ದೀಪದಾನದ ಅತ್ಯುನ್ನತ ರೂಪ - ಆಕಾಶದೀಪ
ಸ್ಕಂದಪುರಾಣದ ಒಂದು ಶ್ಲೋಕ ಮತ್ತು ಅದು ವಿವರಿಸುವ ಕಥೆ ಹೀಗಿದೆ :
ಏಕಾದಸ್ಯಾಂ ಪರೇರ್ದತ್ತಂ ದೀಪಂ ಪ್ರಜ್ವಾಲ್ಯ ಮೂಷಿಕಾ
ಮಾನುಷ್ಯಂ ದುರ್ಲಭಂ ಪ್ರಾಪ್ಯ ಪರಂ ಗತಿಂ ಅವಾಪ ಸಾ ।।
ವಿಷ್ಣುದೇವಸ್ಥಾನವೊಂದರ ಗರ್ಭಗುಡಿಯಲ್ಲಿ ಒಂದು ಹೆಣ್ಣು ಇಲಿ ಸೇರಿಕೊಂಡಿತ್ತಂತೆ. ಭಕ್ತರು ಅರ್ಪಿಸುವ ತುಪ್ಪದ ದೀಪಗಳು ಆರಿದ ನಂತರ ಅದರಲ್ಲುಳಿದ ತುಪ್ಪವನ್ನು ತಿನ್ನುವುದು ಆ ಇಲಿಯ ನಿತ್ಯಕಾಯಕ. ಒಂದು ದಿನ ಇಲಿಗೆ ತುಂಬ ಹಸಿವಾಗಿತ್ತು, ದೀಪಗಳಿನ್ನೂ ನಂದಿಹೋಗಿರಲಿಲ್ಲ. ತುಪ್ಪ ತಿನ್ನುವ ಅತಿಯಾಸೆಯಿಂದ, ಉರಿಯುತ್ತಲೇ ಇದ್ದ ಬತ್ತಿಯನ್ನು ಬಾಯಲ್ಲಿ ಕಚ್ಚಿಹಿಡಿಯಿತು ಆ ನತದೃಷ್ಟ ಇಲಿ. ಧಗೆ ತಾಳಲಾರದೆ ಅತ್ತಿಂದಿತ್ತ ಕುಣಿದಾಡಿತು, ಕೊನೆಗೆ ಸತ್ತೇ ಹೋಯಿತು. ಪರಮದಯಾಳು ಪರಮಾತ್ಮನಾದರೋ ಅದು ತನಗೆ ಇಲಿಯಿಂದಾದ ದೀಪಸೇವೆಯೆಂದು ಪರಿಗಣಿಸಿ ಸತ್ತ ಇಲಿಗೆ ಮೋಕ್ಷ ಕರುಣಿಸಿ ಅತಿದುರ್ಲಭವಾದ ಮನುಷ್ಯಜನ್ಮವನ್ನು ಅದಕ್ಕೆ ದಯಪಾಲಿಸಿದನಂತೆ!
ದೀಪ ಬೆಳಗುವುದರಿಂದಾಗುವ ಸತ್ಫ-ಲ ಪ್ರತಿಪಾದನೆಗೆ ಇದಕ್ಕಿಂತ ಹೆಚ್ಚಿನ ಪುರಾವೆ ಇನ್ನೇನು ಬೇಕು?
ದೀಪ ಬೆಳಗುವುದನ್ನು ನಾವು ನಿತ್ಯವೂ ಮಾಡುತ್ತೇವೆ, ಕಾರ್ತೀಕ ಮಾಸದಲ್ಲಂತೂ ದೀಪಾವಳಿಯಿಂದ ಆರಂಭವಾಗಿ ದೀಪೋತ್ಸವವೈಭವದ ತನಕ ಲಕ್ಷಲಕ್ಷ ದೀಪಗಳನ್ನು ಉರಿಸುತ್ತೇವೆ. ತ್ರೈಲೋಕ್ಯ ತಿಮಿರಾಪಃ - ಮೂರು ಲೋಕಗಳ ಕತ್ತಲನ್ನೂ ತೊಳೆದು ಜಗವೆಲ್ಲ ಜ್ಯೋತಿರ್ಮಯವಾಗಲಿ ಎಂದು ದೀಪ ಹಚ್ಚಿಟ್ಟು ಹರಸುತ್ತೇವೆ. ನಿಜಕ್ಕೂ ದೀಪದಾನದ - ಅಂದರೆ ದೀಪವನ್ನು ಉರಿಸಿ ಬೆಳಕನ್ನು ಹರಡುವ ಆ ಸತ್ಕರ್ಮದ - ಅರ್ಥ, ಆಶಯ, ಆಚಾರಗಳು ಪರಮೋಚ್ಚವಾದುವು.
ಅದರಲ್ಲೂ ಅಕ್ಷರಶಃ ಅತ್ಯುನ್ನತವಾದುದು ಆಕಾಶದೀಪ!
ಆಕಾಶದೀಪ ಸಹ ಕಾರ್ತೀಕ ಮಾಸದ್ದೇ ಒಂದು ವೈಶಿಷ್ಟ್ಯ. ಅದೂ ದಾಮೋದರನಿಗೇ ಸಮರ್ಪಿತ. ಆಕಾಶದೀಪವನ್ನು ಉರಿಸುವಾಗ ಹೇಳಬೇಕಾದ ಮಂತ್ರ ಹರಿಭಕ್ತಿವಿಲಾಸದ 16ನೇ ಅಧ್ಯಾಯದಲ್ಲಿ ಬರುತ್ತದೆ (149ನೇ ಶ್ಲೋಕ). ಅದು ಹೀಗಿದೆ :
ದಾಮೋದರಾಯ ನಭಸಿ ತುಲಾಯಾಂ ಲೋಲಯಾ ಸಹ
ಪ್ರದೀಪಂ ತೇ ಪ್ರಯಚ್ಛಾಮಿ ನಮೋನಂತಾಯ ವೇಧಸೆ ।।
‘‘ತುಲಾ (ಚಾಂದ್ರಮಾನ ಕಾರ್ತೀಕಕ್ಕೆ ಹೆಚ್ಚುಕಡಿಮೆ ಸಮಕಾಲೀನವಾದುದು ಸೌರಮಾನ ಮಾಸ ತುಲಾ) ಮಾಸದಲ್ಲಿ ಲಕ್ಷ್ಮೀಸಹಿತನಾದ (ಲೋಲ ಎಂದರೆ ಲಕ್ಷ್ಮಿ) ದಾಮೋದರನಿಗೆ, ಆಕಾಶದಲ್ಲಿ ದೀಪವನ್ನು ಹಚ್ಚಿಡುತ್ತಿದ್ದೇನೆ; ಅನಂತಕ್ರಿಯಾಶಕ್ತಿಯುಳ್ಳವನಿಗೆ ನಮಿಸುತ್ತಿದ್ದೇನೆ’’ - ಇದು ಮಂತ್ರದ ಅರ್ಥ.
ದಾಮೋದರನಿಗೆ ದೀಪನಮನವು ಆಕಾಶದೀಪದ ಒಂದು ಆಶಯವಾದರೆ, ಆಗತಾನೆ ಮಹಾಲಯಪಕ್ಷದಲ್ಲಿ ಭೂಲೋಕಕ್ಕೆ ಭೇಟಿಯಿತ್ತು ವಾಪಸಾಗುತ್ತಿರುವ ‘ಪಿತೃ’ಗಳಿಗೆ ಮತ್ತೆ ದೇವಲೋಕವನ್ನು ತಲುಪಲು ಮಾರ್ಗದರ್ಶಿ ಬೆಳಕಾಗಿ ಆಕಾಶದೀಪವನ್ನು ಹಚ್ಚಿಡುವುದು ಎಂಬ ನಂಬಿಕೆಯೂ ಇದೆ. ಪಿತೃಗಳನ್ನು ಸಂತೃಪ್ತಿಪಡಿಸುವ ಉದ್ದೇಶವೆಂಬ ಈ ಕಲ್ಪನೆಯೂ ಆಕಾಶದೀಪದ ಅಂತರಾರ್ಥ ಔನ್ನತ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆಗಲೇ ಹೇಳಿದಂತೆ, ಕಾರ್ತೀಕ ಮಾಸದಲ್ಲಿ ದೀಪದಾನ ಮಾಡುವ ವಂಶೋದ್ಧಾರಕನ ಸಂಸ್ಕಾರ ಶ್ರೀಮಂತಿಕೆಯನ್ನು ಸಂಸ್ಕೃತಿಯ ಸತ್ವವನ್ನು ಕಂಡಾದರೂ ಪಿತೃಗಣಗಳು ಸಂತೃಪ್ತರಾಗಲೇಬೇಕಲ್ಲವೇ?












Click it and Unblock the Notifications