• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದು ಮುಷ್ಟಿ ತಪ್ಪಿದ್ದರಿಂದಾದ ಸೃಷ್ಟಿ!

By ಶ್ರೀವತ್ಸ ಜೋಶಿ
|

ತಪ್ಪುಮಾಡಿದ್ದಕ್ಕೊಂದು imposition ಆದಂತೆಯೂ ಆಯ್ತು, ಅಂಕಣಕ್ಕೊಂದು ಲೇಖನ in position ಆದಂತೆಯೂ ಆಯ್ತು. ತಗೊಳ್ಳಿ ಇದು ಮುಷ್ಟಿ ತಪ್ಪಿದ್ದರಿಂದಾದ ಸೃಷ್ಟಿ, ತಾಜಾ ತಾಜಾ ವಿಚಿತ್ರಾನ್ನ ಒಂದು ಮುಷ್ಟಿ!

ಪ್ರಾಥಮಿಕ ಶಾಲೆಯಲ್ಲಿದ್ದಾಗ 'ಉಕ್ತಲೇಖನ' ಬರೆಯುತ್ತಿದ್ದದ್ದು, ಯಾವುದಾದರೂ ಪದ ತಪ್ಪಾದರೆ ಅದನ್ನು ಹತ್ತೋ ಇಪ್ಪತ್ತೋ ಸಲ ಸರಿಯಾಗಿ ಬರೆಯುವ ಶಿಕ್ಷೆಯನ್ನನುಭವಿಸುತ್ತಿದ್ದದ್ದು ನೆನಪಿದೆಯಾ? ನನಗೀಗ ಅದ್ಯಾಕೆ ನೆನಪಾಯಿತೆಂದರೆ, ಕೆಲ ವಾರಗಳ ಹಿಂದೆ ಇದೇ ಅಂಕಣದಲ್ಲಿ ಬರೆದಿದ್ದ 'ಚಾಚಿಕೊಂಡಿರುವ ನಾಲಿಗೆ...' ಲೇಖನದಲ್ಲಿ ಒಂದುಕಡೆ 'ಮುಷ್ಟಿ' ಎಂದಿರಬೇಕಿದ್ದ ಪದ ಮುಷ್ಠಿ' ಎಂದು ತಪ್ಪಾಗಿತ್ತು. ಅದನ್ನು ನನ್ನ ಗಮನಕ್ಕೆ ತಂದವರು ಒಬ್ಬ ಹಿರಿಯ ಓದುಗಮಿತ್ರ ಬೆಂಗಳೂರಿನ ಮೃತ್ಯುಂಜಯ ಗಿಂಡಿಮನೆ ಎಂಬುವವರು. ಅವರೆಂದುಕೊಂಡಿದ್ದರು ಅದು ಮುದ್ರಣದೋಷವಿರಬಹುದೆಂದು. ಆದರೆ ನನ್ನ ಬಳಿ ಇದ್ದ ಲೇಖನದ ಮೂಲಪ್ರತಿಯನ್ನು ನೋಡಿದಾಗ ಅದರಲ್ಲೇ ತಪ್ಪಾಗಿತ್ತು! ಆಮೇಲೆ ನಾನವರಿಗೆ ಪತ್ರಬರೆದು ಅದು ಮುದ್ರಣದೋಷವಲ್ಲವೆಂದೂ, ಪತ್ರಿಕೆಯ ಮೇಲೆ ದೋಷಾರೋಪಣೆ ಬೇಡವೆಂದೂ, ನನ್ನ ಬರಹದಲ್ಲೇ ತಪ್ಪಾಗಿತ್ತೆಂದೂ ಪ್ರಾಮಾಣಿಕವಾಗಿ ತಿಳಿಸಿದೆ. ಅವರಿಗೆ ಸಂತೋಷವಾಯಿತು, ಆರೋಗ್ಯಕರ ಪತ್ರವ್ಯವಹಾರದಿಂದ ನಾವಿಬ್ಬರೂ ಒಂದು ಮುಷ್ಟಿ ಪ್ರೀತಿಯನ್ನು ಪರಸ್ಪರ ಹಂಚಿಕೊಂಡಂತೆಯೂ ಆಯ್ತು!

ಆದರೆ ತಪ್ಪು ಎಷ್ಟೆಂದರೂ ತಪ್ಪೇ. ಚಿಕ್ಕವರಿದ್ದಾಗ ಉಕ್ತಲೇಖನದಲ್ಲಿ ತಪ್ಪಾದ್ದನ್ನು ಹತ್ತುಸಲ ಸರಿಯಾಗಿ ಬರೆಯುವ ಶಿಕ್ಷೆಯಿತ್ತಾದರೆ, ಈಗ ಯಾವ ಶಿಕ್ಷೆಯೂ ಇಲ್ಲದೆ ಪಾರಾಗುವುದು ಸರ್ವಥಾ ಸಾಧುವಲ್ಲ. ಅದಕ್ಕಾಗಿ ನಾನೇನು ಉಪಾಯಿಸಿದ್ದೇನೆಂದರೆ ಮುಷ್ಟಿ' ಎಂಬ ವಿಷಯದ್ದೇ ಒಂದು ಲೇಖನವನ್ನು ಸಿದ್ಧಪಡಿಸುವುದು, ಅದರಲ್ಲಿ ಮುಷ್ಟಿ ಎನ್ನುವ ಪದ ಹೇಗೂ ಹತ್ತಿಪ್ಪತ್ತು ಸರ್ತಿಯಾದರೂ ಬಂದೇಬರುತ್ತದೆ. ಆದ್ದರಿಂದ ತಪ್ಪುಮಾಡಿದ್ದಕ್ಕೊಂದು imposition ಆದಂತೆಯೂ ಆಯ್ತು, ಅಂಕಣಕ್ಕೊಂದು ಲೇಖನ in position ಆದಂತೆಯೂ ಆಯ್ತು. ತಗೊಳ್ಳಿ ಇದು ಮುಷ್ಟಿ ತಪ್ಪಿದ್ದರಿಂದಾದ ಸೃಷ್ಟಿ, ತಾಜಾ ತಾಜಾ ವಿಚಿತ್ರಾನ್ನ ಒಂದು ಮುಷ್ಟಿ!

"ಮಂಗನಿಂದ ಮಾನವ..." ಎಂದು ಡಾರ್ವಿನ್ ಪ್ರತಿಪಾದಿಸಿದ ಜೀವವಿಕಾಸ ಸಿದ್ಧಾಂತ ನಮಗೆಲ್ಲ ಗೊತ್ತಿದೆ. ಆದಕಾರಣ ಮುಷ್ಟಿಯ ವಿಷಯದಲ್ಲೂ ನಾವು ಕಪಿಮುಷ್ಟಿಯ ಬಗ್ಗೆಯೇ ಮೊದಲು ಚರ್ಚಿಸಬೇಕಾಗುತ್ತದೆ. ಮೊದಲನೆಯದಾಗಿ ಕಪಿಮುಷ್ಟಿ' ಎಂಬ ಕ್ಲೀಷೆಯ ಬಳಕೆ ಹೇಗೆ ಮತ್ತು ಏಕೆ ಶುರುವಾಯ್ತೋ ತಿಳಿಯದು. ಕೈಗೆ ಸಿಕ್ಕಿದ್ದನ್ನು ಬಿಗಿಯಾದ ಮುಷ್ಟಿಯಲ್ಲಿ ಭದ್ರವಾಗಿಟ್ಟುಕೊಳ್ಳುವುದು ಮಂಗಗಳ ಅಭ್ಯಾಸ, ಇದನ್ನು ಗಮನಿಸಿದವರು ಬಹುಶಃ ಬಿಡಿಸಲಾಗದ ಗಂಟು' ಎಂಬರ್ಥದಲ್ಲಿ ಕಪಿಮುಷ್ಟಿ ಎಂಬ ಪದಪ್ರಯೋಗವನ್ನು ಸೃಷ್ಟಿಸಿರಬಹುದು. ಅಥವಾ, ಕನ್ಯಾಪಿತೃವಿನ ಮುಷ್ಟಿಗೆ ಸಿಕ್ಕಿದ ಯಾವನೋ ಒಬ್ಬ ಅಳಿಯಮಹಾಶಯ ತನ್ನ ಪರಿಸ್ಥಿತಿಯನ್ನು ಕಪಿಮುಷ್ಟಿಯಲ್ಲಿ ಸಿಲುಕಿದಂತೆ...' ಎಂದು ಬಣ್ಣಿಸಿಕೊಂಡದ್ದೂ ಇರಬಹುದು. ಹೇಗೂ ಇರಲಿ, ಕಪಿಮುಷ್ಟಿ ಅನ್ನೋದೊಂದು ಜನಜನಿತ ನುಡಿಗಟ್ಟು.

ಡಿಸ್ಕವರಿ ಚಾನೆಲ್‍ನಲ್ಲೋ ನ್ಯಾಶನಲ್ ಜಿಯೊಗ್ರಾಫಿಯಲ್ಲೋ ಒಂದು ಡಾಕ್ಯುಮೆಂಟರಿ ಕಾರ್ಯಕ್ರಮದಲ್ಲಿ ನೋಡಿದ ನೆನಪು, ಆಫ್ರಿಕಾದ ಬುಡಕಟ್ಟು ಜನಾಂಗದವರು ಮಂಗಗಳನ್ನು ಹಿಡಿಯುವ ಉಪಾಯವಾಗಿಯೂ ಕಪಿಮುಷ್ಟಿಯನ್ನೇ ಬಳಸುತ್ತಾರಂತೆ! ಅದು ಹೇಗೆಂದರೆ, ಚಿಪ್ಪಿನ ಸಮೇತ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಅದರ ಒಂದು ಕಣ್ಣನ್ನಷ್ಟೇ ದೊಡ್ಡ ರಂಧ್ರವನ್ನಾಗಿ ಮಾಡಿ ಅದರೊಳಗೆ ಕಡ್ಲೆಬೀಜ, ಬಾಳೆಹಣ್ಣು ಅಥವಾ ಮಂಗನಿಗೆ ಆಸೆಹುಟ್ಟಿಸುವ ಯಾವುದೇ ತಿನಿಸನ್ನು ಹಾಕಿಡುತ್ತಾರೆ. ತೆಂಗಿನಕಾಯಿಯ ತೂತಿನೊಳಗೆ ಕೈಹಾಕುವ ಮಂಗ ತಿಂಡಿ ಸಿಕ್ಕೊಡನೆ ತನ್ನ ಅಭ್ಯಾಸದಂತೆ ಮುಷ್ಟಿಯಲ್ಲಿ ಬಿಗಿಯಾಗಿ ಹಿಡಿಯುತ್ತದೆ, ಮುಷ್ಟಿ ಬಿಗಿದ ಕೈಯನ್ನು ತೆಂಗಿನಕಾಯಿಂದ ಹೊರತೆಗೆಯಲಾಗದೆ ಒದ್ದಾಡುತ್ತದೆ. ಕಾಯಿಗೆ ಕಟ್ಟಿರುವ ಹಗ್ಗವನ್ನು ಎಳೆದಾಗ ಕಾಯಿ, ಕಾಯಿಯೊಂದಿಗೆ ಮಂಗನ ಕೈ, ಮತ್ತು ಕೈಯೊಂದಿಗೆ ಮಂಗ - ಎಲ್ಲ ಈಚೆ ಬರುತ್ತವೆ! ಹೇಗಿದೆ ಉಪಾಯ? ಕಪಿಯನ್ನು ಹಿಡಿಯುವವನ ಮುಷ್ಟಿಯಲ್ಲಿ ಕಪಿ! ಈ ದೃಶ್ಯವನ್ನು ಊಹಿಸಿದರೆ ಅಳಿಯ ಬಣ್ಣಿಸುವ ಕಪಿಮುಷ್ಟಿಗೂ ಇದಕ್ಕೂ ಹೆಚ್ಚು ವ್ಯತ್ಯಾಸವಿಲ್ಲ ಅಂತೀರಾ?

ಮಾಸ್ಟರ್ ಹಿರಣ್ಣಯ್ಯನವರ ಒಂದು ನಾಟಕದ ಹೆಸರು ಕಪಿಮುಷ್ಟಿ ಎಂದಿದೆ. ಅದು ಸಾಮಾಜಿಕ ಸಮಸ್ಯೆಗಳ ಕಪಿಮುಷ್ಟಿಯಲ್ಲಿ ಸಿಲುಕಿ ನರಳುವವರ ಚಿತ್ರಣವಿರಬೇಕು. ಇತ್ತೀಚೆಗೆ ದೇವೇಗೌಡರು ಒಂದು ಸಂದರ್ಭದಲ್ಲಿ (ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ) ತನ್ನ ಮಗ ಕುಮಾರಸ್ವಾಮಿಯ ಪರಿಸ್ಥಿತಿ ಒಂಥರಾ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಂತಿದೆ ಎಂದಿದ್ದರು. ಕಪಿಮುಷ್ಟಿ ಎಂದರೆ ಬಿಡಿಸಲಾಗದ ಗಂಟು ಎಂಬರ್ಥದಲ್ಲಿ ಅವರು ಹಾಗೆಂದರೋ, ಅಥವಾ ಅಯೋಧ್ಯಾಮಂದಿರಕ್ಕಾಗಿ ಕರಸೇವೆ ಮಾಡಿದ ರಾಮಭಕ್ತರನ್ನೂ ತ್ರೇತಾಯುಗದ ರಾಮಸೇತು ನಿರ್ಮಾತೃರನ್ನೂ ಹೋಲಿಸಿ ಹಾಗೆಂದರೋ ಎನ್ನುವುದರ ಬಗ್ಗೆ ಯಾರೂ ತಲೆಕೆಡಿಸಿಕೊಂಡಂತಿಲ್ಲ. ಅಸಲಿಗೆ ಕಪಿಮುಷ್ಟಿಯಲ್ಲಿ ಸಿಲುಕಿರುವುದು ಕುಮಾರಸ್ವಾಮಿಯಲ್ಲ, ಸದ್ಯದ ರಾಜಕೀಯ ಡೊಂಬರಾಟವನ್ನು ಸಹಿಸಿಕೊಂಡು ತಾನೇನೂ ಮಾಡಲಾಗದ ಸ್ಥಿತಿಯಲ್ಲಿ ಚಡಪಡಿಸುತ್ತಿರುವ ಬಡಪಾಯಿ ಕನ್ನಡಿಗ.

ಕಪಿಮುಷ್ಟಿ ಎಂಬ ನುಡಿಗಟ್ಟು ಕನ್ನಡ/ಸಂಸ್ಕೃತ ಭಾಷೆಗಳ ಸಾಹಿತ್ಯಾಲಂಕಾರವಾಗಿಯಷ್ಟೇ ಬಳಕೆಯಲ್ಲಿರುವುದಲ್ಲ. ಇಂಗ್ಲಿಷ್‍ನಲ್ಲೂ Monkey's fist ಎಂದರೆ ಬಿಡಿಸಲಾಗದ ಗಂಟು; ಹಗ್ಗಕ್ಕೆ ಹಾಕುವ ಗಂಟಿನ (knot) ಒಂದು ಮಾದರಿ. ನಾವಿಕರು ತಮ್ಮ ದೋಣಿ/ಹಡಗುಗಳನ್ನು ಲಂಗರು ಹಾಕುವ ಮೊದಲು ಉದ್ದದ ಹಗ್ಗಕ್ಕೆ ಒಂದು ಕೊನೆಯಲ್ಲಿ ದೊಡ್ಡದಾದ ಗಟ್ಟಿಯಾದ ಗಂಟು ಬಿಗಿದು ಆ ತುದಿಯನ್ನು ಬಂದರಿನ ತೀರದಲ್ಲಿ ನಿಂತಿರುವ ಸಹಾಯಕನತ್ತ ಎಸೆಯುತ್ತಾರೆ. ಗಂಟಿನ ಭಾರದಿಂದಾಗಿ ಹಗ್ಗವನ್ನು ನಿರ್ದಿಷ್ಟ ಗುರಿಯತ್ತ ಎಸೆಯುವುದು ಸುಲಭವಾಗುತ್ತದೆ. ಗಂಟು ನಿಜವಾಗಿಯೂ ಭಾರವಾಗಿರುವಂತೆ ಅದನ್ನು ಕಟ್ಟುವಾಗ ಸಣ್ಣದೊಂದು ಕಲ್ಲನ್ನೋ, ಮರದ ತುಂಡನ್ನೋ, ರದ್ದಿಕಾಗದದ ಮುದ್ದೆಯನ್ನೋ ಒಳಗಿಟ್ಟು ಕಟ್ಟುತ್ತಾರೆ. ಆ ತರಹದ ಗಂಟಿಗೆ Monkey's fist knot ಎಂದೇ ಹೆಸರು. ನೋಡುವುದಕ್ಕೂ ಅದು ಮುಷ್ಟಿಬಿಗಿದ ಮಂಗನಕೈಯಂತೆಯೇ ಇರುತ್ತದೆ.

ಇರಲಿ, ಮಂಗನ ಮುಷ್ಟಿಯಿಂದ ಬಿಡಿಸಿಕೊಂಡು ಈಗ ಮಾನವನ ಮುಷ್ಟಿಯ ವಿಚಾರಕ್ಕೆ ಬರೋಣ. ಭರತನಾಟ್ಯ, ಕಥಕ್ಕಳಿ, ಕಥಕ್, ಯಕ್ಷಗಾನ ಮೊದಲಾದ ನಾಟ್ಯವಿಧಾನಗಳೆಲ್ಲದರಲ್ಲೂ ಮುಷ್ಟಿ ಒಂದು ಪ್ರಮುಖ ಹಸ್ತಮುದ್ರೆ. ಸಂಭಾಷಣೆಯಿಲ್ಲದೆ ಎಲ್ಲವೂ ಮುಖ ಮತ್ತು ಕೈಗಳ ಹಾವಭಾವಗಳಿಂದಲೇ ವ್ಯಕ್ತವಾಗಬೇಕಾದ ಕಥಕ್ಕಳಿಯಲ್ಲಂತೂ ಒಂದು ಅಥವಾ ಎರಡೂ ಕೈಗಳ ಮುಷ್ಟಿಯಾಕಾರದಿಂದಲೇ 40 ವಿವಿಧ ಭಾವಗಳನ್ನು ಸೂಚಿಸಬಹುದಂತೆ! ನಾಟ್ಯಶಾಸ್ತ್ರದಂತೆಯೇ ಆಯುರ್ವೇದದಲ್ಲಿ ಮತ್ತು ಯೋಗಾಸನವಿಧಾನಗಳಲ್ಲಿ ಸಹ ಮುಷ್ಟಿಮುದ್ರೆಯ ಪ್ರಸ್ತಾಪ ಬರುತ್ತದೆ. ಆಯುರ್ವೇದದ ಪ್ರಕಾರ ಮುಷ್ಟಿಮುದ್ರೆಯ ವ್ಯಾಯಾಮ ಜೀರ್ಣಶಕ್ತಿಯ ನಿಯಂತ್ರಣಕ್ಕೆ ಬಹಳ ಒಳ್ಳೆಯದಂತೆ.

ಆತ್ಮರಕ್ಷಣಾಕಲೆಯಲ್ಲಿ ಮುಷ್ಟಿಯ ಪಾತ್ರ ಪ್ರಮುಖವಾದುದು. ಯಾವುದೇ ಆಯುಧಗಳಿಲ್ಲದೆ ಬರೀ ಮುಷ್ಟಿಪ್ರಹಾರದಿಂದ, ಮಾರಣಾಂತಿಕ ಮರ್ಮಾಘಾತಗಳಿಂದ ಎದುರಾಳಿಯನ್ನು ಮಟಾಶ್ ಮಾಡಿಬಿಡುವ ವಿಧಾನಗಳಿವೆಯಂತೆ. ವಜ್ರಮುಷ್ಟಿ' ಅಂತಹ ಒಂದು ಯುದ್ಧಕಲೆ. ಈಗಿನ ಕರಾಟೆ, ಜುಡೋ, ಬಾಕ್ಸಿಂಗ್ ಇತ್ಯಾದಿಗಳೂ ಒಂದುರೀತಿಯಲ್ಲಿ ವಜ್ರಮುಷ್ಟಿಯ ಲಘುರೂಪಗಳೆನ್ನಬಹುದು. ಭರತ-ಬಾಹುಬಲಿಯರ ಅತಿಭಯಂಕರ ಸೆಣಸಾಟದಲ್ಲಿ ಮುಷ್ಟಿಯುದ್ಧವೂ ಇತ್ತು, ಅವರಿಬ್ಬರೂ ವಜ್ರಮುಷ್ಟಿವೀರರೇ ಆಗಿದ್ದಿರಬಹುದು. ಭಾಗವತದ ಕಥೆಯಲ್ಲಿ ಕೃಷ್ಣ-ಬಲರಾಮರೊಡನೆ ಮಲ್ಲಯುದ್ಧಕ್ಕೆ ಬರುವ ಮುಷ್ಟಿಕ (ಚಾಣೂರನ ಜತೆಗಾರ)ನಿಗಂತೂ ಅವನ ಮುಷ್ಟಿಬಲದಿಂದಲೇ ಆ ಹೆಸರಿತ್ತೋ ಏನೊ.

ಚಿಕ್ಕಮಕ್ಕಳಿಗೆ ಮುಷ್ಟಿ ಒಂದು ಮಾಯಾಲೋಕವಿದ್ದಂತೆ. ನನ್ಹೆ ಮುನ್ನೆ ಬಚ್ಚೆ ತೇರಿ ಮುಟ್ಠಿ ಮೆ ಕ್ಯಾ ಹೈ...' ಎಂಬ ಜನಪ್ರಿಯ ಸಿನೆಮಾಹಾಡು ನಿಮಗೆ ನೆನಪಿರಬಹುದು. ಆ ಪ್ರಶ್ನೆ ಕೇಳಿಸಿಕೊಂಡ ಮಗು, ತನ್ನ ಭವಿತವ್ಯವೇ (ತಕ್‍ದೀರ್) ತನ್ನ ಪುಟ್ಟ ಮುಷ್ಟಿಯೊಳಗೆ ಭದ್ರವಾಗಿದೆ ಎನ್ನುತ್ತದೆ. ಎಷ್ಟೊಂದು ಉಜ್ವಲವಾದ ಚಿಂತನೆ! ಇನ್ನು, ಮುಷ್ಟಿಯೊಳಗೆ ಏನನ್ನೋ (ಚಾಕಲೇಟು, ನಾಣ್ಯ, ಬಳಪದತುಂಡು...) ಮುಚ್ಚಿಟ್ಟುಕೊಂಡು ಯಾವ್ ಕೈಯಲ್ಲಿದೆ ಎಡಕೈಯಲ್ಲೋ ಬಲಕೈಯಲ್ಲಿ?' ಎಂದು ಕೇಳುವ ಆಟ ಬರೀ ಆಟವಷ್ಟೇ ಅಲ್ಲ, 50-50 ಸಂಭವನೀಯತೆಯ ಫಲಿತಾಂಶ ತೀರ್ಮಾನಕ್ಕೂ ಉಪಯೋಗವಾಗುವುದಿದೆ. ತೀರಾ ಚಿಕ್ಕಮಕ್ಕಳ ಇನ್ನೊಂದು ಫೇವರಿಟ್ ಚಟುವಟಿಕೆಯೆಂದರೆ ಹಿರಿಯರ/ಹೆತ್ತವರ ಜತೆ ಆಟ‌ಆಡುವಾಗ ಬಿಗಿದ ಮುಷ್ಟಿಯ ಒಂದೊಂದೇ ಬೆರಳನ್ನು ಸಡಿಲಿಸಿ ಮುಷ್ಟಿಯನ್ನು ತೆರೆಯುವುದು. ಏನೋ ಮಹಾ ಸಾಧನೆಯ ತೃಪ್ತಿ ಮುಖದಲ್ಲಿ.

ಮುಷ್ಟಿಯ ಕುರಿತಂತೆಯೇ ಇನ್ನೂ ಮುಖ್ಯವಾದ ಅಂಶವೊಂದಿದೆ - ಪದಾರ್ಥಗಳ ಅಳತೆಗೆ ಮಾನಕವಾಗಿ ಮುಷ್ಟಿಯ ಉಪಯೋಗ. ಈಗಿನಂತೆ measuring cup ಆಗಲಿ, ಸೇರು-ಪಾವು ಸಹ ಇಲ್ಲದ ಕಾಲದಲ್ಲಿ ಚಿಟಿಕೆ-ಮುಷ್ಟಿ-ಬೊಗಸೆಗಳೇ ಧಾನ್ಯದ ಅಳತೆಗೆ ಉಪಯೋಗವಾಗುತ್ತಿದ್ದದ್ದು. ಬೇಕಿದ್ದರೆ ನೋಡಿ, ಅಜ್ಜಿಯಂದಿರು ಹೇಳುವ ರೆಸಿಪಿಗಳಲ್ಲಿ ಪ್ರಮಾಣಗಳೆಲ್ಲ ಹೆಚ್ಚಾಗಿ ಒಂದು ಮುಷ್ಟಿ ಮೆಂತ್ಯದಕಾಳು, ಒಂದು ಮುಷ್ಟಿ ಕರಿಮೆಣಸು..." ಅಂತಲೇ ಇರುವುದು. ಕೊಂಕಣಿ ಸಮುದಾಯದಲ್ಲಿ ಮುಷ್ಟಿ ಪೋಳೆ' ಎಂದು ದೋಸೆಯ ಒಂದು ವಿಧವಿದೆ. ಅದಕ್ಕೆ ಅಕ್ಕಿಬೇಳೆಗಳ ಪ್ರಮಾಣವು ಮುಷ್ಟಿ ಲೆಕ್ಕದಲ್ಲಿ ಇರುವುದರಿಂದ ಆ ಹೆಸರು ಬಂದದ್ದಿರಬಹುದು. ಹಾಗೆಯೇ ಮುಷ್ಟಿ ಕಡಬು' ಅಂತಲೂ ಒಂದು ಕರಾವಳಿ ಸ್ಪೆಷಲ್ ತಿಂಡಿಯಿದೆ, ಚಿತ್ಪಾವನಮರಾಠಿ ಭಾಷೆಯಲ್ಲಿ ಮುಠ್ಯೆ' ಎನ್ನುತ್ತಾರೆ. ಅದರ ಆಕಾರ ಮುಷ್ಟಿಯಂತಿರುವುದರಿಂದ ಆ ಹೆಸರು. ರೆಸ್ಟೊರೆಂಟ್‌ಗಳಲ್ಲಿ ಸರ್ವಿಸುವ ತಿಂಡಿಗಳ ಪೈಕಿಯದಲ್ಲವಾದರೂ ಬೆಂಗಳೂರಿನಲ್ಲಿ ಮಲ್ಲೇಶ್ವರಂ‍ನ ನ್ಯೂಕೃಷ್ಣಭವನದ ಮೆನುದಲ್ಲಿ ಬಿಸಿಬಿಸಿ ಮುಷ್ಟಿಕಡಬು ಕಂಡುಬಂದರೂ ಆಶ್ಚರ್ಯವಿಲ್ಲ!

ಸಂಸ್ಕೃತದ ಮುಷ್ಟಿ, ಹಿಂದಿಯಲ್ಲಿ ಮುಟ್ಠಿ, ಮರಾಠಿಯಲ್ಲಿ ಮೂಠಿ ಆಗಿದೆ. ಮಹಾರಾಷ್ಟ್ರದಲ್ಲಿ ಆಚರಣೆಯಿರುವ ಸಂಪ್ರದಾಯದಲ್ಲಿ ಶಿವಾಮೂಠಿ' ಎಂಬ ಒಂದು ವ್ರತೋಪಾಸನೆ ಇದೆ. ಮಂಗಳಾಗೌರಿ ವ್ರತ ಇದ್ದಂತೆಯೇ, ಮದುವೆಯಾದ ಹೆಣ್ಣು ಐದು ವರ್ಷಗಳವರೆಗೆ ಶ್ರಾವಣ ಮಾಸದ ಪ್ರತಿ ಸೋಮವಾರದಂದು ಶಿವನ ಆರಾಧನೆಗಾಗಿ ಮಾಡುವ ವ್ರತ. ಒಂದೊಂದು ವಾರ ಒಂದೊಂದು ನಮೂನೆಯ ಧಾನ್ಯವನ್ನು - ಮೊದಲವಾರ ಅಕ್ಕಿ, ಎರಡನೆವಾರ ಎಳ್ಳು, ಮೂರನೆವಾರ ಹೆಸರುಕಾಳು, ನಾಲ್ಕನೆವಾರ ಗೋಧಿ, ಐದನೆಯ ಸೋಮವಾರವಿದ್ದರೆ ಬಾರ್ಲಿ - ಹೀಗೆ ಒಂದು ಮುಷ್ಟಿ ಪ್ರಮಾಣದಲ್ಲಿ ಶಿವನಿಗೆ ಅರ್ಪಿಸುವ ಕ್ರಮ. ಭಯಭಕ್ತಿಯಿಂದರ್ಪಿಸಿದ ಒಂದು ಮುಷ್ಟಿ ಧಾನ್ಯದಿಂದ ಸಂಪ್ರೀತನಾಗುವ ಶಿವನು ವ್ರತವನಾಚರಿಸುವ ಸುಮಂಗಲಿಗೆ ಅಖಂಡಸೌಭಾಗ್ಯವನ್ನು ಕರುಣಿಸುತ್ತಾನೆಂಬ ನಂಬಿಕೆ.

ಅಳತೆ ಕೋಷ್ಟಕದಲ್ಲಿ ಮುಷ್ಟಿ ಪ್ರಮಾಣದ ಅಪವರ್ತ್ಯ ಅಪವರ್ತನಗಳ ವಿಷಯವೂ ಸ್ವಾರಸ್ಯಕರವಾಗಿದೆ. ಎರಡು ಮುಷ್ಟಿ ಪ್ರಮಾಣಕ್ಕೆ ಒಂದು ಪ್ರಸೃತ' ಎನ್ನುತ್ತಾರೆ. ಪ್ರಸೃತ ಎಂಬ ಶಬ್ದದ ಅರ್ಥ ನೀರು ನಿಲ್ಲುವಂತೆ ಗುಳಿಯಾಗಿ ಮಾಡಿದ ಅಂಗೈ'. ಅದರಲ್ಲಿ ಎರಡು ಮುಷ್ಟಿಗಳಷ್ಟು ಧಾನ್ಯ ಹಿಡಿಯುತ್ತದೆ. ಎರಡು ಪ್ರಸೃತಗಳು ಸೇರಿದಾಗ, ಅಂದರೆ ಅಂಗೈಗಳನ್ನು ಜೋಡಿಸಿದಾಗ ಆಗುವುದು ಬೊಗಸೆ (ಸಂಸ್ಕೃತ ಶಬ್ದ ಅಂಜಲಿ'). ಆದ್ದರಿಂದ ನಾಲ್ಕು ಮುಷ್ಟಿಗಳು = ಒಂದು ಅಂಜಲಿ. 256 ಮುಷ್ಟಿಗಳಷ್ಟು ಅಳತೆಗೆ ಪೂರ್ಣಪಾತ್ರ' ಎಂದು ಹೆಸರು. ಯಜ್ಞಯಾಗಾದಿಗಳು ಸಮಾಪ್ತಿಯಾದ ನಂತರ ಕೊಡುವ ದಕ್ಷಿಣೆ ಒಂದು ಪೂರ್ಣಪಾತ್ರದಷ್ಟು ಅಂದರೆ 256 ಮುಷ್ಟಿಗಳಷ್ಟು ಇರಬೇಕು ಎಂದು ಲೆಕ್ಕ. ಈ ಎರಡು, ನಾಲ್ಕು, ಇನ್ನೂರೈವತ್ತಾರು ಸಂಖ್ಯೆಗಳೆಲ್ಲ 2ರ ಘಾತಗಳೇ ಆಗಿರುವುದು ಮತ್ತು ನಮ್ಮ ಪೂರ್ವಜರೂ ದ್ವಿಮಾನಸಂಖ್ಯಾಪದ್ಧತಿಯನ್ನು ಉಪಯೋಗಿಸುತ್ತಿದ್ದರೆಂಬ ಸಂಗತಿಯು ಈ ಸ್ವಾರಸ್ಯವನ್ನು ಎರಡರಷ್ಟಾಗಿಸುತ್ತದೆ!

ಅಂತೂ ಬರೆಯುತ್ತಹೋದಂತೆ ಮುಷ್ಟಿ ವಿವರಗಳಿಂದ ಬೊಗಸೆ ತುಂಬಿತು; ಜತೆಯಲ್ಲೇ ಮುಷ್ಟಿ ಪದ ಏನಿಲ್ಲೆಂದರೂ ಐವತ್ತುಸಲವಾದರೂ ಪ್ರಯೋಗವಾಯಿತು; ಇದನ್ನು ಬಹುಶಃ "ಮುಷ್ಟಿ ವೃಷ್ಟಿ" ಎಂದರೂ ಸರಿಹೋದೀತು!

English summary
Thatskannada Columnist Srivathsa Joshi Writes on Mushti(Fist).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X