ಕಿವಿಹಿಂಡುವ, ಕೆನ್ನೆ ಜಿಗುಟುವ ನನ್ನ ಅಭಿಮಾನಿಗಳಿಗೆ...
ಪ್ರತಿ ವಾರ ಹೇಳಬೇಕಾದದ್ದನ್ನು ಹೇಳಿಯಾದ ಮೇಲೆ ಏನೋ ನಿರಾಳತನ. ಅದಕ್ಕೆ ಬೆಸೆದುಕೊಂಡಂತೆಯೇ ಆತಂಕ! ಅಕ್ಷರಗಳು ಅರ್ಥವಾದವೋ, ಅರ್ಥೈಸಿಕೊಳ್ಳುವುದಕ್ಕೆ ನಿಮ್ಮನ್ನು ಅಣಿಗೊಳಿಸಿದವೋ.. ಕುತೂಹಲದ ತೂಗುಮಂಚದ ಮೇಲೆ ಹುಯಿದಾಡುವ ಗಗನಸಖಿಯ ಮನ..
ಇದು ನಿಮಗಾಗಿ,
ಓಹ್, ನಾನೆಷ್ಟು ಸ್ವಾರ್ಥಿ ಅನ್ನಿಸುತ್ತಿದೆ ಈ ನಡುವೆ! ಹಾಗನ್ನಿಸಲು ಕಾರಣ ನೀವು. . . ನಿಮ್ಮೊಡನೆ ನನ್ನ ಭಾವ, ಭಾವನೆ, ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಆರಂಭಿಸಿದಾಗ, ‘ನೀವು ನಾನು ಹೇಳಿದ್ದನ್ನು ಕೇಳಿಸಿಕೊಳ್ಳುತ್ತೀರಾ, ಸುಮ್ಮನಾಗುತ್ತೀರ’ ಎಂದಷ್ಟೇ ಅಂದುಕೊಂಡಿದ್ದೆ! ಆದರೆ ನೀವು ನನಗೆ ಪತ್ರಿಸುವುದು ನೋಡಿದಾಗ ಛೇ, ನನಗೆ ನನ್ನ ಬಗ್ಗೆಯೇ ಕೀಳರಿಮೆಯಾಯ್ತುು. ನಿಮ್ಮದು ಬರೀ ಶ್ರವಣ ನನ್ನದು ಮಾತ್ರ ಮನಸು-ಮೆದುಳು ಅಂದುಕೊಂಡಿದ್ದ ನಾನು ಸ್ವಾರ್ಥಿಯಲ್ಲದೆ ಮತ್ತೇನು?!
ನನ್ನ ಭಾಷೆಯನ್ನು ಇಷ್ಟಪಟ್ಟಿದ್ದೀರಾ ನೀವು, ಆಲೋಚನಾ ಧಾಟಿಯನ್ನು ಮೆಚ್ಚಿದ್ದೀರ. ನನ್ನೊಡನೆ ಮರುಗಿದ್ದೀರ, ನಕ್ಕಿದ್ದೀರ. ಬಣ್ಣದ ಗುಬ್ಬಾರೆಯ ಗೊಂಚಲಿನ ತುದಿ ಹಿಡಿದ ನನಗೆ ಮೇಲ್ತುದಿಯಲ್ಲಿ ನೀವು ‘ಜೀವನ ಬರೀ doing ಅಲ್ಲಾ ಕಣೇ ಅದು participation’ ಅಂತ ಕೂಗಿ ಹೇಳಿದ್ದೀರ. ನನ್ನೊಳಗೇ ಇದ್ದ ಆಕಾಶಕ್ಕೆ ಅವಕಾಶವಿತ್ತಿದ್ದೀರ. ಬದಿಯಲ್ಲೆಲ್ಲೋ ಬೆತ್ತಲಾಗಿ ಬೀಳಬೇಕಿದ್ದ ನನ್ನ ಕನವರಿಕೆಗಳಿಗೆ ಬಣ್ಣದ ಬಟ್ಟೆ ತೊಡಿಸಿ ಕನ್ನಡಿಯ ಮುಂದೆ ಕುಳ್ಳಿರಿಸಿದ್ದೀರ. ನನ್ನ descriptive ವರಾತವನ್ನು ಸ್ಥಿತಪ್ರಜ್ಞರಾಗಿ ಆಲಿಸಿ ಸ್ಪಂದಿಸಿದ್ದೀರ. ಅಭಿಪ್ರಾಯ ಸಾಮ್ಯತೆ ತೋರಿಸಿ ನನ್ನನ್ನು ಉಬ್ಬಿಸಿದ್ದೀರ.
ನಿಮ್ಮಷ್ಟೇ stoic ಆಗಿರಲು ನನಗೂ ಕಲಿಸಿದ್ದೀರ! ನನ್ನ ಹೆಸರು ಎಲ್ಲರಿಗೂ ಹೇಳಬೇಡವೇ ಗೆಳತಿ ಅಂತ ನನ್ನ ಕಿವಿಯಲ್ಲಿ ನೀವು ಹೇಳಿದ್ದನ್ನು ನಾನು ಬಾಯಿಂದ ಹೊರಹಾಕೋದಿಲ್ಲ. ‘ನಿನ್ನ ಹೆಸರೇನೇ ಮಾರಾಯ್ತೀ?’ ಅಂತ ಕೇಳಿರುವ ನಿಮ್ಮ ಪ್ರಶ್ನೆಗೆ ನಿಜಕ್ಕೂ ಹೇಳಿ ನಾನು ಉತ್ತರಿಸಬೇಕೇ?! ಒಂದು ಕ್ಷಣ ನೀವೆಲ್ಲರು ನನ್ನ ಅಭಿಮಾನಿಗಳು ಅಂದನಿಸಿ ತಲೆ ಮೇಲೆರಡು ಕೋಡು ಇದ್ದ್ಹಂಗನಿಸಿತು. . . .
ತತ್ಕ್ಷಣವೇ ಸತ್ಯಾನೂ ಗೊತ್ತಾಯ್ತು, ನೀವು ಅದಲ್ಲ! ನಿಮ್ಮ ಅಭಿಮಾನವೆಲ್ಲಾ ಈ ಜೀವನದೆಡೆಗೆ. ಸೂರ್ಯಕಾಂತಿಯಂತಹ ಜೀವನ್ಮುಖತೆಯನ್ನು ನನಗೆ ಕಲಿಸಿಕೊಟ್ಟವರು ನೀವು. ಒಟ್ಟಿನಲ್ಲಿ ನನ್ನ ಮನೋಸ್ಥಿತಿಯಲ್ಲಿ ನೀವೆಲ್ಲರೂ ಒಂದು ಘಳಿಗೆಯಾದರೂ ಬದುಕಿದ್ದೀರ, ಹಾಗಂತ ನನಗೆ ಬರೆದು ತಿಳಿಸಿಯೂ ಇದ್ದೀರಾ. ಅಯ್ಯೋ, ಯಾರು ಈವರೆಗೂ ನನಗೆ ಒಂದು ಸಾಲೂ ಗೀಚಿ ಕಿವಿಹಿಂಡಿಲ್ಲವೋ, ನಾನು ಅವರ ಪರ ಇಲ್ಲಾಂತೇನೂ ಅಲ್ಲ! ಬದಲಿಗೆ, ಅವರುಗಳ ಜಾಣ ಕಿವುಡನ್ನು ನಾನೂ ಸಂದರ್ಭಾನುಸಾರ ಅಳವಡಿಸಿಕೊಂಡು ಈ ಬಾಳನ್ನು ಮತ್ತೂ ಸಂಭ್ರಮಿಸುತ್ತೇನೆ.
‘ಮನಸ್ಸು ಹತ್ತು ಕಡೆ ಅಗೆದರೆ ಗೋರಿ, ಒಂದು ಕಡೆ ಅಗೆದರೆ ಬಾವಿ’ ಅಂದ ಹಿರಿಯೊಬ್ಬರ ಮಾತುಗಳನ್ನು ನೆನಪು ಮಾಡಿಕೊಡುವ ನಿಮ್ಮ ಸಾಂಗತ್ಯಕ್ಕೆ ನಾನು ಸದಾ ಋಣಿ. ಇನ್ನೊಮ್ಮೆ ನೀವು ಸಿಕ್ಕಾಗ ಓರ್ವ exotic ವ್ಯಕ್ತಿಯ ಪರಿಚಯ ಮಾಡಿಕೊಡಬೇಕು ನಿಮಗೆ ಅಂತ ಆಸೆ. ಅಲ್ಲಿಯವರೆಗೂ ನೀವುಗಳು ಹೀಗೇ ಬರೆಯುತ್ತಿರಿ ನನಗೆ. ನಿಮ್ಮ ಸಖಿಗೆ. ನಿಮ್ಮ ಗಗನಸಖಿಗೆ.












Click it and Unblock the Notifications