• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡ್ಯಾಷ್‌ಬೋರ್ಡ್‌ ಗಣಪನ ಡ್ಯಾಷಿಂಗ್‌ ಮಾತುಗಳು!

By Staff
|
Srivathsa Joshi *ಶ್ರೀವತ್ಸ ಜೋಶಿ

Dashboard Ganeshas Dashing Thoughts...‘ನಡೆಮುಂದೆ ನಡೆಮುಂದೆ ನುಗ್ಗಿನಡೆ ಮುಂದೆ...’ ಎನ್ನುತ್ತ ಹುಮ್ಮಸ್ಸಿಂದ, ವೇಗದಿಂದ, ಟ್ರಾಫಿಕ್‌ ಚಕ್ರವ್ಯೂಹದ ಅಡೆತಡೆಗಳನ್ನೂ ಲೆಕ್ಕಿಸದೆ ಕಾರು ಚಲಾಯಿಸುತ್ತೀರಲ್ಲಾ, ನಿಮ್ಮ ಕಾರಿನ ಡ್ಯಾಷ್‌ಬೋರ್ಡ್‌ ಮೇಲೆ ಅಲಂಕಾರಕ್ಕೆಂದೋ ಭಕ್ತಿಗೆಂದೋ ಸುಗಂಧಕ್ಕೆಂದೋ ಸಂಪ್ರದಾಯವೆಂದೋ ಅಂತೂ ಯಾವುದೋ ಕಾರಣದಿಂದ ಇಟ್ಟಿರುವ ಈ ಗಂಧದ ಗಣಪ ಮಾತ್ರ ಯಾವಾಗಲೂ ಹಿಂದೆ ಹಿಂದೆ ಸಾಗುತ್ತ ಬವಳಿ ಬರುವಂತೆ ಪಯಣಿಸುತ್ತಿರಬೇಕಾಗ್ತದೆ ಎನ್ನುವ ವಿಚಾರ ಎಂದಾದರೂ ನಿಮ್ಮ ತಲೆಗೆ ಹೊಳೆದದ್ದಿದೆಯೇ? ‘ಮುಂದೆ ಬನ್ನಿ ಇನ್ನಾದರೂ ಜೀವನದಲ್ಲಿ ಮುಂದೆ ಬನ್ನಿ...’ ಎಂದು ಇತರರನ್ನೇನೋ ಹುರಿದುಂಬಿಸುತ್ತೀರಿ, ನಿಮ್ಮ ಮೇಲೆ ಅನವರತವೂ ನಿಗಾಇಟ್ಟು ರಕ್ಷಿಸಬೇಕಾದ ಗಣಪ ಮಾತ್ರ ಸದಾಸರ್ವದಾ ಹಿಂದೆಹಿಂದೆ ಸರಿಯುತ್ತಿದ್ದರೆ ಅಡ್ಡಿಯಿಲ್ಲವೇ?

ಇದಾವ ಸೀಮೆ ನ್ಯಾಯ? ಹೋಗ್ಲಿ ಬಿಡಿ ಎಷ್ಟೆಂದರೂ ಬಾಲಿಶ ಬುದ್ಧಿಯ ಹುಲುಮಾನವರು. ನಂದೇನೂ ತಕ್ರಾರಿಲ್ಲ. ಆದರೂ ಡ್ಯಾಷ್‌ಬೋರ್ಡ್‌ ಮೇಲೆ ಸುಖಾಸೀನನಾಗಿ ನಿದ್ದೆ ಹೊಡೀತಾ ಇರುತ್ತೇನೆ ಅಂತ ಮಾತ್ರಾ ಅಂದ್ಕೋಬೇಡಿ, ಅಲ್ಲಿ ಕುಳಿತೇ ಡ್ರೈವಿಂಗ್‌ ಸೀಟಲ್ಲಿರುವ ನಿಮ್ಮನ್ನು, ಮತ್ತು ಕಾರಲ್ಲಿ ಸಹಪ್ರಯಾಣಿಕರಿದ್ದರೆ ಅವರೆಲ್ಲರ ಮನಸ್ಸಿನ ತಾಕಲಾಟಗಳನ್ನು, ಸುಮ್ನೆ ಕುಳಿತಿರುವಲ್ಲಿ ಕುಳಿತಿರಲಾಗದೆ ನೀವುಗಳು ಮಾಡುವ ಅಂಗಚೇಷ್ಟೆಗಳನ್ನೆಲ್ಲ ನಾನು ವೆರಿವೆರಿ ಸೂಕ್ಷ್ಮವಾಗಿ ಗಮನಿಸುತ್ತಿರುತ್ತೇನೆ. ಅದನ್ನೊಂದಿಷ್ಟು ನಿಮ್ಮೊಡನೆಯೂ ಹೇಳಿಬಿಡುವಾ ಅನ್ನೋದಕ್ಕಾಗಿಯೇ ಇವತ್ತು ನನ್ನೀ ಮಾತುಗಳು...

* * *

ಎವರೇಜ್‌ ಅಮೆರಿಕನ್ನಡಿಗನೊಬ್ಬನನ್ನೇ ತೆಗೆದುಕೊಳ್ಳಿ- ಎಪ್ಪತ್ತರ ದಶಕದಲ್ಲಿ ಬಂದು ಪಿಎಚ್‌ಡಿ ಮಾಡಿದವರೇ ಇರಲಿ ಅಥವಾ 90ರ ದಶಕದ ಕೊನೆಗೆ ಬಂದು ಫಾರ್ಚ್ಯೂನ್‌ 500 ಕಂಪೆನಿಯಲ್ಲಿ ಉದ್ಯೋಗದಲ್ಲಿರುವ ತಂತ್ರಜ್ಞಾನಿಯೇ ಇರಲಿ- ಆತನ/ಆಕೆಯ ಬಳಿ ಹೊಂಡಾ, ಟೊಯಾಟಾ, ನಿಸಾನ್‌ನಂಥ ಒಂದು ಜಪಾನಿ ಕಾರು. ಅದರೊಳಗೆ ಡ್ಯಾಷ್‌ಬೋರ್ಡ್‌ ಮೇಲೆ ನೀಟಾಗಿ ಸ್ಥಾಪಿತವಾದ ಪುಟ್ಟ ಗಣಪ! ಗಣಪ ಅಂದರೆ ಗಣಪನೇ ಆಗಬೇಕೆಂದಿಲ್ಲ ಅಥವಾ ಶ್ರೀಗಂಧದಿಂದ ಕೆತ್ತಿದ್ದೇ ಎಂದಲ್ಲ , ಪ್ಲಾಸ್ಟಿಕ್‌ನಿಂದ ನಿರ್ಮಿತ ಸುಂದರಮೂರ್ತಿಯಾದರೂ ಸೈ. ಕೆಲವರು ಗಣಪನ ಬದಲಿಗೆ ಆಂಜನೇಯನದಾಗಲಿ, ಗುರುರಾಘವೇಂದ್ರರಾಯರದಾಗಲಿ, ಇನ್ನು ಕೆಲವರು ದುರ್ಗಾದೇವಿಯ, ತಿರುಪತಿ ತಿಮ್ಮಪ್ಪನ, ಮತ್ತೆ ಕೆಲವರು ನಮ್ಮಪ್ಪನಾದ ಭೋಳೇಶಂಕರನ ಅಥವಾ ನಿಮ್‌ನಿಮ್ಮ ಕುಲದೇವರ ಮ್ಯಾಗ್ನೆಟ್‌ಪಟವಾಗಲೀ ಸಣ್ಣವಿಗ್ರಹವಾಗಲೀ ಇಟ್ಟುಕೊಂಡಿರ್ತೀರಿ. ದೇವರು, ವಿಗ್ರಹ ಯಾವುದೇ ಇರಲಿ ಅವರೆಲ್ಲರ ಪ್ರತಿನಿಧಿಯಾಗಿಯೇ ಇದನ್ನು ನಾನು ಹೇಳ್ತಾ ಇರೋದು. ಹಾಗೆ ನೋಡಿದರೆ ಇಲ್ಲಿ ಡ್ಯಾಷ್‌ಬೋರ್ಡ್‌ ಮೇಲೆ ಯಾವ ದೇವರು ಇದ್ದಾನೆ ಅನ್ನೋದು ಮುಖ್ಯವಲ್ಲ, ಯಾಕಂದ್ರೆ ಇರ್ರೆಸ್ಪೆಕ್ಟಿವ್‌ ಆಫ್‌ ದಟ್‌, ನಿಮ್ಮ ನಡವಳಿಕೆ ಯಾವಾಗ್ಲೂ ಒಂದೇ. ಹಾಗಾಗಿ ಬೇರೆ ದೇವರೂ ನನ್ನ ಲಹರಿಯನ್ನು ಅವಶ್ಯವಾಗಿ ಎಂಡೋರ್ಸ್‌ ಮಾಡುತ್ತಾರೆ ಅಂತ ನಂಬಿದ್ದೇನೆ.

ಬೆಳಿಗ್ಗೆ ಮುಂಚೆ ಗಾಡಿ ಸ್ಟಾರ್ಟ್‌ ಮಾಡುವ ಮೊದಲು ನನ್ನನ್ನು ಮುಟ್ಟಿ ಆಮೇಲೆ ನಿಮ್ಮೆದೆಯನ್ನೂ ಹಣೆಯನ್ನೂ ಮುಟ್ಟಿಕೊಂಡು ನಂತರವಷ್ಟೆ ಕಾರ್‌ ಸ್ಟಾರ್ಟ್‌ ಮಾಡುವ, ಎಕ್ಸಿಲರೆಟರ್‌ ದಬಾಯಿಸುವ ಕಾರ್‌-ವಾನರ (owner) ಅಥವಾ ವಾನರಿಯರು ನೀವು. ಮೊದಲು ಯಾವಾಗಲೂ ರಿವರ್ಸ್‌ ಡೈರೆಕ್ಷನ್‌ನಲ್ಲಿ ಹೋಗಬಾರದು ಅನ್ನೋ ನಂಬಿಕೆ ನಿಮ್ಮಲ್ಲಿ ಹಲವರದು. ಅದಕ್ಕಾಗಿ ಒಂದು ಇಂಚಾದರೂ ಸರಿಯೇ ಫರ್ಸ್ಟ್‌ಗೇರ್‌ (ಅಥವಾ ಅಟೊಟ್ರಾನ್ಸ್ಮಿಷನ್‌ ಆದರೆ ಫಾರ್ಫರ್ಡ್‌ ಗೇರ್‌) ಹಾಕಿಯೇ ನಿಮ್ಮ ಡ್ರೈವಿಂಗ್‌ ಸುರು ಆಗೋದು. ಪಾರ್ಕಿಂಗ್‌ಲಾಟ್‌ನಿಂದ ನೀವು ರಿವರ್ಸ್‌ ತೆಗೆಯುವಾಗಾದ್ರೂ ನಾನು ಒಂದ್‌ಸ್ವಲ್ಪ ‘ಮುನ್ನಡೆ’ಯುತ್ತೇನಲ್ಲ , ಹಾಯ್‌ ಎನಿಸುತ್ತದೆ. ಇಲ್ಲಿ ಅಮೆರಿಕದಲ್ಲಿ ಹಾರ್ನ್‌ ಉಪಯೋಗಿಸೋದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆಯಾದ್ರಿಂದ ಬಚಾವ್‌, ಇಂಡಿಯಾದ ಕಾರುಗಳಲ್ಲಾದರೆ ‘ದಿಸ್‌ ಕಾರ್‌ ಇಸ್‌ ಬ್ಯಾಕಿಂಗ್‌ ಅಪ್‌...’ ಅಂತಲೋ, ನಾಯಿ ಬೊಗಳಿದಂತೆಯೋ, ಸೈರನ್‌ ಮೊಳಗಿದಂತೆಯೋ ರಿವರ್ಸ್‌ಗೇರ್‌ ಹಾರ್ನ್‌ನ ಅರಚಾಟ ಬೇರೆ! ಅಂತೂ ನನ್ನ ಮುನ್ನಡೆಯ ಆನಂದಕ್ಕೆ ಸಂಚಕಾರ. ಎನಿ ವೇ, ಹೇಗಾದ್ರೂ ಸಹಿಸಿಕೊಳ್ತೇನೆ. ನೀವು ಮುನ್ನಡೆದರೆ, ಮುಂದುವರೆದರೆ ಸಾಕು, ನನ್ನ ಸಂಗ್ತಿ ಹೇಗೂ ಇರಲಿ.

ಮುಟ್ಟಿ ತಟ್ಟಿ ನಮಸ್ಕಾರ, ಕೆಲವರದು ಪಿಟಿಪಿಟಿ ಪ್ರಾರ್ಥನೆ ಇತ್ಯಾದಿ ಎಲ್ಲ ಆದ ಮೇಲೆ ಗಾಡಿ ಹೊರಡುತ್ತದೆ. ನಿಮ್ಮ ಮನಸ್ಸಿನಲ್ಲೋ ನೂರಾ ಎಂಟು ಆಲೋಚನೆಗಳು. ಇವತ್ತಿನ ಟು-ಡು ಲಿಸ್ಟ್‌, ನಿನ್ನೆ ಮರೆತುಹೋಗಿ ಇವತ್ತಿಗೆ ಪೆಂಡಿಂಗ್‌ ಆದದ್ದು, ಅಡ್ವಾನ್ಸಾಗಿ ಮಾಡಿಡಬೇಕು ಅಂದ್ಕೊಂಡಿದ್ದು, ಇನ್ನೊಬ್ಬರ ಒತ್ತಾಯಕ್ಕೆ ಮಾಡಬೇಕಾದ್ದು... ಹೀಗೆ ತಲೆಯಾಳಗೆ ಮಿಕ್ಸೆಡ್‌ವೆಜಿಟೆಬಲ್‌ ಕರ್ರಿ (ಯಿಂದಾಗಿ ಸಣ್ಣ ಉರಿ). ಅದರಿಂದ ಟೆನ್ಷನ್‌, ನರ್ವಸ್‌ನೆಸ್‌. ನಿಮ್ಮ ಡ್ರೈವಿಂಗ್‌ ಮೇಲೂ ಅದರ ಪ್ರಭಾವ, ಪರಿಣಾಮ. ಯಾಕೆ ಬೇಕು ಈ ಮನುಷ್ಯನಿಗೆ ‘ಕಾರು’ಭಾರು, ಪಬ್ಲಿಕ್‌ ಟ್ರಾನ್ಸ್‌ಪೋರ್ಟೇಷನ್‌ ಉಪಯೋಗಿಸಲಿಕ್ಕೇನು ಧಾಡಿ ಅಂತ ನಾನು ಅಂದ್ಕೊಳ್ಳೋದಿದೆ. ಆದರೆ ಅದರ (ಅ)ವ್ಯವಸ್ಥೆ ಇದಕ್ಕಿಂತ ಕಮ್ಮಿಯೇ? ಅಮೆರಿಕದಂಥ ದೇಶದಲ್ಲಿ ಸಾರ್ವಜನಿಕ ಸಾಗಣೆ ಬೇಕೆಂದರೂ ಸಿಕ್ಕರೆ ತಾನೆ? ರಸ್ತೆಯಿಡೀ ಕಾರುಗಳದೇ ಕಾರುಭಾರು. ಟ್ರಾಫಿಕ್‌ನಲ್ಲಿ ಸಿಕ್ಕಿಹಾಕ್ಕೊಂಡ ಅದೆಷ್ಟೋ ಕಾರುಗಳು. ಅದರಲ್ಲಿ ಚಡಪಡಿಸುವ ನಿಮ್ಮಂಥ ‘ಕಾರ್‌ ಮಿಕ’ನಿಗೆ ಕಂಪೆನಿ ಕೊಡಲು ಡ್ಯಾಷ್‌ಬೋರ್ಡ್‌ ಮೇಲೆ ನಾನು!

ಇನ್ನು ನಿಮ್ಮ ಸಂಗೀತಾಭಿರುಚಿಯೋ ಅಭಿಮಾನವೋ, ನಿಮ್ಮದೇ ಕುಟುಂಬದ ಒಬ್ಬೊಬ್ಬರದೂ ಒಂದೊಂದು ಟೇಸ್ಟೋ ಆ ದೇವರಿಗೇ ಪ್ರೀತಿ (ನನಗಲ್ಲ)! ವೀಕೆಂಡ್‌ನಲ್ಲಿ ಗ್ರಾಸರಿ ಶಾಪಿಂಗ್‌ಗೋ ದೇವಸ್ಥಾನಕ್ಕೋ ಅಥವಾ ಯಾವುದಾದ್ರೂ ಪಾರ್ಟಿಗೋ ಪ್ರವಾಸಕ್ಕೋ ಸಂಸಾರಸ್ಥವಾಗಿ ಕಾರು ಹೊರಟಾಗಂತೂ ನನಗೆ ಕೆಲವೊಮ್ಮೆ ನಗು ಬರುವುದಿದೆ. ಗಂಡನಿಗೆ ಗಝಲ್ಸ್‌ ಬೇಕು, ಹೆಂಡತಿಗೆ ‘ಹಳ್ಳಿಮೇಷ್ಟ್ರು’ ಚಿತ್ರದ ಹಾಡುಗಳು ಬೇಕು, ಹದಿಹರೆಯದ ಹುಡುಗಿಗೆ ಎಫ್‌.ಎಂ ಸ್ಟೇಷನ್‌ನ ಕಂಟ್ರಿ ಮ್ಯೂಸಿಕ್‌ ಬೇಕು, ಇನ್ನೂ ಪ್ರಿ-ಸ್ಕೂಲ್‌ಗೆ ಹೋಗುವ ಪುಟಾಣಿಗೆ ಜಿಂಗಲ್‌ ಬೆಲ್ಸ್‌ ರ್ಹೈಮ್‌ ಬೇಕು. ಭಾರತದಿಂದ ಭೇಟಿಯಿತ್ತಿರುವ ಹೆತ್ತವರು ಬಂದಿದ್ದರೆ ಅವರಿಗೆ ಬೋರೆನಿಸದಿರಲಿ ಎಂದು ವಿದ್ಯಾಭೂಷಣರು ಹಾಡಿದ ಭಕ್ತಿಗೀತೆ ಬೇಕು! ಇದೆಲ್ಲದರ ನಡುವೆ ನಾನು ಈ ಸಂಸಾರಿಗರ ಸಂಸಾರ ತಾಪತ್ರಯಗಳನ್ನು ಕೇಳಬೇಕು, ವಾಗ್ವಾದಗಳನ್ನಾಲಿಸಬೇಕು. ಏನೇ ಇರಲಿ ಈ ಮಂದಿ ಕಾರು ಸ್ಟಾರ್ಟ್‌ ಮಾಡಿ ಹೊರಡುವಾಗ ಮಾತ್ರ ನನ್ನ ನೆನಪುಮಾಡಿಕೊಂಡು ಆಮೇಲೆ ನನ್ನಪಾಡಿಗೆ ನಾನಿರಲು ಬಿಡ್ತಾರೆ ನೋಡಿ, ಅದೇ ನನ್ನ ಪುಣ್ಯ.

ಷಾಪಿಂಗ್‌ ಮುಗಿಸಿ ಬರುವ ಸತಿ-ಪತಿಯರ ಚಕಮಕಿಯಂತೂ ಅತ್ಯಂತ ರೋಚಕವಾಗಿರುತ್ತದೆ! ‘ಅದನ್ಯಾಕೆ ಇಷ್ಟು ಬೆಲೆಕೊಟ್ಟು ಆ ಷಾಪಲ್ಲಿ ತಗೊಂಡಿ, ವಾಲ್‌ಮಾರ್ಟ್‌ನಲ್ಲಾದರೆ ಇದರರ್ಧ ಬೆಲೆಗೆ ಸಿಕ್ತಿರಲಿಲ್ಲವೇ...?’ ಅಂತ ಇವನ ಆರೋಪವಾದರೆ, ಹೋಗ್ರೀ ವಾಲ್‌ಮಾರ್ಟ್‌ನಲ್ಲಿ ಯಾರು ಶಾಪಿಂಗ್‌ ಮಾಡ್ತಾರೆ ಅನ್ನುವ ‘ಪೊಳ್ಳು ಪ್ರತಿಷ್ಠೆ’ ಅವಳದು. ಕೊಳ್ಳುಬಾಕ ಸಂಸ್ಕೃತಿಯ ದೇಶದಲ್ಲಿ, ರೋಮ್‌ನಲ್ಲಿ ರೋಮನ್ನನಾಗಿರು ಎಂದುಕೊಂಡು, ಬೇಕಾದ್ದು ಬೇಡಾದ್ದು ಎಲ್ಲ ತಗೊಂಡು ಕಾರಿನ ಟ್ರಂಕ್‌(ಡಿಕ್ಕಿ) ತುಂಬಿಸ್ತಾರೆ. ವೀಕೆಂಡ್‌ಗೆ ಗೆಟ್‌ಟುಗೆದರ್‌ ಆಯೋಜಿಸಿ, ನೆಪಕ್ಕೆ ಸತ್ಯನಾರಾಯಣಪೂಜೆಯನ್ನೋ ಬರ್ತ್‌ಡೇ ಸೆಲೆಬ್ರೆಷನ್ನೋ ಇಟ್ಕೊಳ್ತಾರೆ; ಆದರೆ ಹೊರಗೆ ಚಳಿ ಬೇರೆ, ಪಾರ್ಟಿ ತೀರಾ ಶುಷ್ಕವಾಗಿದ್ದರೆ ಒಳ್ಳೆದಿರೊಲ್ಲ ಅಂತ ತೀರ್ಥಸಮಾರಾಧನೆಯನ್ನೂ ಇಟ್ಟುಕೊಂಡ್ರೆ ಆಗ ನೋಡಿ ಮಜಾ! ಕಾರಿನ ಡ್ಯಾಷ್‌ಬೋರ್ಡ್‌ ಮೆಲೆ ಗಣಪನ ಐಡಲ್‌, ಕಾರಿನ ಟ್ರಂಕ್‌ನಲ್ಲಿ ತೀರ್ಥದ ಬಾಟಲ್‌!

ಇನ್ನೊಂದು ವಿಷಯವನ್ನೂ ಹೇಳಬೇಕು ನಿಮ್ಮೊಂದಿಗೆ. ಅಮೆರಿಕದ ಲಲನೆಯರು ಮಾಡುತ್ತಾರೆಂದು ಅವರನ್ನು ಮಕ್ಕಿ-ಕಾ-ಮಕ್ಕಿ ಅನುಸರಿಸುತ್ತ , ಸಿಗ್ನಲ್‌ನಲ್ಲಿ ಕಾರ್‌ ನಿಂತು ಎರಡು ನಿಮಿಷ ಪುರುಸೊತ್ತು ಸಿಕ್ಕಾಗ ಕನ್ನಡಿಯಲ್ಲಿ ಮುಖ ನೋಡಿ ಹುಬ್ಬುಗಳನ್ನು ತಿದ್ದಿಕೊಳ್ಳುವ, ಇನ್ನೊಂದು ಕೋಟಾ ತುಟಿಬಣ್ಣ ಮೆತ್ತಿಕೊಳ್ಳುವ ಭಾರತೀಯ ನಾರೀಮಣಿಗಳನ್ನೂ ನೋಡಿದ್ದೇನೆ. ಇವರ ಬ್ಯೂಟಿಕಾನ್ಷಿಯಸ್‌ನೆಸ್‌ಗೆ ತಕ್ಕುದಾಗಿ ಈಗಿನ ಕಾರುಗಳಲ್ಲಿ ಸನ್‌ಲೈಟ್‌ ಷೇಡ್‌ ಫ್ಲಾಪ್‌ ಹಿಂಬದಿಯಲ್ಲಿ ತೆರೆದುಕೊಳ್ಳುವ ಒಂದು ಪುಟ್ಟ ಮುಖಗನ್ನಡಿಯ ಸೌಕರ್ಯ ಬೇರೆ! ನಾನು ಲೇವಡಿ ಮಾಡೋದಲ್ಲ - ಆದರೆ ಇದೇ ಲೇಡಿಗಳು ಶುರುಶುರುವಿಗೆ ಕಾರ್‌ ಚಾಲನೆ ಕಲಿಯುವಾಗಿನ ದಿನಗಳಲ್ಲಿ ಜಸ್ಟ್‌ ಲೇನ್‌ಚೇಂಜ್‌ ಮಾಡುವಾಗಲೂ ಬೆವತಿದ್ದು, ನರ್ವಸ್‌ ಆದದ್ದು ನನಗೆ ಗೊತ್ತಿಲ್ಲ ಅಂದ್‌ಕೊಂಡ್ರಾ?

ಹೊರಗೆ ಸುಂದರವಾಗಿ ಕಾಣುವ ಕಾರುಗಳ ಒಳಗಿನ ಸ್ವಚ್ಛತೆ ಬಗ್ಗೆ... ಓಹ್‌ ಮೈ ಗಾಡ್‌... ಕೆಲವರ ಕಾರುಗಳೋ ಒಳಗೆ ನೋಡಿದರೆ ‘ಕಸದ ತೊಟ್ಟಿ’ಗಿಂತಲೂ ಕಡೆಯಾಗಿರೋದನ್ನು ಗಮನಿಸಿದ್ದೇನೆ. ಲಾಂಗ್‌ಡ್ರೈವ್‌ ಪ್ರವಾಸದ ವೇಳೆಯಂತೂ ಇದು ಬಹುಪಾಲು ಸತ್ಯ. ರೆಸ್ಟ್‌ ಏರಿಯಾದಲ್ಲಿ ನಿಲ್ಲಿಸಿದ್ದಾಗ, ಕಾರಲ್ಲೇ ತಿನ್ನೋಣ ಎಂದು To-go ಆರ್ಡರ್‌ ಮಾಡಿ ತಂದ ಪಿಜ್ಜಾ, ಬರ್ಗರ್‌, ಫ್ರೆೃಸ್‌, ಪೀನಟ್ಸ್‌, ಚಿಪ್ಸ್‌ನ ಕಸ, ಅಷ್ಟು ಉದ್ದದ ಕೋಕ್‌/ಪೆಪ್ಸಿ ಗ್ಲಾಸುಗಳು, ದೇವಸ್ಥಾನದ ಕಿಚನ್‌ನಿಂದ ಪಾರ್ಸೆಲ್‌ ತಂದ ಪುಳಿಯಾಗರೆ, ಮೊಸರನ್ನಗಳ ಥರ್ಮೊಕೂಲ್‌ ಬಾಕ್ಸ್‌ಗಳು, ಟಿಷ್ಯೂ ಪೇಪರ್ಸ್‌, ಕೇಸ್‌ನಲ್ಲಿ ವಾಪಸಿಡದೆ ಎಲ್ಲೆಂದರಲ್ಲಿ ಬಿದ್ದಿರುವ ಸಿಡಿಗಳು, ಹೊಸ ಜಾಗಕ್ಕೆ ಹೋಗ್ತಿರೋದೆಂದು ಯಾಹೂ/ಮ್ಯಾಪ್‌ಕ್ವೆಸ್ಟ್‌ನಿಂದ ತೆಗೆದಿಟ್ಟ ಮ್ಯಾಪ್‌-ಡೈರೆಕ್ಷನ್‌ ಪ್ರಿಂಟ್‌ಔಟ್‌ಗಳು, ಸೆಲ್‌ಫೋನ್‌ನಲ್ಲಿ ಮಾತಾಡುತ್ತಲೇ ಗೀಚಿಟ್ಟ ಸ್ಲಿಪ್‌ಗಳು, ಟೋಲ್‌ಬೂತ್‌ನಲ್ಲಿ ಕಾಣಿಕೆ ಹಾಕಲು ಬೇಕಾದ ನಾಣ್ಯಗಳು... ಓಹ್‌ ಇವರ ಕಾರಿಗೂ, ಸಿಕ್ಕಿದುದನ್ನೆಲ್ಲ ತುಂಬಿಸಿಟ್ಟುಕೊಳ್ಳುವ ಮಕ್ಕಳ ಶಾಲಾ-ಚೀಲಕ್ಕೂ ಅಂಥಾ ಡಿಫರೆನ್ಸ್‌ ಏನೂ ಇಲ್ಲ. ಆಮೇಲೆ My car has become a mess inside ಅಂತ ಗೊಣಗ್ತಾರೆಯೆ ಹೊರತು ಕ್ಲೀನ್‌ ಮಾಡುವ ವ್ಯವಧಾನ, ಸಮಯ ಇವರಿಗೆ ಸಿಕ್ಕಿದ್ದು ನಾಕಾಣೆ.

ಕಾರಿಗೆ ಜಿಪಿಎಸ್‌ ಇತ್ಯಾದಿ ಎಕ್ಸ್ಟ್ರಾ ಗ್ಯಾಡ್ಜೆಟ್ಸ್‌ ಎಲ್ಲ ಅಳವಡಿಸಿರೋದೇನೊ ನಿಜ, ಆದರೆ ಎಡ್ರೆಸ್‌ ಹುಡುಕಿಕೊಂಡು ಹೋಗುವಾಗ ಒಬ್ಬ ಎಕ್ಸ್‌ಪ್ಲೋರರ್‌ ಇನ್ನೊಬ್ಬ ನ್ಯಾವಿಗೇಟರ್‌ ಇದ್ದೂ, ಸರಿಯಾದ ಎಕ್ಸಿಟ್‌ನಲ್ಲೇ ಹೈವೇಯಿಂದ ನಿರ್ಗಮಿಸಿಯೂ ಈಸ್ಟ್‌-ವೆಸ್ಟ್‌, ನಾರ್ತ್‌-ಸೌತ್‌ ಕನ್ಫ್ಯೂಷನ್‌ನಲ್ಲಿ ಸಿಕ್ಕುಹಾಕಿ ಇವರು ‘ದಾರಿ ತಪ್ಪಿದ ಮಗ’ ಆಗುವುದನ್ನು ಕಣ್ಣಾರೆ ಕಂಡು ಎಷ್ಟೊ ಸಲ ಮರುಕಪಟ್ಟಿದ್ದೇನೆ (ಒಳಗೊಳಗೇ ಮುಸಿಮುಸಿನಕ್ಕದ್ದೂ ಇದೆ). ಅದರಲ್ಲೂ ಹಳೇ ಸಿಟಿಗಳಾದ ಬಾಸ್ಟನ್‌ನಂಥ ಜಾಗಗಳಲ್ಲಿ, ಆಲ್‌ಮೋಸ್ಟ್‌ ಇಂಡಿಯಾದಂತೇ ಆಗಿರುವ ನ್ಯೂಜೆರ್ಸಿ ಮುಂತಾದ ಕಡೆಗಳಲ್ಲಂತೂ ಎಂಥ ಜಿಪಿಎಸ್ಸ್‌ ಹೈಟೆಕ್‌ ಡಿವೈಸ್‌ ಇದ್ದರೂ ಗ್ಯಾಸ್‌ಸ್ಟೇಷನ್‌ನಲ್ಲಿ ನಿಲ್ಲಿಸಿ ಡೈರೆಕ್ಷನ್ಸ್‌ ಕೇಳದೆ ಬೇರೆ ಉಪಾಯವೇ ಇಲ್ಲಾಗುತ್ತದೆ. ದಾರಿ ಕಾಣದಾಗಿದೆ ರಾಘವೇಂದ್ರನೆ... ಮ್ಯಾಪ್‌ ತೋರ್ಸಿ ನಡೆಸುಬಾ ಜೀಪಿಯಸ್ಸನೇ... ಎಂಬ ಪ್ರಾರ್ಥನೆಗಳೆಲ್ಲ ಆಗ ನಿರುಪಯುಕ್ತ.

ನಿಜವಾಗ್ಲೂ ಹೇಳ್ತೇನೆ, ನನ್ನ ಈ ಸೂಕ್ಷ್ಮಾವಲೋಕನದ ಸಣ್ಣಬುದ್ಧಿಯಿಂದಾಗಿ ಇಂಥ ಎಷ್ಟೋ ಮಜಾ ಸಂಗತಿಗಳೆಲ್ಲ ನನ್ನ ಸಂಗ್ರಹದಲ್ಲಿವೆ. ಹೇಳುತ್ತಾ ಹೋದರೆ ನಿಮ್ಮ ಒಂದು ಲಾಂಗ್‌ಡ್ರೈವ್‌ನ ಉದ್ದಕ್ಕೂ ಹೇಳುವಷ್ಟಿದೆ. ಆದರೂ, ನಿಮ್ಮ ಸಕಲವಿಘ್ನಗಳ ನಿವಾರಣೆಯ ಗುರುತರ ಜವಾಬ್ದಾರಿ ಹೊತ್ತ ನಾನು ನಿಮ್ಮನ್ನೇ ಗೇಲಿಮಾಡ್ತಾ ಇರೋದು ನನಗೆ ಭೂಷಣವಲ್ಲ, ಅದಕ್ಕಾಗಿ ಇವತ್ತಿಗೆ ಇಲ್ಲಿಗೇ ನಿಲ್ಲಿಸ್ತೇನೆ. ನಿಮ್ಮ ಪ್ರಯಾಣ ಮುಂದುವರಿಯಲಿ, ನಾನು ಹಿಂದೆಹಿಂದೆ ಸರಿಯುತ್ತಲೇ ನಿಮ್ಮನ್ನು ನೋಡಿಕೊಳ್ತೇನೆ, ಚಿಂತಿಸದಿರಿ.

* * *

ಡ್ಯಾಷ್‌ಬೋರ್ಡ್‌ ಮೇಲೆ ಸ್ಥಿತಪ್ರಜ್ಞನಾಗಿ ಕಾಣುವ ಗಣಪನ ಒಳವಿಚಾರಧಾರೆಗಳು ಏನಿರಬಹುದು ಎಂಬ ಕಲ್ಪನೆಯಲ್ಲಿ ಕೆಲವನ್ನಷ್ಟೇ ಸೇರಿಸಿ ಇವತ್ತಿನ ವಿಚಿತ್ರಾನ್ನವನ್ನು ಕುಕ್ಕಿಸಿದ್ದು. ಆತನ ಭಾಷೆಯಲ್ಲಿ ಕನ್ನಡಕ್ಕಿಂತಲೂ ಇಂಗ್ಲಿಷ್‌ ಪದಗಳು ಜಾಸ್ತಿಯಿದ್ದುವು (ಅಮೆರಿಕವಾಸದ ಫಲವೊ ಏನೊ) ಎಂದು ನನಗನಿಸುತ್ತದೆ. ನಿಮಗೆ? ಅಂದಹಾಗೆ ಗಣಪನ ಮನದಲ್ಲಿ ಮೂಡಿರಬಹುದಾದ ಇನ್ನೂ ಕೆಲ ಸಂತಸ-ಸಂಕಟ-ಸಂಕೋಚದ ಸಂಗತಿಗಳು, ಸುದ್ದಿ-ಸ್ವಾರಸ್ಯಗಳು ನಿಮ್ಮ ಮನಸ್ಸಿಗೆ ಹೊಳೆದರೆ ಬರೆದು ತಿಳಿಸಿ, ಎಲ್ಲರೂ ಸೇರಿ ಆನಂದಿಸೋಣ. ವಿಳಾಸ - - srivathsajoshi@yahoo.com

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more