ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನೇನ್ ಕಂಡಿ? ಜೋಗದ್ಗುಂಡಿ; ಏನೇನ್ ತಿಂಡಿ? ತಂಬಿಟ್ಟುಂಡಿ!

By Super
|
Google Oneindia Kannada News

Memorable trip to Jog Falls
ರಜಾದಿನಗಳ ಬದಲು ವಾರದದಿನಗಳಲ್ಲಿ ಬನ್ನಿ ಎಂದು ಚಂದ್ರು ಹೇಳಿದ್ದಕ್ಕೆ ಕಾರಣ ಬೇರೆಯೇ ಇತ್ತು! ವಾರಾಂತ್ಯದಲ್ಲಿ ಜನಜಂಗುಳಿ ಹೆಚ್ಚಿರುತ್ತದೆ ಎನ್ನುವುದಕ್ಕಿಂತಲೂ ಪ್ರವಾಸಿಗರಿಗೋಸ್ಕರ ಅಣೆಕಟ್ಟಿನಿಂದ ಹೆಚ್ಚು ನೀರು ಬಿಟ್ಟು ಜಲಪಾತದಲ್ಲೂ ನೀರು ಹೆಚ್ಚಿರುವುದರಿಂದ ಅಲ್ಲಿ ಕೆಳಗಿಳಿದು ಹೋಗುವುದಕ್ಕಾಗುವುದಿಲ್ಲ, ಹೋಗಲು ಬಿಡುವುದೂ ಇಲ್ಲ. ಜೋಗ ನೋಡುವುದೆಂದರೆ ದೂರದ ಕಟಕಟೆಯಲ್ಲಿ ನಿಂತು ನೀರು ಬೀಳುವುದನ್ನು ನೋಡುವುದಷ್ಟೇ ಅಲ್ಲ, ಕೆಳಗಿಳಿದು ಅಕ್ಷರಶಃ ಅವನೀತಳ'ರಾಗಿ (down-to-earth) ನಿಂತು ಜಲಧಾರೆಯ ಸೊಬಗನ್ನು ಆಸ್ವಾದಿಸಿದರಷ್ಟೇ ನಿಜವಾಗಿ ಜೋಗದ್‍ಗುಂಡಿಯನ್ನು ನೋಡಿದ ಧನ್ಯಭಾವ ಪ್ರಾಪ್ತಿಯಾಗುವುದು. ಆದ್ದರಿಂದ ಕೆಳಗಿಳಿದು ನೋಡಿಕೊಂಡು ಬರೋಣವೆಂಬ ಚಂದ್ರು-ಮಂಜು ಸೋದರರ ಪ್ಲಾನ್ ನನಗೂ ಹಿಡಿಸಿತು. ನಾವು ಮೂವರೂ ಜೋಗಾವರೋಹಣ ಯಾತ್ರೆಗೆ ಜೈ ಎಂದೆವು.

ಕೊರಕಲು ಪ್ರಪಾತದಲ್ಲಿ ಕೆಳಗಿಳಿಯುವಾಗ ಅಂಥಾ ಆಯಾಸವೆನಿಸುವುದಿಲ್ಲ. ಅಲ್ಲದೆ ಗುಂಡಿಯಿಂದ ಗಗನದತ್ತ ಕತ್ತುಚಾಚಿ ಜಲಧಾರೆಯ ಅಷ್ಟೂ ಸೌಂದರ್ಯವನ್ನು ಕಣ್ಮನಗಳಲ್ಲಿ ತುಂಬಿಕೊಳ್ಳಬೇಕೆಂಬ ಉತ್ಕಟ ಹಂಬಲ ಬೇರೆ ಇರುತ್ತದಾದ್ದರಿಂದ ಉತ್ಸಾಹವರ್ಧನೆಯಾಗುತ್ತದೆ. ಕೆಳಗಿಳಿಯಲು ಸಾವಿರ ಮೆಟ್ಟಲುಗಳ ದಾರಿ ಎನ್ನುತ್ತಾರಾದರೂ ಮೆಟ್ಟಿಲು ಎನ್ನುವಂತಿರುವುದು ತುಸು ದೂರದವರೆಗೆ ಮಾತ್ರ. ಆಮೇಲೆ ಏನಿದ್ದರೂ ಕೊರಕಲು ಪ್ರಪಾತ. ಅತಿಜಾಗ್ರತೆಯಿಂದ ಒಂದೊಂದು ಕಲ್ಲಿನ ಮೇಲೆ ಕಾಲಿಟ್ಟು ಇಳಿಯಬೇಕು; ನಮಗಿಂತ ರಭಸವಾಗಿ ಇಳಿಯುವವರೊಡನೆ, ಆಗಲೇ ಇಳಿದು ಏದುಸಿರು ಬಿಡುತ್ತಾ ವಾಪಸ್ ಹತ್ತತೊಡಗಿರುವವರೊಡನೆ ಹೆಜ್ಜೆಯೂರಲು ಆಯಕಟ್ಟಿನ ಕಲ್ಲುಗಳನ್ನು ಆಶ್ರಯಿಸಬೇಕು. ನಮ್ಮ ಅದೃಷ್ಟಕ್ಕೆ ಅವತ್ತು ಮಳೆ ಇರಲಿಲ್ಲ, ಸೂರ್ಯ ಆಗಾಗ ಇಣುಕಿನೋಡುತ್ತಿದ್ದ ಹಿತಕರ ವಾತಾವರಣವೇ ಇತ್ತು.

"ಇರೋದ್ರೊಳ್ಗೆ ಒಮ್ಮೆ ನೋಡು ಜೋಗದ್‍ಗುಂಡಿ..." ಎಂದಷ್ಟೇ ಏಕೆ, ಜೋಗದ್‍ಗುಂಡಿಗೆ ಹೋದ ಅನುಭವ ಮತ್ತೂ ಸಿಹಿಯಾಗಿರಲಿ ಎಂದು ಚಂದ್ರು ಅವರ ಅಮ್ಮ ನಮಗಾಗಿ ತಂಬಿಟ್ಟುಂಡೆ, ಹುರಿಗಾಳು (ಕೆಲದಿನಗಳ ಹಿಂದೆಯಷ್ಟೇ ನಾಗರಪಂಚಮಿ ಹಬ್ಬ ಬಂದಿತ್ತಲ್ಲ!) ಇತ್ಯಾದಿ ಪೊಟ್ಟಣ ಕಟ್ಟಿಕಳಿಸಿದ್ದರು. ಜತೆಯಲ್ಲೇ ಅವಲಕ್ಕಿ ಚೂಡಾ. ಆಹಾ! ಜೋಗದ್‍ಗುಂಡಿಯಲ್ಲಿ ತಿಂದ ಅವಲಕ್ಕಿ - ತಿಂದವ ಲಕ್ಕಿ! ಒಂದರ್ಧ ಗಂಟೆಕಾಲ ಪ್ರಪಂಚವನ್ನೆಲ್ಲ ಮರೆತು ರಾಜನ ಗಾಂಭೀರ್ಯವನ್ನೂ ರಾಣಿಯ ವೈಯಾರವನ್ನೂ ರಾಕೆಟ್‌ನ ರಭಸವನ್ನೂ ರೋರರ್‌ನ ರಸಧಾರೆಯನ್ನೂ ಸವಿದದ್ದೇ ಸವಿದದ್ದು. ಆಮೇಲೆ ನಿಧಾನವಾಗಿ ಜೋಗಾರೋಹಣ ಆರಂಭ. ಚಿಕ್ಕಂದಿನಲ್ಲಿ ಶಾಲೆಗೆ ಹೋಗಲು ದಿನಾ ಬೆಟ್ಟಗುಡ್ಡ ಹತ್ತಿ ಇಳಿದ ಹಳ್ಳಿಯವನಾದರೂ ಈಗ ಅಭ್ಯಾಸವಿಲ್ಲದಿರುವುದರಿಂದ ಮೇಲೆ ಹತ್ತಿಬರುವುದು ಎಣಿಸಿದ್ದಕ್ಕಿಂತ ದುಸ್ತರವಾಗಿತ್ತು. ಅದರೇನಂತೆ, ಬೇಕಾದಕಡೆ ಬೇಕಷ್ಟು ಹೊತ್ತು ನಿಂತು ಸಾವರಿಸಿ, ಬೆವರೊರೆಸಿ, ನೀರುಕುಡಿದು ನಿಧಾನಿಸಿ, ಸುಂದರ ದೃಶ್ಯಗಳನ್ನು ಕಣ್ಣಲ್ಲೂ ಕೆಮರಾದಲ್ಲೂ ತುಂಬಿಸಿ ಕೊನೆಗೂ ಮೇಲಕ್ಕೆ ಹಿಂದಿರುಗಿದೆವು (ಆ ಚಾರಣದ ಪ್ರಭಾವ ಮತ್ತೆರಡು ದಿನಗಳವರೆಗೆ ಮೈಕೈ ನೋವಿನ ರೂಪದಲ್ಲಿತ್ತೆಂಬ ವಿಚಾರ ಗೌಣ).

ಅಷ್ಟೊತ್ತಿಗೇ ಗಂಟೆ ಹನ್ನೆರಡು ದಾಟಿದ್ದರಿಂದ ಲಿಂಗನಮಕ್ಕಿ ಅಣೆಕಟ್ಟಿಗೆ ಹೋಗುವುದು ಬೇಡವೆಂದು ತೀರ್ಮಾನಿಸಿದೆವು. ಜೋಗ ನೋಡಿ ಆದಮೇಲೆ ಮಧ್ಯಾಹ್ನದೂಟಕ್ಕೆ ನಮ್ಮ ಮನೆಗೆ ಬನ್ನಿ" ಎಂದು ಅದಾಗಲೇ ಆದೇಶವಿತ್ತಿದ್ದರು ಜೋಗದ ಪಕ್ಕದಲ್ಲೇ ತಲವಾಟ ಎಂಬ ಹಳ್ಳಿಯಲ್ಲಿ ವಾಸಿಸುತ್ತಿರುವ ಇನ್ನೋರ್ವ ಇ-ಮಿತ್ರ ರಾಘವೇಂದ್ರ ಶರ್ಮಾ. ಜೋಗದ ಬಗೆಗಿನ ಸಚಿತ್ರಲೇಖನಗಳೂ ಸೇರಿದಂತೆ ಮಲೆನಾಡಿನ ಸುಂದರ ಚಿತ್ರಣವನ್ನು ಆಗಾಗ ಒದಗಿಸುತ್ತಿರುವ "ಆರ್. ಶರ್ಮಾ; ತಲವಾಟ" ದಟ್ಸ್‌ಕನ್ನಡ ಓದುಗರಿಗೆ ಪರಿಚಿತರೇ. ಇದೀಗ ನನಗೆ ಅವರ ಮನೆಯಲ್ಲಿ 'ಮಲೆನಾಡಿನ ಆತಿಥ್ಯ' ಸವಿಯುವ ಸುಯೋಗ. ಜತೆಯಲ್ಲೇ ಶಿಕಾರಿಪುರದ ಚಂದ್ರು-ಮಂಜು ಸೋದರರನ್ನು ಶರ್ಮಾ ಅವರಿಗೆ ಪರಿಚಯಿಸುವ ಭಾಗ್ಯ. ಅಷ್ಟು ಸಾಲದೆಂಬಂತೆ ಸಿದ್ದಾಪುರದಿಂದ ಮತ್ತಿಗಾರು ನಾಗರಾಜ ಎಂಬುವ ಮತ್ತೊಬ್ಬ ಇ-ಮಿತ್ರರೂ ಶರ್ಮರ ಮನೆಯಲ್ಲೇ ನಮ್ಮನ್ನು ಸೇರಿಕೊಂಡರು. "ಅಂತರ್ಜಾಲದ ಕಬಂಧಬಾಹುಗಳು ಕಟ್ಟಿರುವ ಸ್ನೇಹಸೇತುವಿನ ಸಾಕಾರರೂಪ" ಅವತ್ತು ಆ ಕ್ಷಣದಲ್ಲಿ ಶರ್ಮರ ಮನೆಯಲ್ಲಿ ನಮ್ಮ ಅನುಭವಕ್ಕೆ ಬಂದದ್ದು ಹಾಗೆ!

ಶರ್ಮರ ಮನೆಯಲ್ಲಿ ಹವ್ಯಕ ಸಂಪ್ರದಾಯದ ಸೊಗಸಾದ ಊಟ ತುಂಬ ರುಚಿಕರವಾಗಿತ್ತು, ಅದೆಲ್ಲವೂ ರಾಸಾಯನಿಕಗಳನ್ನು ಬಳಸದ ಕೃಷಿವಿಧಾನದಿಂದ ತಯಾರಾದ ಉತ್ಪನ್ನಗಳಿಂದಾದ ಆಹಾರ ಎಂದು ತಿಳಿದು ಆಶ್ಚರ್ಯವಾಯಿತು. "ಹಳ್ಳಿಯ ಹೈಟೆಕ್ ಹೈದ"ನಾಗಿರುವ ಶರ್ಮಾ ಅವರ ಜೀವನಾನುಭವಗಳ ಕಿರುಪರಿಚಯ ಅಲ್ಲಿ ನಮಗಾಯಿತು. ಊರವರಿಗೆಲ್ಲ ರಾಗಣ್ಣ' ಎಂದು ಅಚ್ಚುಮೆಚ್ಚಿನವರಾದ ಶರ್ಮರ ಮುಂದಾಳತ್ವದಲ್ಲಿ ಅವರ ಗೆಳೆಯರಬಳಗವು ನಿರ್ವಹಿಸಿಕೊಂಡುಬಂದಿರುವ ಕಟ್ಟೆ' ಪತ್ರಿಕೆ, ಅಂತಹ ಹಳ್ಳಿಯಲ್ಲೂ ವೈರ್‌ಲೆಸ್‍ಲೂಪ್ ತಂತ್ರಜ್ಞಾನದಲ್ಲಿ ಬ್ರಾಡ್‍ಬ್ಯಾಂಡ್ ಇಂಟರ್‌ನೆಟ್ ಸೌಕರ್ಯ, ಮನೆಯ ಅಟ್ಟದ ಮೇಲೆ ನೈಸರ್ಗಿಕ ವಾತಾನುಕೂಲಿ ಕೋಣೆಯಲ್ಲಿ ಅವರ ಕಂಪ್ಯೂಟರ್-ಮೊಡೆಮ್-ಪ್ರಿಂಟರ್-ಸ್ಕ್ಯಾನರ್ ಜೋಡಣೆ - ಇವೆಲ್ಲ ಮೂಗಿನಮೇಲೆ ಬೆರಳಿಡುವಷ್ಟು ಅಚ್ಚರಿಯ ಸಂಗತಿಗಳು.

ಶರ್ಮರ ಜೀವನೋತ್ಸಾಹಕ್ಕೆ ಶುಭಹಾರೈಸಿ ಅಲ್ಲಿಂದ ಬೀಳ್ಕೊಂಡ ಮೇಲೆ ಮುಂದಿನ ಭೇಟಿ ಸೊರಬದಲ್ಲಿರುವ ನಮ್ಮಕ್ಕನ ಮನೆಗೆ. ಚಂದ್ರು-ಮಂಜು ಅವರಿಗೂ ಸೊರಬದಲ್ಲಿ ಸ್ನೇಹಿತರನ್ನು ಭೇಟಿಯಾಗುವುದಿತ್ತಾದ್ದರಿಂದ ಮತ್ತು ಬೆಂಗಳೂರಿಗೆ ನೈಟ್‌ಬಸ್ ಹೊರಡಲು ಇನ್ನೂ ತುಂಬಾ ಸಮಯವಿದ್ದುದರಿಂದ ನನಗೆ ಸೊರಬ ಭೇಟಿ ಸಾಧ್ಯವಾಯ್ತು; ಜೋಗದವರೆಗೂ ಬಂದವನು ನಮ್ಮಲ್ಲಿಗೇಕೆ ಬರಲಿಲ್ಲ ಎಂದು ನಮ್ಮಕ್ಕ ನನ್ನ ಮೇಲೆ ಸಕಾರಣ ಮುನಿಸಿಕೊಳ್ಳುವ ಅಪಾಯವೂ ತಪ್ಪಿತು. ಹಾಗೆಯೇ ತಲವಾಟದಿಂದ ಸೊರಬ ತಲುಪಲು ಒಳರಸ್ತೆಗಳನ್ನು ಬಳಸಿದ್ದರಿಂದ "ನಿತ್ಯಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ..." ಸಾಲಿನ ನೈಜತೆಯನ್ನು ಸ್ಪರ್ಶಿಸುತ್ತ ಅನುಭವಿಸುತ್ತ ಅನಂದಿಸುತ್ತ ಸಾಗುವ ಅವಕಾಶವೂ ಸಿಕ್ಕಿತು.

ಈಮಧ್ಯೆ ಫೋನ್‍ ಮೂಲಕವೇ ನನ್ನ ಪ್ರಯಾಣವಿವರಗಳನ್ನು ತಿಳಿದುಕೊಂಡು, ಜೋಗದಿಂದ ಬೆಂಗಳೂರಿಗೆ ನಾನು ವಾಪಸಾಗುವ ಬಸ್ಸು ಶಿವಮೊಗ್ಗಕ್ಕೆ ರಾತ್ರೆ ಹತ್ತಕ್ಕೆ ಬರುತ್ತದೆಂದೂ, ಅಲ್ಲಿ ಊಟಕ್ಕಂತ ೨೦ ನಿಮಿಷ ನಿಲ್ಲಿಸ್ತಾರೆಂದೂ, ಆಗ ಬಸ್‍ಸ್ಟಾಂಡಿಗೇ ಬಂದು ಭೇಟಿಯಾಗುತ್ತೇವೆಂದೂ ಸ್ನೇಹಸಂಕೋಲೆ ಬಿಗಿದವರು ಶಿವಮೊಗ್ಗದ ಪದ್ಮಿನಿ-ಅಶೋಕ್ ದಂಪತಿ. ಯಥಾಪ್ರಕಾರ ಅವರೂ ನನಗೆ ಅವತ್ತಿನವರೆಗೂ ಬರೀ ಇ-ಮಿತ್ರರು. ಆದರೆ ಆದಿನ "ನೀವು ಬಸ್‍ಸ್ಟಾಂಡ್ ಹೊಟೆಲಲ್ಲಿ ಊಟ ಮಾಡಬೇಡಿ, ನಾವು ಚಪಾತಿ-ಪಲ್ಯ ಕಟ್ಟಿಕೊಂಡು ಬರುತ್ತೇವೆ..." ಎನ್ನುತ್ತ ಸಂಬಂಧಿಕರಿಗಿಂತ ಹೆಚ್ಚಿನ ಸೌಹಾರ್ದತೆ ತೋರಿದ ಆಪ್ತರು; ಬಸ್ಸು ಶಿವಮೊಗ್ಗ ಬಸ್‍ಸ್ಟಾಂಡ್ ತಲುಪುತ್ತಿದ್ದಂತೆಯೇ ನನ್ನತ್ತ ಕೈಬೀಸಿ ನಗುಮೊಗ ತೋರಿ ಸ್ವಾಗತಿಸಿದ ಮಹಾನುಭಾವರು! ಅವರೊಡನೆ ೨೦ ನಿಮಿಷ ಕಳೆದು ವಿದಾಯ ಹೇಳಿದ ಮೇಲೇಯೇ ನಾನು ಬಸ್ ಹತ್ತಿ ಬೆಂಗಳೂರಿಗೆ ಪಯಣ ಮುಂದುವರಿಸಿದ್ದು,

ಅಂತೂ ಆಗಸ್ಟ್ ೨೧ರ (ಅವತ್ತು ಮಂಗಳವಾರ, ವಿಚಿತ್ರಾನ್ನ ವಿತರಣೆಯ ದಿನ!) ಇಡೀ ದಿನದ ಮಧುರಕ್ಷಣಗಳನ್ನು ನೆನಪಿಸಿಕೊಂಡಾಗ ಅನಿಸಿದ್ದು - "ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲೂ ದುಂಬಿಯ ಹಾಡಿನ ಝೇಂಕಾರದಲ್ಲೂ ಒಲವೇ ಜೀವನ ಸಾಕ್ಷಾತ್ಕಾರ..." ಅಂತಿದೆಯಷ್ಟೇ? ಬಹುಶಃ ನಿರ್ಮಲಸ್ನೇಹ ಸಹ ಒಲವಿಗಿಂತಲೂ ಒಂದುತೂಕ ಹೆಚ್ಚಿನ ಜೀವನಸಾಕ್ಷಾತ್ಕಾರ ಮಾಡುವಂಥದು! ಈಗ ಪಾಶ್ಚಾತ್ಯಜಗತ್ತಿನಂತೆ ನಮ್ಮ ದೇಶದಲ್ಲೂ ಮನುಷ್ಯರ ನಡುವಿನ ಸ್ನೇಹಸೌಜನ್ಯಗಳು ಕ್ಷೀಣಿಸುತ್ತಿವೆ; ಸಂಬಂಧಗಳ ಆರ್ದೃತೆಯನ್ನು ಬರಡಾಗಿಸುವ ಮೆಟೀರಿಯಲಿಸ್ಟಿಕ್ ಸ್ವಭಾವವೆಂಬ ಒಣಹವೆ ಅನುಭವಕ್ಕೆ ಬರತೊಡಗಿದೆ. ಅದರ ನಡುವೆಯೇ ಈ ರೀತಿಯ ಆತ್ಮೀಯತೆಯ ತಂಗಾಳಿ ಸೋಕಿದಾಗ ಆಗುವ ಆನಂದ ಹಿತಕರವಾದುದು, ಅಮೃತಸದೃಶವಾದುದು!

[email protected]

English summary
Thatskannada Columnist Srivathsa Joshi recalls his Jog Falls Trip.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X