ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೆರಡ್ಮೂರು ಕಥೆಗಳು; ನನ್ನದು ನಿಮ್ಮದು ಮತ್ತ್ಯಾರದ್ದೋ..!

By Staff
|
Google Oneindia Kannada News


“ಯಥಾವತ್ತಾದ ಆತ್ಮಕಥೆಯನ್ನು ಬರೆಯಲು ಪ್ರಯತ್ನಿಸುವುದು ನನ್ನ ಉದ್ದೇಶವಲ್ಲ. ನಾನು ಹೇಳಬಯಸುವುದು ಸತ್ಯಶೋಧನೆಯ ಹಾದಿಯಲ್ಲಿ ನನ್ನ ಪ್ರಯೋಗಗಳನ್ನು ಮಾತ್ರ. ಜೀವನ ಇಂತಹ ಪ್ರಯೋಗಗಳ ಹೊರತು ಮತ್ತೇನೂ ಅಲ್ಲ. ಆದ್ದರಿಂದ ಯಾವಕಥೆಯೂ ಆತ್ಮಕಥೆಯ ರೂಪ ಪಡೆದುಬಿಡಲು ಸಾಧ್ಯ. ನನ್ನಂತಹ ನೂರಾರು ಜನ ಅಳಿದರೂ ಸತ್ಯವೊಂದೇ ಕಥೆಯಾಗಿ ಹರಿಯುತ್ತಿರಲಿ, ಪ್ರತೀ ಪ್ರಯೋಗವೂ ಕಥೆಯಾಗಿ ಉಳಿದುಬಿಡಲಿ” ಎಂ.ಕೆ.ಗಾಂಧಿ.



Its a story timeಇಲ್ಲಿ ಯಾವುದೂ ಖಾಸಗಿಯಲ್ಲ. ನಿಜ ಹೇಳಬೇಕೆಂದರೆ ಎಂದೋ ಎಲ್ಲೋ ಯಾರಿಗೋ ಆದದ್ದನ್ನೇ ನಾವು ಖಾಸಗಿಯೆಂದುಕೊಂಡು ಬಚ್ಚಿಟ್ಟುಕೊಂಡು ಬೆಚ್ಚಗೆ ಜತನದಿಂದ ಕಾಯ್ದುಕೊಳ್ಳುತ್ತಿರುತ್ತೇವೆ. ಸಾರ್ವರ್ತ್ರಿಕಕ್ಕೆ ಆಲಿಕೆಯಾಗಿ ಮನಸ್ಸು ಸೋಸಿ ಇಟ್ಟುಕೊಂಡಿದ್ದೇ ಖಾಸಗಿ! ಸಮಸ್ಯೆ ಧುತ್ತೆಂದು ಎದುರುನಿಂತು ಮೀಸೆ ತಿರುವಿಕೊಳ್ಳುತ್ತಿರುವಾಗ, ಅದರ ಕಣ್ಣಲ್ಲಿ ಕಣ್ಣಿಟ್ಟು ತುಂಟನಗೆ ಹೊತ್ತು ಮೆಲ್ಲನೆ ನಾಜೂಕಿನಿಂತ ಹಿತ್ತಲ ಕದ ತೆಗೆದು, ನೀರು, ಬಟ್ಟೆ ಹರವೋ ತಂತಿ, ಮೋಟುಗೋಡೆ ಇವ್ಯಾವುದಕ್ಕೂ hello ಹೇಳದೆ ಓಡಿ ಹೋಗಿ solution ಪಕ್ಷದ primary ಸದಸ್ಯತ್ವ ತೆಗೆದ್ಕೊಂಡುಬಿಡೋಣ. ಆಗ ನೋಡಿ ಜೀವನದ ಬಗ್ಗೆ ನಮ್ಮ perception ಹೇಗೆ ಬದಲಾಗಿಬಿಡುತ್ತೆ ಅಂತ.

ಅಯ್ಯೋ, ಇದೆಲ್ಲಾ ಹೇಳಕ್ಕೆ ಬಲು ಸುಲಭ. ಆದರೆ ನಮ್ಮ ಬುಡಕ್ಕೇ ನೀರು ಬಂದಾಗ ಏರಿ ಕಟ್ಟೋದು ಎಷ್ಟು ಕಷ್ಟ ಅಂತ ಈ ರೀತಿ ಭಾಷಣ ಬಿಗಿಯೋವ್ರಿಗ್ಗೇನು ಗೊತ್ತಾಗತ್ತೆ? ನಮ್ಮ ನೆಗಡಿ ಅವರ ಮೂಗಿನಲ್ಲಿ ಹರಿಯುತ್ತಾ ಹೇಳಿ?! ಅದಕ್ಕೆ ಇವತ್ತು ಅವರುಗಳ ತಗಾದೆಯೇ ಬೇಡ ಅಂತ ನಿಮ್ಮ ಜೊತೆ ಹಂಚಿಕೊಳ್ಳೋಕೆ ಒಂದೆರಡ್ಮೂರು ಕಥೆಗಳನ್ನು ಹಿಡ್ಕೊಂಡ್ಬಂದಿದ್ದೀನಿ. ಕೇಳಿ ನೋಡಿ! ಅಂದಹಾಗೆ ಈ ಕಥೆಗಳ ಹೀರೋಯಿನ್‍ಗಳ ಹೆಸರು ಕೇಳೋದು ಮರೆತ್ಬಿಟ್ಟೆ. ಅದಕ್ಕೆ ಎಲ್ಲಾ ಕಡೆ ‘ನಾನು ನಾನು’ ಅಂತ ಒರಲ್ಕೊಂಡಿದ್ದೀನಿ, ಬಯ್ಯಬೇಡೀಪ್ಪ ಪ್ಲೀಸ್. . . . .

ಕಥೆ ನಂ.1

ಮನೆಕೆಲಸ ಮುಗಿಸಿ ಬಟ್ಟೆ ಮಡಚ್ತಾ ನಿಂತಿದ್ದೆ. ನನ್ನ ಐದು ವರ್ಷದ ಮಗಳು ಹೊಸದಾಗಿ ತೆಗಿಸಿಕೊಂಡಿದ್ದ ಆಟದ ಏರೋಪ್ಲೇನ್ಕೈಯಲ್ಲಿ ಹಿಡಿದು ಬಂದು ಕೇಳಿದಳು “ಅಮ್ಮ ನೀನು ದೊಡ್ಡವಳಾದ ಮೇಲೆ ಏನಾಗ್ಬೇಕು ಅಂದ್ಕೊಂಡಿದ್ದೀಯಾ?” ನಗು ಬಂತು. ತಡೆಹಿಡಿದು “ಹೂಂ. . .ನಾನು ದೊಡ್ಡವಳಾದ್ಮೇಲೆ ಅಮ್ಮ ಆಗ್ಬೇಕು ಅಂದ್ಕೊಂಡಿದ್ದೀನಿ” ಅಂದೆ. “ಅಯ್ಯೋ ಅದು ಈಗಲೇ ಆಗಿಬಿಟ್ಟಿದ್ದೀಯ ಅಮ್ಮ. ನಾನು ಕೇಳಿದ್ದು ನೀನು ದೊಡ್ಡವಳಾದ ಮೇಲೆ ಏನಾಗ್ಬೇಕು ಅಂದ್ಕೊಂಡಿದ್ದೀಯ ಅಂತ?” ಮತ್ತದೇ ಪ್ರಶ್ನೆ.

ಅವಳನ್ನು ಸಾಗ್ಹಾಕ್ಬೇಕಿತ್ತಲ್ಲ ಅದಕ್ಕೆ ನಾನಂದೆ “ನಾನು ದೊಡ್ಡವಳಾದಮೇಲೆ ಒಬ್ಬ ಒಳ್ಳೆ ಮಗಳಾಗ ಬೇಕು ಅಂದ್ಕೊಂಡಿದ್ದೀನಿ” ಅವಳು ನನ್ನ ತರಹಾನೇ. ಬಡಪೆಟ್ಟಿಗೆ ಬಿಡುವವಳಲ್ಲ. “ಓಹ್ಹೋ, ನೀನು ತಾತನಿಗೆ ಒಳ್ಳೆ ಮಗಳು ಆಗ್ಲೇ ಆಗ್ಬಿಟ್ಟಿದ್ದೀಯಲ್ಲ” ಅಂದಳು. ಮತ್ತೇನು ಹೇಳಬೇಕೋ ಗೊತ್ತಾಗಲಿಲ್ಲ. “ಹೇಳಮ್ಮ. . ಹೇಳಮ್ಮ. . .” ಸೆರಗು ಹಿಡಿದು ಜಗ್ಗುತ್ತಿದ್ದಳು ಮಗಳು. ಕೊನೆಗೆ ಅವಳೇ ಸೋತಳು. ಸೆರಗು ಬಿಟ್ಟು “ಹೋಗ್ಲೀ ಬಿಡು, ನೀನು ದೊಡ್ಡವಳಾದ್ಮೇಲೆ ನಿನಗೆ ಏನು ಬೇಕೋ ಅದೇ ಆಗ್ಬಹುದು.” ಅಂತ್ಹೇಳಿ ಹೊರಗೋಡಿದಳು. ನಾನು ಮುದುರಿ ಹೋಗಿದ್ದ ಬಟ್ಟೆಗಳ ಸುಕ್ಕು ನೀವುತ್ತಿದ್ದೆ. ಅವಳು ನನ್ನ ಮನಸ್ಸಿನ ಸುಕ್ಕುಗಳ ಮೇಲೆ ಐರನ್ ಬಾಕ್ಸ್ ಇಟ್ಟು ಓಡಿಬಿಟ್ಟಿದ್ದಳು.

ಹೌದು, ಮದುವೆ, ಮಕ್ಕಳು, ಸಂಸಾರ ಆಗಿಬಿಟ್ಟರೆ ನಾನು ದೊಡ್ಡವಳಾಗಿಬಿಟ್ಟೆನಾ? ನಾನು ಕಂಡ ಕನಸುಗಳನ್ನೆಲ್ಲಾ ಕೈ ಹಿಡಿದು ನಡೆಸಿಕೊಂಡೆನಾ? ನನ್ನ ಪುಟ್ಟ ಮಗಳ ಕಣ್ಣಲ್ಲಿ ನನ್ನ ಕನಸುಗಳು ಇನ್ನೂ ಜೀವಂತವಾಗಿವೆ. ಅವಳ ಅನಿಸಿಕೆಯಲ್ಲಿ ನನಗಿನ್ನೂ ಭವಿಷ್ಯವಿದೆ. ಅವಳಿಗೆ ನಾನೀನ್ನೂ ದೊಡ್ಡವಳೇ ಆಗಿಲ್ಲ. ಬಹಳಷ್ಟು ಬೆಳೆಯಬೇಕಿದೆ. ಬಟ್ಟೆಗಳನ್ನು ಬೀರುವಿನಲ್ಲಿಟ್ಟು, ಮದುವೆಯಾದ ದಿನದಿಂದ ಧೂಳ್ಹಿಡಿದು ಅಟ್ಟದ ಮೇಲೆ ಕೊತಿದ್ದ ವೀಣೆ ಕೆಳಗಿಳಿಸಿದೆ. ಈ ಬಾರಿ ಸೀನಿಯರ್ ಪರಿಕ್ಷೆ ತೆಗೆದ್ಕೊಂಡ್ಬಿಡ್ಬೇಕು ಅನ್ನುವ ಯೋಚನೆ ನನಗರಿವಿಲ್ಲದಂತೆ ಬಂತು. “ಕ್ಷಿತಿಜದ ಕಣ್ಣಲ್ಲಿ ಬೆಳಕು ಹೊಳೆಯೋಗಂಟ ಕನಸು ಇರ್ತಾವಂತ ಹಾಡಬೇಕಾ. . .” ಎನ್ನುವ ಮಾತು ನೆನಪಾಗಿ ಹಿತವಾಯ್ತು.

ಕಥೆ ನಂ.2

ಅವಳೊಬ್ಬ ಮುತ್ತು ಕಟ್ಟಿಸಿಕೊಂಡ ಜೋಗತಿ. ಅಲೆಮಾರಿಯಲ್ಲ ಪ್ರವಾಸಿ. ಒಮ್ಮೆ ಕುಮಾರ ಪರ್ವತ ಹತ್ತೋವಾಗ ಒಂದು ತೊರೆ ಬಳಿ ಏನೋ ಫಳ ಫಳಾಂತ ಹೊಳಿತಿತ್ತಂತೆ. ಹತ್ತಿರ ಹೋಗಿ ನೋಡಿದ್ರೆ ನಾಗ ಮಹಿಮೆ ಕಥೆಯಲ್ಲಿ ಕೇಳಿದ್ದ ಸ್ಪರ್ಶ ಮಣಿ ನೆನಪಿಗೆ ಬಂತಂತೆ. ಸರಿ ಅದು ಅವಳ ಜೋಳಿಗೆ ಸೇರಿತು. ಪ್ರಯಾಣ ಸಾಗಿತು.

ಮರುದಿನ ಹಸಿದ ಸಹಪ್ರಯಾಣಿಕನೊಬ್ಬನೊಂದಿಗೆ ಬುತ್ತಿ ಹಂಚಿಕೊಳ್ಳಲು ಚೀಲ ತೆಗೆದಾಗ, ಆ ಮಣಿಯ ದರ್ಶನ ಅವನಿಗೂ ಆಯಿತು. ಮನುಷ್ಯ ಸಹಜ ಪ್ರತಿಕ್ರಿಯೆ. “ಓಹ್, ಇದು ನಿಮ್ಮ ಬಳಿ? ಇದಕ್ಕೆ ಎಷ್ಟು ಬೆಲೆ ಗೊತ್ತಾ? ನೀವಿದನ್ನು ನನಗೆ ಕೊಟ್ಟರೆ ನಾನು ಕೋಟ್ಯಾಧಿಪತಿ ಆಗ್ಬಹುದು! ನನಗೆ ಕೊಡ್ತೀರಲ್ಲ?”. ಅವಳು ಹಿಂದುಮುಂದು ನೋಡದೆ, ಒಂದು ಕ್ಷಣವೂ ತಡ ಮಾಡದೆ ಅದನ್ನು ಅವನಿಗೆ ಕೊಟ್ಟೇ ಬಿಟ್ಟಳು. ಪ್ರಯಾಣ ಸಾಗಿತ್ತು.

ಮುಂದೆಂದೋ ಒಂದು ದಿನ ಮತ್ತೆ ಆತ ಇವಳನ್ನೇ ಹುಡುಕುತ್ತಾ ಬಂದಂತೆ ಬಂದ. ಬೆಳಕಿನ ಕಣ್ಣಿಂದ ಹತ್ತಿರ ಬಂದು “ ಇದನ್ನು ದಯವಿಟ್ಟು ನೀವೇ ಇಟ್ಟುಕೊಳ್ಳಿ. ನೀವು ಕೊಡೋದೇ ಆದ್ರೆ ಇದಕ್ಕಿಂತಲೂ ಬೆಲೆ ಬಾಳುವಂಥದ್ದು ಕೊಡಿ” ಅಂತ್ಹೇಳಿ ಮಣಿಯನ್ನು ಅವಳಿಗೇ ಕೊಟ್ಟ್ಬಿಟ್ಟ. ಅವಳ ಮುಖದಲ್ಲೊಂದು ಪ್ರಶ್ನಾರ್ಥಕ. ಮತ್ತವನದ್ದೇ ಉತ್ತರ. “ಆ ದಿನ ನಾನು ಕೇಳಿದೊಡನೆ ಇದನ್ನು ಕೊಟ್ಟ್ಬಿಟ್ಟ್ರಲ್ಲ, ಕೊಡಬೇಕು ಎನ್ನುವ ಆ ನಿಮ್ಮ ಬುದ್ಧಿಯನ್ನು ನನಗೆ ಕೊಟ್ಟ್ಬಿಡಿ” ಅವನು ದೈನ್ಯದಲ್ಲಿ ನಕ್ಕ. ಅವಳೂ ನಕ್ಕಳು. ಪ್ರಯಾಣ ಸಾಗಿತ್ತು.

ಮುಂದೆ ಮತ್ತೊಂದು ದಿನ ಅವನು ಬರೆದ ಪುಸ್ತಕದ ಅರ್ಪಣೆ ಪುಟದಲ್ಲಿ ಹೀಗೆ ಬರೆದಿದ್ದ “To the woman of my journey who showed me how to live and how not to live”

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X