ಮೀಡಿಯಾದಲ್ಲಿ ನಿನ್ನೆ ನಮ್ಮದೇ ಮಾತು! ನಮ್ಮದೇ ಕತೆ!
‘ವಿಶ್ವಮಹಿಳಾ ದಿನ’ದ ಅಂಗವಾಗಿ ಮಾಧ್ಯಮಗಳಲ್ಲಿ ನಿನ್ನೆ(ಮಾ.8) ಏನೆಲ್ಲಾ ಬಂತು ನೋಡಿದಿರಾ? ಕೆಲವಂತೂ ಸಕತ್ತು ತಮಾಷಿಯಾಗಿದ್ದವು! ನೆನಪಾದ್ರೆ, ಈಗಲೂ ನಗು ಬರುತ್ತೆ! ಹೆಂಗಸರು ಅಂದ್ರೆ ಇವರೆಲ್ಲರೂ ಏನ್ ತಿಳ್ಕೊಂಡಿದ್ದಾರೆ?
ನಿನ್ನೆ ಮಹಿಳಾ ದಿನಾಚರಣೆ ಅಂತ ಊರಲ್ಲೆಲ್ಲಾ ಸೆಲೆಬ್ರೇಷನ್ನೋ ಸೆಲೆಬ್ರೇಷನ್ನು! ಹಾಗಂತ ಇವತ್ತು ನಾನು ನಿಮಗೆಲ್ಲ ಶುಭಾಶಯ ಹೇಳೋದಕ್ಕೆ ಗುಲಾಬಿ ಹೂವು ಹಿಡಿದು ಕೊಂಡು ಬಂದಿದ್ದೀನಿ ಅಂತ ಯಾರಾದ್ರು ತಿಳಿದುಕೊಂಡ್ರೆ ಬನ್ನಿ ನಾವೆಲ್ಲ ಸೇರಿ ಅವರ ಅನಿಸಿಕೆಗೆ ನಕ್ಕು ಬಿಡೋಣ, ಯಾಕೇಂತ ನನಗೂ ಗೊತ್ತು ನಿಮಗೂ ಗೊತ್ತು!
ಅಂತರ್ಜಾಲದಲ್ಲಿ, ದಿನ ಪತ್ರಿಕೆಗಳಲ್ಲಿ, ದೂರದರ್ಶನ, ರೇಡಿಯೋಗಳಲ್ಲಿ ಶುಭಾಶಯಗಳ ಕೋಡಿ ಹರಿದು ಬರ್ತಿತ್ತು ಅಲ್ಲವಾ? ವಸುಂಧರೆ ಮುಖದಲ್ಲಿ ನಗು ಅರಳಲಿ ಅಂತ ಸಾತ್ವಿಕತೆ ಮೆರೆದರೆ ಒಬ್ಬರು, ಮಹಿಳೆ ನೀನು ನಡೆದು ಬಂದ ಹಾದಿ ಇದು ಅಂತ ಮಹಿಳೆಗೆ map ಹಾಕಿ ಕೊಟ್ರು ಇನ್ನೊಬ್ರು.
ರೇಡಿಯೋಲಿ ಕಾರ್ಯಕ್ರಮ ನಿರ್ವಾಹಕಿ ಒಬ್ಬ ಮಹನೀಯನನ್ನು ಮಹಿಳಾ ದಿನಾಚರಣೆಗೆ ತಮ್ಮ ಶುಭಾಶಯ ಏನು ಅಂತ ಕೇಳಿದ್ದೇ ತಡ. . . .ಅಬ್ಬಬ್ಬ ನೀವೂ ಕೇಳ್ಬೇಕಿತ್ತು ಆತನ excitement ‘ಮೇಡಂ, ಈ ದಿನ ಒಬ್ಬ ಮಹಿಳೆ. . . .ಒಬ್ಬ ಮಹಿಳೆ, ಗಗನ ಯಾತ್ರೆ ಮಾಡಿ ಬಂದಿದ್ದಾಳೆ ಅಂದ್ರೆ, ಅವಳ ಬಗ್ಗೆ ಹೆಮ್ಮೆ ಪಡೋದಕ್ಕೆ ಇನ್ನೇನು ಬೇಕು ಹೇಳಿ?’ ಅಂದ. ಓಹ್, ಅವನು ಒಬ್ಬ ಮಹಿಳೆ ಅನ್ನೋದನ್ನು ಎಷ್ಟು ಒತ್ತಿ ಹೇಳಿದ್ದ ಅಂದ್ರೆ ಬೀದೀಲಿ ಹೋಗೊ ಯಾವುದೋ ಕಜ್ಜಿ ನಾಯಿ ಕಾಲೇಜ್ಗ್ಹೋಗಿ M.B.B.S ಮಾಡಿ surgeon ಆದ್ರೆ ಹೇಗಿರುತ್ತೋ ಹಾಗಿತ್ತು!
ಒಂದು ಹೆಸರುವಾಸಿಯಾದ ಟೀವಿ ಚ್ಯಾನಲ್‌ನಲ್ಲಿ ಮಹಿಳೆಯರ interview ಬರ್ತಿತ್ತು. ಒಬ್ಬಾಕೆಯನ್ನು ಪ್ರಶ್ನೆ ಕೇಳಿದ್ರು ‘ಮಹಿಳೆಗೆ ಈಗಲೂ ಸಂಸಾರ ಮತ್ತು ಉದ್ಯೋಗ ಎರಡನ್ನೂ ಸರಿದೂಗಿಸಬೇಕು ಅನ್ನುವ ಸ್ಥಿತಿ ಇದೆಯಾ?’ ಅಂತ. ಅದಕ್ಕೆ ಆಕೆಏನಂದ್ರೂ ಗೊತ್ತಾ?! Oh My God! ನಾವು ಇಷ್ಟೊಂದು ಮುಂದುವರೆದಿದ್ದೀವಿ ಅಂತ ನನಗೆ ಆಕೆ ಮಾತು ಕೇಳೇ ಗೊತ್ತಾಗಿದ್ದು!
‘ನೀವು 20 ವರ್ಷ ಹಿಂದೆ ಕೇಳ್ಬೇಕಾದ ಪ್ರಶ್ನೆ ಕೇಳ್ತಾಇದ್ದೀರ. ಈಗ ನಾವೆಲ್ಲಾ ಆಧುನಿಕ ಮಹಿಳೆಯರು. ಹಳ್ಳಿ ಹೆಣ್ಣು ಮಕ್ಕಳಿಂದ ಹಿಡಿದು ದೊಡ್ದ ಹುದ್ದೆಯಲ್ಲಿ ಇರುವರೂ ಸಹ ಜೀನ್ಸ್ ಪ್ಯಾಂಟ್ ಹಾಕಿಕೊಳ್ಳೋ ಮಟ್ಟಕ್ಕೆ ಬೆಳೆದು ನಿಂತಿದ್ದೇವೆ. ನಾವೀಗ ಯಾವುದನ್ನೂ balance ಮಾಡ್ಬೇಕು ಅನ್ನುವ ಪರಿಸ್ಥಿತಿಯಲ್ಲಿ ಇಲ್ಲ.’ ನಿಮಗೆ ಗೊತ್ತು ಇಡೀ ರಾತ್ರಿ ನನಗೆ ನಿದ್ದೆ ಬಂದಿರಲ್ಲ ಅಂತ. ಸರಿ ಮತ್ತೆ ಕಾಗದವನ್ನು ಪೆನ್ನಿನ ಸಹವಾಸದಿಂದ ದೂರ ಇಡ್ತೀನಾ? ಆಧುನಿಕ ಮಹಿಳೆಯರಿಗಾಗಿ ಒಂದ್ನಾಲ್ಕು ಸಾಲು. . . .ಓದಿ.
ಸನಾತನವ ಆಧುನಿಕೊಳಿಸುವ ಬಿರುಸಲ್ಲಿ
ಬಿಚ್ಚಿದಳು ನಮ್ಮ ಬಿಚ್ಚೊಲೇ ಗೌರಮ್ಮ
ಬಿಚ್ಚಿದಳು ಕಿವಿ ಓಲೆಯ ಒಡವೆಯ. . .
ಬಿಚ್ಚಿದಳು ಮನವ ಅದರೊಳಗಿನ ತನುವ. . .
ಬಿಚ್ಚಿದಳು ಅಷ್ಟಿಷ್ಟು ವಸ್ತ್ರವ. . .
ಬಿಚ್ಚಿಬಿಸುಟಳು ಎಷ್ಟೆಷ್ಟೋ ಅಸ್ತ್ರವ. . .
ಕೊನೆಗೊಮ್ಮೆ ಆದಳು ಗೌರಮ್ಮ
ಬಿಚ್ಚಿದಾಗ ಓಲೆ. . ಬಿಚ್ಚಿಟ್ಟ ಓಲೆ!
ಬೆಚ್ಚಗೆ ಬಚ್ಚಿಟ್ಟುಕೊಂಡು ಯಾರೂ ಓದದ್ದಿದ್ದಾಗ;
ಬಚ್ಚಿಟ್ಟ ಕಣ್ಣೀರ ಮಾತ್ರ. . . .
ಬಿಚ್ಚಿಡದಾದಳು ಗೌರಮ್ಮ!
ಹೀಗೆ ಬರೆದಿದ್ದೀನಲ್ಲ ಸಾಲುಗಳು, ನಿಮಗೇನಾದರು ಅರ್ಥ ಆದರೆ ನನಗೆ ಬರೆದು ತಿಳಿಸಿ.
ಓ, ಮರೆತೆ ಬಿಟ್ಟಿದ್ದೆ. ಮಹಿಳಾ ದಿನಾಚರಣೆಗೆ ಸಿನೆಮ ನಟನೊಬ್ಬನ್ನ ಉವಾಚ ‘ನಾನು ಮಹಿಳೆಯರನ್ನು ಗೌರವಿಸುತ್ತೇನೆ, ಕಾರಣ ದೇವರ ನಂತರ ಸೃಷ್ಟಿಸುವ ಸಾಮರ್ಥ್ಯ ಮಹಿಳೆಗೆ ಮಾತ್ರ ಇರುವುದು’ ಹೆಚ್ಚು ಅರ್ಥ ಹುಡುಕೊಲ್ಲ, ಅದರೆ ನನಗೆ ತಕ್ಷಣ ನೆನಪಾಗಿದ್ದು ಏನು ಗೊತ್ತಾ? ಮೊನ್ನೆ ಮೊನ್ನೆ ಚೀನಾ ದೇಶದ ಮಂತ್ರಿಯೊಬ್ಬರು ಹೆಂಗಸರನ್ನು ಮಕ್ಕಳು ತಯಾರು ಮಾಡೋ ಯಂತ್ರ ಅಂದು ಗಲಾಟೆ ಮಾಡಿಕೊಂಡಿದ್ರಲ್ಲ ಅದು! ನನಗೆ ಗೊತ್ತು ನಿಮಗೆ ನಾನು ಹೀಗೆಲ್ಲಾ ಮಾತಾಡಿದ್ರೆ ಸಿಟ್ಟು ಬರುತ್ತೆ ಅಂತ ಆದರೆ ಏನು ಮಾಡಲೀ ಹುಟ್ಟು ಗುಣ ಸುಟ್ಟರೂ ಹೋಗಲ್ಲಾ ಅಂತಾರಲ್ಲ!
ಅಯ್ಯೋ, ಗಾಬರಿ ಆಗ್ಬೇಡಿ ರಾಗಿಣಿ ನಿಮ್ಮ ಅಭಿಪ್ರಾಯ ತಿಳಿದ್ಕೊಳ್ಳದೆ ಅವಳ mother-in-law ಗೆ ಮದುವೆ ಮಾಡಿ ಮುಗಿಸಿ ಬಿಡೋಲ್ಲಾ! ಹಾಗಾದ್ರೆ ಮತ್ತೆ ಸಿಗೋಣ.












Click it and Unblock the Notifications