಅವಳಿಗೆ ಕಾಣೋ ಅಂತ ತೊಂದರೆ ಏನೂ ಇಲ್ಲಪ್ಪಾ. ಮೊನ್ನೆ ಡಿಸೆಂಬರ್ ರಜಕ್ಕೆ ಬಂದಿದ್ದಾಗ ‘ನಿನ್ಗೇನೆ ಕಡಿಮೆ. ಕೇಳಿದ್ದಕ್ಕೆಲ್ಲಾ ಹೂಂ ಅನ್ನೋ ಗಂಡ, ಒಳ್ಳೆ ಮಕ್ಕಳು. . . .’ ಅಂತ ಅಂದೆ, ಅದಕ್ಕವಳು ಏನಂದ್ಲು ಗೊತ್ತಾ? ವಿಶೇಷವಾದ್ದದ್ದೇನೂ ಅಲ್ಲ ಬಿಡಿ. ನಾನು ನೀವು ಮಾತ್ಮಾತಿಗೂ ಅಂತಿರ್ತೀವಲ್ಲ ಅದನ್ನೇ ಅವಳು ಹೇಳಿದ್ದು. ಅವಳ ಮಾತು ಕೇಳಿದ ತಕ್ಷಣ ನನಗೆ ‘ಹಂಗಿನರಮನೆಗಿಂತ ಇಂಗಡದ ಗುಡಿ ಲೇಸು’ ಅನ್ನುವ ಕವಿ ವಾಣಿ ನೆನಪಾಯ್ತು.
ಎಲ್ಲಿಗ್ಹೋಗ್ಬೇಕಾದ್ರೂ ಸಂಸಾರದ ಜೊತೇಗೆ ಹೋಗಬೇಕು. ಅಲ್ಲಿರುವ ಸ್ನೇಹಿತರೂ family friends! ಏನೇ entertainment ಇದ್ದರೂ ಗ್ರೂಪ್ ಈವೆಂಟ್ಸ್! ಬೇಕೆಂದಾಗ ತವರು ನೆಂಟರು ಇಷ್ಟರೂ ಅಂತ ಫೋನ್ ಕೂಡ ಮಾಡಕ್ಕಾಗಲ್ಲ. ಪಾಪ, ಗಂಡ ಒಪ್ಪಿದರೂ ಅವಳ ಮನಸ್ಸಿನ ಮೀಟರ್ bill ಕಡೆ ಓಡುತ್ತೆ. ಅವಳದ್ದೂ ಅಂತ ಒಂದು ಸೇವಿಂಗ್ಸ್ ಅಕೌಂಟ್ ಕೂಡ ಇಟ್ಟುಕೊಳ್ಳೋಹಾಗಿಲ್ಲ. ಎಲ್ಲವೂ ಖುಲ್ಲಂಖುಲ್ಲ!
ವರ್ಷಕ್ಕೋ ಎರಡ್ವರ್ಷಕ್ಕೋ ಇಲ್ಲಿಗೆ ಬರುವಾಗ ತನಗಿಷ್ಟ ಬಂದವರಿಗೆ ಗುಟ್ಟಾಗಿ ತನಗಿಷ್ಟ ಬಂದದ್ದನ್ನು ತಂದುಕೊಡುವ ಹಾಗೂ ಇಲ್ಲ. ಎಲ್ಲರ ಲಗ್ಗೇಜ್ ಪ್ಯಾಕಿಂಗ್ ಒಟ್ಟಿಗೆ ಮಾಡಬೇಕಲ್ಲ?! ಅದು ಮೀರಿದರೆ ಸ್ಕ್ಯಾನರ್ ಬೇರೆ ಇದೆಯಲ್ಲಪ್ಪಾ! ‘ಎಲ್ಲವೂ ಇದ್ದು ಏನೂ ಇಲ್ಲದವಳಂತೆ ಇದ್ದೀನಿ’ ಅಂತ ಸುಮ ಅಂದಾಗ ನನ್ನ ಮನಸು over weight ಆಗಿಬಿಡ್ತು. ನನಗೇನೋ ತೂಕ ಇಳಿಸಿಕೊಳ್ಳೋಕ್ಕೆ ನೀವಿದ್ದೀರ ಆದರೆ ಅವಳಿಗೆ. . . . .
ತಂಗಿ ಮದುವೆಗೆ ಗ್ರೈಂಡರ್ ಗಿಫ್ಟ್ ಕೊಡ್ತೀನಿ ಅಂದ್ರೆ ಗಂಡ ಬೇಡ ಅಂತೇನು ಅನ್ನೋಲ್ಲ. ಆದರೆ ಯಾರಿಗೂ ಹೇಳದೆ ಇನ್ನೊರೈವತ್ತು ರೂಪಾಯಿನ ಕಲ್ಕತ್ತ ಕಾಟನ್ ಸೀರೆನ ಅವಳಿಗೆ ಗುಟ್ಟಾಗಿ ಕೊಡೋದ್ರಲ್ಲಿ ಇರೋ ಮಜಾನೇ ಬೇರೆ ಅಲ್ಲ್ವಾ?! ನೀವೇನೇ ಹೇಳಿ ಗುಟ್ಟು ಕೂಡಿಡಬೇಕು ಅನ್ನದ ಮನುಷ್ಯನೇ ಇಲ್ಲ, ಹಾಗೆಂದರೆ ಅವನು ಮನುಷ್ಯನೇ ಅಲ್ಲ! ನಮಗೆ ನಾವೇ ಹೇಳ ಬಯಸದ ಗುಟ್ಟುಗಳೂ ಎಷ್ಟೊಂದು. . . .ನೆನೆದಾಗಲೆಲ್ಲಾ ಇತರರಿಗೆ ಕಂಡರೂ ಕಾಣದಂತೆ ತುಟಿಯಂಚಿನಲ್ಲಿ ಮೂಡುವ ನಗು ಎಷ್ಟೊಂದು ಹಿತ. . .
ಹೀಗೇ ಯೋಚಿಸ್ತಾ ಕೂತಿದ್ದಾಗ ಇದ್ದಕ್ಕಿದ್ದಂತೆ ನನಗೆ ಆ ಗಂಡ ಹೆಂಡತಿ ಆಡಿದ್ದ ಮಾತುಗಳು ನೆನಪಾದವು. ಯಾರವರು? ಅವರಾಡಿದ ಮಾತು ಏನು? ಅದನ್ನೆಲ್ಲಾ ನಾನು ಹೇಳ್ತೀನಿ ಆದರೆ ಹನ್ನೆರಡು ವರ್ಷಗಳಿಂದ ಅವರು ನನಗೆ ಯಾಕೆ ನೆನಪಾಗುತ್ತಲೇ ಇರುತ್ತಾರೆ ಅಂತ ನೀವು ಹೇಳಬೇಕು ಆಯ್ತಾ?! ಈಗ ಹೋಗಿ ಮತ್ತೆ ಬರಲಾ?












Click it and Unblock the Notifications